ಐಬಿಎಸ್ ಅಂದರೆ ಆಹಾರ ಅಲರ್ಜಿ ತಾನೆ?
ಆಹಾರ ಅಲರ್ಜಿ ಮತ್ತು ಇರಿಟೆಬಲ್ ಬೊವೆಲ್ ಸಿಂಡ್ರೋಮ್ (ಐಬಿಎಸ್) ಎರಡೂ ಒಂದೇನಾ? ಇಂಥದ್ದೊಂದು ಜಿಜ್ಞಾಸೆ ವೈದ್ಯ ಲೋಕದ ಘಟಾನುಘಟಿಗಳನ್ನೂ ಕಾಡಿದ್ದಿದೆ. 'ಹೌದು', 'ಅಲ್ಲ' ಎನ್ನುವ ವಿಚಾರವಾಗಿ ಸಾಕಷ್ಟು ಚರ್ಚೆಗಳೂ ನಡೆದಿವೆ. ಆದರೆ ಇವೆರಡೂ ಒಂದೇ ಎನ್ನುವ ವಾದ ಮಂಡಿಸಿದವರಿಗೆ ತಮ್ಮ ವಿರೋಧಿಗಳು ಎತ್ತಿರುವ ಪ್ರಶ್ನೆ, ಸಂದೇಹಗಳಿಗೆ ಸ್ಪಷ್ಟ ಉತ್ತರ ನೀಡಲು; ಕಡೇಪಕ್ಷ ತಮ್ಮ ವಾದಕ್ಕೆ ಪೂರಕವಾದ ಅಂಕಿ-ಅಂಶಗಳನ್ನಾದರೂ ಮಂಡಿಸಲು ಸಾಧ್ಯವಾಗಿಲ್ಲ ಎನ್ನುವುದು ನಿಜ. ಹೀಗಾಗಿ ಫುಡ್ ಅಲರ್ಜಿ ಯನ್ನೇ ಐಬಿಎಸ್ ಎಂದು ಡಯೊಗ್ನೈಸ್ ಮಾಡಿ ಚಿಕಿತ್ಸೆ ನೀಡುವುದು ಸರಿಯಲ್ಲ ಎನ್ನುವ ಅಭಿಪ್ರಾಯಕ್ಕೆ ಬಹುತೇಕರು ಬಂದಿದ್ದಾರೆ.
ಆಹಾರ ಅಲರ್ಜಿ ಮತ್ತು ಐಬಿಎಸ್ ಬೇರೆಬೇರೆ ಅಲ್ಲ ಎನ್ನುವ ವಾದವನ್ನು ಮೊದಲು ಮುಂದಿಟ್ಟವರು ಬ್ರಿಟನ್ನ ತಜ್ಞರು. 'ಹಾಲು, ಧಾನ್ಯಗಳನ್ನು ಸೇವಿಸಿದಾಗ ಅಲರ್ಜಿ ತರಹದ ಪ್ರತಿಕ್ರಿಯೆ ಉಂಟಾಗುತ್ತದೆ. ಐಬಿಎಸ್ಗೆ ತುತ್ತಾದವರಲ್ಲಿ ಫುಡ್ ಅಲರ್ಜಿಯಂಥ ಲಕ್ಷಣಗಳು ಕಂಡುಬಂದಿವೆ. ಅಂಥ ಆಹಾರಗಳನ್ನು ಪತ್ತೆ ಮಾಡಿ ಅವುಗಳ ಸೇವನೆ ನಿಲ್ಲಿಸಿದಾಗ ತೊಂದರೆ ಕಡಿಮೆಯಾಗಿದೆ. ಇಂಥ ಹಲವಾರು ಪ್ರಕರಣಗಳಿವೆ' ಎನ್ನುವುದು ಅವರ ವಾದವಾಗಿತ್ತು. ಆದರೆ, 'ಐಬಿಎಸ್ನಿಂದ ಬಳಲುವ ಬೆರಳೆಣಿಕೆಯ ಜನರಲ್ಲಿ ಮಾತ್ರವೇ ಫುಡ್ ಅಲರ್ಜಿಯಂಥ ಸಮಸ್ಯೆಗಳೂ ಕಂಡುಬಂದಿರುವುದು. ಹೀಗಾಗಿ ಈ ವಾದ ಒಪ್ಪಲು ಸಾಧ್ಯವಿಲ್ಲ. ಮೇಲಾಗಿ ಇದನ್ನು ನಿರೂಪಿಸುವ ಪ್ರಬಲ ಅಂಕಿ-ಅಂಶಗಳೂ ಇಲ್ಲ' ಎನ್ನುವುದು ಜಾಗತಿಕ ಮಟ್ಟದಲ್ಲಿ ವೈದ್ಯರು ತಳೆದಿರುವ ನಿಲುವು.
ಅದೇನೇ ಇರಲಿ. ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡಾಗ ಐಬಿಎಸ್ನಿಂದ ಮುಕ್ತಿ ಪಡೆಯುವುದು ಸಾಧ್ಯವಿದೆ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಆಕ್ಸ್ಫರ್ಡ್ನ ವೈದ್ಯರ ತಂಡ ಐಬಿಎಸ್ ಸಮಸ್ಯೆ ಇದ್ದ 189 ಜನರ ಡಯಟ್ ಬಗ್ಗೆ ಎರಡು ವರ್ಷ ನಿರಂತರ ನಿಗಾ ಇರಿಸಿತು. ಅವರಲ್ಲಿ ಅರ್ಧದಷ್ಟು ಮಂದಿ ತಮಗೆ ಕಿರಿಕಿರಿ ಉಂಟು ಮಾಡಬಹುದಾದ ಆಹಾರ ಪದಾರ್ಥಗಳನ್ನು ಸಂಪೂರ್ಣ ವರ್ಜಿಸಿದರು. ಹಂತಹಂತವಾಗಿ ಅವರ ತೊಂದರೆ ಕಡಿಮೆಯಾಯಿತು. ಡಯಟ್ನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೇ ಇದ್ದವರಲ್ಲಿ ತೊಂದರೆ ಹಾಗೆಯೇ ಇತ್ತು. ಇನ್ನೂ ಕುತೂಹಲ ಹುಟ್ಟಿಸುವ ಸಂಗತಿ ಎಂದರೆ ಡಯಟ್ನಲ್ಲಿ ಬದಲಾವಣೆ ಮಾಡಿಕೊಂಡಿದ್ದವರು ತಮ್ಮ ಹಿಂದಿನ ಆಹಾರ ಪದ್ಧತಿಗೆ ಹಿಂದಿರುಗುವ ಪ್ರಯತ್ನ ಮಾಡಿದಾಗ ಪುನಃ ಸಮಸ್ಯೆಗಳು ಶುರವಾದದ್ದು.
ವರ್ಜಿಸಿರುವ ಆಹಾರಗಳನ್ನು ಕೆಲವರ್ಷಗಳ ಬಳಿಕ ಸ್ವಲ್ಪಸ್ವಲ್ಪವಾಗಿ ಸೇವಿಸಲು ಆರಂಭಿಸಬಹುದು ಎಂದು ಪಾಶ್ಚಾತ್ಯ ಆಹಾರ ತಜ್ಞರು ಸಲಹೆ ಮಾಡುತ್ತಾರೆ. ಆದರೆ ಕಿರಿಕಿರಿ ಉಂಟುಮಾಡುವ ಆಹಾರಗಳನ್ನು ಸಂಪೂರ್ಣವಾಗಿ ಬಿಡುವುದೇ ವಾಸಿ.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com