ಕುಕ್ಕೆ ತೇರು
ತನ್ನದೇ ವಿಶಿಷ್ಟತೆಯಿಂದಾಗಿ ದೇಶದ ಮೂಲೆ ಮೂಲೆಗಳಿಂದ ಭಕ್ತರನ್ನು ಸೆಳೆಯುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿತ್ಯವೂ ಜನಜಾತ್ರೆ...
ತನ್ನದೇ ವಿಶಿಷ್ಟತೆಯಿಂದಾಗಿ ದೇಶದ ಮೂಲೆ ಮೂಲೆಗಳಿಂದ ಭಕ್ತರನ್ನು ಸೆಳೆಯುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿತ್ಯವೂ ಜನಜಾತ್ರೆ. ಶಿಷ್ಟ- ಜಾನಪದ ಸಂಸ್ಕೃತಿಗಳು ಸಂತುಲನಗೊಂಡು ತುಳುನಾಡಿನ ಧಾರ್ಮಿಕ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಮಣ್ಣಿನ ಮೂಲದ ಆರಾಧನೆಗೆ ವೈದಿಕ ಮೆರುಗನ್ನು ನೀಡಿದ ನಾಗ- ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಿ.7 ಮತ್ತು 8ರಂದು ಷಷ್ಠಿ- ಚಂಪಾಷಷ್ಠಿ ಎಂಬ ಅತ್ಯಾಕರ್ಷಕ ಭಾವಪರ್ವದ ಹಬ್ಬ. ನಾಡಿನ ದೊಡ್ಡ ತೇರಾದ ಬ್ರಹ್ಮರಥವನ್ನು ಬೆತ್ತ ಬಿದಿರುಗಳಿಂದ ಕಟ್ಟಿ ಶೃಂಗರಿಸಿ ಎಳೆಯುವುದು ಇಲ್ಲಿನ ವಿಶೇಷ.
ಮಲೆಮಕ್ಕಳ ಬೆತ್ತದ ತೇರು
ಚಂಪಾಷಷ್ಠಿ ಜಾತ್ರೆ ಸಂದರ್ಭ ಬಿದಿರಿರುವ ಬೆತ್ತದ ಹೊರತು ಇತರ ಯಾವುದೇ ಹಗ್ಗಗಳನ್ನು ಸ್ವಲ್ಪವೂ ಉಪಯೋಗಿಸದೆ, ಮೂಲನಿವಾಸಿಗಳಾದ ಮಲೆಕುಡಿಯ ಜನಾಂಗದವರು ರಚಿಸುವ ರಥ, ಲಕ್ಷದೀಪೋತ್ಸವದಂದು ಕಾಶಿಕಟ್ಟೆ ದೇವಳದ ಮುಂದೆ ಜನಪದೀಯ ಶೈಲಿಯಲ್ಲಿ ರಚಿಸುವ ಗುರ್ಜಿ ರಥ, ಪಂಚಮಿ, ಬ್ರಹ್ಮರಥಗಳು ಮನಸೂರೆಗೊಳ್ಳುತ್ತದೆ. ವೈದಿಕ- ಅವೈದಿಕ ಮಿಲನದ ಸವಿಯನ್ನು ಕಾಣುವ ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಮಹೋತ್ಸವ ತನ್ನದೇ ಆದ ವಿಶೇಷತೆ ಹೊಂದಿದೆ. ಚಾಂದ್ರಮಾನ ಪದ್ಧತಿ ಅನುಸಾರ ಇಲ್ಲಿ ಜಾತ್ರೆ.. ದೇವರ ಉತ್ಸವ ಮೂರ್ತಿಯ ಜೊತೆ ಕ್ಷೇತ್ರದ ದೈವಗಳಾದ ಹೊಸಳಿಗಮ್ಮ, ಕಾಟುಕಾಮಂಚು ದೈವಗಳಿಗೆ ನೇಮ, ಗೋಪುರ, ನಡಾವಳಿ ನಡೆಯುತ್ತದೆ.
ಕುಕ್ಕೆಯಲ್ಲಿ ಅನ್ನ ಬೇಯಿಸುವ ರಾಮ- ಲಕ್ಷ್ಮಣ ಕೊಪ್ಪರಿಗೆ ಏರುವುದರೊಂದಿಗೆ ಜಾತ್ರೆ ಆರಂಭಗೊಂಡು ಕೊಪ್ಪರಿಗೆ ಇಳಿಯುವುದರೊಂದಿಗೆ ಸಮಾಪನಗೊಳ್ಳುತ್ತದೆ. ಮಳೆ- ಬೆಳೆ ಪ್ರಾಪ್ತಿಗಾಗಿ, ಆರೋಗ್ಯ, ಐಶ್ವರ್ಯ ಅಭಿವೃದ್ಧಿಗಾಗಿ, ರೋಗ-ರುಜಿನ ಮುಕ್ತಿಗಾಗಿ, ವಿವಾಹ, ಸಂತಾನ ವೃದ್ಧಿಗಾಗಿ, ಚರ್ಮರೋಗ ನಿವಾರಣೆಗಾಗಿ ಕುಮಾರಧಾರ ತೀರ್ಥ ಸ್ನಾನ ಮಾಡಿ ನಾಗಸಂಕುಲ ಹರಿದಾಡುವ ಪುಣ್ಯ ಭೂಮಿಯಲ್ಲಿ ವಿವಿಧ ಬಗೆಯ ಉರುಳು ಸೇವೆ, ಆಶ್ಲೇಷಬಲಿ, ನಾಗಪ್ರತಿಷ್ಠೆ, ಸರ್ಪಸಂಸ್ಕಾರ, ತುಲಾಭಾರ, ಪ್ರಾರ್ಥನೆ ಇತ್ಯಾದಿ ಹರಕೆ ಹೊತ್ತು ಜಾತಿ- ಧರ್ಮ- ಪಂಥ ಭೇದ- ಭಾವವಿಲ್ಲದೆ ಅಪಾರ ಭಕ್ತ ಸಂಕುಲ ಪಾಲ್ಗೊಳ್ಳುತ್ತಾರೆ.
ಇಲ್ಲಿ ಪ್ರತಿವರ್ಷ ವರ್ಷಾವಧಿ ಮಹೋತ್ಸವ ಕಾರ್ತಿಕ ಬಹುಳ ದ್ವಾದಶಿ ಮೊದಲ್ಗೊಂಡು ಮಾರ್ಗಶಿರ ಶುದ್ಧ ಪೌರ್ಣಮಿ ಪರ್ಯಂತ ನಡೆಯುತ್ತದೆ. ಕಾರ್ತಿಕ ಬಹುಳ ಏಕಾದಶಿಯಂದು ಮೂಲ ದೇವರ ಗರ್ಭಗುಡಿಯ ಹುತ್ತದಿಂದ ತೆಗೆಯುವ ಮೂಲ ಮೃತ್ತಿಕಾ ಪ್ರಸಾದವು ಶ್ರೀ ಕ್ಷೇತ್ರದ ಮಹಾಪ್ರಸಾದ. ವರ್ಷಕ್ಕೊಮ್ಮೆ ತೆಗೆದು ವರ್ಷವಿಡೀ ನೀಡಲಾಗುತ್ತದೆ.
ಜಾತ್ರೆಯ ಹದಿನೈದು ದಿನಗಳಲ್ಲಿ ಕೊಪ್ಪರಿಗೆ ಅನ್ನ ಭಕ್ತರಿಗೆ ಮಹಾಪ್ರಸಾದ. ಮಾರ್ಗಶಿರ ಶುದ್ಧ ಚೌತಿಯಂದು ದೇವರಿಗೆ ಹೂವಿನ ತೇರಿನ ಉತ್ಸವ, ಪಂಚಮಿಯಂದು ಪಂಚಮಿ ರಥೋತ್ಸವ, ಷಷ್ಠಿಯಂದು ಮಹಾರಥೋತ್ಸವ- ಬ್ರಹ್ಮರಥೋತ್ಸವ, ಷಷ್ಠಿಯ ಮರುದಿನ ಕುಮಾರಧಾರಾ ಮತ್ಸ್ಯತೀರ್ಥದಲ್ಲಿ ಶ್ರೀ ದೇವರ ಅವಭೃತೋತ್ಸವ, ನೌಕಾವಿಹಾರ. ದ್ವಾದಶಿಯಂದು ಕೊನೆ. ದೇವಳದ ಒಳಾಂಗಣದಲ್ಲಿ ನೀರು ಬಂಡಿ ಉತ್ಸವ ಅಪೂರ್ವವಾದದ್ದು.
- ಬಾಲಕೃಷ್ಣ ಭೀಮಗುಳಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.