ಕೇಳಿಸಿಕೊಳ್ಳೋಣ
ಒಮ್ಮೊಮ್ಮೆ ಹಾಗಾಗುವುದು ಇದೆ. ನಾವು ಅದೆಷ್ಟೇ ಸರಿಯಾಗಿ ಕೇಳಿಸಿಕೊಂಡರೂ ಸರಿಯಾಗಿ ಕೇಳುವುದೇ ಇಲ್ಲ. ಹಾಗೆಂದು ಅದು ಶ್ರವಣ ದೋಷವೆಂದೇನೂ ಅಲ್ಲ. ಕಿವಿಯ ಎಲ್ಲ ಭಾಗಗಳೂ ಸರಿಯಾಗಿಯೇ ಕೆಲಸ ಮಾಡುತ್ತಿರುತ್ತವೆ. ಬಹುಶಃ ಸುತ್ತ ಮುತ್ತಲ ಗದ್ದಲ ಹೆಚ್ಚಾಗಿರಬೇಕು ಎಂಬ ಊಹೆಯೂ ತಪ್ಪಾಗಿರುತ್ತದೆ. ಅತ್ಯಂತ ನೀರವದಲ್ಲಿದ್ದರೂ ಎದುರಿರುವ ವ್ಯಕ್ತಿ ಹೇಳಿದ್ದು ನಮಗೆ ಕೇಳಿಸದೇ ಹೋಗುತ್ತದೆ. ಇದೆಂಥಾ ವಿಚಿತ್ರ ಎಂದು ಕೇಳಬಹುದು. ಆದರೆ ಅದು ಸತ್ಯ.
ಇಲ್ಲಿ ಸಮಸ್ಯೆ ಇರುವುದು ನಾವು ಕೇಳಿಸಿಕೊಳ್ಳುವುದರಲ್ಲಿ. ಎಲ್ಲ ಸರಿಯಾಗಿದ್ದರೂ, ಯಾವುದೇ ಅಡ್ಡಿ ಆತಂಕಗಳಿಲ್ಲದಿದ್ದರೂ ನಮಗೆ ಕೆಲವೊಂದು ವಿಷಯ ಸೂಕ್ತವಾಗಿ ಕೇಳುವುದಿಲ್ಲ ಅಂದರೆ ಅದರ ಅರ್ಥ ಕೇಳಿಸಿಕೊಳ್ಳುವವನ ಕ್ರಿಯೆಯಲ್ಲಿನ ದೋಷವೇ ಹೊರತೂ ಬೇರೇನೂ ಆಗಿರುವುದಿಲ್ಲ. ಇದಕ್ಕೆ ಮೂಲ ಕಾರಣ ನಮ್ಮ ಮನಸ್ಸು. ಕೆಲವೊಂದು ವಿಷಯದಲ್ಲಿ ನಾವು ಅತ್ಯಂತ ಪೂರ್ವಗ್ರಹಪೀಡಿತರಾಗಿ ಯೋಚಿಸುತ್ತಿರುತ್ತೇವೆ. ಅಂಥ ಸಂದರ್ಭದಲ್ಲಿ ಅದು ಎಷ್ಟೇ ಸ್ಪಷ್ಟವಾಗಿ ಹೇಳಲ್ಪಟ್ಟಿದ್ದರೂ, ಗಟ್ಟಿಯಾಗಿ ಕಿರುಚಿಕೊಂಡಿದ್ದರೂ ಅದನ್ನು ನಾವು ಸ್ವೀಕರಿಸುವ ರೀತಿಯೇ ಬೇರೆಯಾಗಿರುತ್ತದೆ. ಹೀಗಾಗಿ ನಾವು ಉತ್ತಮ ಕೇಳುಗರಾಗುವುದೇ ಇಲ್ಲ.
ಇಲ್ಲಿ ಕೇಳಿಸಿಕೊಳ್ಳುವುದು ಎಂಬುದು ಕೇವಲ ಭೌತಿಕ ಪ್ರಕ್ರಿಯೆಯಲ್ಲ. ಅದು ಆಂತರಂಗಿಕ. ಬೇಕಿದ್ದರೆ ನೋಡಿ, ನಮಗೆ ತೀರಾ ಹತ್ತಿರವಿದ್ದವರು, ತೀರಾ ಪ್ರೀತಿ ಪಾತ್ರರು ಬಾಯಿಬಿಟ್ಟು ಏನನ್ನೂ ಹೇಳದಿದ್ದರೂ ಅವರಿಗೆ ಬೇಕಾದುದನ್ನು ನಾವು ಮಾಡಿಬಿಟ್ಟಿರುತ್ತೇವೆ. ಅಂದರೆ ನಮಗೆ ಅಂತರಂಗಕ್ಕೆ ಕಿವಿಯಾಗುವ ಶಕ್ತಿ ಇದೆಯೆಂದಾಯಿತು. ಆದರೆ ಬಹುತೇಕ ಸಂದರ್ಭದಲ್ಲಿ ನಾವದನ್ನು ಬಳಸುವುದೇ ಇಲ್ಲ. ಅಥವಾ ಋಣಾತ್ಮಕ ನಿಟ್ಟಿನಲ್ಲಿ ಬಳಸುತ್ತೇವೆ. ಅದರಿಂದಲೇ ನಾವು ಉತ್ತಮ ಕೇಳುಗರಾಗಲು ಸಾಧ್ಯವೇ ಆಗುವುದಿಲ್ಲ.
- ಸಹನೆ