ಬೆಟ್ಟದ ಕಪ್ಪು ತುದಿ!
ಕಾಳಿದಾಸನನ್ನು ಸುಮ್ಮನೆ ಯಾರೂ 'ಮಹಾಕವಿ', 'ರೂಪಕಲೋಲ' ಎಂದಿಲ್ಲ. ಅವನ ಪ್ರತಿಯೊಂದು ಕಾವ್ಯೋಕ್ತಿಯಲ್ಲೂ ರೂಪಕಸುಭಗತೆ, ಚತುರ ರಸಿಕತೆ, ಜೀವನಾನುಭವಗಳು ಮುಪ್ಪುರಿಗೊಂಡು ಮೇಳೈಸಿ ಸೊಗಸುತ್ತವೆ.
ಛನ್ನೋಪಾಂತಃ ಪರಿಣಿತಫಲದ್ಯೋತಿಭಿಃ ಕಾನನಾಮ್ರೈಃ
ತ್ವಯ್ಯಾರೂಢೇ ಶಿಖರಮಚಲಃ ಸ್ನಿಗ್ಧವೇಣೀಸವರ್ಣೇ
ನೂನಂ ಯಾಸ್ಯತ್ಯಮರಮಿಥುನಪ್ರೇಕ್ಷಣೀಯಾಮವಸ್ಥಾಂ
ಮಧ್ಯೇ ಶ್ಯಾಮಃ ಸ್ತನ ಇವ ಭುವಃ ಶೇಷವಿಸ್ತಾರಪಾಂಡುಃ
ಬೇಸಿಗೆಯ ಕೊನೆಯ ದಿನಗಳು ಮುಗಿದು ಆಷಾಢ ಸಮೀಪಿಸಿದೆ. ಆಮ್ರಕೂಟ ಪರ್ವತದ ತಪ್ಪಲಲ್ಲಿ ಮಾವಿನ ತೋಪುಗಳು ಫಲ ತುಂಬಿ ಹಳದಿ ಹಸಿರು ಮೈಬಣ್ಣದಿಂದ ಮಿರುಗುತ್ತಿವೆ. ಇತ್ತ ರಾಮಗಿರಿಯಿಂದ ಹೊರಟ ಮೋಡ ದಾರಿಯಲ್ಲಿ ನದಿಗಳಿಂದ ನೀರನ್ನು ಹೀರಿ ಕಪ್ಪಗೆ ದಪ್ಪಗಾಗಿ ತುಂಬಿಕೊಂಡು ಪರ್ವತದ ತುದಿಯನ್ನು ತಲುಪಿದೆ. ಈ ದೃಶ್ಯವನ್ನು ಮೇಲೆ ಆಕಾಶದಿಂದ ಅಮರಮಿಥುನಗಳು ನೋಡುತ್ತಿವೆ. ಅವುಗಳಿಗೆ ಹೇಗೆ ಕಾಣಬಹುದು? ಅದು ನೆಲವೆಣ್ಣಿನ ಸ್ತನದ ಹಾಗೆಯೂ, ಮಲೆಯ ತುದಿಯು ಕಪ್ಪಾದ ಚೂಚುಕದ ಹಾಗೆಯೂ ಕಾಣುತ್ತದಂತೆ!
ಕಾಳಿದಾಸನ ಕಲ್ಪನಾಶಕ್ತಿ ನೋಡಿ. ಹೆಣ್ಣಿನ ಸ್ತನದ ತುದಿಗಳು ಕಪ್ಪಾಗುವುದು ಆಕೆ ಗರ್ಭಿಣಿಯಾದಾಗ. ಭೂಮಿಯ ಮೇಲಿನ ಮಾವಿನ ತೋಟಗಳು ಫಲ ತುಂಬಿದ ಕಾಲದಲ್ಲೇ ಈ ವರ್ಣನೆಯನ್ನಿಟ್ಟಿದ್ದಾನೆ ಆತ. ಮಾತ್ರವಲ್ಲ, ಇದನ್ನು ಮೇಲಿನಿಂದ ನೋಡುತ್ತಿರುವವರೂ ದೇವತೆಗಳ ಜೋಡಿಯೇ!
ಈ ವರ್ಣನೆ ನೋಡಿದರೆ, ಕಾಳಿದಾಸ ಯಾವತ್ತಾದರೂ ಆಕಾಶ ಪ್ರಯಾಣ ಮಾಡಿ ಮೇಲಿನಿಂದ ಭೂಮಿಯನ್ನು ನೋಡಿದ್ದನೇ ಎಂಬ ಸಂದೇಹ ಬರುತ್ತದೆ. ಆತ ಮುಗಿಲ ಮೇಲೆ ಹೋಗಿ ಕೆಳಗೆ ನೋಡಿದ್ದನೋ ಇಲ್ಲವೋ, ಹೆಣ್ಣಿನ ಮೇಲಿಂದಲಂತೂ ನೋಡಿದ್ದ ಎಂಬುದು ನಿಶ್ಚಯ!
- ಹರಿಹರ