ಎಂಥಾ ಖುಷಿಯಯ್ಯಾ ಇದು ಎಂಥಾ ಖುಷಿ!
ಅಲ್ಲಿದ್ದದ್ದು ಮನೆಯೊಳಗಿನ, ಆತ್ಮೀಯ ವಾತಾವರಣ. ಅವರು ಅಂತಾರಾಷ್ಟ್ರೀಯ ಖ್ಯಾತಿ ಪಡೆದವರಾಗಿದ್ದರೂ, ತಾವು ಕನ್ನಡಿಗರೆಂದೇ ಕರೆಸಿಕೊಳ್ಳಲು ಇಷ್ಟಪಡುವವರು...
ಅಲ್ಲಿದ್ದದ್ದು ಮನೆಯೊಳಗಿನ, ಆತ್ಮೀಯ ವಾತಾವರಣ. ಅವರು ಅಂತಾರಾಷ್ಟ್ರೀಯ ಖ್ಯಾತಿ ಪಡೆದವರಾಗಿದ್ದರೂ, ತಾವು ಕನ್ನಡಿಗರೆಂದೇ ಕರೆಸಿಕೊಳ್ಳಲು ಇಷ್ಟಪಡುವವರು. ಕನ್ನಡದ ಕೌಟುಂಬಿಕ ನಿಯತಕಾಲಿಕೆಯೊಂದನ್ನು ಲೋಕಾರ್ಪಣೆ ಮಾಡಲು ಎನ್.ಆರ್.ನಾರಾಯಣಮೂರ್ತಿ ಅವರಿಗಿಂತ ಬೇರೆ ಕನ್ನಡಿಗ ಬೇಕೆ?
ಮೂರ್ತಿಯವರು ನಮಗೆ ಸಮಯ ಕೊಟ್ಟದ್ದು ಸಂಜೆ 6 ಗಂಟೆಗೆ. ಸರಿಯಾಗಿ 5.59ಕ್ಕೆ ಅವರು ಒಳಗೆ ಬಂದರು. ಅಚ್ಚ ಕನ್ನಡದ ಮಾತು ಮತ್ತು ನಗೆಯೊಂದಿಗೆ ಸ್ವಾಗತಿಸಿದರು. ಕನ್ನಡಪ್ರಭದ ರೂಪಾಂತರಗೊಂಡ ಸಾಪ್ತಾಹಿಕ ಪುರವಣಿ 'ಖುಷಿ'ಯನ್ನು ಬಿಡುಗಡೆ ಮಾಡಬೇಕೆಂಬ ಬೇಡಿಕೆಯನ್ನು ಅವರ ಮುಂದಿಡಲಾಯಿತು. 'ಓಕೆ, ಎಲ್ಲಿ, ಯಾವಾಗ?' ಎಂಬ ಅವರ ಪ್ರಶ್ನೆಗೆ 'ಇಲ್ಲೇ, ಈಗಲೇ' ಎಂಬ ಉತ್ತರ ಸಿದ್ಧವಿತ್ತು. ಚಕಿತರಾಗಿ ಕಟ್ಟು ಬಿಚ್ಚಿ 'ಖುಷಿ'ಯನ್ನು ಲೋಕಾರ್ಪಣೆಗೊಳಿಸಿದ ನಾರಾಯಣಮೂರ್ತಿ, ಪುರವಣಿಯ ಹೊಸ ನೋಟ, ಹೊಸ ಸ್ವರೂಪಗಳಿಂದ ತುಂಬಾ ಖುಷಿಯಾದರು. ಖುಷಿಯ ಮೊದಲ ಸಂಚಿಕೆಯನ್ನು ತುಂಬಿದ 'ಕನ್ನಡದ ಕಣ್ಮಣಿ ರಾಜ್ ಕುಟುಂಬ' ಕುರಿತ ಲೇಖನವನ್ನು ನೋಡಿ ಭಾವುಕರಾದರು. ಈ ಸಂದರ್ಭ ಡಾ.ರಾಜ್ ಹಾಗೂ ಕನ್ನಡಪ್ರಭ ಪತ್ರಿಕೆ ಕರ್ನಾಟಕಕ್ಕೆ, ಕನ್ನಡಿಗರಿಗೆ ಕೊಟ್ಟ ಕೊಡುಗೆಯ ಬಗ್ಗೆ ಅವರಿಂದ ಮೆಚ್ಚುಗೆ, ಶ್ಲಾಘನೆ ಸಂದವು.
ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಖುಷಿಯ ಬಗ್ಗೆ ಅವರಿಗೆ ವಿವರಿಸಿದರು. ಅವರ ಮಾತುಗಳನ್ನು ಸಾವಧಾನದಿಂದ ಕೇಳಿಸಿಕೊಂಡ ಮೂರ್ತಿ, ಪ್ರತಿ ಭಾನುವಾರವೂ ಪತ್ರಿಕೆಯ ಜತೆಗೆ ಈ ನಿಯತಕಾಲಿಕವನ್ನು ಉಚಿತವಾಗಿ ಕೊಡಲಾಗುತ್ತದೆ ಎಂಬ ಅಂಶದ ಬಗ್ಗೆ ಅಚ್ಚರಿ, ಸಂತೋಷ ವ್ಯಕ್ತಪಡಿಸಿದರು. ಇದು ಕನ್ನಡಿಗರಿಗೊಂದು ಅದ್ಭುತ ಕೊಡುಗೆಯಾಗಲಿದೆ, ಓದಲು ಹಾಗೂ ರೆಫರೆನ್ಸ್‌ಗೆ ಸೂಕ್ತವಾದ ನಿಯತಕಾಲಿಕೆ ಆಗಲಿದೆ ಎಂಬುದನ್ನು ಹೇಳಲು ಅವರು ಮರೆಯಲಿಲ್ಲ.
ಸಾದ್ಯಂತವಾಗಿ, ಆಸಕ್ತಿಯಿಂದ ಖುಷಿಯನ್ನು ತಿರುವಿ ಹಾಕಿದ ಮೂರ್ತಿ, 'ನನ್ನ ಕಾರ್ಯದರ್ಶಿಗೆ ಒಂದು, ಪತ್ನಿ ಸುಧಾ ಅವರಿಗೊಂದು ಪ್ರತಿ ಕೊಡಿ' ಎಂದು ಕೇಳಿ ಪಡೆದುಕೊಂಡದ್ದನ್ನು ಮರೆಯುವ ಹಾಗಿರಲಿಲ್ಲ. ಬಿಡುಗಡೆಗೊಳಿಸಿದ ನಂತರ 'ಖುಷಿಗೆ ಶುಭಾಶಯಗಳು' ಎಂದು ಅಪ್ಪಟ ಕನ್ನಡದಲ್ಲಿ ಬರೆದುಕೊಟ್ಟರು. ದಿನಾಂಕ ನಮೂದಿಸುವಾಗ, ಕನ್ನಡದಲ್ಲೇ ದಾಖಲಿಸುವ ಪ್ರಯತ್ನ ಮಾಡಿದರು. 'ಕನ್ನಡ ಅಂಕಿಗಳನ್ನು ಬಳಸದೇ ತುಂಬ ದಿನವಾದುದರಿಂದ ಮರೆತುಹೋಗಿದೆ' ಎಂದು ಮುಗುಳುನಕ್ಕರು!
ಕನ್ನಡ ಪತ್ರಿಕೋದ್ಯಮದಲ್ಲಿ ಕನ್ನಡಪ್ರಭ ದಾಖಲಿಸಿರುವ ಮೈಲುಗಲ್ಲುಗಳು, ಹೊಸ ಸಂಪಾದಕತ್ವದಲ್ಲಿ ಅದು ಮೂಡಿಸಿರುವ ನವೀನ ಛಾಪುಗಳ ಕುರಿತು ಮೂರ್ತಿ ಹೃದಯ ಬಿಚ್ಚಿ ಮಾತನಾಡಿದರು. ಅಲ್ಲಿದ್ದದ್ದು ಖುಷಿ ಮತ್ತು ಖುಷಿ ಮಾತ್ರ!