ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

2000 ವರ್ಷ ಹಿಂದೆಯೇ ಅಲ್ಸರ್ ಬಗ್ಗೆ ತಿಳಿದಿತ್ತು!

ಅಲ್ಸರ್ ಆಗಿದೆ ಎಂದರೆ ಏನೋ ಗಾಬರಿ. ಹೊಟ್ಟೆ ಸರಿಪಡಿಸಲಾರದಷ್ಟು ಹಾಳಾಗಿದೆ ಎನ್ನುವ ಭಾವನೆ. ಇನ್ನು ಗ್ರಾಮೀಣ ಭಾಗದಲ್ಲಂತೂ ...

Rashmi Kasaragodu
Updated On : 9 Dec 2013, 6:19 am

ಅಲ್ಸರ್ ಆಗಿದೆ ಎಂದರೆ ಏನೋ ಗಾಬರಿ. ಹೊಟ್ಟೆ ಸರಿಪಡಿಸಲಾರದಷ್ಟು ಹಾಳಾಗಿದೆ ಎನ್ನುವ ಭಾವನೆ. ಇನ್ನು ಗ್ರಾಮೀಣ ಭಾಗದಲ್ಲಂತೂ ಎರಡೇ ನಂಬಿಕೆ. ಒಂದು- ಆತ ಅತಿಯಾಗಿ ಖಾರ ಮತ್ತು ಹುಳಿ ತಿನ್ನುತ್ತಾನೆ. ಎರಡು- ಆತ ವಿಪರೀತ ಕುಡಿಯುತ್ತಾನೆ. ಅಲ್ಸರ್ ಆಗಿದೆ ಎಂದರೆ ಜೀವನ ಮುಗಿಯಿತು ಎಂದೇ ಲೆಕ್ಕವಾಗಿತ್ತು. ವಾಸ್ತವಿಕವಾಗಿ ಅಲ್ಸರ್ ಎಂದರೆ ಹುಣ್ಣು. ಹೊಟ್ಟೆ, ಸಣ್ಣ ಕರುಳು ಸೇರಿದಂತೆ ಜೀರ್ಣಾಂಗಗಳಲ್ಲಿ ಹುಣ್ಣು, ಗಾಯ ಆಗುವುದು. ವೈದ್ಯಕೀಯವಾಗಿ ಇದನ್ನು 'ಪೆಪ್ಟಿಕ್ ಅಲ್ಸರ್‌' ಅಂದರೆ ಜೀರ್ಣಾಂಗ ಹುಣ್ಣು ಎಂದೇ ಹೇಳಲಾಗುತ್ತದೆ.
ಒಂದನೇ ಶತಮಾನದಲ್ಲಿಯೇ ರೋಮನ್ನರಿಗೆ ಪೆಪ್ಟಿಕ್ ಅಲ್ಸರ್ ಕುರಿತು ತಿಳಿವಳಿಕೆ ಇತ್ತು ಎನ್ನುವುದನ್ನು ಓದಿದಾಗ ನನಗಂತೂ ಆಶ್ಚರ್ಯವಾಗಿ ಹೋಯಿತು. ಬಹುಶಃ ಅದೇ ಅನುಭವ ನಿಮ್ಮದೂ ಆಗಬಹುದು. ಆಗಲೇ ವೈದ್ಯಕೀಯ ವಿಶ್ವಕೋಶ ರಚಿಸಿದ್ದ ರೋಮನ್ ವೈದ್ಯ ಅರೆಲಿಯಸ್ ಸೆಲ್ಸಸ್ ಎಂಬಾತ ಹೇಳುತ್ತಾನೆ, 'ಹೊಟ್ಟೆಯಲ್ಲಿ ಹುಣ್ಣಾದರೆ ಲಘುವಾದ ಮತ್ತು ಅಂಟಂಟಾದ ಆಹಾರಗಳನ್ನಷ್ಟೇ ಸೇವಿಸಬೇಕು. ಯಾವುದೇ ರೀತಿಯ ತೀಕ್ಷ್ಣವಾದ, ಹುಳಿಯಾದ, ಆಮ್ಲೀಯ ಆಹಾರಗಳನ್ನು ಮುಟ್ಟಲೇಬಾರದು'. ಇನ್ನು ನಮ್ಮವರೇನೂ ಹಿಂದೆ ಬಿದ್ದಿರಲಿಲ್ಲ. ಪಶ್ಚಿಮ ಬಂಗಾಳದ ವೈದ್ಯ ಮಾಧವಕರ್ ಎನ್ನುವವರು ಹುರಿದ, ಬಹಳ ಬಿಸಿಯಾದ, ಕಿರಿಕಿರಿ ಉಂಟುಮಾಡುವಂಥ ಹುಳಿ ಅಂಶ ಹೊಂದಿರುವ ಆಹಾರ ಪದಾರ್ಥಗಳು ಮತ್ತು ಮದಿರೆ ಇವು ಉದರ ವೃಣವನ್ನು ಉಂಟುಮಾಡುತ್ತವೆ ಎಂದು ಏಳನೇ ಶತಮಾನದಲ್ಲಿಯೇ ಹೇಳಿದ್ದರು. ಈ ಶತಮಾನದ ಬಗ್ಗೆ ಹೇಳುವುದಿದ್ದರೆ ಸರಿಸುಮಾರು 1980ರ ದಶಕದವರೆಗೂ ಅಲ್ಸರ್ ಚಿಕಿತ್ಸೆಯಲ್ಲಿ ಪ್ರಮುಖವಾಗಿ ಅನುಸರಿಸುತ್ತಿದ್ದುದು 'ಸಿಪ್ಪಿ ಮಿಲ್ಕ್ ಡಯಟ್‌' ಅನ್ನು. ಅಮೆರಿಕದ ವೈದ್ಯ ಬಿ.ಡಬ್ಲ್ಯೂ. ಸಿಪ್ಪಿ ಎನ್ನುವವರು ಇದನ್ನು ಕಂಡುಹಿಡಿದಿದ್ದರಿಂದ ಈ ಹೆಸರು. ಈ ವಿಧಾನದಲ್ಲಿ ಕೆನೆ ಮತ್ತು ಹಾಲನ್ನು ನಿಯಮಿತವಾಗಿ ಆರು ವಾರ ಕಾಲ ಸೇವಿಸುವುದು ಕಡ್ಡಾಯವಾಗಿತ್ತು. ಅದು ತಪ್ಪು ಎನ್ನುವುದು ಬಹಳ ತಡವಾಗಿಯಾದರೂ ವೈದ್ಯ ಲೋಕಕ್ಕೆ ಅರಿವಾಯಿತು. ಬಹಳ ವರ್ಷ ಕಾಲ ಜೀರ್ಣಾಂಗ ವೃಣಕ್ಕೆ ತಪ್ಪಾದ ಡಯಟ್ ಅನ್ನು ಪಾಲಿಸಲಾಗುತ್ತಿತ್ತು ಮತ್ತು ಅದರಿಂದಲೇ ಗಾಯ ಒಣಗುವುದು ತಡವಾಗುತ್ತಿತ್ತು. ಹೀಗಾಗಿ ಹೊಟ್ಟೆ ಹುಣ್ಣು ಎಂದರೆ ಸುಲಭವಾಗಿ ಗುಣಪಡಿಸಲಾಗದ ಕಾಯಿಲೆ ಎನ್ನುವ ತಪ್ಪುನಂಬಿಕೆ ಜನರಲ್ಲಿ ಆಳವಾಗಿ ಬೇರೂರಿತ್ತು.
ಅದೇ ನಮ್ಮ ಹಿರಿಯರನ್ನು ನೋಡಿ. ರೋಮ್‌ನ ಸೆಲ್ಸಸ್ ಇರಬಹುದು, ನಮ್ಮವರೇ ಆದ ಮಾಧವಕರ್ ಆಗಿರಬಹುದು. ಅಲ್ಸರ್ ಆದಾಗ ಯಾವ ರೀತಿಯ ಡಯಟ್ ಮಾಡಬೇಕು ಎನ್ನುವುದನ್ನು ಅತ್ಯಂತ ಸ್ಪಷ್ಟವಾಗಿ ಹೇಳಿದ್ದರು.

(ಮುಂದುವರಿಯುವುದು)

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement