ಅಭಿಮಾನಧನರು ವಿವೇಕಾನಂದರು!
ಒಮ್ಮೆ ಸ್ವಾಮೀಜಿ ನೇಫಲ್ಸ್ನಿಂದ ಶ್ರೀಲಂಕಾದ ಕೊಲಂಬೊ ನಗರಕ್ಕೆ ಹಡಗಿನಲ್ಲಿ ಪಯಣಿಸುತ್ತಿದ್ದರು. ಇದೇ ಹಡಗಿನಲ್ಲಿ ಇಬ್ಬರು ಕ್ರೈಸ್ತ ಮಿಷನರಿಗಳು...
ಒಮ್ಮೆ ಸ್ವಾಮೀಜಿ ನೇಫಲ್ಸ್ನಿಂದ ಶ್ರೀಲಂಕಾದ ಕೊಲಂಬೊ ನಗರಕ್ಕೆ ಹಡಗಿನಲ್ಲಿ ಪಯಣಿಸುತ್ತಿದ್ದರು. ಇದೇ ಹಡಗಿನಲ್ಲಿ ಇಬ್ಬರು ಕ್ರೈಸ್ತ ಮಿಷನರಿಗಳು ಇದ್ದರು. ಹಿಂದೂ ಧರ್ಮದ ಪ್ರಬಲ ಸಮರ್ಥಕನೊಬ್ಬನು ಜೊತೆಯಲ್ಲಿರುವುದು ಅವರಿಗೆ ಸಹನೀಯವಾಗಲಿಲ್ಲ. ಅವರು ಹಿಂದೂ ಹಾಗೂ ಕ್ರೈಸ್ತ ಧರ್ಮಗಳ ನಡುವಿನ ಭೇದಗಳ ಬಗ್ಗೆ ತಮ್ಮೊಂದಿಗೆ ಚರ್ಚಿಸುವಂತೆ ಸ್ವಾಮೀಜಿಯನ್ನು ಒತ್ತಾಯಿಸಿದರು. ಮತಾಂಧ ವ್ಯಕ್ತಿಗಳೊಂದಿಗೆ ಚರ್ಚೆ ಮಾಡುತ್ತಾ ಕಾಲಹರಣ ಮಾಡುವುದು ಸ್ವಾಮೀಜಿಗೆ ಇಷ್ಟವಾಗದಿದ್ದರೂ ಸೌಜನ್ಯಕ್ಕಾಗಿ ಅವರೊಂದಿಗೆ ಚರ್ಚೆಯಲ್ಲಿ ತೊಡಗಿದರು. ಮಿಷನರಿಗಳ ವಾದವನ್ನು ಸ್ವಾಮೀಜಿ ಶಾಂತವಾಗಿಯೇ ಖಂಡಿಸುತ್ತ ಸಾಗಿದರು. ಸೋಲನ್ನೊಪ್ಪಿಕೊಳ್ಳದ ಅವರು ಕೋಪಗೊಂಡು ವಾದವನ್ನು ಬಿಟ್ಟು ಹಿಂದೂಗಳನ್ನು, ಹಿಂದೂ ಧರ್ಮವನ್ನೂ ಹಾಗೂ ನಾಡನ್ನು ನಿಂದಿಸಲು ಶುರುಮಾಡಿದರು.
ಸ್ವಾಮೀಜಿ ಮೊದಮೊದಲು ಸಾಧ್ಯವಾದಷ್ಟು ಸಹಿಸಿಕೊಂಡರು. ಅವರ ಬೈಗುಳ ಮಿತಿಮೀರಿದಾಗ, ತಾಯ್ನಾಡಿನ ನಿಂದನೆಗಿಳಿದಾಗ ಸ್ವಾಮೀಜಿ ಆ ಮಿಷನರಿಗಳನ್ನು ತಮ್ಮ ಬಾಹುಬಲದಿಂದ ಹಿಡಿದುಕೊಂಡು ಅರ್ಧ ತಮಾಷೆಯ, ಅರ್ಧ ಗಂಭೀರ ದನಿಯಲ್ಲಿ, 'ಇನ್ನು ನೀವು ನಮ್ಮ ಧರ್ಮವನ್ನು, ನಾಡನ್ನು ಬೈದದ್ದೇ ಆದರೆ ನಿಮ್ಮನ್ನು ಸಮುದ್ರಕ್ಕೆ ಎಸೆದುಬಿಡುತ್ತೇನೆ!' ಎಂದರು. ಆ ಮಿಷನರಿಗಳು ಹೆದರಿ ಗಡಗಡ ನಡುಗುತ್ತಾ, 'ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ, ಸ್ವಾಮೀಜಿ! ಇನ್ನು ಮೇಲೆ ಎಂದೂ ಹಾಗೆ ಮಾಡುವುದಿಲ್ಲ' ಎಂದು ಗೋಗರೆದರು. ಅಂದಿನಿಂದ ಮಿಷನರಿಗಳು ತಮ್ಮ ವರ್ತನೆಯನ್ನು ಬದಲಿಸಿಕೊಂಡರು.
ಸಹಿಷ್ಣುತೆ ಅತಿಯಾದರೆ ಅದು ದೌರ್ಬಲ್ಯವೆನಿಸಿಕೊಳ್ಳುತ್ತದೆ. ಭಾರತೀಯರಲ್ಲಿ ಕಂಡುಬರುವಂತಹ ಸಹನೆ ಹೆಚ್ಚಾಗಿ ಈ ಬಗೆಯದು. ಆದ್ದರಿಂದಲೇ ಸ್ವಾಮೀಜಿ ಕ್ಷಾತ್ರವೀರ್ಯವನ್ನು ಮೈಗೂಡಿಸಿಕೊಳ್ಳುವಂತೆ ಭಾರತೀಯರಿಗೆ ಕರೆ ನೀಡಿದರು.
- ಆನಂದ .ಎಸ್.ಎನ್.
anandsn193@gmail.com