ಅಳಿದುಳಿದ ಹೊಸ ಮನೆ
ಮನೆಯ ಹಿಂಬದಿ ನೆನಪುಗಳ ಬುತ್ತಿ ಕಟ್ಟಿಕೊಡುತ್ತಿರುವ ಅಪ್ಪ- ಅಮ್ಮನ ಸಮಾಧಿ, ಮುಂಭಾಗದಲ್ಲೇ ಹಾಮಾನಾ ಸಮಾಧಿ, ಪಕ್ಕದಲ್ಲಿ ಪತ್ನಿಯ ಸಮಾಧಿ...
ಮನೆಯ ಹಿಂಬದಿ ನೆನಪುಗಳ ಬುತ್ತಿ ಕಟ್ಟಿಕೊಡುತ್ತಿರುವ ಅಪ್ಪ- ಅಮ್ಮನ ಸಮಾಧಿ, ಮುಂಭಾಗದಲ್ಲೇ ಹಾಮಾನಾ ಸಮಾಧಿ, ಪಕ್ಕದಲ್ಲಿ ಪತ್ನಿಯ ಸಮಾಧಿ, ಕಣ್ಣಳತೆಯ ದೂರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಹೊಸಮನೆಯ ಕಟ್ಟಡದ ಅಳಿದುಳಿದ ಭಾಗಗಳು- ಇವಿಷ್ಟನ್ನು ಬಿಟ್ಟರೆ ಹಾಮಾನಾ ನೆನಪಿಗೆ ಇಲ್ಲಿ ಇನ್ನೇನೂ ಉಳಿದಿಲ್ಲ. ದೂರದ, ಅಕ್ಕಪಕ್ಕದ ಜಿಲ್ಲೆಗಳಿಂದ ಬರುವ ಪ್ರವಾಸಿಗರೂ, ಶಾಲಾ ವಿದ್ಯಾರ್ಥಿಗಳು ಈ ಸ್ಥಳವನ್ನೇ ಪವಿತ್ರಗಣ್ಣಿನಿಂದ ನೋಡಿ ಕೃತಾರ್ಥರಾಗುತ್ತಾರೆ.
ಖಡಕ್, ನೇರ ನುಡಿಗೆ ಹೆಸರಾದ ಕನ್ನಡ ಕಣ್ಮಣಿ, ಸಾಹಿತಿ ಹಾ.ಮಾ. ನಾಯಕರು ಆಡಿ ಬೆಳೆದ ಆದಿ ಮನೆ ತೀರ್ಥಹಳ್ಳಿ ತಾಲೂಕಿನ ಸಾಲೂರು ಸಮೀಪದ ಹೊಸಮನೆಯಲ್ಲಿದೆ. ಹಾಮಾನಾ ಹುಟ್ಟಿದ ವರ್ಷವೇ ಅವರ ತಂದೆ ಹಾರೋಗದ್ದೆಯಿಂದ ಹೊರಟು, ಸಮೀಪದ ಹೊಸಮನೆಯಲ್ಲಿ ಮನೆ ಕಟ್ಟಿಕೊಂಡರು. ಆ ಕಾಲದಲ್ಲಿ ದಟ್ಟ ಕಾಡುಗಳಿಂದ ಕೂಡಿದ್ದ ಈ ಪ್ರದೇಶ ಸಾಕಷ್ಟು ನಿರ್ಜನವಾಗಿತ್ತು. ರಸ್ತೆಯ ಸಮೀಪದಲ್ಲೇ ಮನೆ ಕಟ್ಟಿದ್ದರು. ನಂತರ ಅಲ್ಲಿ ಹೊಸಮನೆಗಳು ಎದ್ದವಂತೆ. ಹೀಗಾಗಿ, ಆ ಊರು 'ಹೊಸಮನೆ' ಆಯಿತು. ಹಾಗಂತ ಹಾಮಾನಾ ಸಹೋದರ ಗೋಪಾಲ ನಾಯಕರು ಅಂದಿನ ದೃಶ್ಯವನ್ನು ತೆರೆದಿಟ್ಟರು.
ನಾಲೂರು, ಮೇಗರವಳ್ಳಿಯಲ್ಲಿ ಹಾಮಾನಾರ ಪ್ರಾಥಮಿಕ ಶಿಕ್ಷಣ ನಡೆಯಿತು. ಪ್ರತಿ ರಜಾ ದಿನಗಳಲ್ಲೂ ಹಾಮಾನಾ ಆಡಿ ಬೆಳೆದಿದ್ದು ಇದೇ ಹೊಸಮನೆಯಲ್ಲಿ. ಮೈಸೂರು ಅವರ ಸಾಹಿತ್ಯ ಕ್ಷೇತ್ರದ ಕರ್ಮಭೂಮಿಯಾದ ನಂತರವೂ ಹೊಸಮನೆಯ ಸಂಪರ್ಕ ಸದಾ ಹೊಸದರಂತೆ ಇರುತ್ತಿತ್ತು.
'ಹಾಮಾನಾ ನಿಧನದ (10 ನವೆಂಬರ್ 2000) ನಂತರ ಅವರ ಸ್ವಕ್ಷೇತ್ರ ಹೊಸಮನೆಯಲ್ಲಿ ಅವರ ನೆನಪಿಗಾಗಿ ಸರ್ಕಾರ ಏನೂ ಮಾಡಿಲ್ಲ. 13 ವರ್ಷವಾಯಿತು, ಸರ್ಕಾರ ಗುರುತಿಸಬೇಕಿತ್ತು' ಎಂದು ಬೇಸರದಿಂದಲೇ ನುಡಿಯುತ್ತಾರೆ ಗೋಪಾಲನಾಯ್ಕರ ಪತ್ನಿ ಶಾರದಾ. ಇವರ ನುಡಿ ಅಕ್ಷರಶಃ ಸತ್ಯ. ಸಮೀಪದ ಸಾಲೂರಿನಲ್ಲಿ ಗ್ರಾಪಂ ಸಭಾಂಗಣಕ್ಕೆ ಊರವರೇ ಹಾಮಾನಾ ಸಭಾಂಗಣ ಎಂದು ಹೆಸರಿಟ್ಟಿದ್ದಾರೆ. ಪುಟ್ಟ ಗ್ರಂಥಾಲಯವೂ ಇಲ್ಲಿದೆ.
ಹಾರೋಗದ್ದೆ ಕುಟುಂಬದಲ್ಲಿ ಸಾಕಷ್ಟು ರಾಜಕೀಯ ಪ್ರಭಾವವಿದ್ದವರೂ ಇದ್ದಾರೆ. ಕಡಿದಾಳು ಕುಟುಂಬಕ್ಕೆ ಹತ್ತಿರವಾಗಿದ್ದರೂ ಈ ಪ್ರಭಾವ ಇಲ್ಲಿ ಯಾವುದೇ ಕೆಲಸ ಮಾಡಿಲ್ಲ. ಮೇಲಾಗಿ ಹಾಮಾನಾ ಸಹೋದರ ಗೋಪಾಲ ನಾಯಕರೂ ಯಾವತ್ತೂ ಇದರ ಹಿಂದೆ ಬಿದ್ದು ಕೈಕಟ್ಟಿ ಹೋದವರಲ್ಲ. ಇಷ್ಟಾಗಿಯೂ ಆರೇಳು ವರ್ಷಗಳ ಹಿಂದೆ ಶಿವಮೊಗ್ಗ ಜಿ.ಪಂ.ನಲ್ಲಿ ತೀರ್ಥಹಳ್ಳಿ- ದುರ್ಗಾ ರಸ್ತೆಗೆ 'ಹಾಮಾನಾ' ಹೆಸರಿಡಬೇಕು ಎಂದು ನಿರ್ಣಯವಾಗಿದೆಯಂತೆ. ಅದು ಎಲ್ಲಿ ಧೂಳು ಹಿಡಿದಿದೆಯೋ, ಆ ಧೂಳು ಕೊಡವುವರು ಯಾರು ಎನ್ನುವುದೇ ಯಕ್ಷಪ್ರಶ್ನೆ. ಹಾಮಾನಾ ಮನೆ, ಸಮಾಧಿಗೆ ಹೊಸ ಕಳೆ ನೀಡಲು ಸರ್ಕಾರ ಮುಂದಾಗಬೇಕು.ಟಿ
- ಜಿ.ಆರ್. ಸತ್ಯನಾರಾಯಣ