ಖಾಸಗಿ ಬಸ್ ಗಳದ್ದೇ ಸಿಂಹಪಾಲು
ದೇಶದೆಲ್ಲೆಡೆ ಸಂಭವಿಸುತ್ತಿರುವ ರಸ್ತೆ ಅಪಘಾತಗಳಲ್ಲಿ ಬಹುತೇಕ 'ಖಾಸಗಿ ಬಸ್' ಗಳದ್ದೇ ಸಿಂಹಪಾಲು. ಇದಕ್ಕೆ ಪ್ರಮುಖ ಕಾರಣಗಳು ಎಂದರೆ, ಅನುಭವ ...
ದೇಶದೆಲ್ಲೆಡೆ ಸಂಭವಿಸುತ್ತಿರುವ ರಸ್ತೆ ಅಪಘಾತಗಳಲ್ಲಿ ಬಹುತೇಕ 'ಖಾಸಗಿ ಬಸ್' ಗಳದ್ದೇ ಸಿಂಹಪಾಲು. ಇದಕ್ಕೆ ಪ್ರಮುಖ ಕಾರಣಗಳು ಎಂದರೆ, ಅನುಭವ ಇಲ್ಲದ ಚಾಲಕರು ಮತ್ತು ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವುದು. ಚಾಲಕನಿಗೆ ಕೇವಲ ಬಸ್ ಚಾಲನೆ ಮಾತ್ರ ತಿಳಿದಿದ್ದರೆ ಸಾಲದು, ಐಷಾರಾಮಿ 'ವೋಲ್ವೊ' ಬಸ್ ಚಾಲನೆ ಮಾಡುವಾಗ ಬಸ್ನ ತಾಂತ್ರಿಕ ವಿನ್ಯಾಸದ ಬಗ್ಗೆ ಸ್ಪಷ್ಟ ತಿಳಿವಳಿಕೆ ಮತ್ತು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ಇರಬೇಕಾದದ್ದು ಅತ್ಯಗತ್ಯ. ಖಾಸಗಿ ಬಸ್ ಮಾಲೀಕರು ಹಣಗಳಿಕೆಯೊಂದನ್ನೇ ಮುಖ್ಯವಾಗಿಸಿಕೊಂಡರೆ ಅಮಾಯಕ ಪ್ರಯಾಣಿಕರ ಜೀವ ರಕ್ಷಿಸುವವರು ಯಾರು? ಸಾರ್ವಜನಿಕರೂ ಅಷ್ಟೆ, ಟಿಕೆಟ್ ದರ ಕಡಿಮೆ ಇರುತ್ತದೆಂದು ಖಾಸಗಿ ಬಸ್ಗಳಲ್ಲಿ ಹೋಗುವುದನ್ನು ಬಿಡಬೇಕು. ದೂರದ ಊರುಗಳಿಗೆ ಹೋಗಬೇಕಾದಲ್ಲಿ ಅಲ್ಲಿಗೆ ರೈಲಿನ ವ್ಯವಸ್ಥೆ ಇದ್ದರೆ 'ರಾತ್ರಿ ಪ್ರಯಾಣ' ರೈಲಿನಲ್ಲಿ ಮಾಡಿದರೆ ಹೆಚ್ಚು ಸುರಕ್ಷಿತ ಹಾಗೂ ಸುಖಕರ ಆಗಿರುತ್ತದೆ.
- ಮಧು, ಹಾಸನ
ಪ್ರಯಾಣಿಕರಿಗೆ ಆಘಾತ
ಅೃಪಘಾತವಾಗಲು ಖಾಸಗಿ, ಸರ್ಕಾರಿ ಬಸ್ಸುಗಳು ಎಂಬ ಭೇದ ಭಾವ ಇರುವುದಿಲ್ಲ. ಪ್ರಯಾಣಿಕರ ಗ್ರಹಚಾರ ಕೆಟ್ಟಿದ್ದರೆ, ಚಾಲಕರು ಬೇಜವಾಬ್ದಾರಿಯಾಗಿ ವಾಹನ ಓಡಿಸಿದ್ದೇ ಆದರೆ, ಅಪಘಾತ ಕಟ್ಟಿಟ್ಟ ಬುತ್ತಿ! ಸರ್ಕಾರಿ ಬಸ್ಸುಗಳಲ್ಲಿ ಲಗೇಜುಗಳು ಕಡಿಮೆ ಇರುತ್ತದೆ. ಆದರೆ, ಖಾಸಗಿ ಬಸ್ಸುಗಳಲ್ಲಿ ಅದರಲ್ಲೂ ರಾತ್ರಿ ಪ್ರಯಾಣ ಆರಂಭಿಸುವ ಬಹುತೇಕ ಬಸ್ಸುಗಳಲ್ಲಿ ಈ ಲಗೇಜು ಎಂಬ ಬಸ್ಮಾಸುರ ಅಡಕಗೊಂಡಿರುತ್ತಾನೆ. ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನಡೆದ ಖಾಸಗಿ ಬಸ್ಸು ರಾಸಾಯನಿಕ ಲಗೇಜನ್ನು ಸಾಗಿಸುತ್ತಿದ್ದುದು ತನಿಖೆಯಿಂದ ಬೆಳಕಿಗೆ ಬಂದಿದೆ. ಅಲ್ಲದೆ ನಿದ್ದೆಗೆಟ್ಟು ಬಸ್ ಓಡಿಸುವುದು, ಅತಿ ವೇಗವಾಗಿ ಬಸ್ ಓಡಿಸುವುದು ಹೀಗೆ ಹತ್ತಾರು ಸಮಸ್ಯೆಗಳನ್ನು ಪರಿಹರಿಸಿದ್ದಲ್ಲಿ ಯಾವುದೇ ಬಸ್ಸುಗಳ ಪ್ರಯಾಣ ಸುಖಕರವಾಗಿರುತ್ತದೆ. ಇಲ್ಲದಿದ್ದರೆ ಅಪಘಾತ ಪ್ರಯಾಣಿಕರಿಗೆ ಆಘಾತ ತರದೇ ಇರದು.
- ಕಾಳೀಹುಂಡಿ ಶಿವಕುಮಾರ್, ಮೈಸೂರು.
ಜೀವ ಹಾನಿಗೆ ಆಹ್ವಾನ
ಇತ್ತೀಚೆಗೆ ಖಾಸಗಿ ಬಸ್ ಅಂದ್ರೇನೇ ಜನ ಭಯ ಬೀಳುವಂತಾಗಿದೆ. ಇಂದು ಅನೇಕ ಖಾಸಗಿ ಬಸ್ ಕಂಪನಿಗಳು ಜನರ ಜೀವದ ರಕ್ಷಣೆಯನ್ನು ಹಾಗೂ ಅವರ ಸುರಕ್ಷಿತ ಪ್ರಯಾಣದ ಉದ್ದೇಶವನ್ನು ತೊರೆದು ಕೇವಲ ಹಣಗಳಿಕೆಯನ್ನು ತಮ್ಮ ಉದ್ದೇಶವನ್ನಾಗಿಸಿಕೊಂಡಿವೆ. ಅವರ ಅತಿ ಆಸೆಯಿಂದಾಗಿ ಆ ಬಸ್ಸಿನ ಸಾಮರ್ಥ್ಯಕ್ಕಿಂತಲೂ ಅಧಿಕ ಸಾಮಾನುಗಳನ್ನು ಹಾಗೂ ವ್ಯಕ್ತಿಗಳನ್ನು ತುಂಬಿಸಿ ಅಪಾಯಕ್ಕೆ ಕಾರಣವಾಗುವಂತೆ ಮಾಡಿವೆ. ಹಾಗೆಯೇ ಅತಿಯಾದ ವೇಗದಿಂದ ಬಸ್ಸಿನ ಉಷ್ಣತೆ ಹೆಚ್ಚಾಗಿ ಅಪಾಯ ಉಂಟಾಗುತ್ತಿದೆ. ಖಾಸಗಿ ಬಸ್ಗಳಲ್ಲಿ ಪ್ರಯಾಣಿಸಿದರೆ ನಮ್ಮ ಹಣ ಕೇವಲ ಆ ಬಸ್ ಮಾಲೀಕನ ಸ್ವತ್ತಾಗುತ್ತದೆ. ಏನಾದರೂ ಅವಘಡ ಜರುಗಿದಲ್ಲಿ ಸರ್ಕಾರದಿಂದ ಹೆಚ್ಚಿನ ಆರ್ಥಿಕ ಸಹಾಯ ಸಿಗುವುದು ಕಷ್ಟ. ಹೀಗಾಗಿ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸುವುದು ಎಲ್ಲ ವಿಷಯಗಳಲ್ಲೂ ಕ್ಷೇಮ.
- ಮೇಘಾ ವಿ ಬಳಿಗಾರ್, ಹಾವೇರಿ.