ಸರಳ ಗುರು
'ನೀ ಹುಚ್ಚ ಅದೀಯಲೆ. ವಾಸ್ತು ಬೆನ್ನುಹತ್ತಿ ಹ್ವಾದಿ ಅಂದ್ರ ಒಂದಲ್ಲ ಒಂದು ದಿನ ರಸ್ತೆ ನಡುಬರಕ ಬಂದು ನಿಲ್ತಿ ನೋಡು.' ಉಹುಂ....
'ನೀ ಹುಚ್ಚ ಅದೀಯಲೆ. ವಾಸ್ತು ಬೆನ್ನುಹತ್ತಿ ಹ್ವಾದಿ ಅಂದ್ರ ಒಂದಲ್ಲ ಒಂದು ದಿನ ರಸ್ತೆ ನಡುಬರಕ ಬಂದು ನಿಲ್ತಿ ನೋಡು.'
ಉಹುಂ. ಯಾರು ಏನೇ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ ಯುವಕ. ಹಾಗಂತ ಆತನ ಕೈಯ್ಯಲ್ಲಿ ದುಡ್ಡು ಇತ್ತು ಅಂತಲ್ಲ. ಕೋಟಿಗಳನ್ನು ಎಣಿಸುತ್ತಿದ್ದವ ಯಾರದೋ ಕುತಂತ್ರದಿಂದ ಎಲ್ಲವನ್ನೂ ಕಳೆದುಕೊಂಡಾಗಿತ್ತು. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತಳ ಊರಿದ್ದರಿಂದ ಬದುಕಿಗೆ ತೊಂದರೆ ಇರಲಿಲ್ಲ. ಎಲ್ಲವನ್ನೂ ಹೊಸತಾಗಿ ಆರಂಭಿಸಬೇಕಾದ ಅನಿವಾರ್ಯತೆ. ಆದರೆ, ಅಂತರಾತ್ಮದ ಆಜ್ಞೆ ಬೇರೆಯದೇ ಆಗಿತ್ತು. ಆ ಪ್ರಕಾರವೇ ನಡೆದುಕೊಳ್ಳುತ್ತೇನೆ ಎಂದು ತೀರ್ಮಾನಿಸಿದ್ದಾಗಿತ್ತು. ಕುಟುಂಬ, ಬಂಧುಗಳು, ಸ್ನೇಹಿತರು, ಹಿತೈಷಿಗಳು ಎಲ್ಲರೂ ವಿರೋಧಿಸಿದರೂ ನಿರ್ಧಾರ ಅಚಲವಾಗಿತ್ತು.
ಎಲ್ಲರ ಕಿವಿಮಾತು ಕಡೆಗಣಿಸಿ, ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಹಳ್ಳಿಹಳ್ಳಿಗಳನ್ನೂ ತಿರುಗಿ, ಕಟ್ಟಡ ನಿರ್ಮಾಣದ ವೃತ್ತಿ ಬಿಟ್ಟು ತನ್ನದೇ ಸ್ವತಂತ್ರ ಅನ್ವೇಷಣೆಯಾದ 'ಸರಳ ವಾಸ್ತು'ವನ್ನು ಎಲ್ಲರಿಗೂ ತಲುಪಿಸಲು ಹೊರಟಿದ್ದ ಆ ಯುವಕ ಚಂದ್ರಶೇಖರ ಅಂಗಡಿ. ಅವರೇ, ಜನ ಇಂದು ಗೌರವದಿಂದ ಕರೆಯುತ್ತಿರುವ ಚಂದ್ರಶೇಖರ ಗುರೂಜಿ!
'ಸರಳ ವಾಸ್ತು' ನಿಜಕ್ಕೂ ಸರಳ. ಈಗಾಗಲೇ ಕಟ್ಟಿದ ಮನೆಯಾಗಿದ್ದರೆ ವಾಸ್ತು ಸಲುವಾಗಿ ಗೋಡೆ ಒಡೆದು ಮತ್ತಷ್ಟು ನಷ್ಟ ಮಾಡಿಕೊಳ್ಳುವ ಪ್ರಮೇಯವಿಲ್ಲ. ವಸತಿ ಮತ್ತು ಉದ್ಯೋಗ ಸ್ಥಳದಲ್ಲಿ ನಕಾರಾತ್ಮಕ ಶಕ್ತಿ ಹೀರಿಕೊಂಡು, ಸಕಾರಾತ್ಮಕ ಶಕ್ತಿಯನ್ನು ಕಟ್ಟಡದ ತುಂಬೆಲ್ಲ ಹರಡುವ ಕೆಲವು ಸಿಂಪಲ್ ಪರಿಕರಗಳನ್ನು ನಿರ್ದಿಷ್ಟ ಜಾಗಗಳಲ್ಲಿ ಅಳವಡಿಸಿದರೆ ಮುಗಿಯಿತು. ನಿರ್ಮಾಣಕ್ಕೆ ಮುನ್ನವೇ ಸಂಪರ್ಕಿಸಿದರೆ ಬಹಳ ಉತ್ತಮ. ಮಾಲೀಕನ ಜನ್ಮದಿನದ ಮೇಲೆ ಯಾವ ದಿಕ್ಕುಗಳು ಪ್ರಭಾವ ಬೀರುತ್ತವೆ? ಸಕಾರಾತ್ಮಕ ಶಕ್ತಿಯ ಹರಡುವಿಕೆ ಹೇಗಿದೆ? ಇವೇ ಸರಳ ವಾಸ್ತುವಿನ ಮೂಲ. ಹಣಕಾಸು, ಆರೋಗ್ಯ, ವಿದ್ಯಾಭ್ಯಾಸ ಈ ಮೂರು ಸಂಗತಿಗಳೇ ಮುಖ್ಯ. 'ಇದಕ್ಕೆಲ್ಲ ವಿಜ್ಞಾನದ ಆಧಾರವಿದೆ. ಇದನ್ನು ಅಳವಡಿಸಿಕೊಂಡರೆ ಮೂರು ತಲೆಮಾರುಗಳವರೆಗೆ ಯಾವುದೇ ತೊಂದರೆ ಕಾಣದು' ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಚಂದ್ರಶೇಖರ ಗುರೂಜಿ.
ವಾಸ್ತು ಗೊತ್ತಿಲ್ಲದವ ತಜ್ಞನಾದ!
'ಸರಳ ವಾಸ್ತು' ಹುಟ್ಟಿದ್ದಕ್ಕೂ ಹಿನ್ನೆಲೆ ಇದೆ. ಮುಂಬೈನಲ್ಲಿ ಚೆನ್ನಾಗಿ ನಡೆಯುತ್ತಿದ್ದ ಕಟ್ಟಡ ನಿರ್ಮಾಣ ವೃತ್ತಿಯಲ್ಲಿ ಲಕ್ಷಾಂತರ ರುಪಾಯಿ ದೋಖಾ ಆಯಿತು; ಒಂದಲ್ಲ, ಮೂರ್ನಾಲ್ಕು ಸಲ! ಎತ್ತರಕ್ಕೆ ಏರಿದ್ದವರು ಪಾತಾಳಕ್ಕೆ ಕುಸಿದರು. ಮದುವೆಯಾಗಿ ಎರಡು ವರ್ಷವಷ್ಟೇ ಆಗಿತ್ತು. ಮಗಳು ಹುಟ್ಟಿದ್ದಳು. ಅಂಥ ಸಂದರ್ಭದಲ್ಲಿ ಆಘಾತ ಸಹಿಸಿಕೊಳ್ಳುವುದು ಎಂತಹವರಿಗೂ ಕಷ್ಟವೆ. 'ನಾನು ಪ್ರಾಮಾಣಿಕನಾಗಿದ್ದರೂ ನಾನು ನಂಬಿದವರೇ ನನಗೇಕೆ ಮೋಸ ಮಾಡಿದರು' ಎನ್ನುವ ಜಿಜ್ಞಾಸೆ ಶುರುವಾಯಿತು. ಅಂಥ ದಿನಗಳಲ್ಲಿ ಸಿವಿಲ್ ಎಂಜಿನಿಯರ್ಗಳು ಬಳಸುವ ಕಂಪಾಸ್ ಮತ್ತು ಮನೆ ನಕಾಶೆ ಪದೇಪದೆ ಕನಸಿನಲ್ಲಿ ಕಾಣಲಾರಂಭಿಸಿತು. ಇದೇಕೆ ಹೀಗೆ ಎಂದು ವಿಚಾರ ಮಾಡುತ್ತ ಹೋದಂತೆ 'ನಿನ್ನ ಮೋಸಕ್ಕೆ ಬೇರೆಯವರನ್ನು ಹೊಣೆ ಮಾಡಬೇಡ. ಅದಕ್ಕೆ ವಾಸಿಸುವ ಮನೆ ಮತ್ತು ಉದ್ಯೋಗ ಸ್ಥಳದಲ್ಲಿನ ದೋಷ ಕಾರಣ' ಎನ್ನುವ ಉತ್ತರ ಸಿಕ್ಕಿತು. ಹಾಗಾದರೆ ಅದರ ಪರಿಹಾರ ಹೇಗೆ ಎನ್ನುವ ಪ್ರಶ್ನೆ. ಉತ್ತರ ಕಂಡುಕೊಳ್ಳಲು ನೂರಾರು ಗ್ರಂಥ ಓದಿದ್ದಾಯ್ತು. ಅಸಂಖ್ಯಾತ ಹಳ್ಳಿಗಳನ್ನು ಸುತ್ತಿದ್ದಾಯ್ತು. ಹೀಗೆ ನಾಲ್ಕು ವರ್ಷಗಳ ಆಳ ಅಧ್ಯಯನ, ಒಂದಷ್ಟು ಅನುಭವಗಳ ಪಾಕಶಾಲೆಯಿಂದ 2000ನೇ ಇಸವಿಯಲ್ಲಿ ರೂಪುಗೊಂಡಿದ್ದೇ 'ಸರಳ ವಾಸ್ತು'.
ತಮಾಷೆ ಎಂದರೆ ಸಿವಿಲ್ ಎಂಜಿನಿಯರ್ ಆಗಿದ್ದ ಚಂದ್ರಶೇಖರರಿಗೆ ಅಲ್ಲಿಯವರೆಗೆ ವಾಸ್ತು ಬಗ್ಗೆ ತಿಳಿವಳಿಕೆ ಏನೇನೂ ಇರಲಿಲ್ಲ! ವಾಸ್ತು ಸಲುವಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡುವುದನ್ನು ಕೇಳಿದ್ದರೇ ವಿನಾ ವಾಸ್ತುವನ್ನು ನಂಬಿರಲಿಲ್ಲ!!
ಮತ್ತೆ, 'ಈ ತಿಳಿವಳಿಕೆ ನಿನಗಲ್ಲ. ಅದನ್ನು ಜನರಿಗೆ ಹಂಚು' ಎಂದಿತು ಅಂತರಾತ್ಮ. ಕೇವಲ ನಾಲ್ಕು ಜನರನ್ನು ಕಟ್ಟಿಕೊಂಡು 2002-2005ರ ಅವಧಿಯಲ್ಲಿ ಜನ್ಮಭೂಮಿ ಕರ್ನಾಟಕ, ಕರ್ಮಭೂಮಿ ಮಹಾರಾಷ್ಟ್ರಗಳ ಊರೂರು ಅಲೆದರು. ಎಲ್ಲೆಡೆ ವಿಚಾರ ಸಂಕಿರಣ ಮಾಡುವುದು, 'ಸರಳ ವಾಸ್ತು' ಬಗ್ಗೆ ತಿಳಿವಳಿಕೆ ನೀಡುವುದು.
ವಾರದಲ್ಲಿ ಐದು ದಿನ ಪ್ರವಾಸ, ಎರಡು ದಿನ ಮನೆ ಮತ್ತು ವೃತ್ತಿ. ಕೇವಲ 15 ಸಾವಿರ ರುಪಾಯಿಯಲ್ಲಿ ಮುಂಬೈನಂಥ ಮಹಾನಗರಿಯಲ್ಲಿ ಸಂಸಾರ ನಡೆಸಬೇಕಾದ ಅನಿವಾರ್ಯತೆ. ಈ ನಾಲ್ಕು ವರ್ಷ ಏನೇನೂ ಬದಲಾವಣೆ ಕಾಣಲಿಲ್ಲ. ಒಂದು ಹಂತದಲ್ಲಿ ಗೆಳೆಯರು, ಹಿತಚಿಂತಕರು ಹೇಳುತ್ತಿದ್ದ ಮಾತು ನಿಜವಾಗಿಬಿಡುತ್ತದೇನೊ ಎನ್ನುವ ಆತಂಕ ಕಾಡಲಾರಂಭಿಸಿತು. 2006ರಲ್ಲಿ 25-30 ಸದಸ್ಯರೊಂದಿಗೆ ಧೈರ್ಯಮಾಡಿ ಸಿ.ಜಿ.ಪರಿವಾರ ಶುರು ಮಾಡಿದರು. ಅಷ್ಟು ಹೊತ್ತಿಗಾಗಲೇ ಕಾಸು ಖರ್ಚಿಲ್ಲದೆ ವಾಸ್ತು ದೋಷ ಸರಿಪಡಿಸಿಕೊಳ್ಳುವ 'ಸರಳ ವಾಸ್ತು' ಕಲ್ಪನೆ ಎಲ್ಲರಿಗೂ ಅರ್ಥವಾಗತೊಡಗಿತ್ತು. ಆರು ತಿಂಗಳವರೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಗಮನಿಸುವ ಪರಿವಾರದ ಸೇವೆ ಇಷ್ಟವಾಗತೊಡಗಿತು. ಕಂಪನಿ ನಿಧಾನಕ್ಕೆ ಬೆಳೆಯತೊಡಗಿತು. ಈಗ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ಗಳಲ್ಲಿ ಸಿ.ಜಿ.ಪರಿವಾರದ ಶಾಖೆಗಳಿವೆ. ಪರಿವಾರದ ಏಳ್ಗೆಗೆ ಟೊಂಕಕಟ್ಟಿ ನಿಂತಿರುವ 700 ಸದಸ್ಯರಿದ್ದಾರೆ. ಅವರಲ್ಲಿ 500ಕ್ಕಿಂತ ಹೆಚ್ಚುಮಂದಿ ಪದವಿಯನ್ನೂ ಮುಗಿಸದವರು. ಅವರಿಗೆಲ್ಲ ಸಾಫ್ಟ್ವೇರ್ ಎಂಜಿನಿಯರ್ಗಳಿಗಿಂತ ಹೆಚ್ಚು ಸಂಬಳ, ಸವಲತ್ತು. ಎಲ್ಲರಿಗೂ ಫ್ಲ್ಯಾಟ್, ನಿವೃತ್ತಿ ವೇತನ ನೀಡುವ ಯೋಚನೆ. 'ರೊಟ್ಟಿಯನ್ನು ಎಲ್ಲರೂ ಹಂಚಿಕೊಂಡು ತಿನ್ನೋಣ. ಆದರೆ ಎಲ್ಲರ ಗುರಿ ಮಾತ್ರ ಸರಳ ವಾಸ್ತುವನ್ನು ಜನರಿಗೆ ತಲುಪಿಸುವುದು'- ಇದು ಸಿ.ಜಿ.ಪರಿವಾರದ ಮಂತ್ರ.
ಕನ್ನಡದ ಹುಡುಗ
ಚಂದ್ರಶೇಖರ ಅಂಗಡಿ ಬಾಗಲಕೋಟೆಯವರು. ಅಲ್ಲಿಯೇ ಬಿ.ಇ (ಸಿವಿಲ್) ಮುಗಿಸಿದ್ದು. 1989ರಲ್ಲಿ ಓದು ಮುಗಿಯುತ್ತಿದ್ದಂತೆ ಮುಂಬೈನಲ್ಲಿದ್ದ ಸೋದರ ಸಂಬಂಧಿ ಅಲ್ಲಿಗೆ ಕರೆದೊಯ್ದು ಕೆಲಸ ಕೊಡಿಸಿದರು. ಆರಂಭಿಕ ಸಂಬಳ 1,200 ರುಪಾಯಿ. ಇವರ ಪ್ರತಿಭೆ, ಪ್ರಾಮಾಣಿಕತೆ ಗಮನಿಸಿದ ಕಂಪನಿ ಮುಖ್ಯಸ್ಥರು ಎರಡೇ ವರ್ಷಗಳಲ್ಲಿ ಮಹತ್ವದ ಪ್ರಾಜೆಕ್ಟ್ ಹೊಣೆ ವಹಿಸಿತು. ಆಗ ಕಾರ್ಯನಿಮಿತ್ತ ಭೇಟಿಯಾಗುತ್ತಿದ್ದ ನವಿಮುಂಬೈನ ಜೆ.ಎನ್.ಪೋರ್ಟ್ನ ಮುಖ್ಯ ಎಂಜಿನಿಯರ್ ನಟರಾಜನ್, ಕಾರ್ಯನಿರ್ವಾಹಕ ಎಂಜಿನಿಯರ್ ಕೋಮನೂರು ಅವರಿಂದ ವೃತ್ತಿ ಮತ್ತು ವೈಯಕ್ತಿಕ ವಿಚಾರದಲ್ಲಿ ಕಲಿತದ್ದು ಸಾಕಷ್ಟು. ಇಬ್ಬರಿಂದಲೂ ಸ್ಫೂರ್ತಿ ಪಡೆದು ಸ್ವತಂತ್ರವಾಗಿ ಕಟ್ಟಡ ನಿರ್ಮಾಣ ಗುತ್ತಿಗೆ ಆರಂಭಿಸಿದರು. ಕೇವಲ ನಾಲ್ಕು ವರ್ಷಗಳಲ್ಲಿ ಕೋಟ್ಯಾಧೀಶನಾದರು. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎನ್ನುವ ಸಂದರ್ಭದಲ್ಲಿಯೇ ಕೆಲವರಿಂದ ಮೋಸ ಹೋಗಿ ನಷ್ಟ ಅನುಭವಿಸಿದರು. ಬಹುಶಃ ಆ ಅನುಭವ ಆಗದೇ ಇದ್ದರೆ ಇವತ್ತು 'ಸರಳ ವಾಸ್ತು' ಅಸ್ತಿತ್ವಕ್ಕೇ ಬರುತ್ತಿರಲಿಲ್ಲ, ಚಂದ್ರಶೇಖರ್ ಗುರೂಜಿ ಮಾರ್ಗದರ್ಶನ ಜನರಿಗೆ ದಕ್ಕುತ್ತಲೇ ಇರಲಿಲ್ಲ. ನಿತ್ಯ ಏನಿಲ್ಲವೆಂದರೂ 600 ಜನರಿಗೆ ಸರಳ ವಾಸ್ತು, ಮನೆ ನಿರ್ಮಾಣ ವಿಚಾರದಲ್ಲಿ ಸಿ.ಜಿ.ಪರಿವಾರ ನೆರವು ನೀಡುತ್ತಿದೆ.
ವಿಳಾಸ : ನಂ.೮೮, ೬ ಮತ್ತು ೭ನೆ ಕ್ರಾಸ್ ನಡುವೆ , ಸಂಪಿಗೆ ರಸ್ತೆ , ೨ ನೆ ಮಹಡಿ, ಆರ್ .ಆರ್. ಗೋಲ್ಡ್ ಪ್ಯಾಲೇಸ್ , ಮಲ್ಲೇಶ್ವರಂ. ಬೆಂಗಳೂರು -೩ , ಮೊ. 9448286755/56 guruji@saralvaastu.com, Web: www.saralvaastu.comn
ಆಸಕ್ತಿ ಇದ್ದವರೆಲ್ಲ ಬನ್ನಿ
'ಸರಳ ವಾಸ್ತು'ವನ್ನು ಇನ್ನಷ್ಟು ವ್ಯಾಪಕವಾಗಿ ಜನರಿಗೆ ತಲುಪಿಸುವುದು ಚಂದ್ರಶೇಖರ್ ಗುರೂಜಿ ಗುರಿ. 'ನನ್ನೊಂದಿಗೆ ಬರಲು ಸಿದ್ಧರಾಗಿರುವವರಿಗೆ ಕಲಿಸಲು ಸಿದ್ಧ. ಆದರೆ ಅವರಿಗೆ ಬದ್ಧತೆ ಬೇಕು. ನನ್ನಿಂದ ಕಲಿತು ನಂತರ ಹಣ ಮಾಡಿಕೊಳ್ಳುವ ಗುಣ ಇರಬಾರದು ಎನ್ನುವುದೊಂದೇ ಷರತ್ತು. ವಿದ್ಯಾರ್ಹತೆ ಅನ್ವಯವಿಲ್ಲ' ಎನ್ನುತ್ತಾರೆ ಗುರೂಜಿ. ಆರಂಭದ ದಿನದಿದಂಲೂ ತಮ್ಮ ಬೆನ್ನಿಗೆ ನಿಂತು ಬೆಂಬಲ ನೀಡಿದ ಪ್ರಾಣಸ್ನೇಹಿತ ಮುರುಗರಾಜೇಂದ್ರ ಕೋಟಿ ಅವರನ್ನು ಸಿ.ಜಿ.ಪರಿವಾರದ ನಿರ್ದೇಶಕರಾಗಿ ನೇಮಕ ಮಾಡಿಕೊಂಡಿದ್ದಾರೆ ಗುರೂಜಿ. ಇದು ಸಂಬಂಧ, ಮೌಲ್ಯಗಳಿಗೆ ಅವರು ನೀಡುವ ಗೌರವ.
ಸೇನೆಗೆ ಸೇರಿಸಿಕೊಳ್ಳಲಿಲ್ಲ!
ಚಂದ್ರಶೇಖರನಿಗೆ ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ 'ಜೀವನದ ಸಾರ್ಥಕ್ಯ ಹೇಗೆ' ಎನ್ನುವ ಗೊಂದಲ. 'ಸೇನೆ ಸೇರಿ ದೇಶಕ್ಕಾಗಿ ಪ್ರಾಣ ಕೊಟ್ಟರೆ ಬದುಕು ಸಾರ್ಥಕ' ಎನ್ನುವುದು ಮುಗ್ಧ ಮನಸ್ಸಿಗೆ ಹೊಳೆದ ಆಲೋಚನೆ. ತಂದೆ ಬೆಳಗಾವಿಯಲ್ಲಿ ನಡೆಯುತ್ತಿದ್ದ ಸೇನಾ ನೇಮಕಾತಿ ಶಿಬಿರಕ್ಕೆ ಕರೆದೊಯ್ದರು. ಅಭ್ಯರ್ಥಿಯ ತೂಕ 40 ಕೆ.ಜಿ ಇರಬೇಕಿತ್ತು. ಈತ ಇದ್ದದ್ದು 35 ಕೆ.ಜಿ. ಮೊದಲ ಸುತ್ತಿನಲ್ಲಿಯೇ ಹೊರಬಿದ್ದರು. ಎರಡನೇ ಸಲವೂ ಪ್ರಯತ್ನಿಸಿದರು. ಆಗಲೂ ದ್ವಿತೀಯ ಸುತ್ತು ಪ್ರವೇಶಿಸಲು ಆಗಲಿಲ್ಲ. ನಂತರ ಯೋಧನಾಗುವ ಆಸೆ ಬಿಟ್ಟು ಓದಿನತ್ತ ಗಮನ ಕೊಟ್ಟರು.
ದೊಡ್ಡ ಮನುಷ್ಯನಾಗ್ತಿ!
ತಮ್ಮ ಕಂಪನಿಗೆ ಹ್ಯಾಪಿ ನ್ಯೂ ಲೈಫ್ ಎಂದು ಹೆಸರಿಡಲು ಚಂದ್ರಶೇಖರ ಗುರೂಜಿ ನಿರ್ಧರಿಸಿದ್ದರು. ನೋಂದಣಾಧಿಕಾರಿ ಆ ಹೆಸರು ತಿರಸ್ಕರಿಸಿದರು. ಬಳಿಕ ಹೊಳೆದದ್ದು ಸಿ.ಜಿ.ಪರಿವಾರ್. ಸಿ- ಚಂದ್ರಶೇಖರ, ಜಿ- ಗೌರಮ್ಮ. 2002ನೇ ಇಸವಿ. ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ವಿಚಾರ ಸಂಕಿರಣ. ಹಿರಿಯರೊಬ್ಬರು ಎದ್ದುನಿಂತು ಕೇಳಿದರು- 'ಸಿ.ಜಿ ಪರಿವಾರ ಎಂದರೇನು'. ಸಿ.ಜಿ ವಿಸ್ತ್ರತ ರೂಪ ಹೇಳಿದಾಗ ಮನದುಂಬಿ, 'ಚಂದ್ರಶೇಖರ ಎಂದರೆ ಶಿವ, ಗೌರಮ್ಮ ಎಂದರೆ ಪಾರ್ವತಿ. ನೀವು ಶಿವ-ಪಾರ್ವತಿ ಥರ ಇದ್ದೀರಿ. ಮುಂದೊಂದು ದಿನ ದೊಡ್ಡ ಮನುಷ್ಯ ಆಗ್ತಿ. ನಿನ್ನ ಕಂಪನಿ ಒಳ್ಳೆಯ ಹೆಸರು ಗಳಿಸುತ್ತದೆ' ಎಂದು ಹರಸಿದ್ದರು. ಅದನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ ಗುರೂಜಿ.
ಸ್ವ-ವಿವರ
- ಹೆಸರು: ಡಾ.ಚಂದ್ರಶೇಖರ ಅಂಗಡಿ
- ವಯಸ್ಸು: 50 ವರ್ಷ.
- ಪತ್ನಿ: ಗೌರಮ್ಮ (2011ರಲ್ಲಿ ಹೃದಯಾಘಾತದಿಂದ ತೀರಿಕೊಂಡಿದ್ದಾರೆ)
- ಮಗಳು: ಸ್ವಾತಿ (ಹುಬ್ಬಳ್ಳಿಯಲ್ಲಿ ಬಿ.ಇ ಆರ್ಕಿಟೆಕ್ಟ್ ಓದುತ್ತಿದ್ದಾಳೆ)
- ಯುಎಸ್ಎ ಗೋಲ್ಡನ್ ಸ್ಟೇಟ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್.
- ಕಾಲೇಜಿನಲ್ಲಿ ಟೇಬಲ್ ಟೆನ್ನಿಸ್ ತಂಡದ ಕ್ಯಾಪ್ಟನ್ ಆಗಿದ್ದರು. ಗೆಳೆಯರೊಟ್ಟಿಗೆ ಜಾತ್ರೆಗಳಿಗೆ ಹೋಗುವ ಅಭ್ಯಾಸವಿತ್ತು. ಈಗ ಕಾಯಕವೇ ಕೈಲಾಸ. ಮುಂಬೈನಲ್ಲಿ ವಾಸ. ಅಪರೂಪಕ್ಕೆ ಹುಬ್ಬಳ್ಳಿಗೆ ಹೋದಾಗಲೂ ಮಗಳೊಂದಿಗೆ ಕಳೆಯಲು ಸಮಯ ಇಲ್ಲದಷ್ಟು ಬ್ಯುಸಿ.
- ಗುರಿ: ಸರಳ ವಾಸ್ತುವನ್ನು ಜಗತ್ತಿನಾದ್ಯಂತ ಪ್ರಚುರಗೊಳಿಸುವುದು.
- ಕನಸುಗಳು: ಸಿ.ಜಿ. ಫೌಂಡೇಷನ್ ರೀಸರ್ಚ್ ಸೆಂಟರ್ ಸ್ಥಾಪನೆ; ಹಾವೇರಿ ಜಿಲ್ಲೆ ತಡಸ ಗಾಯತ್ರಿ ಮಂದಿರ ಬಳಿ ವೃದ್ಧಾಶ್ರಮ; ಹುಟ್ಟೂರು ಬಾಗಲಕೋಟೆ, ಹುಬ್ಬಳ್ಳಿ, ತಡಸ, ಮುಂಬೈಗಳಲ್ಲಿ ಕನಿಷ್ಠ 10 ಸಾವಿರ ಬಡ, ಅನಾಥ ಮಕ್ಕಳನ್ನು ಸಾಕಿ ವಿದ್ಯಾವಂತರನ್ನಾಗಿ ಮಾಡುವುದು; ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವುದು. ಇದಕ್ಕಾಗಿ ತಮ್ಮ ಬಳಿ ಸಲಹೆ ಕೇಳಿ ಬರುವವರಿಂದ ಅಂಗಾಂಗ ದಾನದ ಪ್ರತಿಜ್ಞೆ ಮಾಡಿಸುವುದು.
- ಇತರೆ: ಮುಂಬೈನ ಶರಣ ಸಂಕುಲ ಚಾರಿಟೆಬಲ್ ಟ್ರಸ್ಟ್ನ ಸ್ಥಾಪಕ ಟ್ರಸ್ಟಿ. ಶಿವರಾತ್ರಿ, ಬಸವ ಜಯಂತಿ, ಶ್ರಾವಣ ಮಾಸಗಳನ್ನು ಅದ್ಧೂರಿಯಿಂದ ಆಚರಿಸಲಾಗುತ್ತದೆ. ಆ ನೆಪದಲ್ಲಿ ಮುಂಬೈ ಕನ್ನಡಿಗರನ್ನು ಒಗ್ಗೂಡಿಸುವ ಯತ್ನ. ಉದ್ಯೋಗಿ ಅರಸಿ ಮಹಾನಗರಿಗೆ ಕಾಲಿಡುವವರಿಗೆ ಟ್ರಸ್ಟ್ ನೆರವು ನೀಡುತ್ತಿದೆ.
ಜಗತ್ತಿನ ಎಲ್ಲ ವಿಜ್ಞಾನಗಳಿಗಿಂತ ಭಿನ್ನ ವಿಜ್ಞಾನವಾಗಿರುವ ಸರಳ ವಾಸ್ತುವನ್ನು ಬಾಡಿಗೆ ಮನೆಯಲ್ಲಿದ್ದವರೂ ಅಳವಡಿಸಿಕೊಳ್ಳಬಹುದು. 7ರಿಂದ 180 ದಿನಗಳಲ್ಲಿ ಪರಿಣಾಮ ಕಾಣಬಹುದು. ಹುಟ್ಟು-ಸಾವಿಗೆ ವಾಸ್ತು ಕಾರಣವಲ್ಲ. ವಾಸ್ತು ಎಂದರೆ ವಾತಾವರಣದೊಂದಿಗೆ ಹೊಂದಿಕೊಂಡು ಬದುಕುವ ಕಲೆ ಅಷ್ಟೆ.
- ಡಾ.ಚಂದ್ರಶೇಖರ ಗುರೂಜಿ
- ರಾಜೇಶ ಮುಂಡಿಗೇಸರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.