ಅಯ್ಯರ್ ಮನೆ ಪರರ ಪಾಲು
ಮೂಲತಃ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅಷ್ಟಗ್ರಾಮಕ್ಕೆ ಒಳಪಟ್ಟ ದೇವರಾಯನ ಸಮುದ್ರಕ್ಕೆ ಸೇರಿದ ಕೆ.ವಿ.ಅಯ್ಯರ್, 1898ರ ಜನವರಿ 8ರಂದು ಜನಿಸಿದವರು. ದೇವರಾಯ ಸಮುದ್ರದಲ್ಲಿ 7ನೇ ತರಗತಿವರೆಗೆ ಓದಿ, 10ನೇ ವಯಸ್ಸಿನಲ್ಲಿ ತಾಯಿ ಸುಬ್ಬಮ್ಮನವರನ್ನು ಕಳೆದುಕೊಂಡ ನಂತರ ಅಡುಗೆ ಪ್ರವೀಣರಾಗಿದ್ದ ತಂದೆ ಅಪ್ಪಾಲು ನಾರಾಯಣ ಅಯ್ಯರ್ ಅವರೊಂದಿಗೆ ಬೆಂಗಳೂರು ಸೇರಿದರು.
ತಂದೆಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡಿಕೊಂಡೇ ಬೆಂಗಳೂರಿನ ಎ.ವಿ.ಹೈಸ್ಕೂಲಿನಲ್ಲಿ ಓದು ಮುಂದುವರೆಸಿದರು. ಬೆಂಗಳೂರಿನ ಟಿಪ್ಪು ಸುಲ್ತಾನ್ ಅರಮನೆಯ ಅವರಣದಲ್ಲಿದ್ದ ವ್ಯಾಯಾಮ ಶಾಲೆಗೆ ಸೇರಿ ಬಲಿಷ್ಠ ದೇಹದಾರ್ಢ್ಯ ಪಟುವಾಗಿ ರೂಪುಗೊಂಡರು. 18ನೇ ವಯಸ್ಸಿನಲ್ಲೇ 10 ವರ್ಷ ವಯಸ್ಸಿನ ಜಾನಕಮ್ಮ ಎಂಬವರ ಜೊತೆ ವಿವಾಹವಾಗಿ 1927ರಲ್ಲಿ ಕರ್ಣ ಎಂಬ ಗಂಡು ಮಗುವಿಗೆ ತಂದೆಯಾದರು.
ಪ್ರತಿನಿತ್ಯ ಕನಿಷ್ಟ 3 ಗಂಟೆ ವ್ಯಾಯಾಮ ಮಾಡುತ್ತಿದ್ದ ಅಯ್ಯರ್, ಸ್ವಂತ ವ್ಯಾಯಾಮ ಶಾಲೆ ಆರಂಭಿಸಿ ಸುಮಾರು 25 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. 1929ರಲ್ಲಿ ಟಿ.ಪಿ.ಕೈಲಾಸಂ ಅವರ ನಾಟಕಗಳಿಂದ ಪ್ರಭಾವಿತರಾದರು. ಕೈಲಾಸಂ ಅವರನ್ನು ಭೇಟಿಯಾಗಬೇಕೆಂದು ಮೂರು ವರ್ಷ ಪ್ರಯತ್ನಿಸಿ ಕೊನೆಗೊಂದು ದಿನ ತಮ್ಮ ಕನಸು ನನಸು ಮಾಡಿಕೊಂಡರು.
ಕೈಲಾಸಂರನ್ನು ಭೇಟಿಯಾದ ಬಳಿಕ ಅಯ್ಯರ್ ಬದುಕಿನ ಚಿತ್ರಣವೇ ಬದಲಾಯಿತು. ದೇಹ ಬೆಳಸಿಕೊಂಡರೆ ಸಾಲದು, ಮಿದುಳು ಸಹ ಬೆಳಸಿಕೊಳ್ಳಬೇಕು ಎಂಬ ಕೈಲಾಸಂ ಬುದ್ಧಿವಾದಕ್ಕೆ ಒಲಿದು ಸಾಹಿತ್ಯ ಓದಲಾರಂಭಿಸಿದರು. ಅನಾಟಮಿ ಮತ್ತು ಫಿಜಿಯಾಲಜಿಗೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಓದಿ ಹೆಚ್ಚಿನ ಆಧ್ಯಯನಕ್ಕಾಗಿ ಬೆಂಗಳೂರಿನ ಮೆಡಿಕಲ್ ಕಾಲೇಜಿಗೆ ಸೇರಿಕೊಂಡರು.
ಅಡುಗೆ ಸಹಾಯಕನಾಗಿ ಬದುಕು ಆರಂಭಿಸಿದ ಅಯ್ಯರ್ ವೈದ್ಯಕೀಯ ಶಾಸ್ತ್ರದಲ್ಲಿ ಪಾಂಡಿತ್ಯ ಪಡೆದರಲ್ಲದೆ, ಭವಿಷ್ಯ ನುಡಿಯುವುದರಲ್ಲೂ ನಿಸ್ಸೀಮರಾಗಿದ್ದರು. ಮೈಸೂರು ಮಹಾರಾಜರ ಖಾಸಗಿ ವೈದ್ಯರಾಗಿಯೂ ಸೇವೆ ಸಲ್ಲಿಸಿದ್ದರು. ತಮ್ಮ ಸಾವಿನ ದಿನಾಂಕವನ್ನು ಮುಂಚೆಯೇ ಊಹೆ ಮಾಡಿದ್ದರೆಂಬ ಪ್ರತೀತಿ. ಅಡುಗೆ ಭಟ್ಟನಾಗಿ, ದೇಹದಾರ್ಢ್ಯ ಪಟುವಾಗಿ, ವೈದ್ಯರಾಗಿ, ನಾಟಕಕಾರರಾಗಿ ಜನಪ್ರಿಯತೆ ಗಳಿಸಿರುವ ಅಯ್ಯರ್ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಮರೆಯಲಾಗದ ಕಾಣಿಕೆ ಎಂದರೆ 'ಶಾಂತಲಾ' ಮತ್ತು 'ರೂಪದರ್ಶಿ' ಎಂಬ ಕಾದಂಬರಿಗಳು.
ಇಂಥ ಮಹಾನ್ ಪ್ರತಿಭೆ ಕೋಲಾರ ಜಿಲ್ಲೆಯ ಹೆಮ್ಮೆಯ ಪುತ್ರನಾಗಿದ್ದರೂ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಕೆ.ವಿ.ಅಯ್ಯರ್ ಅವರ ನೆನಪು ಜಿಲ್ಲೆಯ ಜನತೆಯಲ್ಲಿ ಉಳಿಸುವಂತಹ ಯಾವುದೇ ಮಹತ್ತರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿಲ್ಲ. ಕೆ.ವಿ.ಅಯ್ಯರ್ ಪುತ್ರ ಡಾ.ಕರ್ಣ ಈಗ ಬೆಂಗಳೂರಿನಲ್ಲಿ ನೆಲಸಿದ್ದಾರೆ. ತಂದೆ ಹುಟ್ಟಿದ ಮನೆಯನ್ನು ಅವರು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ನಿರ್ವಹಣೆ ಇಲ್ಲದಿರುವುದರಿಂದ ಈ ಮನೆ ಪಾಳು ಬಂಗಲೆಯಂತೆ ಗೋಚರಿಸುತ್ತಿದೆ. ದೇವರಾಯ ಸಮುದ್ರದಲ್ಲಿ ಅನೇಕ ಜನರಿಗೆ ಕೆ.ವಿ.ಅಯ್ಯರ್ ಯಾರೆಂಬುದೇ ತಿಳಿಯದ ಪರಿಸ್ಥಿತಿ ಇದೆ.
- ಪಾ.ಶ್ರೀ.ಅನಂತರಾಮ್