ನೀವು ಎಂತಹ ಆಹಾರ ಸೇವಿಸುತ್ತೀರಿ?
'ನೀವು ಹಾಲಿನ ವಿರೋಧಿಯೇ' ಎಂದು ಬಹುತೇಕರು ನನ್ನನ್ನು ಕೇಳುತ್ತಿದ್ದಾರೆ. 'ಹಾಲಿನ ಕುರಿತು ವಿರೋಧ ಭಾವನೆ ತಳೆದರೆ ನನ್ನ ಹೋಟೆಲ್ ಉದ್ಯಮ ನಡೆಯುವುದಾದೂ ಹೇಗಪ್ಪಾ' ಎಂದು ಪರಿಚಿತರಿಗೆ ತಮಾಷೆಯಾಗಿಯೇ ಉತ್ತರಿಸಿದ್ದಿದೆ. ಉದರ ಕಾಯಿಲೆಗಳ ಕುರಿತು ಹೇಳುವಾಗ ಹಾಲಿನ ಅಲರ್ಜಿಯಿಂದ ಉಂಟಾಗುವ ಸಮಸ್ಯೆಗಳ ಕುರಿತು ಹೇಳಿದ್ದೇ ಅದಕ್ಕೆ ಕಾರಣ. ಯಾರಿಗೆ ಲ್ಯಾಕ್ಟೋಸ್ ಅಲರ್ಜಿ ಇರುತ್ತದೆಯೋ ಅವರು ಹಾಲಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕಾದದ್ದು ಅಗತ್ಯ. ಈ ಅಲರ್ಜಿ ಇರುವುದು ದೃಢಪಟ್ಟರೆ ವೈದ್ಯರು ಮಾಡುವ ಶಿಫಾರಸ್ಸು ಕೂಡ 'ಹಾಲಿನಿಂದ ದೂರ ಇರಿ' ಎನ್ನುವುದೇ ಆಗಿದೆ. ನಾನೂ ಅಷ್ಟೆ. ವಾಸ್ತವ ಸಂಗತಿಗಳನ್ನು ಮಾತ್ರ ನಿಮ್ಮ ಮುಂದೆ ಇಡುತ್ತಿದ್ದೇನೆ. ಸತ್ಯ ಎನ್ನುವುದು ಯಾರು ಹೇಳಿದರೂ ಸತ್ಯವಾಗಿಯೇ ಇರುತ್ತದೆ ಅಲ್ಲವೆ? ಹೀಗಾಗಿ ಈ ವಿಚಾರದಲ್ಲಿ ಯಾರೊಬ್ಬರೂ ನನ್ನನ್ನು ತಪ್ಪು ತಿಳಿಯಬೇಕಾದ ಅಗತ್ಯವಿಲ್ಲ. ಈ ಸಮಜಾಯಿಷಿಯನ್ನು ಏಕೆ ನೀಡಬೇಕಾಯಿತು ಎಂದರೆ, ಜೀರ್ಣಾಂಗ ವೃಣದ ಕುರಿತು ಹೇಳುವಾಗಲೂ ಹಾಲಿನ ಬಗ್ಗೆ ಉಲ್ಲೇಖಿಸಬೇಕಾಗಿದೆ.
ಪೆಪ್ಟಿಕ್ ಅಲ್ಸರ್ನಲ್ಲಿ (ಇನ್ನುಮುಂದೆ ಅಲ್ಸರ್ ಎಂದು ಪ್ರಸ್ತಾಪವಾದರೆ ಪೆಪ್ಟಿಕ್ ಅಲ್ಸರ್- ಜೀರ್ಣಾಂಗ ವೃಣ ಎಂದೇ ಭಾವಿಸಿಕೊಳ್ಳುವುದು) ಡಯಟ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ಆಹಾರಗಳು ವಿಚ್ಛಿದ್ರಕಾರಿ ಆ್ಯಸಿಡ್ ಮತ್ತು ಕಿಣ್ವಗಳ ಸ್ರವಿಸುವಿಕೆಯನ್ನು ತೀವ್ರಗೊಳಿಸುತ್ತವೆ. ಇನ್ನು ಕೆಲವು ಇಂಥ ಸ್ರವಿಸುವಿಕೆಯನ್ನು ನಿಲ್ಲಿಸುವ ಮೂಲಕ ಗಾಯ ಬೇಗ ಒಣಗಲು ನೆರವಾಗುತ್ತವೆ. ಆದ್ದರಿಂದ ಆಹಾರ ಪದ್ಧತಿ ಕುರಿತು ನಾವು ಗಮನ ಹರಿಸುವುದು ಅಗತ್ಯ.
ಅಲ್ಸರ್ ವಿಚಾರದಲ್ಲಿ ಬಹಳ ದೀರ್ಘ ಕಾಲ ನಾವು ನಂಬಿಕೊಂಡಿದ್ದ, ಆಳವಡಿಸಿಕೊಂಡಿದ್ದ ತಪ್ಪು ಕಲ್ಪನೆ ಎಂದರೆ ಹಾಲಿನದ್ದು. ಹಾಲು ಕ್ಷಾರೀಯ ಗುಣ ಹೊಂದಿದೆ ಮತ್ತು ಅದು ಗಾಯ ಬೇಗ ಒಣಗಲು ನೆರವಾಗುತ್ತದೆ ಎನ್ನುವ ಭಾವನೆಯಿಂದ ಅಲ್ಸರ್ ಆದವರಿಗೆ ಜಾಸ್ತಿ ಹಾಲು ಕುಡಿಯಲು ಹೇಳಲಾಗುತ್ತಿತ್ತು. ಅಲ್ಸರ್ಗೆ ಹಾಲೇ ಮದ್ದು ಎನ್ನುವ ನಂಬಿಕೆಗೆ ಏಟು ಬಿದ್ದದ್ದು 1980ರ ದಶಕದಲ್ಲಿ. ಆಗ ಕೆಲವು ಸಂಶೋಧಕರ ಚಿತ್ತ ಈ ಕುರಿತು ಹರಿಯಿತು. ಆಗ ಬೆಳಕಿಗೆ ಬಂದದ್ದೇ ಹಾಲು ಗಾಯವನ್ನು ಗುಣಪಡಿಸುವ ಬದಲು ಇನ್ನಷ್ಟು ಹೆಚ್ಚಿಸುತ್ತದೆ ಎನ್ನುವ ಆಘಾತಕಾರಿ ಸಂಗತಿ! ಹಾಲಿನ ಸೇವನೆ ನಂತರ ಆ್ಯಸಿಡ್ ಮತ್ತು ಕಿಣ್ವಗಳನ್ನು ಉದರ ಮತ್ತಷ್ಟು ತೀವ್ರವಾಗಿ ಸ್ರವಿಸುತ್ತದೆ ಎನ್ನುವುದು ಹಲವಾರು ಸಂಶೋಧನೆಗಳಿಂದ ದೃಢಪಟ್ಟಿತು. ಹೀಗಾಗಿ 'ಸಿಪ್ಪಿ ಮಿಲ್ಕ್ ಡಯಟ್' ಮೂಲೆಗೆ ಸರಿಯಿತು.
ಹಾಲಿನ ವಿಚಾರದಲ್ಲಿ ಇಂಥದ್ದೊಂದು ತಪ್ಪು ಭಾವನೆ ಬೆಳೆಯಲು ಕಾರಣವಿದೆ. ಅದು ಹಾಲಿನ ವಿಚಿತ್ರ ಗುಣವೂ ಹೌದು. ಆ ಕುರಿತು ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com