ಎಕ್ಸ್ಪ್ರೆಶನ್ಸ್ ಜರ್ನಿ!
ಅಮೆರಿಕದಲ್ಲಿ ಇನ್ಫೋಸಿಸ್ ಉದ್ಯೋಗಿಯಾಗಿದ್ದ ಕಾಲವದು. ಇತ್ತ ಮನೆಯಲ್ಲಿ ಹುಡುಗಿಯೊಬ್ಬಳನ್ನು ನೋಡಿ 'ಮದುವೆಯಾಗುತ್ತೀಯ'...
ಅಮೆರಿಕದಲ್ಲಿ ಇನ್ಫೋಸಿಸ್ ಉದ್ಯೋಗಿಯಾಗಿದ್ದ ಕಾಲವದು. ಇತ್ತ ಮನೆಯಲ್ಲಿ ಹುಡುಗಿಯೊಬ್ಬಳನ್ನು ನೋಡಿ 'ಮದುವೆಯಾಗುತ್ತೀಯ' ಎಂದು ಮಗನಿಗೆ ಫೋನಾಯಿಸಿದರು. ವಿಶ್ವೇಶ್ ಭಟ್ ಕೇಳಿದ್ದು ಆಕೆಯ ಒಂದೇ ಒಂದು ಕ್ವಾಲಿಟಿ, 'ಆಕೆಗೆ ಸಂಗೀತ ಬರುತ್ತದಾ?' ಎಂದು! ಆಕೆಯ ಹೆಸರು ಅಶ್ವಿನಿ ಭಟ್. ವೀಣಾ ಪ್ರವೀಣೆ. ಇಷ್ಟು ಗೊತ್ತಾಗಿದ್ದೇ ಮಾತುಕತೆ ಮುಂದುವರಿಸಲು ಗ್ರೀನ್ ಸಿಗ್ನಲ್ ಕೊಟ್ಟುಬಿಟ್ಟರು.
ವೃತ್ತಿಯಲ್ಲಿ ಎಂಜಿನಿಯರ್. ಮನದ ತುಡಿತ ಮಾತ್ರ ಸಂಗೀತ. ವಿಶ್ವೇಶ್ 'ಬೆಸ್ಟ್ ಔಟ್ ಗೋಯಿಂಗ್ ಸ್ಟುಡೆಂಟ್' ಎಂಬ ಹೆಗ್ಗಳಿಕೆಯೊಂದಿಗೆ ಧಾರವಾಡದ ಯುಬಿಡಿಟಿ ಕಾಲೇಜಿನಲ್ಲಿ ಬಿ.ಇ (ಮೆಕ್ಯಾನಿಕಲ್) ಮುಗಿಸಿದರು. ಬೆಂಗಳೂರಲ್ಲಿ ಇನ್ಫೋಸಿಸ್ ಕಂಪನಿಯಲ್ಲಿ ವೃತ್ತಿ ಆರಂಭಿಸಿ ಬಡ್ತಿ ಹೊಂದಿ ಅಮೆರಿಕದಲ್ಲಿ ನೆಲೆಸಿದ್ದರು.
ಹುಟ್ಟಿದ್ದು ಉಡುಪಿ. ಬೆಳೆದಿದ್ದು ಬಳ್ಳಾರಿ. ತಂದೆ ಹೋಟೆಲ್ ಉದ್ಯಮಿ. ಸಹೋದರಿಯರಿಗೆ ಹಾಡುವ ಗೀಳಿತ್ತು. ಹಾಗಾಗಿ ವಿಶ್ವೇಶ್ ಭಟ್ ಅವರಿಗೂ ಆಸಕ್ತಿ ಬೆಳೆಯಿತು. ನಾಲ್ಕನೇ ವರ್ಷದಲ್ಲೇ ವೇದಿಕೆಯಲ್ಲಿ ಹಾಡಲು ಪ್ರಾರಂಭ. ಅಮ್ಮನಿಗೆ ಮಗನ ಉತ್ಸಾಹವೇ ಜೀವಾಳ. ಕಷ್ಟದ ದಿನಗಳಲ್ಲೂ ತಿಂಗಳಿಗೆ 50 ರುಪಾಯಿ ಫೀಜು ಕೊಟ್ಟು ಸಂಗೀತ ಶಾಲೆಗೆ ಸೇರಿಸಿದರು. ಮೊದಲಿಗೆ ಕರ್ನಾಟಕ ಸಂಗೀತ, ನಂತರ ಹಿಂದೂಸ್ಥಾನಿ ಸಂಗೀತ ಎರಡನ್ನೂ ಕರಗತ ಮಾಡಿಕೊಳ್ಳತೊಡಗಿದರು. ಪ್ರಾರಂಭಿಕ ಬೆಳವಣಿಗೆ ಕುರಿತಾಗಿ ವಿಶ್ವೇಶ್ ಹೇಳುತ್ತಾರೆ-
'ಶಿಕ್ಷಣ ಮತ್ತು ಸಂಗೀತ ಎರಡಕ್ಕೂ ಪ್ರಾಶಸ್ತ್ಯ ನೀಡಿದೆ. ಜೊತೆಗೆ ವ್ಯಂಗ್ಯಚಿತ್ರ, ನಾಟಕದಲ್ಲಿ ಪಾತ್ರ ನಿರ್ವಹಣೆ, ನಾಟಕ ನಿರ್ದೇಶನ, ನಟನೆ ಇತ್ಯಾದಿ ಹವ್ಯಾಸ ರೂಢಿಸಿಕೊಂಡೆ. ಶಾಲಾ ಕಾಲೇಜು ದಿನಗಳಲ್ಲಿ ಹೆಚ್ಚಾಗಿ ವ್ಯಂಗ್ಯಚಿತ್ರ ರಚನೆ ಮಾಡುತ್ತಿದ್ದೆ. ಸಾವಿರಾರು ವ್ಯಂಗ್ಯಚಿತ್ರಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ನಿಯತಕಾಲಿಕ ಒಂದಕ್ಕೆ ಫ್ರೀಲಾನ್ಸ್ ಕಾರ್ಟೂನಿಸ್ಟ್ ಆಗಿಯೂ ಕೆಲಸ ನಿರ್ವಹಿಸಿದ್ದೇನೆ. ಸಂಗೀತಾಸಕ್ತ ಮಿತ್ರರನ್ನು ಒಗ್ಗೂಡಿಸಿ ಆಲ್ ಇಂಡಿಯಾ ರೇಡಿಯೋ ಸೇರಿದಂತೆ ಇತರ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲು ಶುರುಮಾಡಿದೆ'
'ಐಟಿಯಲ್ಲಿ ಪ್ರಗತಿ ಹೊಂದಿರುವುದು ಜೀವನ ನಿರ್ವಹಣೆಯ ನಿಮಿತ್ತ. ಹವ್ಯಾಸವಾಗಿ ರೂಢಿಸಿಕೊಂಡು ಬಂದ ಸಂಗೀತ ಕ್ಷೇತ್ರದಲ್ಲಿ ಏನಾದರು ಸಾಧಿಸಬೇಕು ಎಂಬ ಹಂಬಲ ಆವರಿಸಿತು. ಪಂಡಿತ್ ಪರಮೇಶ್ವರ ಹೆಗಡೆ ಅವರ ಸಂಗೀತ ಗರಡಿ ಸೇರಿದೆ. ಅಮೆರಿಕದಲ್ಲಿದ್ದಾಗ ಪಾಶ್ಚಾತ್ಯ ಸಂಗೀತ ಕೇಳುತ್ತಲೇ ಕಲಿತುಕೊಂಡೆ. ಹಗಲು ಉದ್ಯೋಗವಾದರೆ ಸಂಜೆಯ ನಂತರ ಹವ್ಯಾಸ. ಸಂಗೀತ ಪ್ರಿಯ ಐಟಿ ಉದ್ಯೋಗಿಗಳನ್ನು ಒಂದೆಡೆ ಸೇರಿಸಿ ಸಂಗೀತ ಕೃಷಿಯಲ್ಲಿ ತೊಡಗಿದೆ'.
2004ರಲ್ಲಿ ಸಂಗೀತ ಕ್ಷೇತ್ರಕ್ಕೆ ಮೊದಲ ಕೊಡುಗೆಯಾಗಿ ಕನ್ನಡ ಫ್ಯೂಷನ್ (ಕನ್-ಫ್ಯೂಷನ್)ನೊಂದಿಗೆ 'ಘಮಾ ಘಮಾ' ಅಲ್ಬಮ್. ಭಾರತೀಯ ಸಂಗೀತ ಮತ್ತು ಪಾಶ್ಚಾತ್ಯ ಸಂಗೀತ ಸೇರಿಸಿ 9 ಹಾಡುಗಳನ್ನೊಳಗೊಂಡ ಅಲ್ಬಮ್ ಅದು. 2006ರಲ್ಲಿ 'ರಿಸರ್ಜೆನ್ಸ್' ಎಂಬ 5 ಹಾಡುಗಳಿರುವ 2ನೇ ಅಲ್ಬಮ್ ಬಂತು. ರಘುಪತಿ ಝಾ, ಶೃತಿ ವಿ. ಕುಮಾರ್, ಮಂಜೀರಾ ವಲ್ಲೂರಿ, ಅಶ್ವಿನಿ ಭಟ್, ಸಂಜೀತ್ ನಾಯಕ್, ಫನೀಂದ್ರ ಭಾಸ್ಕರ, ಕೃಷ್ಣಾನಂದ ವೈಕುಂಠ ಪ್ರಭು, ಸುಶ್ರುತ್ ಕಾನತ್ತೂರ್, ಗೋಪಿ ಶ್ರವನ್, ಸುಮಂತ್ ರಾಘವೇಂದ್ರ ಸೇರಿದಂತೆ ವಿಶ್ವೇಶ್ 'ಎಕ್ಸ್ಪ್ರೆಶನ್ಸ್' ಎಂಬ ಸಂಗೀತಗಾರರ ಗುಂಪು ಕಟ್ಟಿಕೊಂಡಿದ್ದಾರೆ. ವಿಶೇಷ ಎಂಬಂತೆ ಇವರೆಲ್ಲರೂ ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಸಂಗೀತಾಸಕ್ತರು.
ಪ್ರಸ್ತುತ ವಿಶ್ವೇಶ್ ಭಟ್ 'ಎಕ್ಸ್ಪ್ರೆಶನ್ಸ್' ಟೀಂ ನಿರ್ವಹಣೆಯೊಂದಿಗೆ ಎನ್ಟಿಟಿ ಡೇಟಾದಲ್ಲಿ ಟೆಕ್ನಿಕಲ್ ಆರ್ಕಿಟೆಕ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಾದ್ಯಂತ ಹಲವಾರು ಉಚಿತ ಸಂಗೀತ ಶಿಬಿರಗಳನ್ನು ನಡೆಸಿಕೊಡುತ್ತಿದ್ದಾರೆ. ಮಗಳು ಆರಧಿ ಸಂಗೀತಾಭ್ಯಾಸದಲ್ಲಿ ಆಸಕ್ತಿ ಹೊಂದಿದ್ದಾಳೆ. ಸಂಗೀತ ಲೋಕದ ತಮ್ಮ ಪಯಣದಲ್ಲಿ ಪತ್ನಿ ಅಶ್ವಿನಿ ಭಟ್ ಸಹಕಾರ ಇದ್ದೇಇದೆ ಎನ್ನಲು ವಿಶ್ವೇಶ ಭಟ್ ಮರೆಯುವುದಿಲ್ಲ.
ಭಾನುವಾರ ಬಿಡುಗಡೆ
'ಜರ್ನಿ'ಯಲ್ಲಿ ಒಟ್ಟು 9 ಟ್ರಾಕ್ ಇದೆ. ಹೀ, ಶೀ, ಬ್ಲಿಸ್, ಅಪಾರ್ಟ್, ಟುಗೆದರ್ ಮೂಲಕ ಸಾಗುವ ಜರ್ನಿ ಟ್ರಾಕ್ 'ವಂದೇ ಮಾತರಂ'ನೊಂದಿಗೆ ಅಂತ್ಯಗೊಳ್ಳುತ್ತದೆ. ಜೋಗ್, ಭೂಪ್, ಚಾರು ಕೌನ್ಸ್, ಕಲಾವತಿ, ರಾಗಶ್ರೀ, ದೇಸ್, ಪುರಿಯಾ, ಧನಶ್ರೀ ಮುಂತಾದ ಪ್ರಮುಖ ರಾಗಗಳ ಸಮ್ಮಳಿತಗೊಂಡಿರುವ ಅಲ್ಬಮ್ 'ಜರ್ನಿ'. ಈ ಆಲ್ಬಂ ಬೆಂಗಳೂರಿನಲ್ಲಿ ನಾಳೆ (ಭಾನುವಾರ, ಡಿ.15) ಬಿಡುಗಡೆಯಾಗುತ್ತಿದೆ. ಬನಶಂಕರಿ 3ನೇ ಹಂತದಲ್ಲಿರುವ ಪಿಇಎಸ್ಐಟಿಯ ಎಂಆರ್ಡಿ ಸಭಾಂಗಣದಲ್ಲಿ ಸಂಜೆ 4.03ರಿಂದ 7.30ರವರೆಗೆ ಕಾರ್ಯಕ್ರಮ. ಪ್ರವೀಣ್ ಗೋಡ್ಖಿಂಡಿ, ಪರಮೇಶ್ವರ ಹೆಗಡೆ, ಲಹರಿ ವೇಲು ಅತಿಥಿಗಳು. ಮಾಹಿತಿಗೆ: 9900150642.
- ಮಂಜುನಾಥ್ ಎಲ್.ಕೆ.