ಅಗ್ಗದ ಸಗ್ಗ
ಮರಳು-ಸಿಮೆಂಟ್-ಕಬ್ಬಿಣದ ದುಬಾರಿ ಬೆಲೆಗಳಿಂದ ಪ್ಲಾಟ್‌ವೊಂದಕ್ಕೆ 50 ಲಕ್ಷ, ವಿಲ್ಲಾ 60 ಲಕ್ಷಗಳಂತೆ ಏರುತ್ತಿರುವಾಗ...
ಮರಳು-ಸಿಮೆಂಟ್-ಕಬ್ಬಿಣದ ದುಬಾರಿ ಬೆಲೆಗಳಿಂದ ಪ್ಲಾಟ್‌ವೊಂದಕ್ಕೆ 50 ಲಕ್ಷ, ವಿಲ್ಲಾ 60 ಲಕ್ಷಗಳಂತೆ ಏರುತ್ತಿರುವಾಗ ಕೇವಲ 4.4 ಲಕ್ಷಕ್ಕೆ ಸಕಲ ಸೌಲಭ್ಯವುಳ್ಳ ಮನೆ ಕಟ್ಟಲು ಸಾಧ್ಯ ಎಂಬುಂದನ್ನು ಬೆಳಕು ಸಂಸ್ಥೆ ಮಾಲೂರು ತಾಲೂಕಿನಲ್ಲಿ ಸಾಧಿಸಿ ತೋರಿಸಿದೆ.
ತಾಲೂಕಿನ ಬ್ಯಾಟರಾಯನಹಳ್ಳಿ ಬಿ.ಎಸ್. ಆಂಜಿನಪ್ಪ ಎಂಬುವರ ನಿವೇಶನದಲ್ಲಿ 480 ಚದರ ಅಡಿಯಲ್ಲಿ ಅತಿ ಕಡಿಮೆ ಖರ್ಚಿನಲ್ಲಿ ಇಂಚ್ ಆರ್ಕಿಟೆಕ್‌ನ ತಾಂತ್ರಿಕ ಮಾರ್ಗದರ್ಶನದಲ್ಲಿ ಬೆಳಕು ಸಂಸ್ಥೆ ಕಟ್ಟಿ ತೋರಿಸಿದೆ. ಸ್ವಿಜರ್‌ಲ್ಯಾಂಡ್‌ನ ಸ್ವಿಸ್‌ನೆಕ್ ಅರ್ಥಿಕ ಸಹಾಯದಲ್ಲಿ ಸುಸ್ಥಿರ ಗ್ರಾಮೀಣ ಮನೆ ಯೋಜನೆಯಡಿ 6 ತಿಂಗಳಲ್ಲಿ ನಿರ್ಮಿಸಿರುವ ಮನೆ ಪರಿಸರ ಸ್ನೇಹಿ. ಮಳೆ ನೀರು ಕೊಯ್ಲು, ಸೋಲಾರ್ ಯುಪಿಎಸ್ ಡೈ ಶೌಚಾಲಯ, ಗೊಬ್ಬರ್ ಗ್ಯಾಸ್ ಹಾಗೂ ತೋಟದ ಅಡುಗೆ ಮನೆ ಹೊಂದಿದೆ.
ಪರಿಸರ ಮಾಲಿನ್ಯ ಹೆಚ್ಚಿಸುವ ಕಲ್ಲಿದ್ದಲು ಅಥವಾ ಸೌದೆಯಿಂದ ಸುಟ್ಟ ಇಟ್ಟಿಗೆಯನ್ನು ಬಳಸದೆ ಮನೆಯ ಆವರಣದಲ್ಲಿರುವ ಮಣ್ಣನ್ನು ಪರೀಕ್ಷಿಸಿ ಬಂದ ಫಲಿತಾಂಶದ ಆಧಾರದ ಮೇಲೆ ಸ್ವಲ್ಪ ಸಿಮೆಂಟ್(ಶೇ.10-12ರಷ್ಟು) ಬಳಸಿ ಮೊಲ್ದಗಳನ್ನು ಬಳಸಿ ತಯಾರಿಸುವ ಇಟ್ಟಿಗೆಯನ್ನು ಈ ಪರಿಸರ ಸ್ನೇಹಿ ಮನೆಗೆ ಬಳಸಲಾಗುತ್ತಿದೆ. ಪರಿಸರಕ್ಕೆ ಮಾರಕವಾಗಿರುವ ಕ್ಯಾರಿ ಬ್ಯಾಗ್, ಬಿಸ್ಕೆಟ್ ಹಾಗೂ ಹಾಲಿನ ಪ್ಯಾಕೆಟ್ ಸೇರಿದಂತೆ ಅನುಪಯುಕ್ತ ಪ್ಲಾಸ್ಟಿಕ್‌ಗಳನ್ನು ಪುನರ್ಬಳಕೆ ಮಾಡಿದ ಶೀಟ್‌ಗಳನ್ನು ಛಾವಣಿಗೆ ಬಳಸಲಾಗಿದೆ. ಇದನ್ನು ಗುಜರಾತ್‌ನಿಂದ ತರಿಸಲಾಗಿದೆ.
ಮಳೆ ನೀರು ಕೊಯ್ಲು
ಮನೆಯ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಿ ಅದರಿಂದ ಗೃಹ ಬಳಕೆಗೆ ಹಾಗೂ ಕೈ ತೋಟದ ನಿರ್ವಹಣೆಗೆ ಬಳಸುವಂತಹ ವ್ಯವಸ್ಥೆ. ಮನೆ ಮೇಲೆ ನಿರ್ಮಿಸಿರುವ ಸೋಲಾರ್ ಉಪಕರಣದಿಂದ ಮನೆಯಲ್ಲಿನ 10 ಬಲ್ಬ್, 2 ಫ್ಯಾನ್ ಹಾಗೂ ಒಂದು ಟಿ.ವಿ. ಬಳಸಬಹುದಾಗಿದೆ.
ಪಾಶ್ಚಿಮಾತ್ಯ ದೇಶಗಳ ಮಾದರಿಯಲ್ಲಿ ಒಣ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, ಶೌಚಾಲಯದಿಂದ ವ್ಯರ್ಥವಾಗುವ ನೀರನ್ನು ಕೈ ತೋಟಕ್ಕೆ ಬಳಸುವ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯದ ದೃಷ್ಠಿಯಿಂದ ಮನೆಯ ಮುಂಭಾಗದಲ್ಲಿನ ಅವರಣದಲ್ಲಿ ವಿವಿಧ ತರಕಾರಿಗಳನ್ನು ಸಾವಯವ ಗೊಬ್ಬರ ಮೂಲಕ ಬೆಳೆಸಿ ಉಪಯೋಗಿಸುವ ವ್ಯವಸ್ಥೆ ಮಾಡಲಾಗಿದೆ.
ಬಯೋಗ್ಯಾಸ್
ದುಬಾರಿ ಎಲ್‌ಪಿಜಿ ಗ್ಯಾಸ್‌ನಿಂದ ಆಗಬಹುದಾದ ಅನಾಹುತ ಹಾಗೂ ಅನವಶ್ಯಕ ವೆಚ್ಚ ಕಡಿಮೆ ಮಾಡಲು ಪರಿಸರ ಸ್ನೇಹಿಯಾಗಿರುವ ಗೋಬರ್ ಗ್ಯಾಸ್ ಘಟಕವನ್ನು ನಿರ್ಮಿಸಿಕೊಂಡು ಅಡುಗೆಗೆ ಬೇಕಾದ ಇಂಧನವನ್ನು ಉತ್ಪತ್ತಿ ಮಾಡಲಾಗುತ್ತದೆ. ಈ ಪರಿಸರ ಸ್ನೇಹಿ ಮನೆ ಬಗ್ಗೆ ಪ್ರತಿಕ್ರಿಯಿಸಿರುವ ಬೆಳಕು ಸಂಸ್ಥೆಯ ಮಂಜುನಾಥ್ ಜವಳಿ, ಮಾಲಿನ್ಯ ಗೊಂಡಿರುವ ಪರಿಸರದಲ್ಲಿ ಶುದ್ಧ ಗಾಳಿಯನ್ನು ತಮ್ಮ ಮನೆಯ ವಾತಾವರಣದಿಂದಲೇ ಪಡೆಯಬೇಕೆಂದು ಯೋಚಿಸುತ್ತಿದ್ದ ಇಂಚ್ ಸಂಸ್ಥೆಯ ಸಹಕಾರದಲ್ಲಿ ಬೆಳಕು ಸಂಸ್ಥೆ ಅಧ್ಯಯನ ನಡೆಸಿ ಅದರ ವರದಿ ಆಧಾರದ ಮೇಲೆ ಗ್ರಾಮೀಣ ಭಾಗದಲ್ಲಿ ಒಂದು ಸುಸ್ಥಿರವಾದ ಮನೆಯನ್ನು ನಿರ್ಮಿಸಿ ಗ್ರಾಮೀಣ ರೈತರ ಅನವಶ್ಯಕ ಖರ್ಚು- ವೆಚ್ಚಗಳನ್ನು ಕಡಿಮೆ ಮಾಡುವ ವಿವೇಚನೆಯೊಂದಿಗೆ ತಾಲೂಕಿನ ಬ್ಯಾಟರಾಯನಹಳ್ಳಿಯಲ್ಲಿ ನಡೆಸಿದ ಮೊದಲ ಪ್ರಯತ್ನವೇ ಯಶಸ್ವಿಯಾಗಿದೆ. ಪ್ರಯೋಗಾರ್ಥ ಮನೆ ನಿರ್ಮಾಣಕ್ಕೆ 4.4 ಲಕ್ಷ ಖರ್ಚಾಗಿದ್ದರೂ ಮುಂದಿನ ದಿನಗಳಲ್ಲಿ ನಿರ್ಮಾಣದ ವೆಚ್ಚವನ್ನು ಸುಮಾರು 1ರಿಂದ 1.5 ಲಕ್ಷ ರು. ತಗ್ಗಿಸಬಹುದು ಎನ್ನುತ್ತಾರೆ. ಇಂತಹ ಪರಿಸರಸ್ನೇಹಿ ಹಾಗೂ ಬಡವರಿಗೆ ಆಶಾದಾಯಕವಾಗಿರುವ ಈ ಮನೆಯನ್ನು ನಿರ್ಮಿಸಲು ಸಹಕರಿಸಿದವರು ಸ್ವಿಜರ್‌ಲ್ಯಾಂಡ್‌ನ ಬೆರ್ನ್ ವಿಶ್ವವಿದ್ಯಾಲಯ ಪ್ರೊ. ಜಾರ್ಜ್ ಗ್ರೋಡರ್, ಇಂಚ್ ಆರ್ಕಿಟೆಕ್ ಸಂಸ್ಥೆಯ ಮುಖ್ಯಸ್ಥೆ ಪ್ರಿಯಾ ಜೋಸೆಫ್, ಅಭಿಯಂತರ ಕೌಶಿಕ್ ಹಾಗೂ ಬೆಳಕು ಸಂಸ್ಥೆಯ ರಘುನಾಥ್ ಬಾಬು.
ಹೆಚ್ಚಿನ ಮಾಹಿತಿಗೆ: ಫಲಾನುಭವಿ ಬಿ.ಎಸ್. ಆಂಜಿನಪ್ಪ (99452 88616), ಮಂಜುನಾಥ್ ಜವಳಿ (97425 49685).
- ಮಾಲೂರು ರಾಜೇಂದ್ರ ವೈದ್ಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.