ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕೊಂಕಣ ಸುತ್ತಿ ಮೈಲಾರಕ್ಕೆ

Mainashree
Updated On : 16 Dec 2013, 12:24 pm

ನಿಜವಾಗಿಯೂ ಖಾಸಗಿ ಬಸ್‌ನ ಪ್ರಯಾಣ 'ಕುರಿ ಮಂದೆ ತುಂಬಿದ ರೊಪ್ಪದಂತೆ' ಇರುತ್ತದೆ. ಏಕೆಂದರೆ ಖಾಸಗಿ ಬಸ್‌ನಲ್ಲಿ ಅದರ ಸಾಮರ್ಥ್ಯಕ್ಕೂ ಮೀರಿ ಜನರನ್ನು ಪ್ರಯಾಣಿಸುವಂತೆ ಮಾಡುತ್ತಾರೆ. ಖಾಸಗಿ ಬಸ್‌ನಲ್ಲಿ ಭದ್ರತೆ ಇರುವುದಿಲ್ಲ. ನೀತಿ ನಿಯಮಗಳಿರುವುದಿಲ್ಲ. ಹೆಚ್ಚಾಗಿ ಜನರನ್ನು ಮೋಸಗೊಳಿಸುತ್ತಾರೆ. ಸ್ವಚ್ಛತೆಯ ಕಡೆ ಗಮನ ಕೊಡುವುದಿಲ್ಲ. ಸಮಯ ಪರಿಪಾಲನೆಯ ಮಾತೇ ಇಲ್ಲ. ಮುಖ್ಯವಾದ ಕೆಲಸವಿದ್ದಲ್ಲಿ ಈ ಖಾಸಗಿ ಬಸ್‌ನ್ನು ನಂಬಿಕೊಂಡು ಹೋದವರನ್ನು ದೇವರೆ ಕಾಪಾಡಬೇಕು. ತಲುಪಬೇಕಾದ ಊರು ತಲುಪಲು 'ಕೊಂಕಣ ಸುತ್ತಿ ಮೈಲಾರ' ಸೇರಿದ ಹಾಗೆ ಇರುತ್ತೆ. ಖಾಸಗಿ ಬಸ್‌ನವರು ಸುತ್ತಿ ಬಳಸಿ ಕಡೆಗೆ ನಾವು ತಲುಪಬೇಕಾದ ಊರನ್ನು ಕಾಣುವಂತೆ ಮಾಡುತ್ತಾರೆ. ಇಂದಿನ ದಿನಗಳಲ್ಲಿ ಖಾಸಗಿ ಬಸ್‌ಗಳೇ ಹೆಚ್ಚು ಅಪಘಾತಗಳಿಗೀಡಾಗುತ್ತಿರುವುದು. ಅಪಘಾತದಲ್ಲಿ ಪ್ರಾಣ ಹಾನಿಯಾದವರಿಗೆ, ಗಾಯಾಳುಗಳಿಗೆ ಇವರಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ಆದ್ದರಿಂದ ಖಾಸಗಿ ಬಸ್‌ನ ಪ್ರಯಾಣ ಅಷ್ಟು ಸುರಕ್ಷಿತವಲ್ಲ.
- ವಿ. ಆರ್.ಮುಕ್ತಾ, ವಿ ಜಿ ದೊಡ್ಡಿ, ಮಾಗಡಿ

ಮಾನವೀಯ ಮೌಲ್ಯವಿರುವ ಸಿಬ್ಬಂದಿ
ಅಪಘಾತ ಎಂದರೆ ಅದು ಖಾಸಗಿ ಬಸ್‌ಗೆ ಮಾತ್ರ ಸೀಮಿತವಲ್ಲ ಸರ್ಕಾರಿ ಬಸ್‌ಗಳೂ ಸಹ ಅಪಘಾತವಾಗುತ್ತಿವೆ. ಬೇಕೆಂದೇ ಯಾವ ಚಾಲಕನೂ ಅಪಘಾತ ಮಾಡುವುದಿಲ್ಲ. ಆಕಸ್ಮಿಕವಾಗಿ ನಡೆಯುವ ಘಟನೆಗೇ ಅಪಘಾತ ಎನ್ನುವುದು. ಇವುಗಳಿಗೆ ಖಾಸಗಿ ಬಸ್‌ನವರನ್ನು ದೂಷಿಸುವುದು ಸರಿಯಲ್ಲ. ಸಮಯ ಪರಿಪಾಲನೆ, ಹಿರಿಯರಿಗೆ ಸೀಟು ಮಾಡಿಕೊಡುವುದು, ಪ್ರಯಾಣಿಕರ ಲಗ್ಗೇಜನ್ನು ಬಸ್‌ನವರೇ ಟಾಪ್‌ನಲ್ಲಿ ಹಾಕುವುದು. ಜೋಪಾನವಾಗಿ ಇಳಿಸಿ ಕೊಡುವುದು, ಸೌಜನ್ಯದಿಂದ ವರ್ತಿಸುತ್ತಾರೆ. ಇಂತಹ ಮಾನವೀಯತೆಯ ಮೌಲ್ಯಗಳು ಈ ಖಾಸಗಿ ಬಸ್‌ನವರಲ್ಲಿ ಅಲ್ಲದೆ ಸರ್ಕಾರಿ ಬಸ್‌ಗಳಲ್ಲಿ ಕಾಣಸಿಗದು. ಖಾಸಗಿ ಬಸ್‌ನ ಸಿಬ್ಬಂದಿಯನ್ನು ನೋಡಿ ಕಲಿಯುವುದು ಸಾಕಷ್ಟಿರುತ್ತದೆ.
-ಕಂಪ್ಲಾಪುರ ಮೋಹನ್, ಪಿರಿಯಾಪಟ್ಟಣ

ಪ್ರಯಾಸದ ಪ್ರವಾಸ
ಖಾಸಗಿ ಬಸ್‌ನಲ್ಲಿ ಪ್ರಯಾಣ ಮಾಡುವವರಿಗೆ ಅವರು ಟಿಕೆಟ್ ಪಡೆದು ಬಸ್ ಏರಿ ಕುಳಿತುಕೊಳ್ಳುವವರೆಗೆ ಮಾತ್ರ ರಾಜ ಮರ್ಯಾದೆ. ನಂತರ 'ಹಾಕ್ಮಣೆ-ನೂಕ್ಮಣೆ' ಲೆಕ್ಕಾಚಾರವೇ ಎಲ್ಲಾ. ಹಾಳಾದ ರಸ್ತೆಗಳಲ್ಲಿ ಈ ಖಾಸಗಿ ಬಸ್‌ಗಳ ಓಡಾಟ (ಹಾರಾಟ) ನನ್ನ ಶತ್ರುವಿಗೂ ಬೇಡ ಎನಿಸುತ್ತದೆ. ಐವತ್ತು ಮೈಲಿ ಪ್ರಯಾಣಕ್ಕೆ ನಲವತ್ತು ನಿಲುಗಡೆಯ ಈ ಪ್ರವಾಸ ಪ್ರಯಾಸವಾಗಿರುತ್ತದೆ. ಇಂತಹ ತಾಪತ್ರಯದ ಪ್ರಯಾಣ ಯಾರಿಗೆ ಬೇಕು ಹೇಳಿ? ಹಾಗೆ ನೋಡಿದರೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳೇ ಮೇಲು. ಪ್ರತಿವರ್ಷ ಈ ಸಾರಿಗೆ ಸಂಸ್ಥೆಗೆ ಸಾವಿರಾರು ಹೊಸ ಬಸ್ಸುಗಳು ಸೇರ್ಪಡೆಯಾಗುತ್ತಲೇ ಇದೆ. ಸ್ವಲ್ಪ ಮುತುವರ್ಜಿ ವಹಿಸಿ ರಸ್ತೆಗಳನ್ನು ದುರಸ್ತಿಗೊಳಿಸಿ ಹೆಚ್ಚು ಬಸ್‌ಗಳನ್ನು ಗ್ರಾಮಾಂತರ ಪ್ರದೇಶಗಳಿಗೂ ವಿಸ್ತರಿಸಿದರೆ ಒಳಿತು. ಇದರಿಂದ ಪ್ರಯಾಣಿಕರಿಗೆ ಸುಖಕರ ಪ್ರಯಾಣ ಮಾಡುವ ಯೋಗವು ಫಲಿಸುತ್ತದೆ.
-ಬಿ.ಕೆ.ಶ್ರೀಕಾಂತ್, ಬೆಟ್ಟದಪುರ

'ಜಗುಲಿ'ಯಲ್ಲಿ ಈ ಸಲದ ವಿಷಯ 'ಖಾಸಗಿ ಬಸ್ ಪ್ರಯಾಣ ಎಷ್ಟು ಸುರಕ್ಷಿತ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement