ನಮ್ಮವರೂ ಕಡಿಮೆ ಇಲ್ಲ!
'ಎಲ್ಲ ವಿಚಾರದಲ್ಲೂ ಪಾಶ್ಚಾತ್ಯರೇ ಮುಂದೆ. ವೈದ್ಯಕೀಯ ಸಂಶೋಧನೆ ಸೇರಿದಂತೆ ಸಂಶೋಧನಾ ರಂಗದಲ್ಲಿ ಭಾರತೀಯರ ಕೊಡುಗೆ ಏಕೆ ಕಡಿಮೆ' ಎನ್ನುವ ಮಾತುಗಳನ್ನು ನೀವೂ ಕೇಳಿರಬಹುದು, ಆಡಿರಲೂಬಹುದು. ವಾಸ್ತವಿಕವಾಗಿ ನಮ್ಮವರು ಅಂದರೆ ಭಾರತೀಯರು ತೀರಾ ಹಿಂದೇನೂ ಇಲ್ಲ. ಸರ್ಕಾರಗಳಿಂದ ಅವರಿಗೆ ಅಗತ್ಯವಿರುವ ಸೌಲಭ್ಯಗಳು, ಪ್ರೋತ್ಸಾಹ ಸಿಗುತ್ತಿಲ್ಲ ಎನ್ನುವುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕಲ್ಲವೆ? ಇನ್ನು ನಮ್ಮವರು ಪ್ರಚಾರದಲ್ಲೂ ಸ್ವಲ್ಪ ಹಿಂದೆ. ಹೀಗಾಗಿ ಅವರ ಸಾಧನೆ ಅಷ್ಟಾಗಿ ಪ್ರಚಾರಕ್ಕೆ ಬರುತ್ತಿಲ್ಲ ಅಷ್ಟೆ. ಅಲ್ಸರ್ ವಿಚಾರವನ್ನೇ ತೆಗೆದುಕೊಳ್ಳೋಣ. ಜೀರ್ಣಾಂಗ ವೃಣಕ್ಕೆ ಹಾಲು ಮದ್ದಲ್ಲ ಎನ್ನುವುದನ್ನು ಸಾಧಾರಣವಾಗಿ ನಿರೂಪಿಸಿದವರಲ್ಲಿ ಭಾರತೀಯರ ಪಾತ್ರವೂ ಇದೆ. 1976ರ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ತಜ್ಞರ ಸಂಶೋಧನೆಗೆ ಎಷ್ಟು ಪ್ರಾಮುಖ್ಯತೆ ಇದೆಯೋ, ಸರಿಯಾಗಿ ಒಂದು ದಶಕದ ನಂತರ 1986ರಲ್ಲಿ ಭಾರತೀಯರ ಸಂಶೋಧಕರು 'ಬ್ರಿಟಿಷ್ ಮೆಡಿಕಲ್ ಜರ್ನಲ್'ನಲ್ಲಿ ಪ್ರಕಟಿಸಿದ ಸಂಶೋಧನಾ ವರದಿಗೂ ಅಷ್ಟೇ ಮಹತ್ವವಿದೆ. ಜೀರ್ಣಾಂಗ ವೃಣ ಒಣಗುವುದಕ್ಕೆ ಹಾಲು ಅಡ್ಡಿಪಡಿಸುತ್ತದೆ ಎನ್ನುವುದನ್ನು ತೋರಿಸಿಕೊಟ್ಟವರು ಭಾರತೀಯರು.
ಅಮೆರಿಕನ್ನರ ಸಂಶೋಧನೆಯಿಂದ ವಿಚ್ಛಿದ್ರಕಾರಿ ಆ್ಯಸಿಡ್ ಮತ್ತು ಕಿಣ್ವಗಳ ಸ್ರಾವವನ್ನು ಹಾಲು ತೀವ್ರಗೊಳಿಸುತ್ತದೆ ಎನ್ನುವುದು ಸಾಬೀತಾಯಿತು. 'ಹಾಲಿನ ಡಯಟ್'ಗೇ ಜೋತು ಬಿದ್ದರೆ ಅಲ್ಸರ್ನಿಂದ ಗುಣಮುಖರಾಗುವುದು ಕಷ್ಟ ಇಲ್ಲ ಎನ್ನುವುದನ್ನು ಭಾರತೀಯರು ತೋರಿಸಿಕೊಟ್ಟರು. ಅಲ್ಸರ್ನಿಂದ ಬಳಲುತ್ತಿದ್ದ 65 ಜನರನ್ನು ಆಸ್ಪತ್ರೆ ಡಯಟ್ ಮತ್ತು ಹಾಲಿನ ಡಯಟ್ಗೆ ಒಳಪಡಿಸಲಾಯಿತು. ಹಾಲಿನ ಡಯಟ್ನಲ್ಲಿ ನಿತ್ಯ ಎಂಟು ಗ್ಲಾಸ್ ಹಾಲು ಕೊಡಲಾಗುತ್ತಿತ್ತು. ಒಂದು ತಿಂಗಳ ನಂತರ ಎಂಡೊಸ್ಕೋಪ್ ಮೂಲಕ ಪ್ರತಿಯೊಬ್ಬರ ಪ್ರತಿ ಗಾಯವನ್ನೂ ವಿವರವಾಗಿ ಪರೀಕ್ಷಿಸಲಾಯಿತು. ಆಸ್ಪತ್ರೆ ಡಯಟ್ ಅನುಸರಿಸಿದವರಲ್ಲಿ ಶೇ. 78ರಷ್ಟು ಮಂದಿ ಬಹುತೇಕ ಗುಣಮುಖರಾಗಿದ್ದರು. ಅದೇ ಹಾಲಿನ ಡಯಟ್ ಪಾಲಿಸಿದವರಲ್ಲಿ ಶೇ. 50ರಷ್ಟೂ ಗಾಯ ಒಣಗಿರಲಿಲ್ಲ. ಅಲ್ಸರ್ಗೆ ಮಾಮೂಲಿ ಡಯಟ್ಗಿಂತ ಹಾಲಿನ ಡಯಟ್ ಅಪಾಯಕಾರಿ ಎನ್ನುವುದು ಈ ಮೂಲಕ ನಿರೂಪಿತವಾಯಿತು.
ಹಾಲಿನಲ್ಲಿ ವಿಶಿಷ್ಟ ಗುಣವೊಂದಿದೆ ಎಂದು ಹೇಳಿದ್ದೆ. ಹಾಲು ಅಲ್ಸರ್ ಗುಣವಾಗುವುದನ್ನು ತಡೆಯುತ್ತದೆ ಎನ್ನುವುದು ನಿಜವಾದರೂ, ಹಾಲು ಕುಡಿದ ತಕ್ಷಣ ನೋವು ಮಾಯವಾದ ಅನುಭವ ನೀಡುತ್ತದೆ. ಹೀಗಾಗಿ ನಿಯಮಿತವಾಗಿ ಹಾಲು ಕುಡಿಯುತ್ತಿದ್ದರೆ 'ಮೊದಲಿಗಿಂತ ಚೆನ್ನಾಗಿದ್ದೇನೆ' ಎನ್ನುವ ಭಾವನೆಯನ್ನು ರೋಗಿಯಲ್ಲಿ ಮೂಡಿಸಿಬಿಡುತ್ತದೆ. ಇದೇ ಅದರ ವಿಶೇಷ. ವಾಸ್ತವಿಕವಾಗಿ ಅದು ಆ್ಯಸಿಡ್ ಸ್ರಾವ ತೀವ್ರಗೊಳಿಸಿದರೂ, ಗಾಯ ಒಣಗದಂತೆ ನೋಡಿಕೊಂಡರೂ, ನೋವು ಕಡಿಮೆ ಮಾಡುವ ಗುಣದಿಂದ ಬಹಳಷ್ಟು ವರ್ಷದವರೆಗೆ ಎಲ್ಲರನ್ನೂ ತಪ್ಪುದಾರಿಯಲ್ಲಿ ಕರೆದೊಯ್ದಿತ್ತು.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com