ಮೊದಲು ಮಾನವ ಸೇವೆ!
ಒಮ್ಮೆ ವಿವೇಕಾನಂದರು ಕೋಲ್ಕತಾದಲ್ಲಿದ್ದಾಗ ಅವರಲ್ಲಿಗೆ ಕೆಲವು ಗೋವುಗಳ ರಕ್ಷಣೆಯ ಗುರಿ ಹೊಂದಿರುವ, ಅದಕ್ಕಾಗಿಯೇ ಸಂಸ್ಥೆಯನ್ನು ಕಟ್ಟಿಕೊಂಡಿರುವ ಅಮೆರಿಕದ ಕೆಲವು ಸ್ವಾಮೀಜಿಗಳು ಬಂದರು. ಗೋ ರಕ್ಷಣೆಗಾಗಿ ದೇಣಿಗೆ ನೀಡಬೇಕೆಂದು ಕೇಳಿದರು. ಅದೇ ಸಮಯದಲ್ಲಿ ಬಂಗಾಳದಲ್ಲಿ ಭೀಕರ ಬರಗಾಲ ತಲೆದೋರಿತ್ತು. ಸೇವಾ ಕಾರ್ಯದಲ್ಲಿ ಮಗ್ನರಾಗಿದ್ದ ವಿವೇಕಾನಂದರು ಗೋ ರಕ್ಷಣಾ ಪ್ರಚಾರಕರಿಗೆ ಪ್ರಶ್ನಿಸಿದರು, 'ನೀವು ಬರಗಾಲದ ಈ ಸಮಯದಲ್ಲಿ ಮಾನವ ಸೇವೆಗಾಗಿ ಯಾವ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೀರಿ?' ಅದಕ್ಕೆ ಪ್ರಚಾರಕ 'ನಾವು ಗೋ ರಕ್ಷಣೆಯ ಸೇವೆಗಾಗಿ ಧನ ಸಂಗ್ರಹಿಸಲು ಬಂದಿದ್ದೇವೆ. ಗೋ ರಕ್ಷಣೆಯೇ ನಮ್ಮ ಗುರಿ. ಅವರವರ ಕರ್ಮಕ್ಕನುಗುಣವಾಗಿ ಪಾಪ ಅನುಭವಿಸುತ್ತಿರುವ ಅವರ ಕಷ್ಟಕ್ಕೆ ಅವರೇ ಕಾರಣವಾಗಿರುವುದರಿಂದ ಜನರ ಸೇವೆಯನ್ನು ನಾವೇಕೆ ಮಾಡಬೇಕು?' ಎಂದ.
ಆಗ ಒಮ್ಮೆಲೇ ರುದ್ರನಂತೆ ಕೆರಳಿ ನಿಂತ ಸ್ವಾಮೀಜಿ, 'ಯಾವ ಸಂಘ-ಸಂಸ್ಥೆಗಳು ತಮ್ಮ ಸಹಮಾನವರ ಬಗ್ಗೆ ಸಹಾನುಭೂತಿ ತೋರುವುದಿಲ್ಲವೋ, ತಮ್ಮ ಸೋದರರ ಸಾವನ್ನು ಕಂಡೂ ಮರುಗುವುದಿಲ್ಲವೋ, ಅಂಥವರ ಬಗ್ಗೆ ನನಗೆ ಒಂದಿಷ್ಟೂ ಆದರವಿಲ್ಲ' ಎಂದರು. ಇದನ್ನು ಕೇಳಿ ತಬ್ಬಿಬ್ಬಾದ ಪ್ರಚಾರಕ 'ಗೋವು ನಮ್ಮ ಮಾತೆಯೆಂದು ಶಾಸ್ತ್ರಗಳೇ ಹೇಳುತ್ತವೆಯಲ್ಲವೆ?' ಎಂದ. ಅದಕ್ಕೆ ಸ್ವಾಮೀಜಿ 'ಹೌದೌದು, ಗೋವು ನಿಮ್ಮ ಮಾತೆಯೇ ನಿಜ, ಇಲ್ಲದೆ ಹೋದರೆ ನಿಮ್ಮಂತಹ ಪುತ್ರರತ್ನರಿಗೆ ಮತ್ತಾರು ಜನ್ಮವಿತ್ತಾರು?' ಎಂದು ವ್ಯಂಗ್ಯವಾಡಿದರು. ಹೀಗೆ ಸೇವೆಯ ಸೋಗಿನಿಂದ ಬಂದವರಿಗೆ ಸ್ವಾಮೀಜಿ ಮಾನವಸೇವೆಯ ಪಾಠ ಕಲಿಸಿದರು.
- ಆನಂದ ಎಸ್.ಎನ್.
anandsn193@gmail.com