ಸಾರ್ವಜನಿಕ ಸಾರಿಗೆ ಬಳಸಿ
ಅಪಘಾತ ಯಾವ ರೀತಿಯಲ್ಲಾದರೂ, ಹೇಗೆ ಬೇಕಾದರೂ ಸಂಭವಿಸಬಹುದು. ಪಾದಚಾರಿಗಳು, ಬೈಕ್ ಸವಾರರು, ಬೈಸಿಕಲ್ ಸವಾರರಿಗೆ ಮಾತ್ರ ಅಪಘಾತ ಸಂಭವಿಸುವುದಲ್ಲ.
ಬಸ್ ಪ್ರಯಾಣಿಕರೂ ಸಹ ಎಚ್ಚರ ಮರೆತರೆ ಅನಾಹುತ ಕಟ್ಟಿಟ್ಟ ಬುತ್ತಿ. ಹಾಗಾಗಿ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸುವಾಗ ಸಹ ಜನರು ಎಚ್ಚರದಿಂದಿರಬೇಕು. ಬಸ್ ಹತ್ತುವ ಮುನ್ನ ಸರದಿಯಲ್ಲೇ ಹೋಗಬೇಕು. ಬಸ್ ಚಲಿಸುವ ವೇಳೆ ಬಸ್ ನಿಲ್ಲಿಸುವವರೆಗೂ ಕೆಳಗಿಳಿಯಲು ಹೋಗಬೇಡಿ, ಬಸ್‌ನಿಂದ ಧುಮುಕಬೇಡಿ.
ಚಲಿಸುವ ಬಸ್‌ನ್ನು ಹತ್ತಲು ಮುಂದಾಗುವುದು, ಬಸ್‌ನಲ್ಲಿ ಕೂರಲು ಅಥವಾ ನಿಲ್ಲಲು ಸ್ಥಳವಿಲ್ಲದಿದ್ದರೂ ಬಾಗಿಲ ಬಳಿಯ ಮೆಟ್ಟಿಲುಗಳ ಮೇಲೆ ನಿಂತು ನೇತಾಡುತ್ತಾ ಹೋಗಬೇಡಿ. ಇಂತಹ ಸಾಕಷ್ಟು ಘಟನೆಗಳಲ್ಲಿ ಅಪಘಾತ, ಆಯತಪ್ಪಿ ಕೆಳಗೆ ಬೀಳುವ ಸಂಭವವಿದೆ.
ಮಕ್ಕಳನ್ನು ಕರೆದುಕೊಂಡು ಬರುವ ಮಹಿಳೆಯರಿಗೆ ಪ್ರಮುಖ ಆದ್ಯತೆ ಕೊಡಿ. ಅವರು ಬಾಗಿಲಲ್ಲಿ ನಿಲ್ಲದಂತೆ ಎಚ್ಚರವಹಿಸಿ.
ಕಿಟಕಿ ಪಕ್ಕ ಕುಳಿತಿದ್ದರೆ ಕೈ ಅಥವಾ ತಲೆಯನ್ನು ಹೊರಗೆ ಹಾಕಿ ಬೇರೆ ವಾಹನಗಳನ್ನು ನೋಡುವುದು, ಹಿಂದೆ ಅಥವಾ ಪಕ್ಕದಲ್ಲಿ ಚಲಿಸುವ ವಾಹನಗಳನ್ನು ಅಡ್ಡಹಾಕುವುದು ಮಾಡಬೇಡಿ.
ಬಸ್‌ನಿಂದ ಯಾವ ಉಪಯುಕ್ತ/ನಿರುಪಯುಕ್ತ ವಸ್ತುಗಳನ್ನು ಹೊರಗೆ ರಸ್ತೆಗೆ ಎಸೆಯಬೇಡಿ. ಇದರಿಂದ ಬೇರೆ ವಾಹನ ಸವಾರರಿಗೆ ತೊಂದರೆಯಾಗುತ್ತದೆ, ಕೆಲವೊಮ್ಮೆ ಅಪಘಾತವೂ ಸಂಭವಿಸಬಹುದು.
ಚಾಲಕ ವಾಹನ ಚಾಲನೆ ಮಾಡುವಾಗ ಆತನ ಜತೆ ಮಾತನಾಡಿ ಗಮನ ಬೇರೆಡೆ ಸೆಳೆಯಬೇಡಿ. ಇದರಿಂದ ಅಪಘಾತವಾಗುವ ಸಾಧ್ಯತೆ ಹೆಚ್ಚಿದೆ.
- ಶಾಂತ ತಮ್ಮಯ್ಯ