ಗಜೇಂದ್ರ ಸಿಲ್ಕ್
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮೈಮೇಲಿನ ಸೀರೆ ಯಾವುದು? ಅದು ಗದಗದ ಗಜೇಂದ್ರಗಡದ ಸೀರೆ!...
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮೈಮೇಲಿನ ಸೀರೆ ಯಾವುದು? ಮಮತಾ ಬ್ಯಾನರ್ಜಿ, ಪ್ರತಿಭಾ ದೇವಿ ಪಾಟೀಲ್ ಉಟ್ಟ ಬಾದಾಮಿ ಹಾಲಿನ ಕಲರಿನ ಸೀರೆ ಎಲ್ಲಿಯದು?
ಲಕ ಲಕ ಎನ್ನುವ ಫ್ಯಾಶನ್ ಅದಲ್ಲ. ಯಾವುದೋ ರ್ಯಾಂಪ್ ಶೋನಲ್ಲಿ ನೀರೆಯ ಮೈಮೇಲೆ ಇಳಿಬಿಟ್ಟ ಕಾಸ್ಟ್ಲಿ ಕಾಸ್ಟ್ಯೂಮೂ ಅದಲ್ಲ. ಹಾಗಾದರೆ, ಆ ಸೀರೆ ಎಲ್ಲಿಯದು? ಒಂದೇ ಥರದ ಸೀರೆಯನ್ನೇ ಏಕೆ ಈ ಧುರೀಣರು ಇಷ್ಟಪಡುತ್ತಾರೆ?
ಅದು ಗದಗದ ಗಜೇಂದ್ರಗಡದ ಸೀರೆ! ವಿಶೇಷವಾಗಿ ಕೈಮಗ್ಗದ ಸೀರೆ! ಇಲ್ಲಿ ರೆಡಿಯಾಗುವ ಸೀರೆಗಳು ನವದೆಹಲಿಯ ಮಾರುಕಟ್ಟೆಯ ಮಳಿಗೆಯಲ್ಲಿ ಕೂರುತ್ತವೆ. ನೋಡ್ತಾ ನೋಡ್ತಾ ಒಂದೆರಡು ಗಂಟೆಯಲ್ಲಿ ನೂರಾರು ಸೀರೆಗಳು ಮಾರಾಟಗೊಳ್ಳುತ್ತವೆ.
ಇಲ್ಲಿ ಹಲವು ವಿಶೇಷ
ಭಾರತೀಯ ಕೈಮಗ್ಗ ಉದ್ಯಮಕ್ಕೆ ಮರುಚೇತನ ನೀಡಿದ್ದು ಈ ಗಜೇಂದ್ರಗಡದ ಹತ್ತಾರು ಕೈಮಗ್ಗ ನೇಕಾರರ ವಿವಿಧೋದ್ದೇಶ ಸಹಕಾರ ಸಂಘಗಳು. ದೇಶದ ಸಾಂಸ್ಕೃತಿಕ ಪ್ರತೀಕವನ್ನು ಉಳಿಸಿ ಬೆಳೆಸುತ್ತಿರುವ ಇಲ್ಲಿನ ನೌಕರರ ಶ್ರಮಕ್ಕೆ ಯಾವ 'ಭಾರತರತ್ನ' ಕೊಟ್ಟರೂ ಕಡಿಮೆಯೇ. 'ಆದಿಶಕ್ತಿ', 'ದಿ. ಬನಶಂಕರಿ', 'ಗಜೇಂದ್ರಗಡ ನೇಕಾರರ ಸಹಕಾರಿ ಸೊಸೈಟಿ'- ಹೀಗೆ ಸಹಕಾರಿ ತತ್ವದ ಅಡಿಯಲ್ಲಿ ಈ ಕೈಮಗ್ಗಗಳು ನಡೆಯುತ್ತಿರುವುದು ಮತ್ತೊಂದು ವಿಶೇಷ.
ಭಾರಿ ಬೇಡಿಕೆ
ಇವೆಲ್ಲ ಶೇ.100 ಪರಿಸರಸ್ನೇಹಿ ಸೀರೆಗಳು. ಖಾದಿಯಿಂದಲೇ ನಿರ್ಮಿತವಾದವು. ಬಳಸಿದ ಬಣ್ಣವೂ ಅಷ್ಟೇ, ನೈಸರ್ಗಿಕ. ಮಿಕ್ಕ ಸೀರೆ ಉತ್ಪಾದಕ ಘಟಕಗಳಂತೆ ಯಾವುದೇ ರಾಸಾಯನಿಕ ಬಣ್ಣಗಳನ್ನು ಇಲ್ಲಿ ತಯಾರಾಗುವ ಸೀರೆಗಳಿಗೆ ಹಾಕುವುದಿಲ್ಲ. ಅಂದಹಾಗೆ, ಈ ಸೀರೆ ಕೇವಲ ಭಾರತದಲ್ಲಷ್ಟೇ ಖ್ಯಾತಿ ಪಡೆದಿಲ್ಲ. ಜಾಗತಿಕ ಡಾಲರ್ ಮಾರುಕಟ್ಟೆಯಲ್ಲೂ ಡಾನ್ ಆಗಿ ಮೆರೆಯುತ್ತಿದೆ.
ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ, ಪ್ರತಿಭಾದೇವಿ ಪಾಟೀಲ್ ಈ ಸೀರೆಗಳನ್ನು ಗೋವಾ ಮೂಲದ ವಂಡರ್ ಲಾ ಕಂಪನಿ ಮೂಲಕ ಖರೀದಿಸುತ್ತಾರೆ.
ಅಷ್ಟಕ್ಕೂ, ಇವರು ಗಣ್ಯರು ಎನ್ನುವ ಕಾರಣಕ್ಕೆ ಇವರಿಗಾಗಿಯೇ ಪ್ರತ್ಯೇಕ ಸೀರೆಗಳನ್ನು ನೇಯ್ಗೆ ಮಾಡುವುದಿಲ್ಲ. ನೇಯ್ದ ಎಲ್ಲ ಸೀರೆಗಳಲ್ಲಿಯೇ ಅವರೂ ಆಯ್ಕೆಮಾಡಿಕೊಳ್ಳುವುದು ಇಲ್ಲಿ ತಯಾರಾಗುವ ಸೀರೆಗಳ ಗುಣಮಟ್ಟಕ್ಕೆ ಸಾಕ್ಷಿ.
ಹೆಗ್ಗೋಡಿನಿಂದ ಕಚ್ಚಾ ನೂಲು ಗಜೇಂದ್ರಗಡದಲ್ಲಿ ಸಿದ್ಧವಾಗುವ ಈ ನೈಸರ್ಗಿಕ ಬಣ್ಣಗಳ ಸೀರೆಗಳಿಗೆ ಕಚ್ಚಾ ನೂಲು ಹೆಗ್ಗೋಡಿನಿಂದ ಪೂರೈಕೆಯಾಗುತ್ತದೆ. ಅಲ್ಲಿ ನೈಸರ್ಗಿಕ ಬಣ್ಣ ಬಳಕೆಮಾಡಿ ಸಿದ್ಧವಾಗುವ ನೂಲಿನ ಆಧಾರದಲ್ಲಿ ಇಲ್ಲಿ ಸೀರೆಗಳು ತಯಾರಾಗುತ್ತವೆ. ಇದೇ ಬಣ್ಣದ ಸೀರೆ ತಯಾರಿಸಬೇಕೆಂದು ಯಾವುದೇ ಉದ್ದೇಶಗಳಿಲ್ಲ. ನೈಸರ್ಗಿಕವಾಗಿ ಹೆಚ್ಚು ಲಭ್ಯವಾಗುವ ಹಸಿರು ಸೇರಿದಂತೆ ಇತರ ಬಣ್ಣಗಳಿಂದ ಸಿದ್ಧವಾಗುವ ನೂಲಿನ ಆಧಾರದಲ್ಲಿಯೇ ಇಲ್ಲಿನ ಸೀರೆಗಳು ಸಿದ್ಧಗೊಳ್ಳುತ್ತವೆ.
ಒಂದು ಬಣ್ಣದ ಒಳಗೆ...
ನೈಸರ್ಗಿಕ ಬಣ್ಣ ಎಂದರೆ ನಿಮಗೆ ಕುತೂಹಲವೇ? ಇದಕ್ಕಾಗಿ ಬಳಕೆಯಾಗುವ ವಸ್ತುಗಳ ಹೆಸರು ಕೇಳಿದರೂ ನಿಮಗೆ ಮತ್ತಷ್ಟು ಅಚ್ಚರಿಯಾಗುತ್ತದೆ. ಅಡಕೆ ಚೊಗರು, ಅಳಲೆಕಾಯಿ, ದಾಳಿಂಬೆ ಸಿಪ್ಪೆ, ರಂಗಮಾಲೆ ಬೀಜ, ಅಂಟುವಾಳ, ಸೀಗೆ, ಗಲಿಗಲಿ ಕಾಯಿ, ಕೆಂಪು ಹುಣಸೆ ಮುಂತಾದ ಕಾಡು ಉತ್ಪನ್ನಗಳನ್ನು ಇಲ್ಲಿ ಬಣ್ಣಗಾರಿಕೆಗೆ ಬಳಸಲಾಗುತ್ತಿದೆ. ಚರಕ ಸಂಸ್ಥೆಯಲ್ಲಿ ಸ್ತ್ರೀಯರೂ ಹೊಸ-ಹೊಸ ಬಣ್ಣಗಳನ್ನು ಶೋಧಿಸುವ ಮೂಲಕ ಚರಕದ ಬಣ್ಣದ ಮನೆ ಬಣ್ಣಗಾರಿಕೆಯ ಪ್ರಯೋಗ ಶಾಲೆಯಂತೆಯೂ ಕೆಲಸ ಮಾಡುತ್ತಿದೆ. ಇದು ಹೆಗ್ಗೋಡಿನಲ್ಲಿದ್ದರೂ ಸೀರೆಗಳು ಮಾತ್ರ ಗದಗ ಜಿಲ್ಲೆಯಲ್ಲಿ ಸಿದ್ಧವಾಗುತ್ತಿರುವುದು ಇಲ್ಲಿನ ನೇಕಾರಿಕೆಗೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ.
ಇದೊಂದು ಹೊಸ ಪ್ರಯತ್ನವಾಗಿದೆ. ಜಗತ್ತಿನಲ್ಲಿಯೇ ನಮ್ಮ ನೇಯ್ಗೆ ಬಟ್ಟೆಗಳಿಗೆ ಸಾಕಷ್ಟು ಬೇಡಿಕೆ ಇದೆ. ಒಂದೆಡೆ ನಶಿಸುತ್ತಿರುವ ಕೈಮಗ್ಗಗಳನ್ನು ಉಳಿಸುವುದು. ಜಗತ್ತಿಗೆ ಉತ್ತಮ ಬಟ್ಟೆ ನೀಡುವುದು ನಮ್ಮ ಉದ್ದೇಶ ಅಷ್ಟೇ.
- ವಿಶ್ವನಾಥ ಕೆಂಚಿ, ರಾಜೇಂದ್ರ ರಾಯಬಾಗಿ
ಕೈಮಗ್ಗ ನೇಕಾರಿಕಾ ಸಂಸ್ಥೆಯ ಪದಾಧಿಕಾರಿಗಳು
- ಶಿವಕುಮಾರ ಕುಷ್ಟಗಿ