ತಲೆ ಮಾರಿ
ಚಳಿಗಾಲದಲ್ಲಂತೂ ಥಂಡಿ ನೆತ್ತಿಗೇರಿ ನಾನಾ ಕಿರಿಕಿರಿ ಸಾಮಾನ್ಯವೇ. ವಾರಗಟ್ಟಲೆ ಕಾಡುವ ಸೈನಸೈಟಿಸ್, ತಿಂಗಳುಗಟ್ಟಲೆ ತಲೆ ತಿನ್ನುವ ಮೈಗ್ರೇನ್, ಅತಿಯಾದ ಚಿಂತೆ, ಒತ್ತಡ- ಇವೆಲ್ಲ ತಲೆಗೆ ಸಂಬಂಧಪಟ್ಟವೇ...
ತಲೆ ಎಲ್ಲರಿಗೂ ಪ್ರತಿಷ್ಠೆಯ ವಿಚಾರವೇ. ಅದರಲ್ಲೂ ಆರೋಗ್ಯದ ಬಗ್ಗೆ ಬಂದ್ರೆ ಅದಕ್ಕೆ ಅಗ್ರಸ್ಥಾನ. ಆದರೆ, ಅದೇ ತಲೆಗೆ ಸದಾ ಅಟಕಾಯಿಸಿಕೊಳ್ಳುವುದು ನೋವು. ಈ ಚಳಿಗಾಲದಲ್ಲಂತೂ ಥಂಡಿ ನೆತ್ತಿಗೇರಿ ನಾನಾ ಕಿರಿಕಿರಿ ಸಾಮಾನ್ಯವೇ. ವಾರಗಟ್ಟಲೆ ಕಾಡುವ ಸೈನಸೈಟಿಸ್, ತಿಂಗಳುಗಟ್ಟಲೆ ತಲೆ ತಿನ್ನುವ ಮೈಗ್ರೇನ್, ಅತಿಯಾದ ಚಿಂತೆ, ಒತ್ತಡ- ಇವೆಲ್ಲ ತಲೆಗೆ ಸಂಬಂಧಪಟ್ಟವೇ.
ತಲೆನೋವಿಗೆ ಕಾರಣಗಳು
ಸೈನಸೈಟಿಸ್, ಮೈಗ್ರೇನ್, ಹೈಪರ್‌ಟೆನ್ಷನ್, ಸ್ಪಾಂಡಿಲೈಟಿಸ್, ಹಲ್ಲುನೋವು, ಕಣ್ಣಿನ ತೊಂದರೆ, ಕಿವಿನೋವು, ಅತಿಯಾದ ಒತ್ತಡ, ಮಿದುಳಿನಲ್ಲಿ ಗಡ್ಡೆ, ಮಿದುಳಿನಲ್ಲಿ ರಕ್ತಸ್ರಾವ. ಈಗ ಇವುಗಳ ಒಂದೊಂದೇ ಡೀಟೈಲ್ ನೋಡೋಣ...
ಸೈನಸೈಟಿಸ್
ಕೆಮ್ಮು, ನೆಗಡಿ, ಮೂಗು ಸೋರುವಿಕೆ, ಗಂಟಲು ನೋವು, ತಲೆ ಸಿಡಿತ ಮುಂತಾದವುಗಳಿಂದ ಸೈನಸೈಟಿಸ್ ಆಗುತ್ತದೆ. ಇದಕ್ಕೆ ಡಯಾಗ್ನೋಸ್ಟಿಕ್ ಪರೀಕ್ಷೆ ಮಾಡಿಸಲೇಬೇಕು.
ಒತ್ತಡದ ತಲೆನೋವು
ನೆತ್ತಿಯ ಮೇಲೆ ತೂಕದ ಸುತ್ತಿಗೆಯಿಂದ ಹೊಡೆದಂಥ ಅನುಭವ. ತಲೆನೋವು ಇಡೀ ರಾತ್ರಿ ಕಾಡುವುದರಿಂದ ನಿದ್ರಾಹೀನತೆ, ಮಾನಸಿಕ ಹಿಂಸೆ ಆಗುತ್ತದೆ. ತಿಂಗಳುಗಟ್ಟಲೆ ಕಾಡುತ್ತದೆ.
ಬಿಪಿ ತಲೆನೋವು
ಸಾಮಾನ್ಯವಾಗಿ ಇದು ಬೆಳಗಿನ ಜಾವ ಶುರುವಾಗುತ್ತದೆ. ಬಿ.ಪಿ. ಚೆಕ್ ಮಾಡಿ ಟ್ರೀಟ್‌ಮೆಂಟ್ ಪಡೆಯುವುದು ಸೂಕ್ತ.
ಮೈಗ್ರೇನ್
ಮೆದುಳಿನ ರಕ್ತನಾಳಗಳ ಹಿಗ್ಗುವಿಕೆ, ತುಡಿತ ಉಂಟುಮಾಡುವ ತಲೆ ಸಿಡಿತ, ಕಣ್ಣು ಕುಕ್ಕುವ ಬೆಳಕು, ಪ್ರಖರವಾದ ಸೂರ್ಯನ ಬೆಳಕು, ಟ್ರಿಗರ್ ಮಾಡುವಂಥ ತರಕಾರಿ, ಹಣ್ಣು, ಅತಿಯಾದ ಜನಜಂಗುಳಿ, ಗಲಾಟೆ, ಅತಿಯಾದ ಸದ್ದು- ಹೀಗೆ ಅನೇಕ ಕಾರಣಗಳಿಂದ ಮೈಗ್ರೇನ್ ಬರುತ್ತದೆ. ಒಂದೇ ಕಡೆ ಸಿಡಿಯುವ ತಲೆನೋವಿನೊಂದಿಗೆ ವಾಂತಿಯೂ ಆಗಬಹುದು.
ಬ್ರೈನ್‌ಟ್ಯೂಮರ್ ತಲೆನೋವು
ಮೆದುಳಿನಲ್ಲಿ ಸಣ್ಣ ಗಡ್ಡೆ ಬೆಳೆದು, ಕ್ರಮೇಣ ಅದರ ಗಾತ್ರ ಹಿಗ್ಗುತ್ತದೆ. ಅದು ಮೆದುಳಿನ ಇತರೆ ಭಾಗಗಳ ಮೇಲೆ ಒತ್ತಡ ಹೇರಲು ಶುರುಮಾಡುತ್ತದೆ. ಮೆದುಳಿನಿಂದ ನಿಯಂತ್ರಣಗೊಳ್ಳುವ ಭಾಗಗಳಾದ ಕಣ್ಣು, ಕಿವಿ ಮತ್ತಿತರ ಅಂಗಗಳಿಗೆ ತೊಂದರೆಯಾಗುತ್ತದೆ. ದೃಷ್ಟಿಮಾಂದ್ಯ, ಕಿವುಡುತನ ಆಗಬಹುದು. ತಲೆಶೂಲೆಯೊಂದಿಗೆ ವಾಂತಿಯೂ ಕಾಡಬಹುದು. ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಈ ವೇಳೆ ಸೂಕ್ತ.
ಬ್ರೈನ್ ಹೆಮರೇಜ್
ತಲೆಶೂಲೆ ಜತೆಗೆ ಪ್ರಜ್ಞಾಹೀನತೆ ಇದ್ದರೆ ಮೆದುಳಿನಲ್ಲಿ ರಕ್ತಸ್ರಾವದ ಸಂಭವ ಹೆಚ್ಚು. ಶೀಘ್ರ ಚಿಕತ್ಸೆ ಅಗತ್ಯ.
ಸಾಮಾನ್ಯವಾಗಿ ತಲೆನೋವಿಗೆ ಒಂದೆರಡು ಮಾತ್ರೆ ನುಂಗಿ ಸುಮ್ಮನಾಗಬಹುದು. ಇವು ತಾತ್ಕಾಲಿಕ ಮತ್ತು ಅಪಾಯಕಾರಿ. ಫ್ಯಾಮಿಲಿ ಫಿಸಿಶಿಯನ್‌ಗಳ ನೆರವು ಪಡೆಯುವುದು ಒಳಿತು. ಸಿ.ಟಿ. ಸ್ಕ್ಯಾನ್ ಅಥವಾ ಎಂಆರ್‌ಐ ಮುಂತಾದ ತಪಾಸಣೆ ಮೂಲಕ ನೋವಿಗೆ ಕಾರಣ ಹುಡುಕಿ, ತಜ್ಞರ ಬಳಿ ಕಳುಹಿಸುತ್ತಾರೆ.
ತಲೆನೋವಿಗೆ ತಡೆ
- ತಲೆನೋವಿಗೆ ಕಾರಣ ಏನೇ ಇರಲಿ, ಮೊದಲು ಫ್ಯಾಮಿಲಿ ಫಿಸಿಶಿಯನ್ರಿಂದ ಸಲಹೆ ಪಡೆಯಿರಿ.
- ತಲೆನೋವು ಸೃಷ್ಟಿಸುವ ತಿನಿಸುಗಳನ್ನು ನಿಯಂತ್ರಿಸಿ. ಉದಾಹರಣೆಗೆ ಥಂಡಿ ಪದಾರ್ಥ, ಪಾನೀಯಗಳು, ತರಕಾರಿ, ಹಣ್ಣು ಇತ್ಯಾದಿ.
- ಮೈಗ್ರೇನ್ಗೆ ಕಾರಣ ಅರಿತರೆ ಪೂರ್ವಯೋಜಿತವಾಗಿ ತಡೆಯಬಹುದು. ಯೋಗ, ಧ್ಯಾನ, ವಿಶ್ರಾಂತಿ, ಪ್ರಾಣಾಯಾಮ ನಿತ್ಯ ರೂಢಿಸಿಕೊಳ್ಳಿ.
- ಹೈಪರ್ ಟೆನ್ಷನ್ ಹೆಡ್ಏಕ್ ಇದ್ದಲ್ಲಿ 35 ವರ್ಷ ದಾಟಿದ ಬಳಿಕ ರೆಗ್ಯುಲರ್ ಆಗಿ ಬಿಪಿ ಚೆಕ್ ಮಾಡಿಸಿ.
- ತಲೆಶೊಲೆ ಜೊತೆಗೆ ವಾಂತಿ, ಪ್ರಜ್ಞಾಹೀನತೆ ಇದ್ದಾಗ ಫ್ಯಾಮಿಲಿ ಫಿಸಿಶಿಯನ್ರ ಸಲಹೆ ಮೇರೆಗೆ ತಜ್ಞರನ್ನು ಕಾಣಿರಿ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.