ನಂದಳಿಕೆಯ ಹೆಂಚಿನ ಮನೆ
'ಅರಮನೆಯಂ ಪೊರಮೊಟ್ಟು, ಪತ್ನಿ ಕಾಲಿಗೆ ನೀರನಿಟ್ಟು, ಕುಡಿಯಲಿಕೆ ತನಿವಾಲು ಬಾಳೆಹಣ್ಣು ಇತ್ತು, ರಸಗವಳವನ್ನಿತ್ತು...'
ಅರಸನಿಗೆ ಕತೆ ಹೇಳಿ 'ಪೊನ್ನ ಕಡಗವಂ' ಬಹುಮಾನ ಪಡೆದು ಬಂದ ಘನ ಕವಿಗೆ ಪತ್ನಿ ಉಪಚರಿಸುವುದನ್ನು ಮಹಾಕವಿ ಮುದ್ದಣ 'ರಾಮಾಶ್ವಮೇಧ'ದಲ್ಲಿ ಹೀಗೆ ಬಣ್ಣಿಸಿದ್ದಾರೆ. 'ಹೊಸಗನ್ನಡದ ಮುಂಗೋಳಿ' ಖ್ಯಾತಿ ಈ ಕವಿಗೆ. ಮುದ್ದಣಗೆ ದಾರಿದ್ರ್ಯಲಕ್ಷ್ಮಿಯೇ ಜತೆಗಾರ್ತಿ. ಮುಡಿ ಅಕ್ಕಿ ಪಂಥಕ್ಕಾಗಿ ತಲೆ ಮೇಲೆ ಮತ್ತೊಂದು ಸೊಂಟದ ಮೇಲೆ ಏಕಕಾಲಕ್ಕೆ ಎತ್ತಿದ ಬಲಶಾಲಿ ಮುದ್ದಣ ಸಾಯುವವರೆಗೂ ಬಡವ. 31ನೇ ವಯಸ್ಸಲ್ಲಿ ಕ್ಷಯರೋಗಕ್ಕೆ ಈಡಾಗಿ ಮರಣ ಅಪ್ಪಿದರು. ಕೃತಿ ಬರೆಯುವ ಖರ್ಚಿಗಾಗಿ ಹಣ ಉಳಿಸಲು ಊಟವನ್ನೇ ಬಿಡುತ್ತಿದ್ದರು. ಅಂಥ ಕವಿ ಬಗ್ಗೆ ಈಗ ಸರ್ಕಾರಕ್ಕೆ ಕಾಳಜಿ ಇಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ನಂದಳಿಕೆಯಲ್ಲಿ ಮದ್ದಣ ಹುಟ್ಟಿದರು. ನಂದಳಿಕೆ ದೇಗುಲಕ್ಕೆ ಫರ್ಲಾಂಗ್ ದೂರದಲ್ಲಿ ಮುದ್ದಣರ ಮನೆ. ಅಂದು ಮುದ್ದಣ ವಾಸಿಸುತ್ತಿದ್ದ ಹುಲ್ಲಿನ ಮನೆ ಈಗ ಹೆಂಚಿನ ಮನೆಯಾಗಿದೆ. ದೇಗುಲದ ಪಕ್ಕದಲ್ಲೇ ಸ್ಮಾರಕ ಭವನ, ಗ್ರಂಥಾಲಯ ನಿರ್ಮಿಸಲಾಗಿದೆ. ಸಮೀಪದಲ್ಲೇ ಮುದ್ದಣ ವನಕ್ಕಾಗಿ 4 ಎಕರೆ ಜಾಗ ಮೀಸಲಿರಿಸಲಾಗಿದೆ.
ಉಡುಪಿಯಲ್ಲಿ ಮತ್ತು ನಂದಳಿಕೆ ಗೆಳೆಯರ ವತಿಯಿಂದ ಮುದ್ದಣ ಹೆಸರಲ್ಲಿ 2 ಪ್ರಶಸ್ತಿ ವರ್ಷಂಪ್ರತಿ ನೀಡಲಾಗುತ್ತಿದೆ. ಕ್ರಿಶ್ಚಿಯನ್ ಹೈಸ್ಕೂಲ್ನಲ್ಲಿ ಮುದ್ದಣ ಹೆಸರಲ್ಲಿ ರಂಗಮಂದಿರ ನಿರ್ಮಿಸಲಾಗಿದೆ. ಮುದ್ದಣ ಸ್ಮಾರಕ ನಿರ್ಮಿಸಲು 1958ರಲ್ಲಿ ಟಿಎಪೈ ಶಿಲಾನ್ಯಾಸ ಮಾಡಿದ್ದರು. 29 ವರ್ಷಗಳ ಬಳಿಕ ಉದ್ಘಾಟನೆಗೊಂಡಿತು. ಈಗ 23 ವರ್ಷ ಕಳೆದಿದ್ದು, ಸ್ಮಾರಕ ಮತ್ತೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಮುದ್ದಣ ಮೂಲ ಹೆಸರು ನಂದಳಿಕೆ ಲಕ್ಷ್ಮೀನಾರಾಯಣಪ್ಪ. ಇವರ ಮಗ ರಾಧಾಕೃಷ್ಣಯ್ಯ ಭದ್ರಾವತಿಯ ಕಾಲೇಜಿನ ಉಪನ್ಯಾಸಕರಾಗಿದ್ದರು. ಅವರ ಮಗ ಶ್ರೀನಿವಾಸಮೂರ್ತಿ ಬೆಂಗಳೂರಲ್ಲಿ ಉದ್ಯೋಗದಲ್ಲಿದ್ದರು. ಶ್ರೀನಿವಾಸಮೂರ್ತಿ ಅವರ ಮಕ್ಕಳು ಬೆಂಗಳೂರು ಮತ್ತು ಮೈಸೂರಲ್ಲಿದ್ದಾರೆ. ಶ್ರೀನಿವಾಸಮೂರ್ತಿ ಆಗಾಗ ಮೂಲ ಮನೆಗೆ ಬರುತ್ತಿದ್ದರು. ಈಗ ಮುದ್ದಣನ ವಂಶಜರು ಯಾರೂ ಬರುತ್ತಿಲ್ಲ. ಮುದ್ದಣನ ಮನೆಯಲ್ಲಿ ಅವರ ಸಮುದಾಯದವರು ವಾಸ್ತವ್ಯ ಇದ್ದಾರೆ, ಮುದ್ದಣನ ಸಂಬಂಧಿಕರಲ್ಲ. ಮುದ್ದಣ ಮೂಲ ಕೃತಿಗಳು ಉಡುಪಿ ಮಂಜೇಶ್ವರ ಗೋವಿಂದ ಪೈ ಸಂಶೋಧನೆ ಕೇಂದ್ರ, ಮುದ್ದಣ ಪ್ರಕಾಶನ, ಸ್ಮಾರಕ ಭವನದಲ್ಲಿ ಇದೆ.
'ಆದಾಯ ಮನೆ ಬಾಡಿಗೆ, ಸಂಸಾರದ ಖರ್ಚಿಗೆ ಸರಿಹೋಗುತ್ತಿತ್ತು. ಹಣವನ್ನು ಕೇಳಿಪಡೆಯುವ ಗುಣದವರು ಆಗಿರಲಿಲ್ಲ ಮುದ್ದಣ. ಕಿತ್ತು ತಿನ್ನುವ ಬಡತನ. ಅನ್ನಾಹಾರ ಕೊರತೆಯಿಂದ ಕ್ಷಯರೋಗಕ್ಕೆ ಬಲಿಯಾಗುತ್ತಾರೆ. ಮುದ್ದಣ ಮನೋರಮೆ ಸಲ್ಲಾಪದಲ್ಲಿ 'ಭವತಿ ಭಿಕ್ಷಾಂದೇಹಿ' ಎಂದು ನೀಡಿದ ವಿವರಣೆಯಲ್ಲಿ ಅವರ ನಿಜ ಜೀವನ ಚಿತ್ರಣವನ್ನು ತೆರೆದಿಟ್ಟಿದ್ದಾರೆ' ಎನ್ನುತ್ತಾರೆ ಕವಿ ಮುದ್ದಣ ಬಗ್ಗೆ ಅಪಾರ ಮಾಹಿತಿ ಕಲೆಹಾಕಿರುವ ನಂದಳಿಕೆ ಸುರೇಶ್ ರಾವ್. 'ಬಡವ, ರೋಗಿಯೊಬ್ಬ ಕೃತಿ ಬರೆದರೆ ಘನ ವಿದ್ವಾಂಸರು ಒಪ್ಪುವ ಸಾಧ್ಯತೆ ಇಲ್ಲ ಎಂಬ ಕಾರಣಕ್ಕೆ ಕಾವ್ಯನಾಮದಲ್ಲಿ ಬರೆಯುತ್ತಿದ್ದರು' ಎನ್ನುತ್ತಾರೆ ಸುರೇಶ್.
- ಜಿತೇಂದ್ರ ಕುಂದೇಶ್ವರ
ಚಿತ್ರಕೃಪೆ: ಹೇಮನಾಥ್ ಪಡುಬಿದ್ರಿ