ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅನಾಥ ಭವನ!

Lingaraj Badiger
Updated On : 17 Dec 2013, 6:41 am

ರಸಋಷಿ ಕುವೆಂಪು ಭೂಸ್ಪರ್ಶ ಮಾಡಿದ್ದು ತಾಯಿಯ ತವರು ಹಿರೇಕೊಡಿಗೆಯಲ್ಲಿ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕುಗ್ರಾಮವದು. ಕುವೆಂಪು ಬಾಲ್ಯದ ದಿನಗಳಲ್ಲಿ ಇಲ್ಲಿಗೆ ಬಂದು ಕಳೆಯುತ್ತಿದ್ದರು ಬಿಟ್ಟರೆ ಮತ್ತೆ ಬಂದಿದ್ದು ಅವರ ಇಳಿವಯಸ್ಸಿನಲ್ಲಿ.

ಕುವೆಂಪು ನಕ್ಕ ಕ್ಷಣ
ಒಮ್ಮೆ ಕುವೆಂಪು ಶಿವಮೊಗ್ಗದ ರತ್ನಾಕರರ ಮನೆಗೆ ಬಂದಾಗ ಹಿರೇಕೂಡಿಗೆಗೆ ಭೇಟಿ ನೀಡಿದರಂತೆ. ಆಗ ಅವರ ತಾಯಿಯ ಮನೆ ನೆಲಸಮವಾಗಿ ಗೊಬ್ಬರ ಗುಂಡಿಯಾಗಿತ್ತು. ಇದನ್ನು ಕಂಡ ಕುವೆಂಪು ಜೋರಾಗಿ ನಕ್ಕು ಹಣೆಯ ಮೇಲೆ ಕೈ ಇಟ್ಟು, 'ಅಯ್ಯಯ್ಯೋ, ನಾನೀ ಗೊಬ್ಬರದ ಗುಂಡೀಲಿ ಹುಟ್ಟಿದೆನಾ ಮಾರಾಯ್ರ!' ಎಂದರಂತೆ. ಮುಂದೆ ತೋಟವನ್ನು ಸುತ್ತಾಡುತ್ತ ಬಾಲ್ಯದಲ್ಲಿ ಪರಿಚಿತವಾಗಿದ್ದ ತೆಂಗಿನ ಮರ ನೋಡಿ ಗಟ್ಟಿಯಾಗಿ ನಗಲಾರಂಭಿಸಿದರಂತೆ. 'ಯಾಕೆ ನಗುತ್ತಿರುವುದು?' ಎಂದು ಜೊತೆಯಲ್ಲಿದ್ದ ರತ್ನಾಕರ್ ಕೇಳಿದಾಗ, "ನಾನು ನಗುತ್ತಿಲ್ಲ. ಈ ತೆಂಗಿನ ಮರ ನಗ್ತಾ ಇದೆ; 'ಅಲ್ಲಾ ಹಿಂದೆ ನಾ ನೋಡ್ತ ಇದ್ದ ಹುಡುಗ ಇವನು. ಈ ಸಣ್ಣ ಪೋರ ನನ್ನ ಬುಡದ ಬಳಿ ಓಡಾಡಿ ಉಚ್ಚೆಗಿಚ್ಚೆ ಹೊಯ್ದು, ಏನೇನೋ ಮಾಡ್ಕೊಂಡು ಆಡ್ತಿದ್ದ. ಇಂದು ತಲೆ ಕೂದಲೆಲ್ಲಾ ಹಣ್ಣಾಗಿ, ಮುದಿಯ ಆಗಿ ಬಂದಿದ್ದಾನೆ. ನಾನು ಇದ್ದ ಹಾಗೆ ಇದ್ದೀನಿ' ಅಂತ ಹೇಳಿ ನಗುತ್ತಾ ಇದೆ" ಎಂದರಂತೆ ಕುವೆಂಪು!

ಅನಾಥ ಭವನ
1989 ಜೂನ್ 19ರಂದು ಡಾ.ಡಿ. ಜವರೇಗೌಡರು ಇಲ್ಲಿ ಕುವೆಂಪು ಸಂದೇಶ ಭವನಕ್ಕಾಗಿ ಶಿಲಾನ್ಯಾಸ ಮಾಡಿದರು. 1991ರಲ್ಲಿ ಕುವೆಂಪು ಪುತ್ತಳಿ, ಸಂದೇಶಭವನ ಲೋಕಾರ್ಪಣೆಯಾಯಿತು. 2011ರಲ್ಲಿ ಬಿ.ಎಸ್. ಯಡಿಯೂರಪ್ಪ ಸರ್ಕಾರ 1 ಕೋಟಿ ರು.ನಲ್ಲಿ ಭವನಕ್ಕೆ ಸುಂದರ ಚಾವಣಿ, ಗ್ರಂಥಾಲಯ, ಅತಿಥಿ ಗೃಹ, ವಸತಿ ಗೃಹ, ವಿಶ್ವಮಾನವ ಸಭಾಂಗಣಗಳನ್ನು ನಿರ್ಮಿಸಿತು. ಆದರೆ, ಆ ಕಳಪೆ ಕಾಮಗಾರಿಯಿಂದ ಈಗ ಕಟ್ಟಡ ಬಿರುಕು ಬಿಟ್ಟಿದೆ. ಸರಿಯಾದ ಚರಂಡಿ ವ್ಯವಸ್ಥೆಯಿಲ್ಲ. ಮಳೆಗಾಲದಲ್ಲಿ ಸಂದೇಶ ಭವನದೊಳಗೆ ನೀರು ನುಗ್ಗುತ್ತದೆ. ಪಕ್ಕದಲ್ಲಿನ ಗುಡ್ಡ ಜರಿದು ಬೀಳುತ್ತಿದೆ. ತಡೆಗೋಡೆಯನ್ನೂ ನಿರ್ಮಿಸಿಲ್ಲ. 'ನಿರ್ವಾಹಕರು ಇಲ್ಲದೆ ಅನಾಥವಾಗಿದೆ ಭವನ' ಎನ್ನುತ್ತಾರೆ ಸ್ಥಳೀಯರು.

ಜನ್ಮದಿನದ ನೆಪ
ಸಂದೇಶ ಭವನದ ಪಕ್ಕದ 10 ಎಕರೆ ಅರಣ್ಯ ಪ್ರದೇಶದಲ್ಲಿ ಜೈವಿಕ ಉದ್ಯಾನ ನಿರ್ಮಿಸಿ, ಕುವೆಂಪು ಕಾಲದ ಸಸ್ಯ ಪ್ರಭೇದ ಬೆಳೆಸಲು ಉದ್ದೇಶಿಸಲಾಗಿತ್ತು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ  ಇಂದಿಗೂ ಕಾರ್ಯಗತವಾಗಿಲ್ಲ. ಸಂದೇಶ ಭವನದ ಅಭಿವೃದ್ದಿ ಪಡಿಸಿದ ಬಳಿಕ ಕುಪ್ಪಳಿಯ ಕುವೆಂಪು ಪ್ರತಿಷ್ಠಾನಕ್ಕೆ ಹಸ್ತಾಂತರಿಸಲಾಗುತ್ತೆ ಅಂತಲೂ ಹೇಳಲಾಗಿತ್ತು. ಈ ಬಗ್ಗೆಯೂ ಯಾರೂ ಆಸಕ್ತಿ ತೋರುತ್ತಿಲ್ಲ. ರಾಜಕಾರಣಿಗಳಿಗೆ ಹಾಗೂ ಕಸಾಪಕ್ಕೆ ಕುವೆಂಪು ಜನ್ಮದಿನದ ವೇಳೆಯಷ್ಟೇ ಹಿರೇಕೊಡಿಗೆ ನೆನಪಾಗುತ್ತದೆ. ರಾಷ್ಟ್ರಕವಿಯ ಹುಟ್ಟಿದ ನೆಲದ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಲೇಬೇಕು. ಕಡೇಪಕ್ಷ ಕುಪ್ಪಳಿಯ ಕುವೆಂಪು ಪ್ರತಿಷ್ಠಾನಕ್ಕಾದರೂ ಇದರ ಹೊಣೆ ವಹಿಸಬೇಕು.

- ದಯಾನಂದ್ ಮಡಿವಾಳ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments