ತಾಳಿದವನು ಬಾಳಿಯಾನು!
ತಾಳಿ ಸಿದ್ಧಗೊಳಿಸುವ ಅಬ್ದುಲ್ ಸಾಬ್ ಅವರ ಎಕ್ಸ್ಪೀರಿಯೆನ್ಸ್ ಕೇಳಿದ್ರೆ, '75 ವರ್ಷ ಆಯ್ತು' ಅಂತ ನಗುತ್ತಾರೆ....
ವಿವಾಹವೆಂದರೆ ಒಂದು ಸಂಬಂಧದ ಶಾಶ್ವತ ನೆಲೆ. ಮದುವೆಯ ಸಂಕೇತ ತಾಳಿ. ಆದರೆ, ಅದನ್ನು ಸಿದ್ಧಗೊಳಿಸುವವನಿಗೆ ಒಂದು ನೆಲೆಯೇ ಇಲ್ಲ!
ದಿನ ಬೆಳಗಾದರೆ ಕೈಯಲ್ಲಿ ಕೊಡೆ, ಹೆಗಲಿಗೊಂದು ಟ್ರಂಕು ನೇತುಹಾಕಿ, ಇನ್ನೂ ತೆರೆಯದ ಅಂಗಡಿ ಮುಂದೆ ಅಥವಾ ಗಿಡದ ನೆರಳಲ್ಲಿ ಕಾಣುವ ಖಾಲಿ ಜಾಗ ಅರಸಿ, ಟ್ರಂಕು ಇಳಿಸಿ, ಕೊಡೆ ಏರಿಸಿ ತಾಳಿ ಪೋಣಿಸುತ್ತಾರೆ ಆ ಅಜ್ಜ. ವಿಶೇಷವೆಂದರೆ, ಇವರು ಹಿಂದುವೂ ಅಲ್ಲ. ಮಾನವೀಯತೆಯ ನೆಲೆಯಲ್ಲಿ ಕಾಯಕವನ್ನು ದೇವರೆಂದುಕೊಂಡವರು. ಹುಬ್ಬಳ್ಳಿಯ ಘಂಟೀಕೇರಿ ರಸ್ತೆಯ ಅಕ್ಕಪಕ್ಕದಲ್ಲಿ 85 ವರ್ಷದ ಅಬ್ದುಲ್ ಸಾಬ್ ಯಾಕೂಬ್ ಸಾಬ್ ಪಟವೆಗಾರ ಇಂಥ ಅಚ್ಚರಿಯ ಶ್ರಮಜೀವಿ.
ಹತ್ತರಿಂದ ಶುರುಮಾಡಿದ್ರು...
ತಾಳಿ ಸಿದ್ಧಗೊಳಿಸುವ ಅಬ್ದುಲ್ ಸಾಬ್ ಅವರ ಎಕ್ಸ್ಪೀರಿಯೆನ್ಸ್ ಕೇಳಿದ್ರೆ, '75 ವರ್ಷ ಆಯ್ತು' ಅಂತ ನಗುತ್ತಾರೆ. ಅಂದರೆ, ಇವರು 10ನೇ ವಯಸ್ಸಿನಿಂದ ಹೀಗೆ ತಾಳಿಯೊಂದಿಗೆ ಸಂಬಂಧ ಇಟ್ಟುಕೊಂಡರಂತೆ. ಬಣ್ಣ ಬಣ್ಣದ ದಾರಗಳೊಂದಿಗೆ ತಾಳಿ, ಬೋರ್ ಮಾಳ, ಮುತ್ತು, ಗುಂಡು, ಟೀಕಿ, ವಾಲಿಸರ ನೆಕ್ಲೇಸ್, ಮುತ್ತಿನ ಸರಕ್ಕೆ ಗುಂಡುಗಳನ್ನು ಮುದ್ದು ಮುದ್ದಾಗಿ ಪೋಣಿಸುತ್ತಾರೆ. ವಯಸ್ಸು ಇಳಿದರೂ ಅಬ್ದುಲ್ರ ಕಾಯಕದ ನಿಪುಣತೆ ಮಾಗಿದೆ.
ಕ್ಷಣದಲ್ಲೇ ತಯಾರು
ನೀವು ಹೇಳಿದ ಗಾತ್ರ, ವಿನ್ಯಾಸದಲ್ಲಿ ಕ್ಷಣಾರ್ಧದಲ್ಲಿ ಸರ ಪೋಣಿಸಿ ನಿಮ್ಮ ಕೈಗಿಡುತ್ತಾರೆ. ಆರಂಭದಲ್ಲಿ ದಿನಕ್ಕೆ 50 ಪೈಸೆಯಿಂದ ದುಡಿಮೆ. ದಿನಕ್ಕೆರಡು ತಾಳಿ, 2 ಟೀಕಿ, ಒಂದೆರಡು ನೆಕ್ಲೇಸ್ ಪೋಣಿಸುತ್ತಾರೆ. 'ಆಗ ಅಷ್ಟೊಂದು ವಾಹನಗಳ ಗದ್ದಲ, ಮೋಸ, ಕಪಟ ಇರಲಿಲ್ಲ. ದಿನವಿಡೀ ದುಡಿದು, ಸಂಜೆ ಹೊತ್ತಿಗೆ ರು. 30ರಿಂದ 50 ಸಂಪಾದಿಸಿ, ಮನೆಗೆ ಮರಳುತ್ತೇನೆ' ಎನ್ನುವ ಅಬ್ದುಲ್, ಬದಲಾದ ಕಾಲವನ್ನೂ ಕಣ್ಣೊಳಗೆ ತುಂಬಿಕೊಂಡಿದ್ದಾರೆ.
ಹಳ್ಳಿಗರೇ ಅನ್ನದಾತರು
ಈಗವರಿಗೆ ದಿನವಿಡೀ ಕೂತರೆ ರು. 200 ಸಂಪಾದನೆ ಆಗುತ್ತದೆ. ಆಶ್ರಯ ನೀಡಿದ ಅಂಗಡಿಯ ನೆರಳಿನ ಮಾಲೀಕನಿಗೆ ರು. 50, ಕೆಲವರಿಗೆ ಮಾಮೂಲಿ ನೀಡಲೇಬೇಕಂತೆ. ವಯಸ್ಸಿನ ಕಾರಣಕ್ಕಾಗಿ ಕಣ್ಣು ಮುಂಜಾಗುತ್ತಿದೆ. 'ನಾಳೆ ಪೋಣಿಸಿ ಕೊಡುತ್ತೇನೆ, ಬನ್ನಿ' ಎಂದರೆ ಬಂಗಾರದ ಸಾಮಾನು ಬಿಟ್ಟು ಹೋಗಲು ಯಾರೂ ಒಪ್ಪುವುದಿಲ್ಲ. ಇದೂ ಇವರಿಗೆ ಸಮಸ್ಯೆ. 'ನಾಳೆ ಎಲ್ಲಿರುತ್ತೀ ಅಂತ ನಿನಗೇ ಗೊತ್ತಿರುವುದಿಲ್ಲ. ಅಂಥದ್ದರಲ್ಲಿ ನಾವು ಎಲ್ಲಂತ ಹುಡುಕೋಣ' ಎಂಬ ಉತ್ತರ ಆ ಕಡೆಯಿಂದ ಬರುತ್ತದೆ. 'ಜನ ಈಗೀಗ ಫ್ಯಾನ್ಸಿ ಒಡವೆಗಳಿಗೆ ಮಾರು ಹೋಗಿದ್ದಾರೆ. ಮೊದಲೆಲ್ಲ ಪವಟೆಗಾರರು ಪೋಣಿಸಿದ ತಾಳಿಯೇ ಮದುವೆಗೆ ಬೇಕಾಗಿತ್ತು. ಈಗ ಹಳ್ಳಿಯಿಂದ ಬರುವ ಜನ ಮಾತ್ರ ಕೆಲವೊಂದು ಸರಗಳನ್ನು ಪೋಣಿಸಿಕೊಂಡು ಹೋಗುತ್ತಾರೆ. ಪಟ್ಟಣಿಗರು ರಸ್ತೆ ಬದಿಯಲ್ಲಿ ಬಿಸಿಲಲ್ಲಿ ನಿಲ್ಲಲು ಮುಜುಗರಪಡುತ್ತಾರೆ. ಹೀಗಾಗಿ ಹಳ್ಳಿಗರಿಂದಲೇ ಅನ್ನ ಸಿಗುತ್ತಿದೆ' ಎಂಬುದು ಈ ಅಜ್ಜನ ಹಸಿವಿನ ಮಾತು.
ಠಿಕಾಣಿ ಹೂಡಿದ ಬಡತನ
ನೂರಾರು ಜನರ ಬಾಳಿಗೆ ಕೊಂಡಿಯಾಗಿ, ಅಂದ ಹೆಚ್ಚಿಸುವ ಅಬ್ದುಲ್ ಸಾಬ್ರ ಬದುಕು ಮಾತ್ರ ನಿಂತ ನೀರು. ಜೀವನಪೂರ್ತಿ ದುಡಿದರೂ ಇಂದಿಗೂ ಮೂರು ಹೊತ್ತಿನ ನೆಮ್ಮದಿ ಕಂಡುಕೊಳ್ಳಲಾಗಿಲ್ಲ. ಬಡತನ ಇವರ ಮನೆಯಲ್ಲಿ ಶಾಶ್ವತ ಠಿಕಾಣಿ ಹೂಡಿದೆ. ಒಬ್ಬ ಗಂಡು ಮಗ, ಐವರು ಹೆಣ್ಣು ಮಕ್ಕಳಿದ್ದಾರೆ. ಆಸ್ತಿಯಂತೂ ಒಂಚೂರೂ ಇಲ್ಲ. ಇದೇ ಕಸುಬನ್ನು ನಂಬಿಕೊಂಡು ಜೀವನ ನಡೆಸುವುದು ಕಷ್ಟವಾಗಿದೆ. ಆದರೂ ಅನಿವಾರ್ಯತೆಯಿಂದ ಕಣ್ಣು ಸರಿಯಾಗಿ ಕಾಣಿಸದ ಅಬ್ದುಲ್ ಸಾಬ್ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. ಶಾಲಾ ರಜಾ ದಿನಗಳಲ್ಲಿ ಮಗ ಒಂದಿಷ್ಟು ಆಸರೆಯಾಗುತ್ತಾನೆ. ಬಿಟ್ಟರೆ ಮತ್ತದೇ ಟ್ರಂಕು, ಅಂಗಡಿ ಮುಗ್ಗಟ್ಟು, ಮರದ ನೆರಳಲ್ಲಿ ಮತ್ತದೇ ತಾಳಿ ಪೋಣಿಸುವ ನಿತ್ಯ ಕಾಯಕ...
- ಡಿ. ಹೇಮಂತ್
dhemanth06@gmail.com