ನಲ್ಲೆಯ ಸಾದೃಶ್ಯ
ವಿರಹಿಗಳಿಗೆ ಲೋಕದಲ್ಲಿ ಎಲ್ಲಿ ನೋಡಿದರೂ ತಮ್ಮ ಪ್ರಿಯತಮ- ಪ್ರಿಯತಮೆಯರೇ ಕಾಣಿಸುತ್ತಾರೆ. ಹೀಗೆ ಕಾಣಿಸುವುದು ದುರ್ಬಲ ಮನಸ್ಸಿನ ಪ್ರತೀಕ ಇರಬಹುದು, ಅಥವಾ ಅವರ ಪ್ರೇಮದ ಗಾಢತೆಯ ಪ್ರತಿಬಿಂಬ ಇರಬಹುದು, ಅಥವಾ ಚಿತ್ತಭ್ರಮೆಯೂ ಇರಬಹುದು. ಇದರಿಂದಾಗುವ ಒಂದು ಉಪಯೋಗವೆಂದರೆ ಪ್ರೇಮದ ಕಾವಿನ ತಾತ್ಕಾಲಿಕ ಉಪಶಮನ.
ಮೇಘದೂತದ ನಾಯಕ ಯಕ್ಷನೂ ಇಂಥವನೇ. ಅವನಿಗೆ ಎಲ್ಲೆಂದರಲ್ಲಿ ತನ್ನ ನಲ್ಲೆಯೇ ಕಾಣಿಸುತ್ತಾಳೆ. ಅದು ಹೇಗೆಂದರೆ:
ಶ್ಯಾಮಾಸ್ವಂಗಂ ಚಕಿತಹರಿಣೀಪ್ರೇಕ್ಷಣೇ ದೃಷ್ಟಿಪಾತಂ
ವಕ್ತ್ರಚ್ಛಾಯಾಂ ಶಶಿನಿ ಶಿಖಿನಾಂ ಬರ್ಹಭಾರೇಷು ಕೇಶಾನ್
ಉತ್ಪಶ್ಯಾಮಿ ಪ್ರತನಷು ನದೀವೀಚಿಷು ಭ್ರೂವಿಲಾಸಾನ್
ಹಂತೈಕಸ್ಮಿನ್ ಕ್ವಚಿದಪಿ ನ ತೇ ಚಂಡಿ ಸಾದೃಶ್ಯಮಸ್ತಿ
ಮರಕ್ಕೆ ಹಬ್ಬಿ ಹರಡಿರುವ ಬಳ್ಳಿಯಲ್ಲಿ ಆಕೆಯ ತೆಳುವಾದ ಕೋಮಲ ತನು. ಕಾಡಿನಲ್ಲಿ ಅತ್ತಿತ್ತ ಚಪಲಚಿತ್ತದಿಂದ ಜಿಗಿದಾಡುತ್ತ ಓಡಾಡುವ ಜಿಂಕೆಗಳ ಚಕಿತನಯನಗಳಲ್ಲಿ ಆಕೆಯ ಕಣ್ಣುಗಳು. ಹುಣ್ಣಿಮೆಯ ರಾತ್ರಿ ಆಕಾಶ ಬೆಳಗುವ ಚಂದ್ರನಲ್ಲಿ ಆಕೆಯ ತಂಪಾದ ಮುಖ. ಮೋಡ ಕಂಡು ಗರಿ ಬಿಚ್ಚಿ ತೊನೆಯುವ ನವಿಲಿನ ನಲಿವಿನ ಸೋಗೆಯಲ್ಲಿ ಆಕೆಯ ಬಿಚ್ಚಿದ ಜಡೆ. ದಡಕ್ಕೆ ಬಂದು ತಗುಲಿ ಮರಳುತ್ತಿರುವ ನದಿಯ ಅಲೆಗಳಲ್ಲಿ ಆಕೆಯ ಹುಬ್ಬಿನ ಏರಿಳಿತ ಸಂಭ್ರಮ. ಆಕೆಯನ್ನು ತಾನಿದ್ದಲ್ಲೇ ಕಾಣಲು ಇಷ್ಟೆಲ್ಲ ನೆವಗಳಿವೆಯಾದರೂ, ಇವೆಲ್ಲ ಒಟ್ಟಾಗಿ ಸೊಗಯಿಸುವ ನಲ್ಲೆಯ ತನುವಿನ ಮನೋಜ್ಞತೆ ಅವುಗಳಲ್ಲಿ ಬರುವುದಾದರೂ ಹೇಗೆ?
ಅದು ನಿಜ. ತುಟಿ ನೋಡಿದರೆ ತೊಂಡೆಹಣ್ಣಿನ ಸದೃಶತೆ ಕಂಡು ಮೈ ಬಿಸಿಯಾಗಬಹುದು, ತೊಂಡೆಹಣ್ಣು ನೋಡಿದರೆ ಮೈ ಬಿಸಿಯಾದೀತೆ?
- ಹರಿಹರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.