ಹೃದಯವಂತಿಕೆಯ ಜೀವಂತ ರೂಪ!
ಗಿರೀಶ್‌ಚಂದ್ರ ಘೋಷ್ ಶ್ರೀರಾಮಕೃಷ್ಣರ ಪರಮಭಕ್ತ. ರಾಮಕೃಷ್ಣರನ್ನು 'ಅವತಾರಪುರುಷ' ಎಂದು ಸಾರಿದವನು. ತ್ರೇತಾಯುಗದ ರಾಮನು, ದ್ವಾಪರದ ಕೃಷ್ಣನು ಕಲಿಯುಗದಲ್ಲಿ ರಾಮಕೃಷ್ಣರಾಗಿ ಅವತರಿಸಿದ್ದಾರೆ ಎಂದು ನಂಬಿದವನು. ಆತ ವಿವೇಕಾನಂದರನ್ನು ಕಾಣಲು ಕೋಲ್ಕತಾಗೆ ಬಂದನು.
ಆತ ಸ್ವಾಮೀಜಿಯನ್ನು 'ನರೇನ್, ನೀನು ವೇದವೇದಾಂತಗಳನ್ನು ಸಾಕಷ್ಟು ಓದಿಕೊಂಡಿರುವವನು, ಆದರೆ ಈಗ ಹೇಳು, ಈ ದೀನ ದಲಿತರ ದಯನೀಯ ದುಃಸ್ಥಿತಿಗೆ, ದುಃಖಾರ್ತ ಜನರ ಆಕ್ರಂದನಕ್ಕೆ, ಅಸಂಖ್ಯಾತ ಹಸಿದ ಹೊಟ್ಟೆಗಳ ಕೂಗಿಗೆ, ವ್ಯಭಿಚಾರವೇ ಮೊದಲಾದ ಹೀನ ಪಾತಕಗಳಿಗೆ ಹಾಗೂ ನಾವು ದಿನಬೆಳಗಾದರೆ ಕಾಣುವ ಇತರ ಅನೇಕ ಬಗೆಯ ದುಷ್ಕೃತ್ಯ ದುರಾಚಾರಗಳಿಗೆ ಆ ನಿಮ್ಮ ವೇದಗಳಲ್ಲಿ ಪರಿಹಾರವೇನಾದರೂ ಇದೆಯೇ? ಅಗೋ ಅಲ್ಲಿ ನೋಡು, ಆ ಮನೆಯ ಹೆಂಗಸು ಒಂದು ಕಾಲದಲ್ಲಿ ಪ್ರತಿದಿನವೂ ಐವತ್ತು ಹೊಟ್ಟೆಗಳಿಗೆ ಅನ್ನ ಮಾಡಿ ಹಾಕುತ್ತಿದ್ದಳು: ಈಗ ಮೂರು ದಿನದಿಂದ ಅವಳಿಗೂ ಅವಳ ಮಕ್ಕಳಿಗೂ ತುತ್ತಿಗೂ ಗತಿಯಿಲ್ಲದಂತಾಗಿದೆ! ಇಲ್ಲೊಂದು ಮನೆಯಲ್ಲಿ ಯುವವಿಧವೆ ಗರ್ಭಿಣಿಯಾಗಿ ಮಾನ ಉಳಿಸಿಕೊಳ್ಳಲು ಪ್ರಾಣ ಬಿಟ್ಟಿದ್ದಾಳೆ! ಇವುಗಳನ್ನೆಲ್ಲ ತಡೆಯಲು ವೇದಗಳಲ್ಲಿ ಉಪಾಯವೇನಾದರೂ ನಿನಗೆ ಕಾಣಿಸಿದೆಯೇ?' ಎಂದು ಕೇಳಿದ.
ಆತನ ಮಾತುಗಳನ್ನು ಕೇಳಿ ಸ್ವಾಮೀಜಿ ಕಣ್ಣುಗಳು ಹನಿಗೂಡಿದವು. ಒತ್ತರಿಸಿ ಬಂದ ಭಾವನೆಗಳನ್ನು ತಡೆಯಲಾರದೆ ಸ್ವಾಮೀಜಿ ಅಲ್ಲಿಂದ ಹೊರಗೆ ನಡೆದರು. ತಮ್ಮ ಸಹಮಾನವರ ದುಃಖದ ಬಗ್ಗೆ ಮಾತನಾಡಿದೊಡನೆಯೇ ಅವರ ಕಣ್ಣಲ್ಲಿ ನೀರುಕ್ಕುವಂತೆ ಮಾಡಿತು. ಇಲ್ಲಿ ಸ್ವಾಮೀಜಿಯನ್ನು ಹೃದಯವಂತಿಕೆಯ, ಮಾನವೀಯತೆಯ ಸಾಕಾರರೂಪವಾಗಿ ಕಾಣುತ್ತೇವೆ.
- ಆನಂದ ಎಸ್.ಎನ್.
anandsn193@gmail.com