ಬಹುಮಾನ
ಗಿಫ್ಟ್ ಸೀಸನ್ ಬಂದೇ ಬಿಡ್ತು. ಆದ್ರೆ ಉಡುಗೊರೆ ಕೊಡೋಕೆ ಬೆಂಗಳೂರು ಮಂದಿಗೆ ಬೇಜಾನ್ ಕಷ್ಟವಾಗುತ್ತಿದೆಯಂತೆ!...
ಗಿಫ್ಟ್ ಸೀಸನ್ ಬಂದೇ ಬಿಡ್ತು. ಆದ್ರೆ ಉಡುಗೊರೆ ಕೊಡೋಕೆ ಬೆಂಗಳೂರು ಮಂದಿಗೆ ಬೇಜಾನ್ ಕಷ್ಟವಾಗುತ್ತಿದೆಯಂತೆ! ಏನ್ ಕೊಡೋದು ಎಂದು ನಿರ್ಧರಿಸುವುದು ಅವರಿಗೆ ಶ್ಯಾನೆ ಚಿಂತೆ. 'ಹುಡುಕದ ಗಿಫ್ಟ್ ಶಾಪ್‌ಗಳಿಲ್ಲ, ನನ್ನಾಕೆಗೆ ಕೊಡಲು ಒಂದೊಳ್ಳೆ ಗಿಫ್ಟೇ ಸಿಕ್ತಿಲ್ಲ' ಎಂದು ಹಲುಬುವವರೇ ಹೆಚ್ಚು.
ಉಡುಗೊರೆ ವಿಚಾರದಲ್ಲಿ ನಮ್ಮ ಬೆಂಗಳೂರು ಹಲವು ಅಚ್ಚರಿಗಳ ಆಗರ. ಟೈಟಾನ್ ಕಂಪನಿ ಐದು ಮಹಾನಗರಗಳ, ವಿವಿಧ ವಯೋವಾನದ 3386 ಜನರನ್ನು ಸಂದರ್ಶಿಸಿ 'ಗಿಫ್ಟಾಲಜಿ' ವರದಿ ಸಿದ್ಧಪಡಿಸಿದೆ. ಅದರಲ್ಲಿ ಗೊತ್ತಾದ ಸಂಗತಿ ಎಂದರೆ ದೇಶದ ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರಿಗರೇ ಉಡುಗೊರೆ ವಿಚಾರದಲ್ಲಿ ಹೆಚ್ಚು ಉತ್ಸುಕರು! ಆದರೆ, ಇಲ್ಲಿನವರಲ್ಲಿ ಬಹಳಷ್ಟು ಜನರಿಗೆ ಸ್ನೇಹಿತ/ಸ್ನೇಹಿತೆ ನೀಡುವ ಇನಾಮಿಗಿಂತ ಸಂಗಾತಿ ನೀಡುವ ಉಡುಗೊರೆಯೇ ಪ್ರಿಯವಂತೆ! ಆ ಅಭಿಪ್ರಾಯ ವ್ಯಕ್ತಪಡಿಸಿದವರು 10ರಲ್ಲಿ 6 ಮಂದಿ. ಅದು ಬಿಡಿ. ಫ್ರೆಂಡ್ಸ್ ನೀಡಿದ ಗಿಫ್ಟ್ ತೀರಾ ಕಳಪೆಯಾಗಿರುತ್ತದೆ ಎಂದಿದ್ದಾರೆ ಶೇಕಡಾ 37ರಷ್ಟು ಮಂದಿ!
ಇನ್ನೊಂದು ತಮಾಷೆ ಗೊತ್ತಾ? ರಾಜಧಾನಿಯಲ್ಲಿ ಗಿಫ್ಟ್ ಕೊಡೋ ಮಂದಿ ಶೇಕಡಾ 61. ಆದರೆ ಸ್ವೀಕರಿಸೋರು ಮಾತ್ರ ಶೇಕಡಾ 26! 'ಗಿಫ್ಟ್ ಕೊಡ್ತಾರಂತ ತೆಕ್ಕೊಳ್ಳೊಕೆ ಆಗತ್ತಾ? ಅದರ ಹಿಂದೆ ಏನೋ ಉದ್ದೇಶವಿರುತ್ತೆ' ಎಂಬುದು ಉಳಿದವರ ಅಭಿಪ್ರಾಯ. ಬಹುತೇಕರು ಪಡೆದ ಉಡುಗೊರೆಗೆ ಸರಿಸಮನಾದುದನ್ನೇ ನೀಡುವ ಸಲುವಾಗಿ ನೆನಪಿನಲ್ಲಿಟ್ಟುಕೊಂಡಿರುತ್ತಾರಂತೆ! ಹೆಚ್ಚು ಬೆಲೆಯ ಉಡುಗೊರೆಯಲ್ಲಿ ಪ್ರೀತಿ ಇರುವುದಿಲ್ಲ ಎನ್ನುವ ಅಭಿಪ್ರಾಯವೂ ಇದೆ.
ಇದೊಂದು ಕಲೆ
ಉಡುಗೊರೆ ಆಯ್ಕೆಯೂ ಒಂದು ಕಲೆ ಎಂಬುದನ್ನು ಈ ಮಹಾನಗರಿಯ ಮಹಿಳೆಯರು ನಿರೂಪಿಸಿದ್ದಾರೆ. ಗಿಫ್ಟ್ ಕೊಳ್ಳುವುದರಲ್ಲಿ ಅವರು ಪುರುಷರನ್ನು ಹಿಂದಿಕ್ಕಿ ಮಹಿಳೆಯರೇ ಭೇಷ್ ಎನಿಸಿದ್ದಾರೆ. ಬೆಂಗಳೂರಿನ ಅರ್ಧದಷ್ಟು ಜನ ತಮ್ಮ ಜೀವನ ಸಂಗಾತಿಗಾಗಿ ಉತ್ತಮ ಉಡುಗೊರೆ ಆಯ್ಕೆ ಮಾಡಲು ತಡವುತ್ತಾರೆ. ಸ್ನೇಹಿತರಿಗಾದ್ರೆ ಹೆಚ್ಚು ಒದ್ದಾಡಬೇಕಿಲ್ಲ ಎಂದು ಬೀಗುವವರೇ ಅಧಿಕ. ಕೇವಲ ಶೇಕಡಾ 11ರಷ್ಟು ಮಂದಿಗಷ್ಟೇ ಗೆಳೆಯರಿಗಾಗಿ ಗಿಫ್ಟ್ ಆಯ್ಕೆಮಾಡಲು ಕಷ್ಟವಂತೆ.
ಹತ್ತರಲ್ಲಿ ಇಬ್ಬರು ಅಮ್ಮನಿಗಾಗಿ ಉಡುಗೊರೆ ಕೊಳ್ಳುವುದು ಸುಲಭ ಎನ್ನುತ್ತಾರೆ. ಹತ್ತರಲ್ಲಿ ಒಬ್ಬರು ಮಾತ್ರ ಅಪ್ಪನಿಗಾಗಿ ಉಡುಗೊರೆ ಕೊಳ್ಳುವುದು ಕಷ್ಟವೆನ್ನುತ್ತಾರೆ. ಶೇಕಡಾ 26ರಷ್ಟು ಮಂದಿಗೆ ತಾವು ಹಿಂದೆ ನೀಡಿದ ಉಡುಗೊರೆಗಿಂತ ಹೆಚ್ಚಿನ ಮೌಲ್ಯದ ಉಡುಗೊರೆಗಳು ಸಿಕ್ಕಿವೆಯಂತೆ. ಇಂತಹ ಕೊಡುಕೊಳ್ಳುವಿಕೆ ಸಂಬಂಧವನ್ನು ಗಟ್ಟಿಯಾಗಿರಿಸುತ್ತವೆ ಎಂದು ಅಭಿಪ್ರಯಿಸುತ್ತಾರೆ.
ಕಚೇರಿ ಬಾಸ್‌ಗಳು ಗಿಫ್ಟ್ ಕೊಡೋದ್ರಲ್ಲಿ ತೀರಾ ಕಳಪಿಗರು! ಅವರ ರೇಟ್ ಶೇಕಡಾ 20.
ಅತಿ ಹೆಚ್ಚು ಉಡುಗೊರೆ ಕೊಡುವವರು ಪುರುಷರು. 18 ರಿಂದ 34 ವರ್ಷದೊಳಗಿನ ಯುವಕ ಯುವತಿಯರು ಅವರ ಸಂಗಾತಿಗಾಗಿ ಉತ್ತಮ ಉಡುಗೊರೆ ಕೊಳ್ಳುವುದರಲ್ಲಿ ನಿಸ್ಸೀಮರು. ಆದರೆ 35 ವರ್ಷ ಕಳೆದ ವ್ಯಕ್ತಿಗಳಿಗೆ ಮಾತ್ರ ಗಿಫ್ಟ್ ಕೊಳ್ಳುವುದು ಸವಾಲಿನ ವಿಷಯ. ವಿಸ್ಮಯಕಾರಿ ಅಂದ್ರೆ ವಯಸ್ಸಾದಂತೆ ಅಮ್ಮನಿಗೆ ಒಳ್ಳೆಯ ಉಡುಗೊರೆ ಆರಿಸುವಲ್ಲಿ ಸಬಲರಾಗುತ್ತಾರೆ. ವಯಸ್ಸಾದಂತೆ ಉಡುಗೊರೆ ಕೊಡುವ ಹಂಬಲವೂ ಹೆಚ್ಚುತ್ತದೆ. ಸಂಗಾತಿ ನೀಡುವ ಉಡುಗೊರೆಗೆ ವಯಸ್ಸಿನ ಹಂಗಿಲ್ಲ. ಅಜ್ಜಿಗೆ ಅಜ್ಜ ಕೊಟ್ಟ ಉಡುಗೊರೆಯೇ ಜೀವ!
ಪರಂಪರೆ ಮುಖ್ಯ
ಕ್ರಿಸ್‌ಮಸ್ ಮತ್ತು ಹೊಸವರ್ಷಾರಣೆಯ ದಿನಗಳಲ್ಲಿ ಉಡುಗೊರೆ ಕೊಳ್ಳುವವರು ಅಧಿಕ. ಸ್ಟೈಲಿಶ್ ಕೈಗಡಿಯಾರ, ಮುದ್ದಾದ ಗೊಂಬೆಗಳು, ಸಂಪ್ರದಾಯಬದ್ಧ ಸಾಮಾಗ್ರಿಗಳು ಇತ್ಯಾದಿಗಳನ್ನೇ ಹೆಚ್ಚಾಗಿ ಉಡುಗೊರೆಯಾಗಿ ಆರಿಸುತ್ತಾರೆ. ಉಂಗುರ, ಕಿವಿಯೋಲೆ, ಬಳೆ, ಆಭರಣ, ಡ್ರೆಸ್ ಹೀಗೆ ಹಿಂದಿನಿಂದ ಬಂದಿರುವ ಪರಂಪರೆಯನ್ನೇ ಮುಂದುವರಿಸುತ್ತಾರೆ ಹೆಚ್ಚಿನವರು. ಪೆನ್ನು, ಪುಸ್ತಕಗಳನ್ನೂ ಗಿಫ್ಟಾಗಿ ಪರಿಗಣಿಸುತ್ತಾರೆ. ಒಳ್ಳೆಯ ಪುಸ್ತಕ, ಶೈಕ್ಷಣಿಕ ಪರಿಕರಗಳಿಗೆ ವಿದ್ಯಾವಂತರು ಮೊರೆ ಹೋಗುತ್ತಾರೆ. ಮನೆ ಬಳಕೆಯ ವಸ್ತುಗಳನ್ನು ಗಿಫ್ಟಾಗಿ ಕೊಡುವುದು ಮಾಮೂಲಿ. ಕೆಲವು ಮದುವೆಗಳಲ್ಲಿ ಶುಭಹಾರೈಸುತ್ತಾ ಒಂದಿಷ್ಟು ಹಣವನ್ನು ಕವರ್‌ನಲ್ಲಿ ಹಾಕಿ ಕೊಡುವ ಸಂಪ್ರದಾಯ ಬೆಳೆದು ಬರುತ್ತಿದೆ. ಉಡುಗೊರೆ ಪಡೆಯುವವರು ಮಾತ್ರ 'ಟೇಸ್ಟೇ ಇಲ್ಲ!' ಎಂದು ಬಿಡುತ್ತಾರೆ.
ಉಡುಗೊರೆ!
ತುಂಬಾ ಹುಡುಗಿಯರು ಲವರ್ ಕೊಟ್ಟ ಗಿಫ್ಟನ್ನು ಬಚ್ಚಿಡಲು ಹರಸಾಹಸ ಪಡುತ್ತಾರೆ! ಮನೆಯಲ್ಲಿ ಫ್ರೆಂಡ್ ಕೊಟ್ಟಿದ್ದೆಂದು ಸುಳ್ಳು ಹೇಳುತ್ತಾರೆ. ಕೆಲವೊಮ್ಮೆ ಒಲ್ಲದ ಮನಸಿನಿಂದ ಬಿಸಾಡುವವರು ಇದ್ದಾರೆ. ಅದೇ ಹುಡುಗರು ತದ್ವಿರುದ್ಧ. ಹೆಚ್ಚಿನ ಹುಡುಗರು ಲವರ್ ಕೊಟ್ಟ ಉಡುಗೊರೆಯನ್ನು ಪೂಜಿಸುತ್ತಾರೆ! ನಿತ್ಯವೂ ಅದಕ್ಕೊಂದು ಮುತ್ತಿಕ್ಕುವ ಅಭ್ಯಾಸ ರೂಢಿಸಿಕೊಳ್ಳುತ್ತಾರೆ. ಅದಕ್ಕೊಂಚೂರು ಹಾನಿಯಾಗದಂತೆ ಜಾಗ್ರತೆ ವಹಿಸುತ್ತಾರೆ. ಅಪ್ಪಿ ತಪ್ಪಿ ಕಳೆದು ಹೋದರಂತೂ ಜೀವವೇ ಹೋದವರಂತೆ ಕಂಗೆಡುತ್ತಾರೆ.
- ಮಂಜುನಾಥ್ .ಎಲ್.ಕೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.