ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಉಗ್ರಾಣ ಮನೆ ಈಗ ಹಾಸ್ಟೆಲ್

Mainashree
Updated On : 23 Dec 2013, 12:32 pm

1893 ಸೆಪ್ಟೆಂಬರ್‌ನಲ್ಲಿ ಜನಿಸಿದ ಮಂಗೇಶರಾಯರು 1901ರಲ್ಲಿ 1ರಿಂದ 3ನೇ ತರಗತಿವರೆಗೆ ಪುತ್ತೂರಿನಲ್ಲಿ ಕಲಿತರು. ಬಳಿಕ ಮಂಗಳೂರಿನ ಗಣಪತಿ ಹೈಸ್ಕೂಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪೂರೈಸಿದ್ದರು. ಇವರ ಹಿರಿಯರು ಕೆಳದಿ ಸಂಸ್ಥಾನದ ಉಗ್ರಾಣಿಯಾಗಿದ್ದರಿಂದ ಇವರ ಹೆಸರಿನ ಮುಂದೆ 'ಉಗ್ರಾಣ' ನಾಮಾಂಕಿತ ಬಂತು.
ಪುತ್ತೂರಿನಲ್ಲಿ ಎಷ್ಟು ವರ್ಷಕಾಲ ಇದ್ದರು ಎಂಬ ನಿಖರವಾದ ಮಾಹಿತಿ ಇಲ್ಲ. ಪುತ್ತೂರಿನ ಕೊಂಬೆಟ್ಟಿನಲ್ಲಿ ಎರಡು ಮಾಳಿಗೆಯ ಸ್ವಂತ ಹೆಂಚಿನ ಮನೆಯಲ್ಲಿ ಉಗ್ರಾಣ ಮಂಗೇಶರಾಯರು ವಾಸವಿದ್ದರು. ಸಮೀಪದ ಬೋರ್ಡ್ ಹೈಸ್ಕೂಲ್‌ನಲ್ಲಿ ಅಧ್ಯಾಪನ ವೃತ್ತಿ ಮಾಡುತ್ತಿದ್ದರು. ಪತ್ನಿ ಹಾಗೂ ಪುತ್ರಿಯ ಜತೆ ವಾಸಿಸುತ್ತಿದ್ದ ಉಗ್ರಾಣರು ಪುತ್ತೂರಿನಲ್ಲಿ ನಡೆಯುವ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು. 1968ರಲ್ಲಿ ಅನಾರೋಗ್ಯಪೀಡಿತರಾದ ಬಳಿಕ ಪುತ್ತೂರಿನಿಂದ ಕುಂದಾಪುರಕ್ಕೆ ತೆರಳಿದರು. ಭರತೇಶ ವೈಭವ ಸಂಪಾದಿತ ಕೃತಿ ಸೇರಿದಂತೆ ಕವಿತೆ, ಪಠ್ಯವನ್ನು ಪುತ್ತೂರಿನ ಮನೆಯಲ್ಲಿರುವಾಗಲೇ ರಚಿಸಿದ್ದಾರೆ.
ಉಗ್ರಾಣರಿದ್ದ ರಾಜಲಕ್ಷ್ಮಿ ಕಂಪೌಂಡ್‌ನ ಮನೆಯಲ್ಲಿ ಕಂಪೌಂಡರ್ ನರಸಿಂಹ ಭಟ್, ಬಳಿಕ ತ್ರಿವಿಕ್ರಮ ಕಾಮತ್ ಎಂಬವರು ವಾಸವಿದ್ದರು. ನಂತರ 2008 ನವೆಂಬರ್‌ನಲ್ಲಿ ಈ ಮನೆಯನ್ನು ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ ಮೆಟ್ರಿಕ್‌ಪೂರ್ವ ಬಾಲಕಿಯರ ವಿದ್ಯಾರ್ಥಿನಿ ನಿಲಯಕ್ಕೆ ಬಾಡಿಗೆ ನೀಡಲಾಯಿತು. ಪ್ರಸಕ್ತ ಈ ಮನೆ ಮಾಲಿಕರು ಮಂಗಳೂರಿನಲ್ಲಿರುವ ದಿ.ತ್ರಿವಿಕ್ರಮ ಕಾಮತ್‌ರ ಸಂಬಂಧಿಕರು.

'ಉಗ್ರಾಣ ಪ್ರಶಸ್ತಿ'ಯೊಂದೇ ನೆನಪು
ಪುತ್ತೂರಿನ ಗೌರಿ ಮಾಧವ ಚಾರಿಟೇಬಲ್ ಟ್ರಸ್ಟ್‌ನಿಂದ ಪ್ರತಿ ವರ್ಷ ಫೆಬ್ರವರಿಯಲ್ಲಿ ಅನುರಾಗ ವಠಾರದಲ್ಲಿ ಉಗ್ರಾಣ ಮಂಗೇಶರಾಯರ ಹೆಸರಲ್ಲಿ 'ಉಗ್ರಾಣ ಪ್ರಶಸ್ತಿ' ಪ್ರದಾನ ಕಾರ್ಯಕ್ರಮ ನಡೆಯುತ್ತಿದೆ. 1995ರಿಂದ ಪ್ರಶಸ್ತಿ ನೀಡಿಕೆ ಪ್ರಾರಂಭವಾಗಿದ್ದು, ಕಥೆ, ಕವನ, ಕಾದಂಬರಿ, ನಾಟಕ, ಲಲಿತಕಲೆ, ಚಿಂತನಶೀಲ ಹೀಗೆ 6 ಪ್ರಕಾರಗಳಲ್ಲಿ ವರ್ಷಕ್ಕೊಮ್ಮೆ ಪ್ರಶಸ್ತಿ ನೀಡಲಾಗುತ್ತಿದೆ ಎನ್ನುತ್ತಾರೆ ಕಾರ್ಯಕ್ರಮ ಆಯೋಜಕರಾದ ಕರ್ನಾಟಕ ಸಂಘ ಅಧ್ಯಕ್ಷ ಬಿ.ಪುರಂದರ ಭಟ್.

- ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement