ನೊಂದಾಗ ಸಂಯಮಿಗಳಾಗಿ
ಅಂಥ ಸಂದರ್ಭದಲ್ಲಿ ಕೋಪ ಎನ್ನುವುದಕ್ಕಿಂತ ಒಂದು ರೀತಿಯ ಅಸಹನೆ ನಮ್ಮನ್ನು ಆವರಿಸಿಕೊಳ್ಳುತ್ತದೆ. ಅದು ಅಸಹಾಯಕತೆಯೂ ಆಗಿರಬಹುದು. ಏಕೆಂದರೆ ಅವರಿಳಿದ ಮಟ್ಟಕ್ಕೆ ನಾವು ಇಳಿಯಲು ಆಗುವುದೇ ಇಲ್ಲ. ಹಾಗೆಂದು ಅದನ್ನು ಸಹಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಒಂದು ಕಡೆ ಅವಮಾನ, ಇನ್ನೊಂದೆಡೆ ನೋವು, ಕಿರಿಕಿರಿ ಎಲ್ಲವೆಂದರೆ ಎಲ್ಲವೂ ಆಗುತ್ತಿರುತ್ತದೆ. ಹಾಗೆಂದು ಅದನ್ನು ಯಾರೊಂದಿಗೂ ಹೇಳಿಕೊಳ್ಳಲು ಆಗುತ್ತಿರುವುದಿಲ್ಲ. ಇದು ಸಾಮಾನ್ಯವಾಗಿ ಎಲ್ಲರ ಅನುಭವವೂ ಆಗಿರುತ್ತದೆ. ಹೀಗಿದ್ದರೂ ಅದನ್ನು ಜಾಡಿಸಿಕೊಂಡು ಹೋಗುವ, ತನಗೇನೂ ಆಗಿಲ್ಲ ಎಂದು ಕೊಡವಿಕೊಂಡು ಎದ್ದು ಹೋಗಿ ಬಿಡುವ ಮನೋಧಾರ್ಡ್ಯ ಎಲ್ಲರಿಗೂ ಇರುವುದಿಲ್ಲ. ಅದರಲ್ಲೂ ಅತ್ಯಂತ ಸೂಕ್ಷ್ಮ ಮನಸ್ಸಿನ ಕೆಲ ವ್ಯಕ್ತಿಗಳಂತೂ ಇಂಥ ಸಂದರ್ಭದಲ್ಲಿ ಕುಗ್ಗಿ ಹೋಗಿ ಬಿಡುತ್ತಾರೆ. ನೋವು ಇನ್ನಿಲ್ಲದಂತೆ ಅವರನ್ನು ಇರಿಯಲಾರಂಭಿಸುತ್ತದೆ. ಅದರಿಂದ ಹೊರಬರಲಾಗದೆ, ಏನು ಮಾಡಲೂ ತೋಚದೆ ತೊಳಲಾಡಿಬಿಡುತ್ತಾರೆ. ಇಷ್ಟೆಲ್ಲ ಆಗುವುದು ನಾವು ಬಹುವಾಗಿ ನಂಬಿದ್ದ ವ್ಯಕ್ತಿಯಿಂದ ನಾವು ನಿರೀಕ್ಷಿಸಲೇ ಆಗದ ದ್ರೋಹ ನಮಗೆ ಆದಾಗ. ಅಷ್ಟಾದರೂ ಬಹುಶ- ನಾವು ಏನೋ ಸಂದರ್ಭ ಎಂದುಕೊಂಡು ಅದನ್ನು ಕ್ಷಮಿಸಿಬಿಡುತ್ತೇವೇನೋ. ಹೋಗಲಿ ಬಿಡು, ಆದದ್ದಾಗಲಿ ಎಂದುಕೊಂಡು ನಾವು ನೋವು ಮರೆತುಬಿಡುತ್ತೇವೇನೋ. ಆದರೆ ಅಂಥ ಸನ್ನಿವೇಶ ಹಾಗೆ ಕೊನೆಗೊಳ್ಳುವುದೇ ಇಲ್ಲ. ನಾವು ನಂಬಿದ್ದ ವ್ಯಕ್ತಿಗಳು ತಾವು ಮಾಡಿದ ಒಂದು ತಪ್ಪನ್ನು ಮುಚ್ಚಿಕೊಳ್ಳಲು, ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಮುಂದಾಗುತ್ತಾರೆ. ಅಂಥ ಭರದಲ್ಲಿ ನಮ್ಮದೇ ಪ್ರಮಾದವಾಗಿದೆ ಎಂಬ ರೀತಿಯಲ್ಲಿ ಬಿಂಬಿಸಲು ಆರಂಭಿಸುತ್ತಾರೆ. ಇದರಿಂದಾಗಿ ನಮಗೆ ಮತ್ತಷ್ಟು ಆಘಾತಗಳು ಎದುರಾಗುತ್ತ ಹೋಗುತ್ತವೆ. ನೋವು ಮಡುಗಟ್ಟುವುದೇ ಆವಾಗ. ಹೋಗೊಮ್ಮೆ ಕಪಾಳಕ್ಕೆ ಬಿಗಿದು ನಾಚಾರೆಬ್ಬಿಸಿ ಬಂದುಬಿಡಬೇಕು ಎನ್ನಿಸುತ್ತದೆ. ನೆನಪಿಟ್ಟುಕೊಳ್ಳಿ, ಕೋಪಕ್ಕಿಂತ ನೋವು ಅಪಾಯಕಾರಿಯಾಗುವುದು ಇದೇ ಸಂದರ್ಭದಲ್ಲಿ. ಆಗಲೇ ನಮಗೆ ಸಂಯಮದ ಅಗತ್ಯವಿರುವುದು. ಅಂಥ ಸಂದರ್ಭದಲ್ಲಿ ದುಡುಕಿ ನಾವೂ ಸಣ್ಣವರಾಗಿಬಿಡಬಾರದು. ಪುಟ್ಟದ್ದೊಂದು ಅಸೀಮ ನಿರ್ಲಕ್ಷ್ಯ ಭಾವವನ್ನು ಅವರತ್ತ ತೂರಿ ಇಡೀ ಪ್ರಕರಣದಿಂದಲೇ ಎದ್ದು ಹೊರಬಂದುಬಿಡಿ. ನೀವವರಿಗೆ ಕೊಡಬಹುದಾದ ಶಿಕ್ಷೆ ಇದಕ್ಕಿಂತ ದೊಡ್ಡದು ಬೇರೆ ಇರಲಿಕ್ಕಿಲ್ಲ. ನೀವು ನಿಮ್ಮ ಘನತೆಯನ್ನು ಹಾಗೆಯೇ ಉಳಿಸಿಕೊಂಡಿರುತ್ತೀರಿ.
- ಸಹನೆ