ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಭಾರಿ ಸುಲಭ ಬಾಳೆಕಾಯಿ ಚಿಕಿತ್ಸೆ

Mainashree
Updated On : 23 Dec 2013, 12:29 pm

ಬ್ರಿಟಿಷರು, ಆಸ್ಟ್ರೇಲಿಯನ್ನರು ಕೂಡ ಅಲ್ಸರ್ ಅನ್ನು ಬಾಳೆಕಾಯಿ ಮತ್ತು ಬಾಳೆಹಣ್ಣು ಹಣ್ಣು ಹೇಗೆ ತಡೆಗಟ್ಟಬಹುದು ಎನ್ನುವ ವಿಚಾರವಾಗಿ ಸಂಶೋಧನೆ ನಡೆಸುವಲ್ಲಿ ಹಿಂದೆ ಬಿದ್ದಿಲ್ಲ. ಬಾಳೆಯ ಲೋಳೆಯಂಥ ದ್ರಾವಣದಿಂದ ಜೀರ್ಣಾಂಗದಲ್ಲಿ ಪ್ರಬಲ ತಡೆಗೋಡೆ ನಿರ್ಮಾಣವಾಗುತ್ತದೆ ಎನ್ನುವುದನ್ನು ಸಾಬೀತು ಮಾಡಿದವರು ಬರ್ಮಿಂಗ್‌ಹ್ಯಾಮ್‌ನ ಯೂನಿವರ್ಸಿಟಿ ಆಫ್ ಆಸ್ಟನ್‌ನ ವೈದ್ಯ ಡಾ.ರಾಲ್ಫ್ ಬೆಸ್ಟ್ ಅವರು. ಆ ತರುವಾಯವೇ ಅಲ್ಸರ್ ಆದವರು ಆಹಾರ ಪದ್ಧತಿಯಲ್ಲಿ ಬಾಳೆಗೂ ಮುಖ್ಯ ಸ್ಥಾನ ಕಲ್ಪಿಸುವಂತೆ ವೈದ್ಯರು ಸಲಹೆ ಮಾಡಲು ಆರಂಭಿಸಿದ್ದು. ಆಸ್ಟ್ರೇಲಿಯನ್ನರು ಇಲಿಗಳ ಮೇಲೆ ಪ್ರಯೋಗ ಕೈಗೊಂಡು ಬಾಳೆ ಮಹತ್ವ ಅರಿತರು. ಇಲಿಗಳಿಗೆ ಚೆನ್ನಾಗಿ ಬಾಳೆ ಕಾಯಿಗಳನ್ನು ತಿನ್ನಿಸಲಾಯಿತು. ನಂತರ ಅಲ್ಸರ್‌ಗೆ ಉತ್ತೇಜನ ನೀಡುವ ಆ್ಯಸಿಡ್‌ಗಳನ್ನು ಚುಚ್ಚುಮದ್ದಿನ ರೂಪದಲ್ಲಿ ಅವುಗಳ ದೇಹದ ಒಳಕ್ಕೆ ಸೇರಿಸಲಾಯಿತು. ಕೆಲದಿನಗಳ ಬಳಿಕ ಪರೀಕ್ಷಿಸಿದಾಗ ಅವುಗಳ ಹೊಟ್ಟೆಗೆ ಆಶ್ಚರ್ಯ ಹುಟ್ಟಿಸುವಷ್ಟು ಅತ್ಯಲ್ಪ ಪ್ರಮಾಣದಲ್ಲಿ ಘಾಸಿ ಆಗಿತ್ತು!
ತಜ್ಞರ ಪ್ರಕಾರ, ಅಲ್ಸರ್ ಡಯಟ್‌ನಲ್ಲಿ ಬಾಳೆ ಹಣ್ಣಿಗಿಂತ ಕಾಯಿಯ ಬಳಕೆ ಉತ್ತಮ. ಅದರಲ್ಲೂ ಎಳೆ ಕಾಯಿ ಇದ್ದರೆ ಇನ್ನೂ ಒಳ್ಳೆಯದು. ಅವನ್ನು ಹಾಗೆಯೇ ತಿನ್ನುವುದಕ್ಕಿಂತ ಬೇಯಿಸಿ ಸೇವಿಸುವುದು ಒಳ್ಳೆಯದು. ಇದರಿಂದ ಕಾಯಿ ಮೃದುವಾಗುವುದಲ್ಲದೇ ಜೀರ್ಣಿಸಿಕೊಳ್ಳುವುದು ಉದರಕ್ಕೆ ಸುಲಭವಾಗುತ್ತದೆ. ಬಾಳೆಹಣ್ಣನ್ನು ಕೂಡ ಹಾಗೆಯೇ ತಿನ್ನುವುದಕ್ಕಿಂತ ಜ್ಯೂಸ್ ಮಾಡಿಕೊಂಡು ಕುಡಿಯುವುದು ಉತ್ತಮ. ಇನ್ನು ಬಾಳೆ ಕಾಯಿ ಅಥವಾ ಹಣ್ಣಿನಲ್ಲಿಯೂ ನಾರಿನ ಅಂಶ ಅಧಿಕವಾಗಿರುತ್ತದೆ ಎನ್ನುವುದೂ ಪ್ಲಸ್ ಪಾಯಿಂಟ್. ಜತೆಗೆ ಸುಲಭವಾಗಿ ಕರಗುವ ಪಾಲಿಸ್ಯಾಕರೈಡ್‌ಗಳನ್ನು ಬಾಳೆ ಹೊಂದಿರುತ್ತದೆ. ಅಲ್ಸರ್‌ಗೆ ನೀಡಲಾಗುವ ಕ್ಯಾರಾಫೇಟ್ ಎನ್ನುವ ಔಷಧದಲ್ಲಿರುವ ಪ್ರಮುಖ ಅಂಶ ಎಂದರೆ ಪಾಲಿಸ್ಯಾಕರೈಡ್‌ಗಳು.  
ಅಲ್ಸರ್ ಬೇಗ ಗುಣವಾಗಬೇಕು ಎಂದರೆ ಜೇನುತುಪ್ಪದಲ್ಲಿ ಬಾಳೆಕಾಯಿ ಪುಡಿ ಸೇವನೆ ಅತ್ಯುತ್ತಮ ಮತ್ತು ಸರಳ ಉಪಾಯ. ಬಾಳೆಕಾಯಿಯ (ತೀರಾ ಬಲಿತ ಬಾಳೆಕಾಯಿ ಬೇಡ, ಎಳತಾಗಿದ್ದಷ್ಟೂ ಉತ್ತಮ ಎನ್ನುವುದು ನೆನಪಿರಲಿ) ಸಿಪ್ಪೆ ಸುಲಿದು ತೆಳ್ಳಗಿನ ಸ್ಲೈಸ್‌ಗಳನ್ನಾಗಿ ಮಾಡಿಕೊಳ್ಳಿ. ಅವನ್ನು ಡ್ರೈಯರ್ ಅಥವಾ ಓವನ್‌ನಲ್ಲಿಟ್ಟು ಒಣಗಿಸಿ. ಬಿಸಿಲಿನಲ್ಲಿಟ್ಟು ನೈಸರ್ಗಿಕವಾಗಿಯೇ ಒಣಗಿಸಿದರೆ ಇನ್ನೂ ಒಳ್ಳೆಯದು. ಚೆನ್ನಾಗಿ ಒಣಗಿದ ಮೇಲೆ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ಅದನ್ನು ಎರಡು ಚಮಚ ಜೇನುತುಪ್ಪದೊಂದಿಗೆ ನಿತ್ಯ ಮೂರು ಸಲ ಸೇವಿಸಿ. ಇದು ಬಹಳ ಹಿಂದೆ ನಮ್ಮ ಹಿರಿಯರು ಅನುಸರಿಸುತ್ತಿದ್ದ ಚಿಕಿತ್ಸಾ ವಿಧಾನವೂ ಆಗಿತ್ತು.

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement