ಮತ್ತೆ ಸರಿಪಡಿಸು!
ಪ್ರಣಯಕೇಳಿಯನ್ನು ಒಂದು ಕಲೆಯಾಗಿ, ಮನೋಹರರಮ್ಯ ಒಳಾಂಗಣ ಆಟವಾಗಿ, ಮನುಷ್ಯನ ಜೀವನಕ್ಕೆ ಪ್ರತಿದಿನ ಅವಶ್ಯಕವಾದ ಒಂದಂಶವಾಗಿ ನಮ್ಮ ಹಿಂದಿನವರು ಪರಿಭಾವಿಸಿದ್ದರು. ಅದಕ್ಕೆ ಅನುಗುಣವಾಗಿಯೇ ನಮ್ಮ ಅರಮನೆಗಳ ಹಾಗೂ ರಸಿಕರ ಅಂತಃಪುರಗಳು ಸಜ್ಜುಗೊಂಡಿರುತ್ತಿದ್ದವು. ಇಲ್ಲಿ ಪ್ರಣಯಕ್ಕೆ ಪೂರ್ವಭಾವಿ ಆಟಗಳು ಎಷ್ಟು ಮುಖ್ಯವೋ, ನಂತರದ ಆಟಗಳೂ ಅಷ್ಟೇ ಮುಖ್ಯ. ಬಿಚ್ಚುವುದು ಎಷ್ಟು ಮುಖ್ಯವೋ, ಪುನಃ ಕಟ್ಟುವುದೂ ಅಷ್ಟೇ ಮುಖ್ಯ!
ರಚಯ ಕುಚಯೋಃ ಪತ್ರಂ ಚಿತ್ರಂ ಕುರುಷ್ವ ಕಪೋಲಯೋ
ರ್ಘಟಯ ಜಘನೇ ಕಾಂಚೀಂ ಮುಗ್ಧಸ್ರಜಾ ಕಬರೀಭರಂ
ಕಲಯ ವಲಯಶ್ರೇಣೀಂ ಪಾಣೌ ಪದೇ ಮಣಿನೂಪುರಾ
ಮಿತಿ ನಿಗದಿತಃ ಪ್ರೀತಃ ಪೀತಾಂಬರೋಪಿ ಕಥಾಕರೋತ್
ಕೇಳಿಕಾಲದ ಬಳಿಕ ರಾಧೆ, ಕೃಷ್ಣನಿಗೆ ಹೇಳುತ್ತಿದ್ದಾಳೆ: ಚುಂಬನದ ಮೂಲಕ ನನ್ನ ಕಣ್ಣಿನ ಕಾಡಿಗೆಯನ್ನು ಅಳಿಸಿರುವೆ. ಈಗ ಅವನ್ನು ನೇರ್ಪುಗೊಳಿಸು. ವಕ್ಷಸಂಪತ್ತಿನ ಮೇಲೆ ಪರಿಮಳ ಹಾಗೂ ತಂಪಿಗಾಗಿ ರಚಿಸಿದ್ದ ಕಸ್ತೂರಿರೇಖೆಯನ್ನು ಅಳಿಸಿರುವೆಯಲ್ಲ, ಈಗ ಮತ್ತೆ ಅವನ್ನು ಬರೆ. ಕಿವಿಯಲ್ಲಿದ್ದ ಕುಂಡಲಗಳು ಎಲ್ಲೋ ನಾಪತ್ತೆಯಾಗಿವೆ. ಅವನ್ನು ಕಂಡುಹಿಡಿದು ಮತ್ತೆ ಕಿವಿಗೆ ಸಿಕ್ಕಿಸು. ನಿನ್ನ ಮುದ್ದಾಟದ ಪರಿಣಾಮವಾಗಿ ನನ್ನ ಭ್ರೂಮಧ್ಯದಲ್ಲಿಟ್ಟ ಕುಂಕುಮತಿಲಕ ಅಳಿಸಿಹೋಗಿದೆ. ಅದನ್ನೂ ನೀನೇ ಸರಿಯಾಗಿ ಹಚ್ಚು. ನನ್ನ ತಲೆಕೂದಲು ಕೆದರಿ ಹರಡಿದೆ. ಅವನ್ನು ಒಪ್ಪವಾಗಿ ಬಾಚಿ, ಹೂಮುಡಿಸಿ ಚಂದಗೊಳಿಸು. ಜಘನ ನೋಡು, ಎಷ್ಟು ಬರಿದಾಗಿದೆ! ಅಲ್ಲಿ ಮಣಿನೇವುಳವನ್ನು ಕಟ್ಟು, ಸೊಂಟಪಟ್ಟಿಯನ್ನಿಡು, ಕೈಗಳಿಗೆ ಬಳೆಗಳನ್ನು ತೊಡಿಸು. ಸೊಂಟಕ್ಕೆ ಸೀರೆಯನ್ನುಡಿಸು!
ಅಡುಗೆ ಮಾಡುವುದು ಸುಲಭ, ಪಾತ್ರೆ ತೊಳೆಯುವುದು ಕಷ್ಟ ಅಂತಾರಲ್ಲ! ಊಟಕ್ಕೆ ಸಜ್ಜಾಗಿರುವವನು ಬಟ್ಟಲು ತೊಳೆಯುವುದು ಅನಿವಾರ್ಯ!
- ಹರಿಹರ