ಪಾರ್ಶ್ವ ನೋಟ
ಹೃದಯಾಘಾತ ಅಂದರೆ ಹೆದರಿಕೆ. ಹೃದಯದ ಬಗ್ಗೆ ಕಾಳಜಿ ವಹಿಸುವವರೇ ಎಲ್ಲರೂ. ತಿಳಿಯಲೇಬೇಕಾದ ವಿಚಾರ ಅಂದರೆ,...
ಹೃದಯಾಘಾತ ಅಂದರೆ ಹೆದರಿಕೆ. ಹೃದಯದ ಬಗ್ಗೆ ಕಾಳಜಿ ವಹಿಸುವವರೇ ಎಲ್ಲರೂ. ತಿಳಿಯಲೇಬೇಕಾದ ವಿಚಾರ ಅಂದರೆ, ಹೃದಯಾಘಾತಕ್ಕೆ ಸಮ ಪ್ರಮಾಣದಲ್ಲಿ ಅಟಕಾಯಿಸುತ್ತಿರುವ ಅನ್ನೊಂದು ಆಘಾತ ಅಂದರೆ ಪಾರ್ಶ್ವವಾಯು. ಬದುಕನ್ನು ದುರ್ಬಲಗೊಳಿಸುವ ಮತ್ತು ಸಾವಿಗೆ ಎರಡನೆ ದೊಡ್ಡ ಕಾರಣವಾಗಿರುವ ಮೆದುಳಾಘಾತ ತಡೆಯಲು ಮುನ್ನೆಚ್ಚರಿಕೆಯೇ ಮಾರ್ಗ.
ಪ್ರತಿ 2 ಸೆಕೆಂಡಿಗೆ ಒಬ್ಬ ಪಾರ್ಶ್ವವಾಯುವಿಗೆ ಒಳಗಾಗುತ್ತಾನೆ. ಪ್ರತಿ 6 ಸೆಕೆಂಡಿಗೆ ಒಬ್ಬ ಸ್ಟ್ರೋಕ್ನಿಂದ ಸಾವಿಗೀಡಾಗುತ್ತಿದ್ದಾನೆ. ವಯಸ್ಕರು ಹೆಚ್ಚಾಗಿ ಪಾರ್ಶ್ವವಾಯು ಹೊಡೆತಕ್ಕೆ ಸಿಲುಕುತ್ತಿದ್ದಾರೆ. ಭಾರತವೊಂದರಲ್ಲೇ 15 ಲಕ್ಷ ಜನ ಪಾರ್ಶ್ವವಾಯುವಿಗೆ ಪ್ರತಿ ವರ್ಷ ಒಳಗಾಗುತ್ತಿದ್ದಾರೆ. ಈ ಅಂಕಿಅಂಶಗಳಿಗೆ ಅನುಗುಣವಾಗಿ ಪಾರ್ಶ್ವವಾಯುವಿನ ಕುರಿತಾದ ಜಾಗೃತಿ ಆಗುತ್ತಿಲ್ಲ. ಇಂಡಿಯನ್ ಸ್ಟ್ರೋಕ್ ಅಸೋಸಿಯೇಷನ್ ಪ್ರಕಾರ, ಜನ ಪಾರ್ಶ್ವವಾಯು ಸಂಭವಿಸುವುದು ಹೃದಯ ಮತ್ತಿತರ ವೈದ್ಯಕೀಯ ಕಾರಣದಿಂದ ಎಂದೇ ನಂಬಿದ್ದಾರೆ.
ಸ್ಟ್ರೋಕ್ ಅಥವಾ ಮೆದುಳಾಘಾತ ಸಂಭವಿಸುವುದು ಮೆದುಳಿನ ಆರ್ಟರಿ ಬ್ಲಾಕ್ ಆದಾಗ. ನರಗಳಲ್ಲಿ ರಕ್ತ ಸಂಚಾರಕ್ಕೆ ತಡೆ ಉಂಟಾದಾಗ. ನಿಮಿಷಗಳಲ್ಲೇ ಮೆದುಳಿಗೆ ರಕ್ತ ಸರಬರಾಜಾಗುವ ಸೆಲ್ಗಳು ಸಾಯುತ್ತವೆ. ಮೆದುಳಿನ ಯಾವ ಭಾಗದಲ್ಲಿ ಇಂತಹ ಆಘಾತ ಸಂಭವಿಸುತ್ತದೋ ಅದರ ಅವಲಂಬಿತ ದೇಹದ ಭಾಗ ನಿಶ್ಚಲವಾಗುತ್ತದೆ. ದೇಹದ ಎಡಭಾಗ, ಬಲಭಾಗದ ಮೆದುಳನ್ನು ಅವಲಂಬಿಸಿದೆ. ಅಂತೆಯೇ ದೇಹದ ಬಲಭಾಗ, ಎಡಭಾಗದ ಮೆದುಳಿನ ಮೂಲಕ ಕಾರ್ಯ ನಿರ್ವಹಿಸುತ್ತದೆ. ಮೆದುಳಿನ ಯಾವ ಭಾಗ ಆಘಾತಕ್ಕೆ ಒಳಗಾದರೂ ಅವಲಂಬಿತ ದೇಹ ಭಾಗವೂ ಕಾರ್ಯ ನಿಲ್ಲಿಸುತ್ತದೆ. ಮೆದುಳಿನ ಎಷ್ಟು ಜೀವಕೋಶಗಳು ಹಾನಿಗೀಡಾಗಿವೆ ಎಂಬುದರ ಮೇಲೆ ಲಕ್ವದ ಪ್ರಮಾಣ ನಿರ್ಧಾರಿತವಾಗುತ್ತದೆ. ಪಾರ್ಶ್ವವಾಯುವಿನಲ್ಲಿ ಇಸ್ಕೆಮಿಕ್ ಸ್ಟ್ರೋಕ್ ಮತ್ತು ಹ್ಯಾಮೋರಜಿಕ್ ಸ್ಟ್ರೋಕ್ ಎಂಬ 2 ಮುಖ್ಯ ವಿಧಗಳಿವೆ.
ಇಸ್ಕೆಮಿಕ್ ಸ್ಟ್ರೋಕ್
ರಕ್ತದ ಪರಿಚಲನೆ ಇಳಿಮುಖವಾದಂತೆಲ್ಲ ಇಸ್ಕೆಮಿಕ್ ಸ್ಟ್ರೋಕ್ ಸಂಭವಿಸುತ್ತದೆ. ಪಾರ್ಶ್ವವಾಯುವಿನಲ್ಲಿ ಶೇ. 87 ಇಸ್ಕೆಮಿಕ್ ಸ್ಟ್ರೋಕ್ ಆಗಿದೆ. ರಕ್ತನಾಳಗಳಲ್ಲಿ ಬ್ಲಾಕ್ ಆದಾಗ ಆಮ್ಲಜನಕ ಮತ್ತು ಪೋಷಕಾಂಶಗಳಿಲ್ಲದ ರಕ್ತ ಮೆದುಳಿಗೆ ಸಂಚರಿಸುತ್ತದೆ. ಇದರಿಂದ ಜೀವಕೋಶಗಳು ದುರ್ಬಲಗೊಳ್ಳುತ್ತವೆ. ನಿಮಿಷಗಳಲ್ಲೇ ಸಾಯಲು ಪ್ರಾರಂಭಿಸುತ್ತವೆ. ಬ್ಲಾಕೇಜ್ ಆದಾಗ ಮೆದುಳು ತಾತ್ಕಾಲಿಕ ಹಾನಿಗೀಡಾಗುತ್ತದೆ.
ಥ್ರೋಂಬೋಟಿಕ್ ಇಸ್ಕೆಮಿಕ್ ಸ್ಟ್ರೋಕ್
ರಕ್ತ ಹೆಪ್ಪುಗಟ್ಟುವಿಕೆಯಿಂದ ಉಂಟಾಗುವ ಥ್ರೋಂಬೋಟಿಕ್ ಸ್ಟ್ರೋಕ್ ಸಾಮಾನ್ಯವಾಗಿದೆ. ಅಪಧಮನಿಯ ನಾಳದಲ್ಲಿ ರಕ್ತ ಹೆಪ್ಪುಗಟ್ಟಿ ಪೂರ್ತಿಯಾಗಿ ಮೆದುಳಿನ ರಕ್ತ ಸಂಚಾರ ಸ್ತಬ್ಧವಾಗುತ್ತದೆ. ರಕ್ತ ಕ್ಲೋಟ್ ಆಗಲು ಕಾರಣ ಕೊಬ್ಬಿನಂಶ.
ಎಂಬೊಲಿಕ್ ಇಸ್ಕೆಮಿಕ್ ಸ್ಟ್ರೋಕ್
ರಕ್ತನಾಳಗಳು ಬಿರುಕು ಬಿಡುವುದರಿಂದ ಮೆದುಳಿಗೆ ರಕ್ತ ಸಾಗಿಸುವ ಸಣ್ಣ ಅಪಧಮನಿಗಳಲ್ಲಿ ರಕ್ತ ಹರಿದು ಬ್ಲಾಕ್ ಆಗುತ್ತದೆ. ಹೆಚ್ಚಾಗಿ ಹೃದಯದಲ್ಲಿ ಎಂಬೋಲಿಯು ಉತ್ಪತ್ತಿಯಾಗುತ್ತದೆ. ತಲೆಗೆ ರಕ್ತ ಸಾಗಿಸುವ ನಾಳಗಳಲ್ಲೂ ಎಂಬೊಲಿಯು ಕಗ್ಗಂಟಾಗುತ್ತದೆ. ಶೀರ್ಷ ಧಮನಿ (ಕ್ಯಾರೊಟಿಡ್ ಆರ್ಟರಿಸ್) ತನ್ನ ಕಾರ್ಯ ನಿಲ್ಲಿಸುತ್ತದೆ. ಹಾಗಾಗಿ ಇದನ್ನು ಎಂಬೊಲಿಕ್ ಇಸ್ಕೆಮಿಕ್ ಸ್ಟ್ರೊಕ್ ಎನ್ನಲಾಗಿದೆ.
ಎಂಬೊಲಿಕ್ ಇಸ್ಕೆಮಿಕ್ ಸ್ಟ್ರೊಕ್ ಉಂಟಾಗಲು ಮುಖ್ಯ ಕಾರಣ ಫೈಬ್ರಿಲೇಷನ್. ಅಂದರೆ ಕಂಪನ ಉಂಟಾಗುವಿಕೆ. ಹೃದಯ ಬಡಿತದಲ್ಲಿ ವ್ಯತ್ಯಾಸವಾಗುವಿಕೆ. ಹೃದಯದ ಮೇಲ್ಭಾಗ, ಅಪಧಮನಿಯಲ್ಲಿ ಬಡಿತದ ತಾಳ ಅವ್ಯವಸ್ಥಿತವಾಗುತ್ತದೆ. ಇದರಿಂದ ಪಂಪ್ ಮಾಡುವ ಸಂದರ್ಭ ರಕ್ತ ಪೂರ್ತಿಯಾಗಿ ಖಾಲಿಯಾಗುವುದಿಲ್ಲ. ಅಪಧಮನಿಯಲ್ಲಿ ಉಳಿದುಕೊಳ್ಳುವ ಆ ರಕ್ತ ಕ್ಲೋಟ್ ಆಗಲು ಕಾರಣವಾಗುತ್ತದೆ. ಹೀಗೆ ಕ್ಲೋಟ್ ಆದ ರಕ್ತದ ಕಣಗಳು ಕ್ರಮೇಣ ಸಂಚರಿಸಿ ಆರ್ಟರಿಗಳಿಗೆ ಬಂದು ಸೇರುತ್ತವೆ. ಅಲ್ಲೇ ಸಿಕ್ಕಿಹಾಕಿಕೊಳ್ಳುತ್ತವೆ. ಮೂರನೆ ಒಂದರಷ್ಟು ಜನ ಇದಕ್ಕೆ ಚಿಕಿತ್ಸೆ ಪಡೆಯದೆ ಪಾರ್ಶ್ವವಾಯುವಿಗೆ ಬಲಿಯಾಗುತ್ತಿದ್ದಾರೆ.
ಹ್ಯಾಮೋರಜಿಕ್ (ರಕ್ತಸ್ರಾವ) ಸ್ಟ್ರೋಕ್
ಪಾರ್ಶ್ವವಾಯುಗಳಲ್ಲಿ ಶೇಕಡಾ 13 ಹ್ಯಾಮೋರಜಿಕ್ ಸ್ಟ್ರೋಕ್ ಆಗಿದೆ. ಮೆದುಳಲ್ಲಿ ಆರ್ಟರಿಗಳು ಡ್ಯಾಮೇಜ್ ಆಗಿ ರಕ್ತ ಸೋರುವಿಕೆ ಉಂಟಾಗುತ್ತದೆ. ಹೀಗೆ ಹೊರ ಚೆಲ್ಲಿದ ರಕ್ತ ತಲೆಬುರುಡೆ ಮತ್ತು ಮೆದುಳಿನ ನಡುವೆ ಹರಿಯಲು ಶುರುವಾಗುತ್ತದೆ.
ಡ್ಯಾಮೇಜ್ನಿಂದ ಉಂಟಾಗುವ ಹ್ಯಾಮೋರಜಿಕ್ ಸ್ಟ್ರೋಕ್ ಎರಡು ವಿಧ. ಒಂದು ಮೆದುಳಿಗೆ ರಕ್ತಪರಿಚಲನೆ ನಿಂತುಹೋಗುವುದರಿಂದ. ಎರಡನೆಯದು ಹೊರಚೆಲ್ಲಿದ ರಕ್ತ ಮೆದುಳಿಗೆ ಅಗಾಧ ಒತ್ತಡ ಸೃಷ್ಟಿಸುವುದರಿಂದ. ಮೆದುಳಿನ ಚಿಕ್ಕ ರಕ್ತನಾಳಗಳಲ್ಲಿ ಸೋರುವಿಕೆ ಉಂಟಾದರೆ ಇಂಟ್ರಾಸೆರೆಬ್ರಲ್ ಹ್ಯಾಮೋರಜಿಕ್ ಆಗುತ್ತದೆ. ಮೆದುಳಲ್ಲಿ ಬಿರುಕು ಮತ್ತು ಒಡಕುಗಳಿಂದಾಗಿ ಕೆಳ ನಡು ಪೊರೆಯಲ್ಲಿ ರಕ್ತಸ್ರಾವ ಉಂಟಾಗುತ್ತದೆ. ಮೆದುಳಲ್ಲಿ ಬಿರುಕಿನಿಂದ ಕೂಡಿದ ರಕ್ತನಾಳಗಳು ಕೆಲವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ.
ಸ್ಮಾಲ್ ಸ್ಟ್ರೋಕ್!
ಚಿಕ್ಕ ಆಘಾತ ಆದರೆ ಪರಿಣಾಮ ಅಪಾರ. ಹೃದಾಯಾಘಾತದಂತೆ ಸಣ್ಣ ಆಘಾತ ಅಥವಾ ಟ್ರಾಂನ್ಸಿಯೆಂಟ್ ಇಸ್ಕೆಮಿಕ್ ಅಟ್ಯಾಕ್ ಆದಾಗ ತುರ್ತಾದ ಚಿಕಿತ್ಸೆ ಅಗತ್ಯ. ಮೂರನೆ ಒಂದರಷ್ಟು ಜನ ನಂತರದ ದಿನಗಳಲ್ಲಿ ದೊಡ್ಡ ಮಟ್ಟಿನ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ.
ಪಾರ್ಶ್ವವಾಯುವಿನ ಲಕ್ಷಣಗಳು
- ಹಠಾತ್ ದುರ್ಬಲತೆ
- ಮುಖದಲ್ಲಿ ಮರಗಟ್ಟುವಿಕೆ ಉಂಟಾಗುತ್ತದೆ
- ಬಲ ಅಥವಾ ಎಡ ಭಾಗದ ಕೈ ಕಾಲುಗಳು ದುರ್ಬಲವಾಗುತ್ತದೆ
- ಇದ್ದಕ್ಕಿದ್ದಂತೆ ನೋಟ ಮಂದವಾಗುತ್ತದೆ.
- ಮಾನಸಿಕ ಗೊಂದಲ, ಮರೆವು
- ಪ್ರಜ್ಞಾಹೀನತೆ
- ತೊದಲುವಿಕೆ, ಮಾತು ಬಾರದೆ ಇರುವುದು
- ಕಾರಣಗಳಿಲ್ಲದೆ ಹಠಾತ್ ತಲೆನೋವು.
- ಹೇಳಲಾಗದ ತಲೆಸುತ್ತುವಿಕೆ.
- ಅರೆನಿದ್ರಾವಸ್ಥೆ, ಅಸಮನ್ವಯ.
- ಮೇಲಿನ ಗುಣಲಕ್ಷಣಗಳ ಜೊತೆ ವಾಕರಿಕೆ ಮತ್ತು ವಾಂತಿ.
ವೈದ್ಯಕೀಯ ಲೋಕ 'ಸಮಯವೇ ಬುದ್ಧಿ' ಎನ್ನುತ್ತದೆ. ಮೆದುಳಾಘಾತಕ್ಕೆ ಒಳಗಾದ ವ್ಯಕ್ತಿ ಮಿದುಳಿನಲ್ಲಿ ನಿಮಿಷ ನಿಮಿಷಕ್ಕೆ ಮಿಲಿಯಗಟ್ಟಲೆ ಜೀವಕೋಶಗಳು ಸಾಯುತ್ತಿರುತ್ತವೆ. ಎಷ್ಟು ಬೇಗ ಎಚ್ಚೆತ್ತುಕೊಳ್ಳುತ್ತೇವೋ ಅಷ್ಟುಬೇಗ ಮಾರಣಾಂತಿಕ ಆಘಾತದಿಂದ ತಪ್ಪಿಸಿಕೊಳ್ಳಬಹುದು. ರಕ್ತ ಹೆಪ್ಪುಗಟ್ಟುವಿಕೆಯ ಪರೀಕ್ಷೆ, ಪ್ಲೇಟ್ಲೆಟ್ಗಳ ಸಂಖ್ಯೆಯತ್ತ ಗಮನ, ಸಿಟಿ ಸ್ಕಾನ್ ಮಾಡಿಸಿ ಆರೋಗ್ಯದ ಏರುಪೇರು ನಿಗಾ ಇರಿಸಬೇಕು.
ಧೂಮಪಾನ!
- ಪಾರ್ಶ್ವವಾಯು ಆಗಲು ಮುಖ್ಯಕಾರಣ ಧೂಮಪಾನ. ಧೂಮಪಾನದಿಂದ ಎಲ್ಲಾ ರೀತಿಯ ಆಘಾತಗಳು ಸಂಭವಿಸುವುದು ದಿಟ. ಧೂಮಪಾನ ಬಿಡದೆ ವಿಧಿಯಿಲ್ಲ.
- ಮದ್ಯ ಸೇವನೆ ಕಡಿಮೆ ಪ್ರಮಾಣದಲ್ಲಿರಲಿ.
- 40 ಎಂಎಲ್ ಲಿಕ್ಕರ್, 125 ಎಂಎಲ್ ವೈನ್ ಅಥವಾ 300 ಎಂಎಲ್ ಬೀರ್ ದಿನದಲ್ಲಿ ಸಾಕು. ಹೆಚ್ಚಿನ ಪ್ರಮಾಣದ ಕುಡಿತ ಪಾರ್ಶ್ವವಾಯುವಿಗೆ ಆಹ್ವಾನ.
ಆರೋಗ್ಯಕರ ಆಹಾರ ಸೇವಿಸಿ
- ಸಾಚುರೇಟೆಡ್ ಕೊಬ್ಬು, ಕೊಲೆಸ್ಟ್ರಾಲ್ ಆಹಾರಗಳಿಂದ ಹಿಂದೆ ಸರಿಯಿರಿ.
- ಸಣ್ಣ ಪ್ರಮಾಣದಲ್ಲಿ ಸಾಚುರೇಟೆಡ್ ಆಹಾರ ಸೇವಿಸಿದರೆ ತೊಂದರೆ ಇಲ್ಲ.
- ಕಡಿಮೆ ಪ್ರಮಾಣದ ಉಪ್ಪು, ಸಕ್ಕರೆ ಮತ್ತು ಕರಿದ ಮಾಂಸ ಸೇವಿಸಿ.
- ತರಕಾರಿ, ಹಣ್ಣು, ಕೊಬ್ಬು ರಹಿತ ಹಾಲಿನ ಉತ್ಪನ್ನಗಳು, ಧಾನ್ಯ, ಮೀನು, ಬೀನ್ಸ್, ಬೀಜ ಇತ್ಯಾದಿ ತಿನ್ನಿ.
- ಆಹಾರದಲ್ಲಿ ಅತಿಯಾದ ಉಪ್ಪು ಬಳಕೆ ಒಳ್ಳೆಯದಲ್ಲ. ದಿನದಲ್ಲಿ ಗರಿಷ್ಟ 2,300 ಎಂಜಿ ಉಪ್ಪು ಸಾಕು.
- ಡಯಾಬಿಟಿಸ್, ಕಿಡ್ನಿಗೆ ಸಂಬಂಧಿತ ಖಾಯಿಲೆ ಇರುವವರು ಹಾಗೂ 51 ವರ್ಷಕ್ಕಿಂತ ಮೇಲ್ಪಟ್ಟವರು ದಿನದಲ್ಲಿ 1,500 ಎಂಜಿ ಉಪ್ಪು ಸೇವಿಸಹುದು.
ಹೇಳೋದ್ ಕೇಳಿ...!
- ಕುಳಿತಲ್ಲೇ ಕೂರಬೇಡಿ. ಎದ್ದು ಓಡಾಡಿ. ವ್ಯಾಯಾಮ ಮಾಡಿ.
- ವೈದ್ಯರು ಸೂಚಿಸಿದಷ್ಟು ಸಮಯ ದೇಹ ದಂಡಿಸಿ.
- ಕಂಪ್ಯೂಟರ್ ಮುಂದೆ ಕಡಿಮೆ ಸಮಯ ಕಳೆಯಿರಿ.
ಬದುಕಿನ ಭರವಸೆ
ಪಾರ್ಶ್ವವಾಯುವಿಗೆ ಒಳಗಾಗುವ ಜೀವಕೋಶಗಳಿಗೆ ಶಾಶ್ವತ ಹಾನಿ ಇಲ್ಲ. ನಡೆದಾಡಲು, ಮಾತನಾಡಲು, ಯೋಚಿಸಲು ದುರ್ಬಲತೆ ಉಂಟಾಗುತ್ತದೆ. ನರಕೋಶಗಳು ಸಾಯುವುದಿಲ್ಲ. ಹೀಗಾಗಿ ಬದುಕುವ ಭರವಸೆ ದಟ್ಟವಾಗಿದೆ. ಪುನಃಶ್ಚೇತನದತ್ತ ಗಮನ ಕೊಡಬೇಕು. ಜೀವಕೋಶಗಳು ಬಹಳ ಕ್ರೀಯಾಶೀಲತೆಯಳ್ಳವುಗಳಾಗಿವೆ. ಸತ್ತ ಜೀವಕೋಶಗಳಿಗೆ ಬದಲಾಗಿ ಹೊಸ ಜೀವಕೋಶಗಳು ಸೃಷ್ಟಿಗೊಳ್ಳುತ್ತಿರುತ್ತವೆ. ಸೂಕ್ತ ಚಿಕಿತ್ಸೆಯೊಂದಿಗೆ ಬದುಕುತ್ತೇವೆಂಬ ಇಚ್ಛಾಶಕ್ತಿ ಆಗತ್ಯ!
ಲಕ್ವಗೆ ಲಕ್ಷಣ ರೇಖೆ!
ನಿಮ್ಮ ದೇಹದ ತೂಕ ಸಮತೋಲನದಲ್ಲಿರಲಿ. ಶೇಕಡಾ 10ರಷ್ಟು ತೂಕ ಇಳಿಸಿದರೂ ರಕ್ತದೊತ್ತಡ ನಿಯಂತ್ರಿಸಿ ಬ್ಲಡ್ ಶುಗರ್ ನಿಯಂತ್ರಿಸುತ್ತದೆ. ಕಡಿಮೆ ಪ್ರಮಾಣದ ಉಪ್ಪು, ಹೆಚ್ಚಿನ ತರಕಾರಿ, ಹಣ್ಣು ಸೇವನೆ, ದಿನನಿತ್ಯ ವ್ಯವಸ್ಥಿತ ವ್ಯಾಯಾಮ ಹಾಗೂ ರಕ್ತದೊತ್ತಡಕ್ಕೆ ಸೂಕ್ತ ಸಮಯದಲ್ಲಿ ಅಗತ್ಯ ಚಿಕಿತ್ಸೆ ಪಡೆಯುತ್ತಿದ್ದರೆ ಪಾರ್ಶ್ವವಾಯುವಿಗೆ ಲಕ್ಷ್ಮಣ ರೇಖೆ ಹಾಕಬಹುದು.
-ಮಂಜುನಾಥ್ .ಎಲ್.ಕೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.