ಕಿರುತೆರೆಯಿಂದ ಬರುತ್ತಾರೆ
ಇದು ಸದ್ಯದ ಟಿವಿ ಆ್ಯಂಕರ್ಗಳ ಕತೆ. ವಾರ್ತೆ ಓದುತ್ತಾರಷ್ಟೇ, ಇನ್ನೇನು ಮಹಾ ಅಂತ ಕಡೆಗಣಿಸಬೇಡಿ...
'ನೋಡಲು ಸುಂದರ, ಆಕರ್ಷಕವಾಗಿರಬೇಕು. ಉಚ್ಚಾರ ಸರಾಗವಾಗಿರಬೇಕು. ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಸರಾಗವಾಗಿ ವ್ಯವಹರಿಸಬಲ್ಲವರಾಗಿರಬೇಕು. ಕಂಪ್ಯೂಟರ್ ಜ್ಞಾನ ಅಗತ್ಯ. ಜರ್ನಲಿಸಂನಲ್ಲಿ ಪದವಿ ಪಡೆದವರಿಗೆ ಆದ್ಯತೆ' ಎಂಬ ಜಾಹೀರಾತು. ಅದನ್ನನುಸರಿಸಿ ಇಂಟರ್ವ್ಯೂಗೆ ಬಂದ ಹುಡುಗಿಯ ಪ್ರೊಫೈಲ್ನಲ್ಲಿ 'ನಂಗೆ ಕುದುರೆ ಸವಾರಿ, ಈಜು, ಡ್ಯಾನ್ಸ್ ಕೂಡ ಗೊತ್ತು' ಎಂಬ ಒಕ್ಕಣೆ! 'ಇದ್ಯಾಕಮ್ಮಾ ಟಿವಿ ಆ್ಯಂಕರ್ ಆಗೋದಕ್ಕೆ ಇದೆಲ್ಲಾ ಬೇಕಾ?' ಅಂತ ಕೇಳುವಂತಿಲ್ಲ. ಅವಳಾಗಲೇ ಸಿನೆಮಾ ಹೀರೋಯಿನ್ ಆಗಲು ಸ್ಕೆಚ್ ಹಾಕುತ್ತಿದ್ದಾಳೆ! ಸಿನೆಮಾ ಫೀಲ್ಡಿಗೆ ಎಂಟ್ರಿ ಪಡೆಯಲು ಟಿವಿ ಆ್ಯಂಕರ್ ಆಗುವುದೀಗ ಪ್ರಥಮ ಹೆಜ್ಜೆ ಎಂಬುದಾಕೆಗೆ ಗೊತ್ತು.
ಇದು ಸದ್ಯದ ಟಿವಿ ಆ್ಯಂಕರ್ಗಳ ಕತೆ. ವಾರ್ತೆ ಓದುತ್ತಾರಷ್ಟೇ, ಇನ್ನೇನು ಮಹಾ ಅಂತ ಕಡೆಗಣಿಸಬೇಡಿ. ನೀವೀಗ ನೋಡುತ್ತಿರುವ ನಿರೂಪಕರು ಮುಂದಿನ ವರ್ಷ ಸಿನೆಮಾ ತೆರೆಯ ಮೇಲಿರಬಹುದು. ಕ್ಯಾಮೆರಾ ಎದುರಿಸುವುದಕ್ಕೆ ಇವರಿಗೆ ಮೊದಲಿನಿಂದ ಹೇಳಿಕೊಡಬೇಕಿಲ್ಲ ಎಂಬುದು ಪ್ಲಸ್ ಪಾಯಿಂಟ್. ಅಭಿನಯ? ಕೇಳಬೇಡಿ.
ಇಲ್ಲೂ ಚಿತ್ರರಂಗಕ್ಕೆ ಜಿಗಿಯಲು ಆಸೆಯಿರುವವರು ಅಧಿಕ. ಆದರೆ ಈಜಿ ದಡ ಸೇರೋರು ಕೆಲವೇ ಮಂದಿ ಮಾತ್ರ. ಇವರ ಪೈಕಿ ಮೊದಲು ನಮಗೆ ನೆನಪಾಗೋದು ಗೋಲ್ಡನ್ ಸ್ಟಾರ್ ಗಣೇಶ್. 'ನಮಸ್ಕಾರ...ನಮಸ್ಕಾರ...ನಮಸ್ಕಾರ' ಎನ್ನುತ್ತಾ ಟಿವಿ ಮುಂದೆ ಕೂತಿದ್ದ ವೀಕ್ಷಕರನ್ನು ತನ್ನತ್ತ ಸೆಳೆದ ಈ ಪ್ರತಿಭೆ ತನ್ನ ಅಭಿಮಾನಿ ವರ್ಗವನ್ನು ಥಿಯೇಟರ್ಗೂ ಎಳೆದದ್ದು ಈಗ ಇತಿಹಾಸ. ಅವರಿಗೆ ದೊಡ್ಡ ಬ್ರೇಕ್ ಕೊಟ್ಟದ್ದು ಮುಂಗಾರು ಮಳೆ. ನಂತರದ ದಿನಗಳಲ್ಲೂ, ತನ್ನ ಫಿಲ್ಮ್ ಬಿಡುಗಡೆಯಾಗುವ ಸಮಯದಲ್ಲಿ ಪಬ್ಲಿಸಿಟಿಗೋಸ್ಕರ ಟಿವಿ ಪರದೆಯಲ್ಲಿ ಆಗಾಗ ಕಾಣಿಸಿಕೊಂಡದ್ದುಂಟು.
ಮತ್ತೊಬ್ಬ ಯುವ ಪ್ರತಿಭೆ ಮಂಗಳೂರಿನ ಲಿಖಿತ್ ಶೆಟ್ಟಿ. ಬಕ್ರಾ ಎಂಬ ಕಾರ್ಯಕ್ರಮದಿಂದ ಪ್ರಸಿದ್ಧಿ ಪಡೆದ ಈ ಕರಾವಳಿ ಕುಡಿ ಚಲನಚಿತ್ರಕ್ಕೆ ಬರಲು ನಿರೂಪಣಾ ಕ್ಷೇತ್ರ ಕಾರಣವಂತೆ. ಮೊದಲು ಇವರಿಗೆ ಅವಕಾಶ ಸಿಕ್ಕಿದ್ದು ಕೋಸ್ಟಲ್ವುಡ್ನಲ್ಲಿ. 'ಒರಿಯರ್ದೊರಿ ಅಸಲ್' ಎಂಬ ತುಳು ಚಿತ್ರದ ಮುಖೇನ ಪದಾರ್ಪಣೆ ಮಾಡಿದ ಇವರು ಮೊದಲ ಚಿತ್ರದಲ್ಲೇ ಭರ್ಜರಿ ಯಶಸ್ಸು ಪಡೆದರು. ನಂತರ ಪೆರೋಲ್, ಪಂಚಾಮೃತ, ನಮ್ ದುನಿಯಾ ನಮ್ಸ್ಟೈಲ್ ತೆರೆಕಂಡಿವೆ.
ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಕೂಡಾ ಆ್ಯಂಕರಿಂಗ್ನಿಂದಲೇ ಮುಂದೆ ಬಂದವರು. ನಿಮ್ಮಿಂದ ನಿಮಗಾಗಿ, ಹೃದಯದಿಂದ, ಸರಿಗಮಪ ಶೋ ನಡೆಸಿಕೊಟ್ಟಿದ್ದ ಇವರಿಗೆ ತನ್ನ 18ನೇ ವಯಸ್ಸಿನಲ್ಲೇ ಪಿಯುಸಿ ಎಂಬ ಚಲನಚಿತ್ರದ ನಾಯಕಿಯ ಪಾತ್ರಕ್ಕೆ ಅವಕಾಶ ಬಂದೊದಗಿತು. ನಂತರ ಜಾಕಿ, ತಮಸ್ಸು, ಜುಗಾರಿ, ಮುರಳಿ ಮೀಟ್ಸ್ ಮೀರಾ, ಕ್ರೇಜಿಲೋಕ, ಬಿ-ತ್ರಿ, ಸೈಕಲ್ ಸೇರಿದಂತೆ ಅನೇಕ ಚಿತ್ರದಲ್ಲಿ ತನ್ನ ಮನೋಜ್ಞ ಅಭಿನಯದಿಂದ ಮಿಂಚಿದರು. ಸದ್ಯ ತಮಿಳು ಚಿತ್ರರಂಗಕ್ಕೂ ಕಾಲಿಡುವ ಸನ್ನಾಹದಲ್ಲಿದ್ದಾರೆ.
ಇತ್ತೀಚೆಗೆ ಬಿಡುಗಡೆಗೊಂಡ ಪರಾರಿ ಚಿತ್ರದ ನಾಯಕ ನಟ ಶ್ರವಂತ್ ಕೂಡಾ ಸತತ 6 ವರ್ಷ ನಿರೂಪಣಾ ವಲಯದಲ್ಲಿದ್ದೋರು. ಟಿವಿ ಪರದೆ ಮೇಲೆ ಇವರ ನಿರೂಪಣಾ ಶೈಲಿ ಗಮನಿಸಿದ ನಿರ್ದೇಶಕರು 'ಚಿಕ್ಕಮಗಳೂರ ಚಿಕ್ಕಮಲ್ಲಿಗೆ' ಎಂಬ ಚಿತ್ರದಲ್ಲಿ ಅವಕಾಶ ಕೊಟ್ಟರು. ಚಿತ್ರ ಅಷ್ಟೇನೂ ಹಿಟ್ ಆಗದಿದ್ದರೂ ಇವರ ನಟನೆ ಕ್ಲಿಕ್ ಆಯಿತು. 'ನಾನು ಏನು ಎಂದು ತೋರಿಸಿದ್ದು ನಿರೂಪಣೆ ಕ್ಷೇತ್ರ. ನನ್ನ ಈ ಮಟ್ಟಿನ ಯಶಸ್ಸಿನ ಹಿಂದೆ ನಿರೂಪಣೆಯ ಅನುಭವ ಖಂಡಿತಾ ಇದೆ' ಎನ್ನುವುದು ಶ್ರವಂತ್ ಮನದಾಳದ ಮಾತು.
ತನ್ನ ಮುಗ್ಧ ಮಾತು ಮತ್ತು ಚೊಕ್ಕ ನಿರೂಪಣೆಯಿಂದ ಗಮನ ಸೆಳೆದ ಮತ್ತೊಬ್ಬಳು ವಯ್ಯಾರಿ ಸ್ಪೂರ್ತಿ. ಜಾಲಿಡೇಸ್ ಇವರ ಮೊದಲ ಸಿನಿಮಾ. ನಂತರ ಬಾಡಿಗಾರ್ಡ್, ಜೋಶ್, ಪೃಥ್ವಿ, ಚೆಲ್ಲಿದರೂ ಸಂಪಿಗೆಯಾ, ಬುಲ್ಬುಲ್ ಮುಂತಾದ ಸಿನಿಮಾದಲ್ಲಿ ನಟಿಸಿದ್ದರು. ಜೊತೆಗೆ ತಮಿಳು ಮತ್ತು ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದ್ದಾಗಿದೆ.
ಖಾಸಗಿ ಮ್ಯೂಸಿಕ್ ವಾಹಿನಿಯ 'ಒಂದು ಪ್ರಶ್ನೆ ಒಂದು ಹಾಡು' ಶೋ ವೀಕ್ಷಕರ ಮನಗೆದ್ದಿತ್ತು. ಆ ಕಾರ್ಯಕ್ರಮದ ನಿರೂಪಕನೇ ರಾಹುಲ್. ರಾಹುಲ್ ಉತ್ತಮ ಬ್ಯಾಟ್ಸ್ಮನ್ ಕೂಡ ಹೌದು ಎಂದು ಸಿಸಿಎಲ್ನಲ್ಲಿ ಪ್ರೂವ್ ಆಗಿದೆ. ನನ್ನುಸಿರೇ, ಅಭಿಮಾನಿ, ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರಕ್ಕೆ ಅವಕಾಶ ಪಡೆದು ಚಿತ್ರರಂಗದಲ್ಲೂ ಸೈ ಎನಿಸಿದ್ದಾರೆ. ಸದ್ಯ ಟಾಲಿವುಡ್ ಕಡೆಯಿಂದಲೂ ಆಫರ್ ಬರುತ್ತಿದೆಯಂತೆ.
ಇತ್ತೀಚೆಗೆ ಬಿಡುಗಡೆಯಾದ ಜಿಂಕೆಮರಿ ಖ್ಯಾತಿಯ ಸೋನಿಯಾ ಗೌಡ ಕೂಡ ಚಿತ್ರರಂಗಕ್ಕೆ ಬರೋದಕ್ಕೆ ಮೊದಲು ಖಾಸಗಿ ವಾಹಿನಿಯ ನಿರೂಪಕಿಯಾಗಿದ್ದಳು. ಇವರಷ್ಟೇ ಅಲ್ಲ ಚಾರ್ಮಿನಾರ್ ಖ್ಯಾತಿಯ ಮೇಘನಾ ಗಾಂವ್ಕರ್, ನೆನಪಿರಲಿ ವರ್ಷಾ, ಶ್ವೇತಾ, ಕಾವ್ಯಾ ಶಾಸ್ತ್ರೀ, ಆನಂದ್, ಮನೀಷ್, ವಿನಾಯಕ್ ಜೋಷಿ, ಚಿಕ್ಕಣ್ಣ, ಗೌರೀಶ ಅಕ್ಕಿ, ಶೀತಲ್ ಹೀಗೆ ನಿರೂಪಣೆ ಕ್ಷೇತ್ರದಿಂದ ಚಿತ್ರರಂಗಕ್ಕೆ ಕಾಲಿಟ್ಟವರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇನ್ನಷ್ಟು ಮಂದಿ ಹೀಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ನಾವು ಊಹಿಸಬಹುದು.
ಚಿತ್ರರಂಗ ಯಾರನ್ನು ಸೆಳೆದಿಲ್ಲ ಹೇಳಿ. ಇವರ ನಿರೂಪಣಾ ಕೌಶಲ ಮತ್ತು ಮಾಧ್ಯಮದ ಅನುಭವವನ್ನು ಬಳಸಿಕೊಳ್ಳಲು ಚಿತ್ರರಂಗದವರು ಮುಂದಾಗುವುದಾದರೆ ಯಾರು ಬೇಡವೆನ್ನುತ್ತಾರೆ? ಆದರೆ ಕೆಲವರು ದೊಡ್ಡ ಹಕ್ಕಿಯ ಆಸೆಗಾಗಿ ಕೈಯಲ್ಲಿರುವ ಹಕ್ಕಿಯನ್ನು ಬಿಟ್ಟಂತಾಗಿರುವುದು ಸುಳ್ಳಲ್ಲ. ಆ ಮಟ್ಟಿಗೆ ಎಚ್ಚರಿಕೆ ಹಾಗೂ ವ್ಯವಹಾರ ಜ್ಞಾನ ಇಲ್ಲದಿದ್ದರೆ ಸೋಲು ಗ್ಯಾರಂಟಿ. ಆದರೂ ಇವರ ಉದಾಹರಣೆಗಳು ಮಾಧ್ಯಮ ಕ್ಷೇತ್ರಕ್ಕೆ ಬರುವ ಹೊಸ ಹುಡುಗ- ಹುಡುಗಿಯರನ್ನು ಆ ನಿಟ್ಟಿನಲ್ಲೂ ಯೋಚಿಸುವಂತೆ ಮಾಡಿರುವುದು ಸುಳ್ಳಲ್ಲ.
- ನವೀನ್ ಭಟ್ ಇಳಂತಿಲ