ಸಾಫ್ಟ್ ಸ್ಕಿಲ್ ತರಬೇತಿ
ಬೆಂಗಳೂರು ನಗರ ಸಂಚಾರ ಪೊಲೀಸರು ಆಟೋ ಚಾಲಕರಿಗಾಗಿ ಸಾಫ್ಟ್ ಸ್ಕಿಲ್ ತರಬೇತಿ ಆಯೋಜಿಸಿದ್ದಾರೆ. ಆಟೋ ಚಾಲಕರ ವರ್ತನೆ ಸರಿ ಇಲ್ಲ. ಅಂದರೆ, ಪ್ರಯಾಣಿಕರು ಕರೆದ ಕಡೆಗೆ ಚಾಲಕರು ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಪೊಲೀಸರಿಗೆ ಸಾಕಷ್ಟು ದೂರುಗಳು ಹೋಗಿದ್ದವು. ಈ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಆಟೋ ಚಾಲಕರಿಗೆ ಪ್ರತ್ಯೇಕ ತರಬೇತಿ ನೀಡಲು ಮುಂದಾಗಿದ್ದು, ಸಾಫ್ಟ್ ಸ್ಕಿಲ್ ಎಂಬ ತರಬೇತಿ ಹಮ್ಮಿಕೊಂಡಿದ್ದಾರೆ.
ಪ್ರಯಾಣಿಕರ ಜತೆ, ಸಾರ್ವಜನಿಕರ ಜತೆ ಹೇಗೆ ವರ್ತಿಸುವುದು, ಪ್ರಯಾಣಿಕರು ಕರೆದಲ್ಲಿಗೆ ಹೋಗುವುದು, ನಿರಾಕರಿಸದಿರುವುದು, ಆಟೋ ಮೀಟರ್ನಲ್ಲಿ ಮೋಸ ಮಾಡದಿರುವುದು ಸೇರಿದಂತೆ ಉತ್ತಮ ನಡವಳಿಕೆ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಆಟೋ ಚಾಲಕರ ವರ್ತನೆ ಸರಿಯಿಲ್ಲದಿದ್ದಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸುಬೇಕಾಗುತ್ತದೆ ಎಂಬ ಕಾರಣಕ್ಕೆ ಹಾಗೂ ಅವರ ಹಿತದೃಷ್ಟಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಪ್ರಮುಖ ಜಿಲ್ಲೆಗಳಲ್ಲಿ ಪ್ರೀಪೇಯ್ಡ್ ಆಟೋ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಆ ಕೇಂದ್ರವು ರಾತ್ರಿ, ಬೆಳಗ್ಗೆ (ದಿನದ 24 ಗಂಟೆ) ಕೆಲಸ ನಿರ್ವಹಿಸುತ್ತದೆ. ಅಲ್ಲಿ ಆಟೋ ಚಾಲಕರ ಕಿರಿಕಿರಿ ಇರುವುದಿಲ್ಲ. ಪ್ರಯಾಣಿಕರು ಬಂದು ಕರೆದ ಸ್ಥಳಕ್ಕೆ ಕಡ್ಡಾಯವಾಗಿ ಹೋಗಬೇಕು. ಇಲ್ಲವಾದಲ್ಲಿ ಆ ಕೇಂದ್ರದಲ್ಲಿ ತಮ್ಮ ವಾಹನ ನಿಲ್ಲಿಸಿಕೊಳ್ಳುವಂತಿಲ್ಲ.
ಈ ವೇಳೆ ಪ್ರಯಾಣಿಕರಿಗೆ ಹಾಗೂ ಆಟೋ ಚಾಲಕನಿಗೆ ರಸೀತಿ ನೀಡಲಾಗುತ್ತದೆ. ಪ್ರಯಾಣಿಕರು ಆಟೋ ಇಳಿದ ನಂತರ ಚಾಲಕನಿಗೆ ಹಣ ಪಾವತಿಸಬೇಕು. ಅವರ ವರ್ತನೆ ಸರಿಇಲ್ಲದಿದ್ದಲ್ಲಿ ಸಂಬಂಧಪಟ್ಟ ನಿಯಂತ್ರಣಾ ಕೊಠಡಿಗೆ ಮಾಹಿತಿ ನೀಡಲು ಸಾರ್ವಜನಿಕರಿಗೆ ಸೂಚಿಸಲಾಗಿದೆ.
- ಶಾಂತ ತಮ್ಮಯ್ಯ