ಸೌಲಭ್ಯಗಳು ಕಡಿಮೆ!
ಖಾಸಗಿ ಬಸ್ಸಿನ ಪ್ರಯಾಣ ಎಂದರೆ ಈಗಿನ ಜನ ನೋಡುವುದೇ ಹಣ. ಸರ್ಕಾರಿ ಬಸ್ಸಿನಲ್ಲಿ ದರ ಹೆಚ್ಚು. ಆದುದರಿಂದ ಜನ ಖಾಸಗಿಯಲ್ಲಿ ದರ ಕಡಿಮೆ ಎಂದು ಅದರಲ್ಲೇ ಪ್ರಯಾಣ ಬೆಳೆಸುತ್ತಾರೆ. ಆದರೆ, ಖಾಸಗಿ ಬಸ್ಸಿನಲ್ಲಿ ದರದ ಜೊತೆಗೆ ಸೌಲಭ್ಯಗಳೂ ಕಡಿಮೆ ಇರುತ್ತದೆ. ಅಲ್ಲದೇ ಜನಜಂಗುಳಿಯಲ್ಲಿ ಜೇಬು ಕಳ್ಳತನ, ಆಭರಣ ದೋಚುವಿಕೆ, ನಿದ್ದೆ ಹೋದರೆ ಮೊಬೈಲ್ ಅಪಹರಣ ಹೀಗೆ ಅನೇಕ ಅನಾನುಕೂಲಗಳು ಇವೆ. ನಮ್ಮ ಸರ್ಕಾರ ಇದನ್ನೆಲ್ಲ ನೋಡಿಕೊಂಡು ಬಡವರು ಸುಖಕರವಾಗಿ ಪ್ರಯಾಣಿಸಲು ಸರ್ಕಾರಿ ಬಸ್‌ಗಳಲ್ಲಿ ಟಿಕೆಟ್ ದರ ಕಡಿಮೆ ಮಾಡಿ ಸಹಾಯ ಮಾಡಬೇಕು. ಅಲ್ಲದೇ ಬಸ್ಸುಗಳ ಸಂಖ್ಯೆಯನ್ನೂ ಹೆಚ್ಚು ಮಾಡಬೇಕು. ಖಾಸಗಿ ಬಸ್ಸುಗಳು ಅರ್ಧ ಗಂಟೆಗೊಂದರಂತೆ ಇರುವುದರಿಂದ ವಿಧಿ ಇಲ್ಲದೇ ಖಾಸಗಿ ಬಸ್ಸನ್ನೇ ಅವಲಂಬಿಸಬೇಕಾಗಿದೆ. ಸರ್ಕಾರ ಇದರ ಬಗ್ಗೆ ಯೋಚಿಸಿ, ಎಲ್ಲ ಕಡೆಗಳಿಗೂ ಅದರಲ್ಲೂ ಹಳ್ಳಿಗಳಿಗೆ ಬಸ್‌ಗಳನ್ನು ಓಡಿಸಿದರೆ ಗ್ರಾಮಾಂತರ ಜನರಿಗೆ ಅನುಕೂಲವಾಗುತ್ತದೆ.
- ಎನ್. ಚಂದನ್, ಶಿವಮೊಗ್ಗ
ಓಡುವ ಸಂತೆಯಂತೆ!
ಖಾಸಗಿ ಬಸ್ಸುಗಳ ಪ್ರಯಾಣವು ಸುರಕ್ಷಿತ ಎಂದು ಹೇಳಲು ಆಗುವುದಿಲ್ಲ. ಏಕೆಂದರೆ ಖಾಸಗಿ ಬಸ್ಸುಗಳು ಪ್ರಯಾಣಿಕರನ್ನು ತುಂಬಿಕೊಂಡು ಒಯ್ಯುತ್ತದೆ. ಆದರೆ ಇದು ಸರ್ಕಾರಿ ಬಸ್ಸುಗಳ ರೀತಿಯಲ್ಲ. ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕಾಳಜಿ ಇರುವುದಿಲ್ಲ. ಅಲ್ಲದೇ ನೂಕುನುಗ್ಗಾಟ, ಚೀರಾಟ, ಸೀಟಿಗಾಗಿ ಪರದಾಟ ಹೇಳತೀರದು. ಇದರ ಮಧ್ಯೆ ಲಗೇಜುಗಳದ್ದೂ ಇನ್ನೊಂದು ರೀತಿಯ ಸಮಸ್ಯೆ. ಜನಗಳ ನಡುವೆ ಮೇಕೆ, ಕುರಿ, ಕೋಳಿಗಳು ಇದರಲ್ಲಿ ಸೇರಿ ಓಡುವ ಸಂತೆಯಂತೆ ಕಾಣುತ್ತದೆ. ಅಲ್ಲದೇ ಜಗಳಗಳು, ಹೊಡೆದಾಟಗಳು ಸರ್ವೇ ಸಾಮಾನ್ಯ. ಖಾಸಗಿ ಬಸ್ಸಿನ ಮಾಲೀಕರಿಗೆ ಲಾಭವಾದರೆ ಸಾಕು ಮಿಕ್ಕೆಲ್ಲವು ಅವರಿಗೆ ಗೌಣ. ದಿನವೂ ಇದರಲ್ಲೇ ಪ್ರಯಾಣಿಸಿದರೆ ಬೆನ್ನು ನೋವು ಕಾಯಂ ಆಗಿ ಆರೋಗ್ಯ ಹದಗೆಡುವುದು ಖಚಿತ. ಇವನ್ನೆಲ್ಲ ಗಮನಿಸಿದರೆ ಖಾಸಗಿ ಬಸ್ ಸುರಕ್ಷಿತವಲ್ಲ.
- ಸೋಮೇಶ್ವರ ಹೆಗಡೆ, ವಾಸ್ಕೋಡಿಗಾಮ
ಖಾಸಗಿಯದೇ ಜೋರು
ಎಲ್ಲಾ ಬಸ್ ಕಂಪನಿಗಳೂ ಜನರ ಹಿತದೃಷ್ಟಿಯನ್ನು ಇಟ್ಟು ಕೊಂಡು ತಮ್ಮ ಸೇವೆ ಪ್ರಾರಂಬಿಸುತ್ತವೆ. ಪ್ರಯಾಣದ ಸುರಕ್ಷತೆಯನ್ನು ನೋಡುವುದಾದರೆ ಸರ್ಕಾರಿ ಬಸ್ಸುಗಳು ಹೊರತಲ್ಲ. ಅಲ್ಲಿಯೂ ಅಪಘಾತಗಳು ಸಂಭವಿಸುತ್ತವೆ. ದರದ ವಿಷಯದಲ್ಲಿ ಸರ್ಕಾರಿ ಬಸ್ಸುಗಳಿಗಿಂತ ಖಾಸಗಿ ಬಸ್ಸುಗಳಲ್ಲಿ ದರ ಕಡಿಮೆ. ಅದಲ್ಲದೆ ಸಮಯ ಪರಿಪಾಲನೆಯಲ್ಲಿ ಖಾಸಗಿಯವರು ಮುಂಚೂಣಿಯಲ್ಲಿದ್ದಾರೆ. ಸರ್ಕಾರಿ ಬಸ್ಸುಗಳಿಲ್ಲದ ಕೆಲವು ಪ್ರದೇಶದಲ್ಲಿ ಖಾಸಗಿವರದೇ ಸೇವೆ ಜೋರು. ಸಮಯ ಪರಿಪಾಲನೆಯಲ್ಲೂ ಅವರೇ ಮುಂದು. ಪ್ರಯಾಣಿಕರೊಂದಿಗೆ ಸ್ನೇಹದಿಂದಲೂ ವರ್ತಿಸುತ್ತಾರವರು. ಪ್ರಯಾಣವೆಂದರೆ ಅಪಘಾತಗಳು ಇದ್ದದ್ದೇ ಅದು ಯಾವುದರಲ್ಲಾದರೂ ಆಗಬಹುದು. ಸಮಸ್ಯೆಗಳು ಎಲ್ಲ ಕಡೆಯೂ ಇರುತ್ತದೆ. ಆದರೆ ಸುರಕ್ಷತೆಯ ಕಡೆ ಎಲ್ಲರೂ ಗಮನಹರಿಸಿದರೆ ಒಳಿತು.
- ಸುಧೀರ ಭಟ್, ಬೆಂಗಳೂರು
'ಜಗುಲಿ'ಯಲ್ಲಿ ಈ ಸಲದ ವಿಷಯ 'ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆಯೇ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com