ನೀವೂ ಕಣ್ಣಿಡಬಹುದು
ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಸಂಚಾರ ಪೊಲೀಸರು ಮಾತ್ರ ನಿಗಾವಹಿಸಬೇಕು ಎಂಬ ನಿಯಮವೇನು ಇಲ್ಲ. ತಪ್ಪಿತಸ್ಥರ ಮೇಲೆ ನೀವೂ ಒಂದು ಕಣ್ಣಿಡಬಹುದು. ಇದೇನಿದು ಎಂದು ಉಬ್ಬೇರಿಸಬೇಡಿ. ಹೌದು, ಇದು ಬೆಂಗಳೂರು ಸಂಚಾರ ಪೊಲೀಸರು ಜಾರಿಗೆ ತಂದಿರುವ ಹೊಸ ಪದ್ಧತಿ. ಅದೇ ಪಬ್ಲಿಕ್ ಐ.
ಅಂದರೆ, ಈ ಪಬ್ಲಿಕ್ ಐ ಮೂಲಕ ಸಾರ್ವಜನಿಕರು ಪೊಲೀಸರಿಗೆ ಸಹಾಯ ಮಾಡುವುದು ಇದರ ಉದ್ದೇಶ.
ಎಲ್ಲಾ ರಸ್ತೆಗಳಲ್ಲೂ ಸಿಗ್ನಲ್‌ಗಳಲ್ಲೂ ಸಂಚಾರ ಪೊಲೀಸರು ಕರ್ತವ್ಯ ನಿರ್ವಹಿಸಲು ಆಗುವುದಿಲ್ಲ. ಹಾಗಾಗಿ ಸಾಕಷ್ಟು ಮಂದಿ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಾರೆ. ಈ ಹಿನ್ನೆಯಲ್ಲಿ ಸಿಸಿಟಿವಿ ಅಳವಡಿಸಿದ್ದರೂ ಹೆಚ್ಚು ಪ್ರಯೋಜನವಾಗುವುದಿಲ್ಲ. ಆರೋಪಿಗಳ ಪತ್ತೆ ಕಷ್ಟ.
ಹಾಗಾಗಿ ಪಬ್ಲಿಕ್ ಐ ಮೂಲಕ ತಪ್ಪಿತಸ್ಥರನ್ನು ಪತ್ತೆ ಮಾಡುವ ಹೊಸ ಚಿಂತನೆ ಇದು. ಸಂಚಾರ ಪೊಲೀಸರ ಅಂತರ್ಜಾಲದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನೀವು ಅದನ್ನು ಒಮ್ಮೆ ಗಮನಿಸಿ, ನಂತರ ತಪ್ಪಿತಸ್ಥರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು.
ಸಂಚರಿಸುವಾಗ ಯಾರಾದರೂ ನಿಯಮ ಉಲ್ಲಂಘಿಸಿದರೆ ಅದರ ಫೋಟೋ ತೆಗೆದು, ಇಲ್ಲವೇ ವಾಹನದ ಸಂಖ್ಯೆಯನ್ನು ದಾಖಲಿಸಿಕೊಂಡು ಅದನ್ನು ಸಂಚಾರ ಪೊಲೀಸರ ಫೇಸ್‌ಬುಕ್‌ನಲ್ಲಿ ಹಾಕಬಹುದು. ಇದರಿಂದ ತಪ್ಪಿತಸ್ಥರ ಪತ್ತೆಗೆ ಸುಲಭವಾಗುತ್ತದೆ ಎಂಬುದು ಪೊಲೀಸರ ಉದ್ದೇಶ.
ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ಹತ್ತಿರದ ಪೊಲೀಸ್ ಠಾಣೆಗೆ, ಕಂಟ್ರೋಲ್ ರೂಂಗೆ, ರಸ್ತೆ ಬದಿ ಕೆಲಸ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೂ ಈ ಮಾಹಿತಿ ನೀಡುವ ಮೂಲಕ ಪೊಲೀಸರಿಗೆ ಸಹಾಯ ಮಾಡಬಹುದು.
- ಶಾಂತ ತಮ್ಮಯ್ಯ