ಸಿಟಿ ಬಾ ಎಂದಿದೆ
ಪದವಿ ಮುಗಿಯುತ್ತಿದ್ದಂತೆ ಉದ್ಯೋಗ ಅರಸಿ ಬೆಂಗಳೂರು ಬಸ್ ಹತ್ತುವುದು ದಶಕಗಳಿಂದ ಬಂದಿರುವ ವಾಡಿಕೆ...
ಪದವಿ ಮುಗಿಯುತ್ತಿದ್ದಂತೆ ಉದ್ಯೋಗ ಅರಸಿ ಬೆಂಗಳೂರು ಬಸ್ ಹತ್ತುವುದು ದಶಕಗಳಿಂದ ಬಂದಿರುವ ವಾಡಿಕೆ. ಉದ್ಯೋಗ ಹೊಂದಬೇಕು, ತನ್ನ ಕಾಲ ಮೇಲೆ ನಿಲ್ಲಬೇಕು ಎಂಬ ಹಂಬಲ ಪ್ರತಿಯೊಬ್ಬ ಯುವಕ, ಯುವತಿಯ ಕನಸು.
ಅದೇನೋ ಸಿಲಿಕಾನ್ ಸಿಟಿಯ ಮೇಲೆ ಹಲವು ಪೋಷಕರಿಗೆ ಬಲವಾದ ನಂಬಿಕೆ. ತನ್ನ ಮಗ ಬೆಂಗಳೂರಲ್ಲಿ ಕೆಲಸದಲ್ಲಿದ್ದಾನೆ ಎಂದುಕೊಳ್ಳುವುದೇ ಹೆಮ್ಮೆ. ಮಗ ಪದವಿಯಲ್ಲಿರುವಾಗಲೇ ಬೆಂಗಳೂರಲ್ಲಿ ಉದ್ಯೋಗ ಹುಡುಕೆಂದು ತಿವಿಯಲು ಶುರು. 'ಓದಿದವರು ಕೃಷಿ ಮಾಡಬಾರದು' ಎಂಬ ಕುರುಡು ಕಟ್ಟಳೆ. ಎಷ್ಟು ದಿನಾಂತ ಹೀಗೆ ಅಪ್ಪನ ಕೈಲಿ ದುಡ್ಡು ಪಡೆಯುವುದು? ತನ್ನದು ಅಂತ ನಾಲ್ಕಾಸು ಸಂಪಾದಿಸಿದರೆ? ಎಂಬ ಆಲೋಚನೆಗಳು ಮೊಳಕೆ ಒಡೆಯಲು ಆರಂಭಿಸುತ್ತವೆ.
ಆಳೆತ್ತರಕ್ಕೆ ಬೆಳೆದಿದ್ದೀಯ ಒಂದು ನೌಕರಿ ಇಲ್ಲ, ನಿನಗ್ಯಾರು ಹೆಣ್ಣು ಕೊಡ್ತಾರೆ! ಎಂದು ಹಂಗಿಸುವ ಮಂದಿಗೇನೂ ಕೊರತೆ ಇಲ್ಲ. ಮನೆಯಲ್ಲಿ ತೀವ್ರ ಬಡತನ ಇದ್ದರಂತೂ 'ನಗರದಲ್ಲಿ ಯಾವುದಾದರು ಹೋಟೆಲ್ ಸೇರಿಯಾದರೂ ಸರಿ ದುಡಿಯೋಣ. ಒಂದಷ್ಟು ಮನೆಯವರಿಗೆ ಕಳಿಸುತ್ತ ನೆಮ್ಮದಿಯಾಗಿರೋಣ' ಎಂಬ ಹಂಬಲ ಕಾಡುತ್ತಿರುತ್ತದೆ. ಹೀಗೆ ಶಿಕ್ಷಣವಂತರು, ಶಿಕ್ಷಣ ವಂಚಿತರು, ಎಲ್ಲರೂ ಬರುವುದು ಬೆಂಗಳೂರಿಗೆ.
ತಮ್ಮ ಆಸೆ ಆಕಾಂಕ್ಷೆಗಳಿಗೆ ಜೀವ ಕೊಡುವ ಪ್ರಯತ್ನವಾಗಿ ಇಲ್ಲಿಗೆ ಬರುತ್ತಾರೆ. ಯಶಸ್ವಿಯಾಗುವವರು ಮಾತ್ರ ಬೆರಳಣಿಕೆ. ಕೆಲವರು ಮೋಸ ಹೋಗಿ ಇರುವುದೆಲ್ಲ ಕಳೆದುಕೊಂಡು ವಾಪಸಾಗುತ್ತಾರೆ. ಜೀವವನ್ನೇ ಕಳೆದುಕೊಂಡ ನತದೃಷ್ಟರ ಸಂಖ್ಯೆ ದೊಡ್ಡದಿದೆ. ಬೆಂಗಳೂರು ಎಂಬ ಮಹಾನಗರದಲ್ಲಿ ಏಗಬಲ್ಲನೇ ಎಂಬ ಪೂರ್ವ ವಿಮರ್ಶೆ ಅಗತ್ಯ. ಏಕ್ದಂ ಮಹಾನಗರಿಗೆ ಬಂದು ಹರಸಾಹಸ ಪಡುವುದಕ್ಕಿಂತ ಮುಂಜಾಗ್ರತೆ ವಹಿಸುವುದು ಒಳ್ಳೆಯದು. ಹೆಚ್ಚಿನ ಯುವತಿಯರು ಕಚೇರಿ, ಪೀಜಿ, ಸಹವರ್ತಿಗಳ ಪೂರ್ವಾಪರ ಮಾಹಿತಿ ಪಡೆದುಕೊಳ್ಳದೆ ಸೀದಾ ಮಹಾನಗರಿಗೆ ಬಂದುಬಿಡುತ್ತಾರೆ. ಹತ್ತಿರದಲ್ಲಿ ಸಂಬಂಧಿಕರು ಇಲ್ಲದಿದ್ದರೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು.
ಅಕಮಡೇಷನ್ ಎಂಬ ಮಂಡೆಬಿಸಿ!
ಪೀಜಿ ಸೇರುವಾಗ ಸಾಕಷ್ಟು ಜಾಗರೂಕರಾಗಿರಬೇಕು. ಒಂದೇ ಕೊಠಡಿಯನ್ನು 4-5 ಮಂದಿ ಹಂಚಿಕೊಳ್ಳುವ ಪರಿಸ್ಥಿತಿ. ಜೊತೆಗಿರುವವರು ಮೊದಲೇ ಪರಿಚಿತರಾಗಿದ್ದರೆ ಅನುಕೂಲ. ಅಡುಗೆ ಗೊತ್ತಿದ್ದರೆ ಆರೋಗ್ಯಕ್ಕೆ ಒಳ್ಳೆಯದು. ಗ್ಯಾಸ್ ಸ್ಟವ್ ಅಥವಾ ಇಂಡಕ್ಷನ್ ಸ್ಟವ್ ಬಳಸಿದರೆ ಉತ್ತಮ. ಸೀಮೆಎಣ್ಣೆ ಸ್ಟವ್ ಬಳಸಬಹುದು. ಕಸ ವಿಲೇವರಿ ಬಗ್ಗೆ ಗಮನ ನೀಡಬೇಕು. ಕಾರ್ಪುರೇಷನ್ ಕಳುಹಿಸುವ ಕಸದ ಗಾಡಿಗೆ ತ್ಯಾಜ್ಯ ನೀಡಬಹುದು. ಬಾಡಿಗೆ ಮನೆ ಅಥವಾ ರೂಂ ಮಾಡುತ್ತೀರಿ ಎಂದಾದರೆ ಕೆಲವು ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಬಾತ್ ರೂಂ, ಟಾಯ್ಲೆಟ್ ವ್ಯವಸ್ಥೆ, ಶುದ್ಧ ನೀರು, ಸುತ್ತಲಿನ ಏರಿಯಾ, ಎಷ್ಟನೆ ಮಾಳಿಗೆ, ಬಾಡಿಗೆ, ಅಲ್ಲಿರಲು ನಿಯಮ ಹೀಗೆ ಹಲವಾರು ಮಜಲು.
ಉದ್ಯೋಗ ಕೊಡಿಸುತ್ತಾಳೆಂದು ಬೆಂಗಳೂರಿಗೆ ಬಂದಿದ್ದೆ!
ಮನೆಯಲ್ಲಿ ಮದುವೆ ಮಾತುಕತೆ ನಡೆಸುತ್ತಿದ್ದರು. ಆದರೆ ನನಗೆ ಅಷ್ಟು ಬೇಗ ಮದುವೆ ಆಗಲು ಮನಸ್ಸಿರಲಿಲ್ಲ. ಹಾಗಂತ ಅಪ್ಪನನ್ನು ಎದುರು ಹಾಕಿಕೊಳ್ಳುವಂತಿರಲಿಲ್ಲ. ನೊಂದು ಫೇಸ್ಬುಕ್ನಲ್ಲಿ ಅಳು ತೋಡಿಕೊಂಡಿದ್ದೆ. ಸ್ವಲ್ಪ ದಿನಗಳ ನಂತರ, ಪ್ರಿಯಾಂಕ ಹೆಸರಿನ ಫ್ರೆಂಡ್ ರಿಕ್ವೆಸ್ಟ್ ಬಂತು. ಬೆಂಗಳೂರಿನ ಯಾವುದೋ ಕಾಲ್ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಳು. ನನ್ನ ನೋವಿಗೆ ಸಾಂತ್ವನ ಹೇಳುತ್ತಿದ್ದಳು. ಇದರಿಂದ ಅವಳ ಮೇಲೆ ನಂಬಿಕೆ ಬರತೊಡಗಿತು. ಮನೆಯಲ್ಲಿ ಮದುವೆಗೆ ಒತ್ತಾಯಿಸುತ್ತಿರುವ ವಿಚಾರ ಅವಳಲ್ಲಿ ಹರವಿದೆ.
ನೀನೆಷ್ಟು ಓದಿದ್ದೀಯಾ? ಇಂಗ್ಲೀಷ್ನಲ್ಲಿ ಮಾತಾಡೋಕೆ ಬರತ್ತಾ ಕೇಳಿದಳು. ಬಿಕಾಂ ಪದವಿ ಹೊಂದಿದ್ದೇನೆ. ಇಂಗ್ಲೀಷ್ನಲ್ಲಿ ಚೆನ್ನಾಗಿ ಮಾತಾಡ್ತೀನಿ ಅಂತ ಹೇಳಿದೆ. ಹಾಗಾದರೆ ಚಿಂತೆ ಬಿಡು. ಬೆಂಗಳೂರಿಗೆ ಬಾ. ಕಾಲ್ಸೆಂಟರ್ನಲ್ಲಿ ಪೋಸ್ಟ್ ಖಾಲಿ ಇದೆ. ಖಂಡಿತಾ ನಿನಗೆ ಕೆಲಸ ಸಿಗತ್ತೆ ಎಂದಳು. ಯಾವಾಗ, ಎಷ್ಟು ಹೊತ್ತಿಗೆ, ಯಾವ ಬಸ್ಸಲ್ಲಿ ಬರುತ್ತೇನೆ ಎಂಬ ಮಾಹಿತಿ ನೀಡಿದೆ. ಮನೆಯವರನ್ನು ತಪ್ಪಿಸಿ ಹೊರಡುವ ಗಡಿಬಿಡಿಯಲ್ಲಿ ಅಂದುಕೊಂಡ ಬಸ್ಸಿಗೆ ಹೋಗಲಾಗಲಿಲ್ಲ. ನಂತರದ ಬಸ್ಸಲ್ಲಿ ಬರುತ್ತಿದ್ದೇನೆಂದು ಆಕೆ ಹೇಳೋಣವೆಂದು ಮೊಬೈಲ್ ತಡಕಾಡಿದೆ. ಅದನ್ನು ಮನೆಯಲ್ಲೇ ಬಿಟ್ಟುಬಂದಿದ್ದೆ. ಇನ್ನು ಮನೆಗೆ ವಾಪಸು ಹೋದರೆ ಸಿಕ್ಕಿಬೀಳುತ್ತೇನೆಂದು ಆದದ್ದಾಗಲಿ ಎನ್ನುತ್ತಾ ಬೆಂಗಳೂರಿನ ಬಸ್ ಹತ್ತಿಬಿಟ್ಟೆ.
ಮೆಜಸ್ಟಿಕ್ನಲ್ಲಿ ಲಾಸ್ಟ್ ಸ್ಟಾಪ್ ಎಂದಾಗ ಎಚ್ಚೆತ್ತುಕೊಂಡೆ. ಆಕೆಗೆ ಕಾಯಿನ್ ಫೋನ್ನಿಂದಾದರು ಕಾಲ್ ಮಾಡೋಣವೆಂದರೆ ನಂಬರ್ ಮೊಬೈಲ್ನಲ್ಲಷ್ಟೇ ಸೇವ್ ಮಾಡಿಕೊಂಡಿದ್ದೆ. ಏನೂ ತೋಚದೆ ಗಾಬರಿಗೀಡಾಗಿದ್ದೆ. ಯಾರಿಗೂ ಅನುಮಾನ ಬರಬಾರದೆಂದು, ಬೆಂಗಳೂರು ಚಿರಪರಿಚಿತ ಎಂಬ ರೀತಿಯಲ್ಲಿ ನಡೆಯುತ್ತ ಬಸ್ಸ್ಟಾಪ್ನಿಂದ ದೂರ ಬಂದೆ. ಅದೃಷ್ಟ ಎಂಬಂತೆ ಸೈಬರ್ ಕಣ್ಣಿಗೆ ಬಿತ್ತು. ಓಡಿ ಹೋಗಿ, ಬೇಗಬೇಗನೆ ಫೇಸ್ಬುಕ್ ಲಾಗ್ಇನ್ ಆದೆ. ಪ್ರಿಯಾಂಕ ಎಂಬ ಹೆಸರನ್ನು ಸರ್ಚ್ನಲ್ಲಿ ಟೈಪ್ ಮಾಡಿದೆ. ಅಚ್ಚರಿ ಕಾದಿತ್ತು.
ನನ್ನೊಂದಿಗೆ ಇಷ್ಟು ದಿನ ಚಾಟ್ ಮಾಡಿದವಳ ಫ್ರೊಫೈಲ್ ಇರಲೇ ಇಲ್ಲ. ಇದರಲ್ಲೇನೋ ಮೋಸ ಇದೆ ಎಂಬ ಅನುಮಾನ ಹುಟ್ಟಿತು. ಸೀದಾ ಮೆಜೆಸ್ಟಿಕ್ಗೆ ಬಂದೆ. ನಮ್ಮೂರಿನ ಬೋರ್ಡ್ ಇದ್ದ ಬಸ್ ಏರಿ ಕುಳಿತೆ. ನಡೆದ ಸಂಗತಿಯನ್ನು ಮನೆಯಲ್ಲಿ ಹೇಳಿದೆ. ಅವರ ಕಣ್ಣುಗಳಲ್ಲಿ ನೀರು ಬಂತು. ಈಗಲೂ ಬೆಂಗಳೂರು ಎಂಬ ಹೆಸರು ಕೇಳಿದೊಡನೆ ಈ ಘಟನೆ ನೆನಪಾಗುತ್ತದೆ. ದೇಹ ಸಣ್ಣಗೆ ಕಂಪಿಸುತ್ತದೆ!
- ಸೋನಿಯಾ ಶರ್ಮಾ ಲಕ್ಷ್ಮೀಪುರ
ಮುಳ್ಳಿನ ಮೇಲಣ ಬದುಕು!
ಬೆಂಗಳೂರಲ್ಲಿ ನೆಂಟ್ರಮನೆ ಇದೆ. ಉಳಿದುಕೊಳ್ಳೋದಕ್ಕೆ ಏನೂ ತೊಂದರೆ ಇಲ್ಲ ಅಂದವನು, ನಂಗೆ ಉಳಿದುಕೊಳ್ಳೋಕೆ ಅರ್ಜೆಂಟಾಗಿ ವ್ಯವಸ್ಥೆ ಆಗಬೇಕಾಗಿದೆ. ಕಾಲೇಜಿಗೆ ಹೋಗ್ತಿದ್ದಾಗ 'ಬೆಂಗಳೂರಿಗೆ ಬಾ, ಎಲ್ಲಾ ವ್ಯವಸ್ಥೆ ಮಾಡಿಕೊಡ್ತೀನಿ' ಅಂದಿದ್ರು. ನೆಂಟರ ಮನೆ ಅಂದ್ರೆ ಎರಡು ದಿನ ಚೆನ್ನಾಗಿರತ್ತೆ. ನಂತರ ಯಾವಾಗ ಪೀಡೆ ತೊಲಗತ್ತೋ ಅನ್ನೋ ರೀತಿ ನೋಡ್ತಾರೆ ಅಂತಾನೆ.
ಐಡೆಂಟಿಟಿ ಮುಖ್ಯ. ಅಡ್ರೆಸ್ ಐಡಿ, ಮತದಾರ ಚೀಟಿ, ಡ್ರೈವಿಂಗ್ ಲೈಸೆನ್ಸ್ ಎಲ್ಲಾ ಕೇಳ್ತಾರೆ. ಯಾವುದೂ ಜೊತೆಗಿಲ್ಲ. ಬೆಂಗಳೂರು ಬಿಟ್ಟು ಹೋಗೋಣ ಅಂತಾ. ಆದ್ರೆ ತುಂಬ ಒಳ್ಳೆ ಕಂಪನಿ. ಕೆಲಸ ಬಿಟ್ರೆ ಮತ್ತೆ ಸಿಗಲ್ಲ. ಮಧ್ಯವರ್ತಿಯ ಸಹಾಯದಿಂದ ಪಾನ್ ಕಾರ್ಡ್, ರೂಂ ವ್ಯವಸ್ಥೆ ಆಯಿತು. ಮಧ್ಯವರ್ತಿಗೆ ಒಂದು ತಿಂಗಳ ಬಾಡಿಗೆ. ಅಡ್ವಾನ್ಸ್ ಅಂತ ಐದಂಕಿಯ ದೊಡ್ಡ ಮೊತ್ತ. ಒಂದೆಡೆ ನೆಲೆ ನಿಂತ ಮೇಲೆ ಒಂದೊಂದಾಗಿ ಬೇಕಾದ ವ್ಯವಸ್ಥೆ ಮಾಡಿಕೊಳ್ಳುತ್ತ ಬದುಕಿನ ಬಂಡಿ ಹೂಡಿದ್ದಾನೆ. ಇವತ್ತು ಅವನೇ ಬೆಂಗಳೂರಿಗೆ ಬರುವ ಮುಂಚೆ ಏನೇನು ತಯಾರಿ ನಡೆಸ್ಬೇಕು ಅಂತ ಹೇಳ್ತಾನೆ.
ಊರಲ್ಲಿ ಇರುವಾಗ್ಲೇ ವೋಟರ್ ಐಡಿ, ಪಾನ್ ಕಾರ್ಡ್, ಆಧಾರ್ ಕಾರ್ಡ್ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಬೆಂಗಳೂರು 1 ಕಚೇರಿಯಲ್ಲಿ ಮಾಡಿಸಿಕೊಳ್ಳಬಹುದು. ಕೆಲಸ ಸಿಕ್ಕಿತೆಂದು ತಕ್ಷಣ ಬೆಂಗಳೂರಿಗೆ ಹೊರಡದೆ ಸಂಬಳ ಎಷ್ಟು? ಯಾವ ಬ್ಯಾಂಕ್ನ ಖಾತೆಗೆ ಸಂಬಳ ಹಾಕುತ್ತಾರೆ? ವಸತಿ ವ್ಯವಸ್ಥೆ ಚೆನ್ನಾಗಿದೆಯಾ ನೋಡಿಕೊಳ್ಳಬೇಕು. ಊರಿನಲ್ಲೇ ಬ್ಯಾಂಕ್ ಖಾತೆ ತೆಗೆದು ಏಟಿಎಂ ಕಾರ್ಡ್ ಪಡೆದುಕೊಂಡರೆ ಉತ್ತಮ. ಬಾಡಿಗೆ, ಆಹಾರ ಇತ್ಯಾದಿ ಖರ್ಚಿಗೆ ಸಂಬಳ ಸಾಕಾಗುತ್ತದಾ ಎಂಬ ಮುಂದಾಲೋಚನೆ ಮಾಡಿಕೊಳ್ಳಬೇಕು. ಕಚೇರಿಗೆ ಸೇರುವ ಮುನ್ನ ಮುಂಚಿತವಾಗಿ ಒಂದು ವಾರ ಮೊದಲೇ ಬಂದು ಸ್ನೇಹಿತರ ಮನೆಯಲ್ಲೋ ನೆಂಟರ ಮನೆಯಲ್ಲೋ ಉಳಿದುಕೊಂಡು ಬಾಡಿಗೆ ಮನೆ ಹುಡುಕುವ ಪ್ರಯತ್ನ ಮಾಡಬೇಕು. ನಾಲ್ಕೈದು ಕಡೆ ನೋಡಿ, ವಿಚಾರಿಸಿ, ಅಳೆದು ತೂಗಿ ಬಾಡಿಗೆ ಮನೆ ಗೊತ್ತುಮಾಡಿಕೊಳ್ಳಬೇಕು. ಟೋಕನ್ ಅಡ್ವಾನ್ಸ್ ಬಗ್ಗೆ ಎಚ್ಚರ. ಅಗ್ರಿಮೆಂಟ್ಗೆ ಸಹಿ ಹಾಕುವ ಮೊದಲು ಸರಿಯಾಗಿ ಓದಿಕೊಳ್ಳಬೇಕು...
ಊಟದ್ದೇ ಸಮಸ್ಯೆ!
ಬೆಂಗಳೂರಿಗೆ ಬಂದ ಶುರುವಿನ ದಿನ ಪರದಾಡಿದ್ದು ವಿಳಾಸ ಹುಡುಕಲು. ಹೋಟೆಲ್ಗಳಲ್ಲಿ ಬೆಳ್ತಿಗೆ ಅಕ್ಕಿ ಬಳಸುವುದರಿಂದ ಕಷ್ಟವಾಗುತ್ತಿದೆ. ಕುಚ್ಚಲಕ್ಕಿ ಊಟ ಮಾಡಿ ಅಭ್ಯಾಸ. ಹೆಚ್ಚಿನವರು ನೆರೆಯ ರಾಜ್ಯದವರಾಗಿರುವುದರಿಂದ ಇಂಗ್ಲಿಷ್ ಹಾಗೂ ಕನ್ನಡ ಸಾಕಾಗುವುದಿಲ್ಲ. ಈಗ ಬಹಳ ಚಳಿ ಇರುವುದರಿಂದ ಹೊಂದಿಕೊಳ್ಳುವುದೂ ಕಷ್ಟಸಾಧ್ಯ.
- ಪ್ರಜ್ವಲ್ ಪಿ. ಜೆ., ಮಂಗಳೂರು ಮೂಲದ ಉದ್ಯೋಗಿ
- ಮಂಜುನಾಥ್ ಎಲ್.ಕೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.