ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ವೈದ್ಯನೂರು

Vishwanath S
Updated On : 27 Dec 2013, 7:14 am

1937. ಪಂಡಿತ್ ನೆಹರೂ ಊಟಿಯಿಂದ ಮೈಸೂರಿಗೆ ತೆರಳುವಾಗ ನಂಜನಗೂಡಿಗೆ ಬಂದಿದ್ದರು. ಜೊತೆಯಲ್ಲಿ ಪತ್ನಿ ಕಮಲಾ ಮತ್ತು ಪುತ್ರಿ ಇಂದಿರೆ. ಗಣ್ಯರು ಊಟಿ ರಸ್ತೆಯ ವೃತ್ತದಲ್ಲಿ ನೆಹರೂ ಕುಟುಂಬವನ್ನು ಸ್ವಾಗತಿಸಿ ಬರಮಾಡಿಕೊಂಡರು. ಪ್ರಮುಖರೊಬ್ಬರು ಪ್ರಸಿದ್ಧ ಶ್ರೀಕಂಠೇಶ್ವರನ ದೇವಾಲಯಕ್ಕೆ ಬರುವಂತೆ ನೆಹರೂ ಅವರನ್ನು ವಿನಂತಿಸಿದರು. ಅವರ ಕೋರಿಕೆಯನ್ನು ಕಿವಿಯ ಮೇಲೆ ಹಾಕಿಕೊಳ್ಳದ ನೆಹರು, ನಿಮ್ಮೂರಿನಲ್ಲಿ ಯಾವುದೇ ಕಾರ್ಖಾನೆ ಇಲ್ಲವೇ ಎಂದರಂತೆ. ಆಗ ಊರಿನ ಮಾನ ಉಳಿಸಿದ್ದು, ಇಂದು ಶತಮಾನೋತ್ಸವ ಸಂಭ್ರಮದಲ್ಲಿರುವ ದಿ ಸದ್ವೈದ್ಯಶಾಲೆ.
ನಂಜನಗೂಡಿನ ನಾರಾಯಣ ರಾಯರ ಅಗ್ರಹಾರದ ಭಿಷಗ್ರತ್ನ ಬಿ.ವಿ. ಪಂಡಿತರ ನಾಡ ಹೆಂಚಿನ ಮನೆಯಲ್ಲಿ  1913ರಲ್ಲಿ ಸಣ್ಣ ಗುಡಿ ಕೈಗಾರಿಕೆಯಾಗಿ ಜನ್ಮತಳೆದ ಸಂಸ್ಥೆ ಇಂದು ದೊಡ್ಡ ಪ್ರಮಾಣದ ಕೈಗಾರಿಕೆಯಾಗಿ ಮೈತಳೆದಿದೆ. 1924ರಲ್ಲಿ ಧನ್ವಂತರಿ ವಿಲಾಸದಲ್ಲಿ ದೊಡ್ಡ ಘಟಕವನ್ನು ಹೊಂದಿ ನೂರಾರು ಕುಟುಂಬಗಳಿಗೆ ಆಸರೆ ನೀಡಿ ಜನರ ಬಾಯಲ್ಲಿ ಪಂಡಿತರ ಫ್ಯಾಕ್ಟ್ರಿ ಎಂದು ಕರೆಯಲ್ಪಟ್ಟಿತ್ತು. ಅಂದು ನೆಹರು ಪಂಡಿತರ ಫ್ಯಾಕ್ಟರಿಗೆ ಭೇಟಿ ನೀಡದಿದ್ದರೂ, ಪುಟ್ಟ ಪಟ್ಟಣದಲ್ಲೊಂದು ಕಾರ್ಖಾನೆ ಇರುವುದನ್ನು ಕೇಳಿ ಸಂತಸಪಟ್ಟರಂತೆ. ಇಂದು 200ಕ್ಕೂ ಹೆಚ್ಚು ಬಗೆಯ ಔಷಧ ತಯಾರಿಕೆ ಎಸ್ವಿಎಲ್ನ ಹೆಗ್ಗಳಿಕೆ.
1961ರಲ್ಲಿ ಪಂಡಿತರು ಊಟಿ ಹೆದ್ದಾರಿಯಲ್ಲಿ ಹನ್ನೆರಡು ಎಕರೆ ಪ್ರದೇಶದಲ್ಲಿ ಧನ್ವಂತರಿ ಆರೋಗ್ಯಾಶ್ರಮ ಎಂಬ ಸಸ್ಯಕಾಶಿ ಹುಟ್ಟುಹಾಕಿ ಆಯುರ್ವೇದ ಆಸ್ಪತ್ರೆ ತೆರೆದು ಸಾವಿರಾರು ಮಂದಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಿ ಪುರಾತನ ವೈದ್ಯಶಾಸ್ತ್ರದ ಬಗೆಗೆ ಜನರಲ್ಲಿ ನಂಬಿಕೆ ಗಟ್ಟಿಗೊಳಿಸಿದರು. ಅಂದು ಪಂಡಿತರು ಮೈಸೂರಿಗೆ ಸೈಕಲ್ನಲ್ಲಿ ಹೋಗಿ ಉತ್ಪನ್ನಗಳನ್ನು ಮಾರುತ್ತಿತ್ತಿದ್ದರು. 1957ರಲ್ಲಿ ಬೆಂಗಳೂರಿನಲ್ಲಿ ಮಾರಾಟ ಮಳಿಗೆ ತೆರೆಯುವ ಮಟ್ಟಿಗೆ ಎಸ್ವಿಎಲ್ ಬೆಳೆಯಿತು. ಇಂದು ನಾಡಿನೆಲ್ಲೆಡೆ ಸಂಸ್ಥೆ ಮಳಿಗೆಗಳನ್ನು ಹೊಂದಿದೆ.
ಪುರೋಹಿತರ ಮಗನಾಗಿ ವೈದ್ಯಶಾಸ್ತ್ರದಲ್ಲಿ ಒಲವು ಬೆಳೆಸಿಕೊಂಡ ಆಯುರ್ವೇದ ಪದವಿ ಪಡೆದ ಬಿ.ವಿ. ಪಂಡಿತರು ಅಂದು ಸಂಶೋಧಿಸಿದ ನಂಜನಗೂಡು ಹಲ್ಲುಪುಡಿ ದಕ್ಷಿಣ ಭಾರತದಲ್ಲೇ ಖ್ಯಾತಿ ಗಳಿಸಿತ್ತು. ದಕ್ಷಿಣಕಾಶಿ ಖ್ಯಾತಿಯ ಕಿರೀಟಕ್ಕೆ ನಂಜನಗೂಡು ರಸಬಾಳೆಯೊಂದಿಗೆ ಹಲ್ಲುಪುಡಿಯೂ ಸೇರಿತು. ಸಿದ್ಧೌಷಧಗಳು, ಟಾನಿಕ್, ಸುಗಂಧದ್ರವ್ಯಗಳು, ಎಸ್ವಿಎಲ್ನ ಪ್ರಮುಖ ತಯಾರಿಕೆಗಳು. ಇಲ್ಲಿನ ಸೌಭಾಗ್ಯಶುಂಠಿ, ಬಾಣಂತಿ ಲೇಹ ವಿದೇಶವನ್ನೂ ತಲುಪಿದೆ. ಓಜೋಜೀವನ್ ಲೇಹ್ಯ, ಭಾವನಾಶುಂಠಿ, ಕೇಶವರ್ಧಕ ತೈಲವಾದ ನೀಲ, ಓಜೋಲ, ಶ್ರೀಕರ ಕಸ್ತೂರಿಮಾತ್ರೆ, ಸುಕುಮಾರ ತೈಲ, ಭೃಂಗಾಮಲಕ ತೈಲ, ರೋಸ್ವಾಟರ್, ಸೊಗದೇ ಬೇರಿನ ಷರಬತ್ತು ಮತ್ತು ಗುಲ್ಕನ್ ಮಾರುಕಟ್ಟೆಯಲ್ಲಿ ನಿರಂತರ ಬೇಡಿಕೆಯಲ್ಲಿವೆ. ಗುಣಮಟ್ಟದಲ್ಲಿ ಎಂದೂ ರಾಜಿಯಾಗದ ಸಂಸ್ಥೆ ಶತಮಾನದಿಂದ ಗ್ರಾಹಕರ ನಂಬಿಕೆ ಕಾಯ್ದುಕೊಂಡು ಬಂದಿದೆ ಎನ್ನುತ್ತಾರೆ ಪಂಡಿತರ ಮೂರನೇ ತಲೆಮಾರಿನ ಮೊಮ್ಮಕ್ಕಳೂ, ಎಸ್ವಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಎನ್.ಬಿ.ರಾಮಗೋಪಾಲ್ ಮತ್ತು ರಾಜೇಶ್ ಶ್ರೀನಿವಾಸನ್.
ಧನ್ವಂತರಿ ಆರೋಗ್ಯಾಶ್ರಮ ಈಗ ಆಧುನಿಕ ಸೌಲಭ್ಯಗಳೊಂದಿಗೆ ನಳನಳಿಸುತ್ತಿದೆ. ಪಂಡಿತರ ಪುತ್ರ ಪದ್ಮಭೂಷಣ ಡಾ.ಬಿ.ವಿ. ಶ್ರೀಕಂಠನ್ ಅವರು ಎಸ್ವಿಎಲ್ ಚೇರ್ಮನ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಪಂಚಕರ್ಮ ಚಿಕಿತ್ಸೆ, ಕಾಟೇಜ್, ಜನರಲ್ ವಾರ್ಡ್, ಡಾರ್ಮೆಟರಿ, ಲೈಬ್ರರಿ, ಜಾಗಿಂಗ್ ಟ್ರ್ಯಾಕ್, ಹರ್ಬಲ್ ಗಾರ್ಡನ್ ಜೀವ ತಳೆದಿವೆ. ಪುತ್ರರಾದ ನಂಜುಂಡಸ್ವಾಮಿ, ರಾಮಸ್ವಾಮಿ, ಬಾಲಸುಬ್ರಮಣ್ಯಂ, ವೆಂಕಟೇಶ್ಮೂರ್ತಿ ಆಸರೆಯಾಗಿ ನಿಂತಿದ್ದಾರೆ. ಶತಮಾನೋತ್ಸವ ವೇಳೆ ನಂಜನಗೂಡು ಟೂತ್ಪೇಸ್ಟ್ ಅನ್ನು ಮಾರುಕಟ್ಟೆಗೆ ಬಿಡುವ ಯೋಜನೆಯಿದೆ.

- ನಂಜನಗೂಡು ಮೋಹನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments