ದೊಡ್ಡವರ ಚಿಂತನೆಗಳು ಜಲಪಾತದಂತೆ!
ಪಂಚನದಿಗಳ ನಾಡಾದ ಪಂಜಾಬಿಗೆ ಸ್ವಾಮೀಜಿ ಭೇಟಿ ನೀಡಿದರು. ಆಗ ಅವರನ್ನು ಭೇಟಿಯಾದ ಇಬ್ಬರು ಸನ್ಯಾಸಿನಿಯರಿಗೆ 'ಹೆಣ್ಣುಮಕ್ಕಳಿಗಾಗಿಯೇ ಒಂದು ಶಾಲೆ ತೆರೆಯುವಂತೆ ಸೂಚಿಸುತ್ತಾ, ವಿದ್ಯಾರ್ಥಿನಿಯರಿಗೆ ಉಪಾಧ್ಯಾಯಿನಿಯರೇ ಶಿಕ್ಷಣ ನೀಡುವಂತಾಗಬೇಕು' ಎಂದರು. ಅಲ್ಲಿಯ ನಾಗರಿಕರು ಇದನ್ನು ಅಂಗೀಕರಿಸಿ ಒಂದು ಸಮಿತಿಯನ್ನು ರಚಿಸಿಕೊಂಡು ಹೆಣ್ಣುಮಕ್ಕಳಿಗಾಗಿಯೇ ಒಂದು ಶಾಲೆ ತೆರೆದರು.
ಲಾಹೋರಿಗೆ ಭೇಟಿ ನೀಡಿ ಅಲ್ಲಿಯ ಯುವಕರನ್ನುದ್ದೇಶಿಸಿ 'ಪಂಜಾಬಿನ ತರುಣರೇ, ನೀವು ಸಾವಿರ ಸುಧಾರಕರನ್ನು, ರಾಜಕೀಯ ಪಂಗಡಗಳನ್ನು ಸೇರಿಸಬಹುದು. ಆದರೆ ಅವುಗಳಿಂದ ನೀವು ಉದ್ಧಾರವಾಗಲಾರಿರಿ. ಎಲ್ಲಿಯವರೆಗೆ ನಿಜವಾದ ಸಹಾನುಭೂತಿ, ಪ್ರೀತಿ, ಮರುಗುವ ಅಂತಃಕರಣ ನಿಮ್ಮಲ್ಲಿ ಉಂಟಾಗುವುದಿಲ್ಲವೋ, ಎಲ್ಲಿಯವರೆಗೆ ಬುದ್ಧನ ಹೃದಯವು ಭರತಖಂಡದಲ್ಲಿ ಆವಿರ್ಭವಿಸುವುದಿಲ್ಲವೊ, ಎಲ್ಲಿಯವರೆಗೆ ಶ್ರೀಕೃಷ್ಣನ ಬೋಧನೆಗಳು ಅನುಷ್ಠಾನಕ್ಕೆ ಬರುವುದಿಲ್ಲವೊ ಅಲ್ಲಿಯವರೆಗೆ ನಮಗೆ ಯಾವುದೇ ಭವಿಷ್ಯವಿಲ್ಲ. ಮೊದಲು ಅನ್ನ, ಆಮೇಲೆ ಅಧ್ಯಾತ್ಮ! ನಮ್ಮ ಜನರಿಗೆ ಹೊಟ್ಟೆಗಿಲ್ಲದಿದ್ದರೂ ಧರ್ಮವಂತೂ ಅಜೀರ್ಣವಾಗುವಷ್ಟಿದೆ. ನಮ್ಮಲ್ಲಿ ಎರಡು ಮಹಾಪಾತಕಗಳಿವೆ, ಒಂದು ದೌರ್ಬಲ್ಯ; ಮತ್ತೊಂದು ದ್ವೇಷ. ನೀವು ಸಾವಿರ ಸಿದ್ಧಾಂತಗಳನ್ನು ಹರಡಬಹುದು, ಲಕ್ಷ ಪಂಥಗಳನ್ನು ಸೃಜಿಸಬಹುದು. ಆದರೆ ನಿಮ್ಮಲ್ಲಿ ಇತರರಿಗಾಗಿ ಮರುಗುವ ಹೃದಯವಿಲ್ಲದಿದ್ದರೆ, ನಿಮ್ಮ ಸಿದ್ಧಾಂತ ಬೋಧನೆ, ಮತಪ್ರಚಾರ ಕೆಲಸಕ್ಕೆ ಬರುವುದಿಲ್ಲ. ಮೊದಲು ಅಧೋಗತಿಗಿಳಿಯುತ್ತಿರುವ ಲಕ್ಷಾಂತರ ಭಾರತೀಯರನ್ನು ಕೈಹಿಡಿದು ಮೇಲೆತ್ತಿ.'
-ಆನಂದ ಎಸ್.ಎನ್.
anandsn193@gmail.com