ವಿದ್ಯಾರಂಭ
ಈಕೆ ಗಗನ ಸಖಿಯಾದರೂ ಸೀದಾ ವಿಮಾನ ನಿಲ್ದಾಣದಿಂದ ಗಾಂಧಿನಗರಕ್ಕೆ ಬಂದ ಹುಡುಗಿ ಅಲ್ಲ. ಮಾಡೆಲಿಂಗ್, ಟಿವಿ ರಿಯಾಲಿಟಿ ಶೋಗಳಲ್ಲಿ ಬಳುಕಿದ ಮೇಲೆ ಸಿನಿಮಾ ಕ್ಯಾಮೆರಾ ಮುಂದೆ ನಿಂತವಳು. ಊರು ಮೈಸೂರು. ಆದರೆ, ಹೆಸರು ಮಲ್ಲಿಗೆ ಅಲ್ಲ, ವಿದ್ಯಾ. ಈಗಷ್ಟೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಂತೆ ಕಂಡರೂ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟು ತುಂಬಾ ವರ್ಷಗಳೇ ಕಳೆದಿವೆ. ಆದರೆ, ತಾನು ಸಹ ಇಲ್ಲಿ ನಟಿಯಾಗಬಹುದು ಎಂದು ಭರವಸೆ ಮೂಡಿಸಿದ್ದು ಇತ್ತೀಚೆಗಷ್ಟೆ ಬಿಡುಗಡೆಯಾದ 'ಭಜರಂಗಿ' ಚಿತ್ರ.
ನಟ ಶಿವರಾಜ್ಕುಮಾರ್ ಅಭಿನಯದ, ಹರ್ಷ ನಿರ್ದೇಶನದ ಈ ಚಿತ್ರದಲ್ಲಿ ಮುಖ್ಯ ಪಾತ್ರ ನಟಿಸಿರುವ ವಿದ್ಯಾಗೆ ಸಿನಿಮಾ ನಟಿಯಾಗಬಹುದು ಎನ್ನುವ ಭರವಸೆ ಬಂದಿದೆ. ವಿಶೇಷ ಅಂದರೆ ಈ ಚಿತ್ರದ ನಂತರ ಮೂರು ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. 'ಭಜರಂಗಿ' ಚಿತ್ರದಲ್ಲಿ ಶಿವರಾಜ್ಕುಮಾರ್ ಅವರ ಅಬ್ಬರದಲ್ಲಿ ಈಕೆಯ ಪಾತ್ರ ಪ್ರೇಕ್ಷಕರ ಕಣ್ಣಿನಿಂದ ನಾಪತ್ತೆಯಾಗಿಲ್ಲ ಎಂಬುದಕ್ಕೆ ವಿದ್ಯಾಳಿಗೆ ಸಿಗುತ್ತಿರುವ ಈ ಅವಕಾಶಗಳೇ ಸಾಕ್ಷಿ.
ಗಗನ ಸಖಿಯಾಗಿದ್ದ ನಿಮಗೆ ಸಿನಿಮಾ ನಟಿಯಾಗಬೇಕೆಂದು ಅನಿಸಿದ್ದು ಯಾಕೆ?
ಕೇವಲ ಗಗನ ಸಖಿ ಮಾತ್ರವಾಗಿದ್ದರೆ ಸಿನಿಮಾ ಕಡೆಗೆ ಗಮನ ಹರಿಯುತ್ತಿರಲಿಲ್ಲವೆನೋ. ಆದರೆ, ವಿಮಾನದಲ್ಲಿ ಓಡಾಡುವ ಜೊತೆಗೆ ಮಾಡೆಲಿಂಗ್ ಮಾಡುತ್ತಿದ್ದೆ. ಸಾಕಷ್ಟು ರ್ಯಾಂಪ್ ಶೋಗಳನ್ನು ಕೊಟ್ಟಿದ್ದೇನೆ. ಬಿಡುವಿನ ವೇಳೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದೆ. ಒಮ್ಮೆ ನಟ ಸಾಯಿಕುಮಾರ್ ನಡೆಸುವ 'ವ್ಹಾವ್' ಶೋಗೆ ಸೆಲೆಬ್ರಿಟಿ ಮಾಡೆಲ್ ಆಗಿ ಹೋಗಿದ್ದೆ. ಆ ಶೋನಲ್ಲಿ ಸಾಕಷ್ಟು ಹೆಸರು ಬಂದು. ಸಿನಿಮಾದವರ ಸಂಪರ್ಕವೂ ಸಿಕ್ಕತು. ಅಲ್ಲಿಂದಲೇ ಸಿನಿಮಾ ಆಕರ್ಷಣೆ ಹುಟ್ಟಿಕೊಂಡಿತು.
ನಿಮ್ಮ ಸಿನಿಮಾ ಪಯಣ ಶುರುವಾಗಿದ್ದು ಎಲ್ಲಿಂದ?
ನನಗೆ 'ಭಜರಂಗಿ'ಯ ಮೂಲಕ ಜನ ಗುರುತಿಸುತ್ತಿದ್ದರೂ, ತೆಲುಗು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. 'ವ್ಹಾವ್' ರಿಯಾಲಿಟಿ ಶೋಗಾಗಿ ಹೈದರಾಬಾದ್ನಲ್ಲೇ ಇದ್ದಾಗ ಸಿಕ್ಕ ಅವಕಾಶಗಳು ಇವು. ಆದರೆ, ನನಗೆ 'ಭಜರಂಗಿ' ಚಿತ್ರ ಹೆಚ್ಚು ಹೆಸರು ತಂದುಕೊಟ್ಟಿರುವುದರಿಂದ ಇದೇ ಮೊದಲ ಚಿತ್ರ ಅಂತ ಹೇಳಬಲ್ಲೆ.
ಭಜರಂಗಿ ಸಿನಿಮಾದ ಶೂಟಿಂಗ್ ಅನುಭವ ಹೇಗಿತ್ತು?
ಸಿನಿಮಾ ಶುರುವಿನಲ್ಲೇ ನನ್ನ ಪಾತ್ರ ಬರುತ್ತದೆ. ನನ್ನ ಪಾತ್ರದ ಮೂಲಕವೇ ಸಿನಿಮಾ ಶುರುವಾಗುವುದು ಮಾತ್ರವಲ್ಲ, ನನ್ನ ಡೈಲಾಗ್ಗಳಿಂದಲೇ ಚಿತ್ರದ ನಾಯಕ ಶಿವರಾಜ್ಕುಮಾರ್ ಅವರು ಎಂಟ್ರಿ ಕೊಡುತ್ತಾರೆ. ಶಿವರಾಜ್ಕುಮಾರ್ ಅವರ ಮುಂದೆ ನಿಂತು ನಟಿಸಿದ್ದು ತುಂಬಾ ಖುಷಿ ಕೊಟ್ಟಿತು. ರೀ ಟೇಕ್ಗಳಿಲ್ಲದೇ ನಟಿಸಿದ್ದೇನೆ ಎಂಬುದು ಸಂತೋಷದ ವಿಷಯ.
ಸರಿ, ಮುಂದಿನ ಚಿತ್ರಗಳ ಕುರಿತು ಹೇಳಿ?
ನಿರ್ದೇಶಕ ರಾಜಶೇಖರ್ ಅವರ ನಿರ್ದೇಶನದ 'ನೂರೊಂದು ನೆನಪು' ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಈ ಚಿತ್ರಕ್ಕೆ ಇತ್ತೀಚೆಗಷ್ಟೆ ಆಡಿಯೋ ಧ್ವನಿ ಮುದ್ರಣ ನಡೆಯಿತು. ಇದರ ನಂತರ ನಟ ವಿಜಯ್ ರಾಘವೇಂದ್ರ ಅಭಿನಯದ ಹಾರರ್ ಚಿತ್ರದಲ್ಲಿ ಎರಡನೇ ನಾಯಕಿ ಪಾತ್ರ. ಇದರ ನಿರ್ದೇಶಕ ಹರಿಕಿರಣ್. ಕನ್ನಡ, ತೆಲುಗು ಎರಡೂ ಭಾಷೆಯಲ್ಲಿ ಈ ಚಿತ್ರ ಶುರುವಾಗಲಿದೆ. ಇದರ ಜೊತೆಗೆ ಇನ್ನು ಎರಡು ಚಿತ್ರಗಳಲ್ಲಿ ಮುಖ್ಯ ಪಾತ್ರ ಮಾಡುವ ಅವಕಾಶ ಸಿಕ್ಕಿದೆ. ಇದೆಲ್ಲ 'ಭಜರಂಗಿ' ತೆರೆಗೆ ಬಂದು ಮೇಲಿನ ಬೆಳವಣಿಗೆ.
ನೀವು ಯಾವ ರೀತಿಯ ಪಾತ್ರಗಳನ್ನು ಇಷ್ಟಪಡುತ್ತೀರಿ?
ಕಥೆಗೆ ಪೂರಕವಾಗಿರುವ ಯಾವುದೇ ಪಾತ್ರ ಮಾಡಲು ನಾನು ಸಿದ್ಧ. ಗ್ಲಾಮರ್, ಎಕ್ಸ್ಪೋಸಿಂಗ್ಗೂ ರೆಡಿ. ಆದರೆ, ಆ ಪಾತ್ರಕ್ಕೆ ಮಹತ್ವ ಇರಬೇಕು.ಟಿ
-ಆರ್.ಕೇಶವಮೂರ್ತಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.