ಒಂದು ಸಾಲಿನ ಕತೆ
ಒಂದೇ ಸಾಲಿನಲ್ಲಿ ಉತ್ತರಿಸಲಾಗದು ಬದುಕೆಂಬ ಕ್ಲಿಷ್ಟ ಪ್ರಶ್ನೆ ಪತ್ರಿಕೆಗೆ. ಆಕಾಶಕ್ಕೆ ಏಣಿ ಇಟ್ಟಂತೆ, ಜೀವಮಾನವೇ ಜಾರಿ ಹೋಗುತ್ತದೆ. ದಿನ, ವಾರ, ತಿಂಗಳು ಕೊನೆಗೆ ಸಾಲು ಸಾಲಾಗಿ ಪರಿವೆಯೇ ಇಲ್ಲದೆ ಕಳೆದುಹೋಗುತ್ತವೆ, ರಾತ್ರಿ ಬೆಳಗಾದಂತೆ ಸಾಲುಗಳು.
ಈ ಸಾಲಿನಲ್ಲಿ ಆಗದ್ದು, ಮುಂದಿನ ಸಾಲಿನಲ್ಲಿ ಮಾಡುವ ಇರಾದೆ. ಪ್ರೌಢಿಮೆಯ ಭ್ರಮೆ ಮೈಮನವಿಡೀ ಹಬ್ಬುತ್ತದೆ, ಕಾಲಾಂತರ ಕಡೆಗಣಿಸಿ. ದಿನ ಎಣಿಸಿ, ಗುಣಿಸಿ, ಭಾಗಿಸುವಷ್ಟರಲ್ಲಿ ಆ ಸಾಲೂ ತುಳಿದಿರುತ್ತದೆ ನಿರ್ಗಮನದ ಹಾದಿ. ಮನಸ್ಸು ಮರುಗುತ್ತದೆ ಸಾಲು ಸಾಲುವುದಿಲ್ಲವೆಂದು. ಖಾಲಿ ಕೈಯಲ್ಲಿ ಬಂದು ಹೋಗುವ ನಮಗೂ, ಸಾಲುಗಳಿಗೂ ವ್ಯತ್ಯಾಸವಿಲ್ಲ. ಇಪ್ಪತ್ತೈದರ ಗುಣಾಕಾರದ ಹಬ್ಬಗಳಿಗೆ ಯಾವ ಸಾಲಿನ ಹಂಗಿಹುದೋ ಜಾಸ್ತಿ. ಸಾಧನೆ, ಪ್ರತಿಷ್ಠೆಯ ಬೆಂಬತ್ತುವ ನಾವು ಸಾಲುಗಳ ಸಾಲಗಾರರಲ್ಲವೆ? ನೋಡು-ನೋಡುತ್ತಿದ್ದಂತೆ ಮತ್ತೆ ಬಂದೆರಗುತ್ತದೆ ಯಾವ ಭಕ್ಷೀಸನ್ನೂ ಬೇಡದೆ ಹೊಸ ಸಾಲು, ಹೊಸ ಸವಾಲು, ಹೊಸ ಅಹವಾಲು...
-ಸಂದೀಪ ಫಡ್ಕೆ, ಮುಂಡಾಜೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.