ಮೂಕ ಹಕ್ಕಿಯು ಹಾಡುತಿದೆ
ಅದೊಂದಿನ ಶಾಲೇಲಿ ಮಕ್ಕಳೆದುರು ನನ್ನ ಪಾಠ. ಬಾಯಿ ಬಾಯಿ ಬಿಟ್ರೂ ದನಿ ಅವರಿಗೆ ತಲುಪುತ್ತಿಲ್ಲ. ಮಕ್ಕಳು ಮುಖ ಮುಖ ನೋಡ್ತಿದ್ದಾರೆ. ನಂಗೆ ನನ್ನ ಸ್ವರವೇ ಕೇಳುತ್ತಿಲ್ಲ. ಓಹ್ ಗಂಟಲು ನನ್ ಮಾತ್ ಕೇಳ್ತಿಲ್ಲ. ನನ್ನ ದನಿ ಅವರ ಬಳಿ ಹೋಗುತ್ತಿಲ್ಲ. ಗಂಟಲು ಕೆಟ್ಟಿದೆ, ಧ್ವನಿ ಕುಗ್ಗಿದೆ, ಸುರಂಗದೊಳಗಿಂದ ಬಂದಂತೆ ಶಬ್ಧ. ನನಗೆ ನನ್ನ ಬಗ್ಗೆಯೇ ಜಿಗುಪ್ಸೆಯಾದಂತಾಯಿತು. ಪಾಠ ನಿಲ್ಲಿಸಿದೆ. ಅಂದಿನ ದಿನ ಹಾಗೇ ಮೂಕನಾಗಿ ಕಳೆದೆ. ಯೋಚಿಸಲಾರಂಭಿಸಿದೆ. ಕೇವಲ ಒಂದು ಅವಧಿ, ಒಂದು ದಿನ ನನ್ನ ಧ್ವನಿ ಕೈ ಕೊಟ್ಟಿದ್ದಕ್ಕೆ ಈ ಪರಿ ನೋಯಬೇಕಾದರೆ ಹುಟ್ಟಿನಿಂದಲೇ ಮೂಕರಾದ, ಕಿವುಡರಾದ, ಕುರುಡರಾದವರ ಪಾಡೇನು? ಅವರ ಮಾನಸಿಕ ತುಮುಲಗಳ ಬಗ್ಗೆ ನಾವೆಷ್ಟರ ಮಟ್ಟಿಗೆ ಸ್ಪಂದಿಸಬಲ್ಲೆವು ಎಂದು ಇಡೀ ರಾತ್ರಿ ಆಲೋಚಿಸಿದೆ. ಕಾಲಿಗೆ ಸಣ್ಣ ಮುಳ್ಳು ಚುಚ್ಚಿದರೆ ತನ್ನ ಕಾಲೇ ಹೋಯ್ತೇನೋ ಅಂತ ಗೋಳಾಡ್ತಾನೆ. ಕಾಲೇ ಇಲ್ಲದವನು ಏನು ಮಾಡಬೇಕು? ರಿಯಾಲಿಟಿ ಶೋಗಳಲ್ಲಿ ಸೋತವರು ಹಾಕೋ ಕಣ್ಣೀರು ಮನ ಮಿಡಿಯುತ್ತೆ. ಶಾಲೆ ಮುಖ ಕಾಣದೆ, ಒಳ್ಳೆ ಬಟ್ಟೆ ನೋಡದೆ, ಕೂಲಿ ಮಾಡೋ ಹಳ್ಳಿ ಮಗು ಏನು ಮಾಡಬೇಕು? ಇರೋದನ್ನ ಕಂಡು ಸಂತಸ ಪಡದ ನಮ್ಮ ಮನ ಯಾಕೆ ಅತಿ ಕುಬ್ಜವಾಗುತ್ತಾ ಇದೆ? ನಮ್ಮ ಮಕ್ಕಳಿಗೆ ನಾವೇಕೆ ಸೋಲೋ ಖುಷಿಯ ಬಗ್ಗೆ ಹೇಳಿಕೊಡುತ್ತಿಲ್ಲ? ಆಕಾಶ, ಚುಕ್ಕಿ, ಸೂರ್ಯ, ಚಂದ್ರ, ನೆಲ, ಹಸಿರು, ಹಕ್ಕಿ, ಹೂ, ಹಾಡು, ಕವಿತೆ, ಅಮ್ಮ, ಅಪ್ಪ ಮುಂತಾದ ನೂರಾರು ಮನ ಅರಳಿಸುವ ಸುಖೀ ಸಂಗತಿ ನಮ್ಮ ಸುತ್ತಾ ಇರುವಾಗ ಇಲ್ಲದರ ಬಗ್ಗೇನೆ ಕೊರಗೋದು ಯಾಕೆ? ಹಕ್ಕಿ ಮೂಕಾದರೇನು ಮನ ಮೂಕಾಗಬಾರದಲ್ಲವೆ?
-ಸಂತೆಬೆನ್ನೂರು ಫೈಜ್ನಟ್ರಾಜ್