ಶ್ರಮದ ತೈಲ ಉರಿಸಲು ಇಲ್ಲಿ ಬಂದರು
ಈಗಷ್ಟೇ ತೀರಕ್ಕೆ ಬಂದು ನಿಂತು ತೊನೆದಾಡುತ್ತಿರುವ ದೋಣಿಗಳಲ್ಲಿ ತಂದಿಳಿಸಿದ ಬಂಗುಡೆ ಬೂತಾಯಿಯ ಘಮಲು ಗಾಳಿಗೆ ಮತ್ತೇರಿಸಿದೆ. ಅದೆಲ್ಲೋ ತಲೆಹೊರೆಗಳಲ್ಲಿ ಬಂದು ಹೊತ್ತವರ ಬೆವರಿನ ರುಚಿ ಕಂಡ ಉಳ್ಳಾಲದ ಅಚ್ಚುಬೆಲ್ಲದ ಮೂಟೆಮೂಟೆಗಳು ಇನ್ನೂ ಇದೀಗಷ್ಟೆ ಲಾರಿಗಳಿಂದ ಅನ್‌ಲೋಡ್ ಆಗುತ್ತಿವೆ. ಮಾರಿದಾತನ ಮುಖದಲ್ಲಿ ನಗು ಅರಳಿಸಬಲ್ಲ ಯಾಲಕ್ಕಿ ಮೂಟೆಗಳೂ ಅಲ್ಲೇ ಬದಿಯಲ್ಲಿವೆ. ಮೂಲೆಯಲ್ಲಿದ್ದರೂ ಕಾಳುಮೆಣಸು ಮೂಗಿಗೂ ಖಾರ ಮುಟ್ಟಿಸುತ್ತಿದೆ. ಕೂಲಿಗಳು ಎತ್ತಿ ಎಸೆಯುತ್ತಿರುವ ಒಣ ಕುಮಟೆ ಮೆಣಸಿನ ಮೂಟೆಯಿಂದ ಬೀಜಗಳು ಗಾಳಿಯಲ್ಲಿ ಹರಡಿ ಘಾಟು ಹಬ್ಬಿ ಅಭ್ಯಾಸವಿಲ್ಲದವರ ಕಣ್ಣುಮೂಗುಗಳಲ್ಲಿ ನೀರಿಳಿಸುತ್ತಿದೆ. ಮೂಟೆಗಳ ಹೊತ್ತೊಯ್ಯುತ್ತಿರುವ ಕೂಲಿಗಳು ಓಣಿಗಳಲ್ಲಿ ಸಾಗಿ ಕಣ್ಮರೆಯಾದರೂ ಪರಿಮಳ ಉಳಿದೇ ಇದೆ.
ಬಂದರು ಪೇಟೆಯ ಆಚೆಗೆ ಇದೆ ಸಮುದ್ರ. ಈಚೆಗಿದೆ ದುಡಿಯಬಂದವರ ಬೆವರಿನ ಸಮುದ್ರ.
ಈ ರಸ್ತೆಗಳು ಮುಗಿಯುವುದೇ ಇಲ್ಲವೇನೋ ಎಂಬಂಥ ಭ್ರಮೆ ಹುಟ್ಟಿಸುತ್ತವೆ. ಆದರೆ ಬಂದರಿನ ಬೀದಿಗಳು ವಿಶಿಷ್ಟ. ಅವು ಎಲ್ಲೆಲ್ಲೋ ಹೇಗ್ಹೇಗೋ ಸಾಗಿ, ಒಂದಕ್ಕೊಂದು ವಿಚಿತ್ರ ರೀತಿಯಲ್ಲಿ ಹೆಣೆದುಕೊಂಡು ಚಕ್ರವ್ಯೂಹ ನಿರ್ಮಿಸಿ ಕೊನೆಗೂ ವಿಶಾಲ ನೀಲಿ ಜಲರಾಶಿಯ ಹತ್ತಿರ ಬಂದು ಪುಳಕ್ಕನೆ ಮಾಯವಾಗಿಬಿಡುತ್ತವೆ. ದಾರಿಯ ಬೆನ್ನು ಹತ್ತಿದವನಿಗೆ ದಾರಿಗಳೇ ಇಲ್ಲದ, ಅಥವಾ ಎಲ್ಲೆಲ್ಲೂ ದಾರಿಗಳೇ ತುಂಬಿರುವ ವಾರಿಧಿಯ ಜಗತ್ತೊಂದು ತೆರೆದುಕೊಂಡುಬಿಡುತ್ತದೆ. ಇದಲ್ಲವೆ ವಿಚಿತ್ರ?
ಇಡೀ ಬಂದರು ವಿಚಿತ್ರ ಧಾವಂತದಿಂದೆಂಬಂತೆ ಚಲಿಸುತ್ತಿರುತ್ತದೆ. ಇಲ್ಲಿ ದುಡಿಯಬಂದವರಿಗೆ ಮಾತ್ರ ಬೆಲೆ. ಇಲ್ಲಿ ದುಡಿಯುತ್ತಿರುವವರ ಶ್ರಮದ ತೈಲದಿಂದ ರಥಬೀದಿಯ ಸಾಲು ಸಾಲು ದೇವಳಗಳ ಹಣತೆ ಉರಿಯುತ್ತಿದೆ.
-ಫಣೀಶ ಕಾಮತ್