ಆರ್ಯಸಮಾಜದ ಮೇಲೆ ಆರ್ಯಪುತ್ರನ ಪ್ರಭಾವ!
ಆ ಕಾಲಕ್ಕೆ ಲಾಹೋರಿನಲ್ಲಿ ಆರ್ಯ ಸಮಾಜ ಪ್ರಬಲವಾಗಿತ್ತು. 'ಅನಾದಿ ಕಾಲದಿಂದ ನಡೆದುಬರುತ್ತಿರುವ ಶ್ರಾದ್ಧಕಾರ್ಯ ಅಥವಾ ಪಿತೃಪೂಜೆ ಎನ್ನುವುದೇ ಹಂದೂ ಧರ್ಮದ ಮೂಲ, ಧರ್ಮಶ್ರದ್ಧೆ ಪ್ರಾರಂಭವಾದದ್ದೇ ಅಲ್ಲಿಂದ. ಮೊಟ್ಟಮೊದಲು ಹಿಂದೂಗಳು ತಮ್ಮ ಪಿತೃಗಳನ್ನು ಒಬ್ಬ ಮನುಷ್ಯನ ಮೇಲೆ ಆವಾಹನೆ ಮಾಡಿ ಆ ಮನುಷ್ಯನ ಮೂಲಕ ಪಿತೃಗಳನ್ನು ಪೂಜಿಸುತ್ತಿದ್ದರು. ಪಿಂಡಪ್ರದಾನ ಮಾಡುತ್ತಿದ್ದರು. ಆದರೆ ಈ ಮನುಷ್ಯ ಶಾರೀರಿಕವಾಗಿ ಬಹಳ ಯಾತನೆಗಳನ್ನು ಅನುಭವಿಸುತ್ತಿದ್ದ. ಇದು ಮೊದಮೊದಲು ಜನರಿಗೆ ಅರ್ಥವಾಗಲಿಲ್ಲ. ಬರಬರುತ್ತಾ ಅರ್ಥವಾಯಿತು. ಪಿತೃಗಳನ್ನು ಆವಾಹನೆ ಮಾಡಿದ್ದರಿಂದಲೇ ಈ ಮನುಷ್ಯನು ಯಾತನೆಗೆ ಗುರಿಯಾಗುತ್ತಿರುವುದು ಎಂದು. ಆದ್ದರಿಂದ ಜನರು ದರ್ಭೆಯಿಂದ ಆಕೃತಿಯನ್ನು ಮಾಡಿ ಪಿತೃಗಳನ್ನು ಆವಾಹನೆ ಮಾಡಿ ಪೂಜೆ, ಪಿಂಡಪ್ರದಾನ ಮಾಡಲು ಪ್ರಾರಂಭಿಸಿದರು. ಈ ಪಿತೃಪೂಜೆಯೇ ಮುಂದೆ ವೈದಿಕವಾದಂತಹ ದೇವತಾರಾಧನೆಯ ರೂಪವನ್ನು ಪಡೆದುಕೊಂಡಿತು.' ಎಂದು ಸ್ವಾಮೀಜಿ ವಿವರಿಸಿದರು.
ಸ್ವಾಮೀಜಿಯ ಅರ್ಥಪೂರ್ಣ ವಿಶ್ಲೇಷಣೆಯಿಂದ ಪ್ರಭಾವಿತರಾದ ಆರ್ಯಸಮಾಜದವರು ಸ್ವಾಮೀಜಿಗೆ ನಿಕಟರಾಗತೊಡಗಿದರು, ಸ್ವಾಮೀಜಿಯನ್ನು ಪೂಜ್ಯಭಾವದಿಂದ ಕಾಣಲಾರಂಭಿಸಿದರು. ಆರ್ಯಸಮಾಜದವರು ತಮ್ಮ ದ್ವಂದ್ವಗಳ ಕುರಿತು ಸ್ವಾಮೀಜಿಯ ಬಳಿ ಪರಿಹರಿಸಿಕೊಳ್ಳತೊಡಗಿದರು.
ಹೀಗೆ ಸ್ವಾಮೀಜಿ ಸಮಾಜದ ಯಾರೊಡನೆಯೂ ದ್ವೇಷ ಕಟ್ಟಿಕೊಳ್ಳದೆ, ಟೀಕೆಗಳಿಗೆ ಉತ್ತರಿಸುತ್ತಾ ಕಾಲಹರಣ ಮಾಡದೆ ತಮ್ಮ ಕಾರ್ಯದಲ್ಲಿ ತಲ್ಲೀನರಾಗಿ ಮುಂದೆ ಸಾಗುತ್ತಿದ್ದರು.
-ಆನಂದ ಎಸ್.ಎನ್.
anandsn193@gmail.com