ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ವಾಲ್ಟರ್ ಬ್ರಹ್ಮಚರ್ಯ

Parashurama
Updated On : 8 Feb 2013, 3:54 am

ಈತ ಅಪ್ಪಟ ಯುರೋಪಿಯನ್. ಆದರೆ ಹಿಂದೂ ಧರ್ಮ, ತತ್ವದ ಪ್ರತಿಪಾದಕ. ಮಾತ್ರವಲ್ಲ ಮಂತ್ರ, ಆಯುರ್ವೇದ, ಜ್ಯೋತಿಷ್ಯದಲ್ಲಿ ಪಾಂಡಿತ್ಯ ಹೊಂದಿ ಬ್ರಹ್ಮಚರ್ಯ ಪಾಲಿಸುತ್ತಿರುವ ಅಪರೂಪದ ವ್ಯಕ್ತಿ. ಇಷ್ಟಕ್ಕೇ ಸುಮ್ಮನಾಗಲಿಲ್ಲ. ತಾನು ಕಂಡುಕೊಂಡ ಸದಭಿರುಚಿಯನ್ನು ಇತರ ವಿದೇಶಿಯರಿಗೂ ಹಂಚುತ್ತಿದ್ದಾನೆ.
ಹೆಸರು ವಾಲ್ಟರ್ ಬರೋಫಿಯೋ. ಕೆಲ ವರ್ಷಗಳ ಹಿಂದೆ ಗೋಕರ್ಣಕ್ಕೆ ಬಂದವರು. ಇಲ್ಲಿನ ವೇದ, ಸಂಸ್ಕೃತಿಯಿಂದ ಪ್ರಭಾವಿತರಾಗಿ ಕಲಿಕೆಗೆ ಮುಂದಾದರು. ಇದೀಗ ಯುರೋಪ್ ಹಾಗೂ ಭಾರತದ ನಡುವೆ ಯೋಗ, ಜ್ಯೋತಿಷ್ಯ, ಅಧ್ಯಾತ್ಮ, ಧಾರ್ಮಿಕತೆಯ ಕೊಂಡಿಯಂತೆ ಕೆಲಸ ಮಾಡುತ್ತಿದ್ದಾರೆ. ಭಾರತದ ಸಂಸ್ಕೃತಿ, ಸಂಪ್ರದಾಯವನ್ನು ಪ್ರಚಾರ ಮಾಡುತ್ತಿದ್ದಾರೆ.
ವಾಲ್ಟರ್ ನಿರರ್ಗಳವಾಗಿ ಸಂಸ್ಕೃತ ಶ್ಲೋಕಗಳನ್ನು ಹೇಳುತ್ತಾರೆ. ಜಾತಕ ನೋಡಿ ಫಲಗಳನ್ನು ವಿವರಿಸುತ್ತಾರೆ. ಗ್ರಹಚಾರ ದೋಷ ಅವುಗಳ ನಿವಾರಣೆ ಬಗ್ಗೆ ಅಸ್ಖಲಿತವಾಗಿ ಹೇಳುತ್ತಾರೆ. ಯಾವುದೇ ರೋಗಕ್ಕೂ ಯಾವ ಆಯುರ್ವೇದ ಔಷಧ ಸೂಕ್ತ ಎಂಬುದನ್ನು ತಿಳಿಸುತ್ತಾರೆ. ಶಿವ, ಗಣಪತಿ ಹಾಗೂ ಹನುಮಾನ್ ಆರಾಧ್ಯ ದೇವರು. 4 ವರ್ಷಗಳ ಹಿಂದೆ ಶನಿ ತಮ್ಮನ್ನು ಕಾಡಿದ್ದನ್ನು ವಿವರಿಸುತ್ತಾರೆ. ಆ ಮೂಲಕ ಎದುರಿಗೆ ಕುಳಿತ ಪ್ರತಿ ವ್ಯಕ್ತಿಗೂ ವಾಲ್ಟರ್ ಅಚ್ಚರಿ ಹುಟ್ಟಿಸುತ್ತಾರೆ.

ವಿದೇಶಿಗರಿಗೆ ಪಾಠ
ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ಚಿಕ್ಕ ಗುಡಿಸಲಿನಲ್ಲಿ ವಾಸವಾಗಿರುವ ಇವರು ಅಲ್ಲಿನ ವಿದೇಶಿಗರಿಗೆ ಹಿಂದೂ ಧರ್ಮ, ಆಯುರ್ವೇದ, ಯೋಗ, ಜ್ಯೋತಿಷ್ಯದ ಪಾಠ ಹೇಳುತ್ತಾರೆ. ಉಚಿತವಾಗಿ ತರಗತಿಗಳನ್ನು ನಡೆಸುತ್ತಾರೆ. ಇವರ ಕ್ಲಾಸ್‌ನಲ್ಲಿ ಜರ್ಮನಿ, ಆಸ್ಟ್ರೇಲಿಯಾ, ಇಸ್ರೇಲ್, ಇಂಗ್ಲೆಂಡ್, ಸ್ಪೇನ್, ರಷ್ಯಾ, ಅಮೆರಿಕ ಹೀಗೆ ವಿವಿಧ ದೇಶಗಳ ಜನರು ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಅವರ ಸಂಶಯಗಳನ್ನು ಸೂಕ್ತ ಉತ್ತರದಿಂದ ನಿವಾರಣೆ ಮಾಡುತ್ತಾರೆ. ಆಲೋಪಥಿಯ ದುಷ್ಪರಿಣಾಮದ ಬಗ್ಗೆ ವಿಸ್ತಾರವಾಗಿ ಹೇಳುವ ಇವರು, ತ್ರಿದೋಷಗಳಾದ ಕಫ, ಪಿತ್ತ ಹಾಗೂ ವಾತಗಳ ಬಗ್ಗೆ ಅಷ್ಟೇ ಸ್ಪಷ್ಟವಾಗಿ ಹೇಳುತ್ತಾರೆ.

ಬ್ರಹ್ಮಚರ್ಯ ಪಾಲನೆ
ಅವರೇ ಹೇಳುವಂತೆ ವಾಲ್ಟರ್‌ಗೆ ಈಗ ಶುಕ್ರ ದೆಸೆ. ಹಾಗಾಗಿ ಖುಷಿಯಿಂದ ಇದ್ದಾರಂತೆ. ವಯಸ್ಸು 40 ಆದರೂ ವಿವಾಹವಾಗುವ ಯೋಚನೆ ಇಲ್ಲ ಅವರಿಗೆ. ಮೋಕ್ಷ ಪಡೆಯಲು ಇನ್ನಷ್ಟು ಸಾಧನೆ ಮಾಡಬೇಕಾಗಿದೆ ಎನ್ನುತ್ತಾರೆ. 1998ರಿಂದ ಅಪ್ಪಟ ಶಾಖಾಹಾರಿಯಾಗಿ ಬದಲಾಗಿದ್ದಾರೆ. ಹಣ್ಣು ಹಂಪಲು, ಸಲಾಡ್, ಗೇರು ಬೀಜ, ಬಾದಾಮಿ, ಅವಲಕ್ಕಿ ಇವೇ ಅವರ ಆಹಾರ.
'ಇಡಿ ಜಗತ್ತಿಗೆ ಅಧ್ಯಾತ್ಮದ ಸಂಪನ್ಮೂಲ ಭಾರತ. ಭಾರತದಲ್ಲಿ ಧರ್ಮ, ದೇವರು, ಅಧ್ಯಾತ್ಮ ಸಾಧನೆ ಇರುವುದರಿಂದ ವಿಶ್ವಕ್ಕೆ ಪ್ರಯೋಜನವಾಗುತ್ತಿದೆ. ಅಧ್ಯಾತ್ಮಿಕ ಬದುಕು ಹಾಗೂ ಇತರರಿಗೆ ತರಬೇತಿ ನೀಡುವುದು ನನ್ನ ಮುಖ್ಯ ಉದ್ದೇಶವಾಗಿದೆ. ಕಳೆದ 1998ರಿಂದ ಪ್ರತಿವರ್ಷ ಭಾರತಕ್ಕೆ ಬಂದು ಆರು ತಿಂಗಳು ವಾಸ್ತವ್ಯ ಮಾಡುತ್ತಿದ್ದೇನೆ. ಪ್ರತಿವರ್ಷವೂ ಕಲಿಯುತ್ತೇನೆ. ಇತರರಿಗೆ ಕಲಿಸುತ್ತೇನೆ. ತಾಯ್ನೆಲಕ್ಕೆ ಹೋಗಿ ಅಲ್ಲೂ ಪಾಠ ಮಾಡುತ್ತೇನೆ' ಎಂದು 'ಬೈಟು ಕಾಫಿ' ಜತೆ ತಮ್ಮ ಅನುಭವ ಹಂಚಿಕೊಂಡರು ವಾಲ್ಟರ್.

ಕಲಿಸುತ್ತಲೇ ಇದ್ದಾನೆ
ವಾಲ್ಟರ್ ಕುಟುಂಬ ಇಟಲಿಯಿಂದ ಸ್ವಿಜರ್‌ಲೆಂಡ್‌ಗೆ ವಲಸೆ ಹೋದಾಗ ಆತನಿಗೆ ಹದಿಹರೆಯ. ನಂತರ ಸ್ಪೇನ್‌ನಲ್ಲಿ ಹೋಗಿ ಗಾರ್ಮೆಂಟ್‌ವೊಂದನ್ನು ಆರಂಭಿಸಿದರು. ಅಷ್ಟರಲ್ಲೇ ಭಾರತದ ಬಗ್ಗೆ ಮಾಹಿತಿ ಪಡೆದಿದ್ದ ಇವರು, 1998ರಲ್ಲಿ ಪ್ರಥಮ ಬಾರಿಗೆ ಭಾರತಕ್ಕೆ ಬಂದರು. ಆಗ ಗೋಕರ್ಣ, ಹೃಷಿಕೇಶ ಹಾಗೂ ಪುರಿಗಳಿಗೆ ಭೇಟಿ ನೀಡಿದರು. ಇಲ್ಲಿನ ದೇವಾಲಯಗಳು, ಸಂಪ್ರದಾಯ, ಹಿಂದೂ ಧರ್ಮದ ಬಗ್ಗೆ ಆಕರ್ಷಿತರಾದರು. ಆಗ ಇಟಲಿಯಲ್ಲಿ ತಮಿಳುನಾಡಿನ ಸ್ವಾಮಿ ಜ್ಯೋರ್ತಿಮಯಾನಂದ ಆಶ್ರಮ ಇರುವುದು ಬೆಳಕಿಗೆ ಬಂತು. ನೇರವಾಗಿ ಹೋಗಿದ್ದು ಇಟಲಿಯ ಆಶ್ರಮಕ್ಕೆ. ಅಲ್ಲಿ 3 ವರ್ಷಗಳ ಕಾಲ ಆಯುರ್ವೇದ, ಪಂಚಕರ್ಮ, ಯೋಗ, ಧ್ಯಾನ, ಪ್ರಾಣಾಯಾಮ ಇವುಗಳನ್ನು ಅಧ್ಯಯನ ಮಾಡಿದರು.
ಈ ನಡುವೆ ತಪ್ಪದೆ ಪ್ರತಿ ವರ್ಷ 6 ತಿಂಗಳ ಕಾಲ ಭಾರತಕ್ಕೆ ಬರುತ್ತಿದ್ದಾರೆ. ಬಂದಾಗಲೆಲ್ಲ ಹೃಷಿಕೇಶದಲ್ಲಿ ನೆಲೆನಿಂತು ಮಂತ್ರ, ಜ್ಯೋತಿಷ್ಯದ ಪಾಠ ಕಲಿಯುತ್ತಿದ್ದರು. ಅಷ್ಟೇ ಅಲ್ಲ, ಇನ್ನೂ ಕಲಿಯುತ್ತಲೇ ಇದ್ದಾರೆ. ಕಲಿಸುತ್ತಲೇ ಇದ್ದಾರೆ.

- ವಸಂತಕುಮಾರ್ ಕತಗಾಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments