ನ್ಯಾಯದ ಹರಳು
ಸಣ್ಣ ಪುಟ್ಟ ವಿಷಯಕ್ಕೂ ಪೊಲೀಸ್ ಠಾಣೆ, ನ್ಯಾಯಾಲಯದ ಮೊರೆ ಹೋಗುವುದು ಈಗೀಗ ಸಾಮಾನ್ಯ. ಅಂಥದ್ದರಲ್ಲಿ ಬೀದರ್‌ನಲ್ಲೊಂದು ಸಮುದಾಯ ಈವರೆಗೆ ಪೊಲೀಸ್ ಠಾಣೆಯ ಮೆಟ್ಟಿಲನ್ನೇ ನೋಡಿಲ್ಲ. ಹಾಗೆಂದು ಇವರಲ್ಲಿ ವ್ಯಾಜ್ಯಗಳೇ ಇಲ್ಲವೆಂದಲ್ಲ. ಅದನ್ನೆಲ್ಲ ಅವರವರೊಳಗೇ ತೀರ್ಮಾನಮಾಡಿಕೊಳ್ಳುತ್ತಾರೆ ಈ ಆಧುನಿಕ ಯುಗದಲ್ಲಿಯೂ!
ಬೀದರ್‌ನ ಹರಳಯ್ಯ ಸಮಗಾರರದ್ದು ರಸ್ತೆಗಳ ಮೇಲೆ ಬೂಟ್ ಪಾಲಿಶ್ ಮಾಡಿ, ಚಪ್ಪಲಿ ಹೊಲೆದು ಜೀವನ ನಡೆಸುವ ಸಮಾಜ. ಯಾವುದೇ ವಿವಾದ ಇದ್ದರೂ ತಮ್ಮ ಪಂಚರ ಸಮಿತಿಯಲ್ಲಿಯೇ ಬಗೆಹರಿಸಿಕೊಳ್ಳುವ ಪದ್ಧತಿ ಅವರಲ್ಲಿ ಹಿಂದಿನಿಂದಲೂ ನಡೆದು ಬಂದಿದೆ. ಅಷ್ಟರಮಟ್ಟಿಗೆ ಅವರದ್ದು ಪ್ರಜ್ಞಾವಂತ ಸಮುದಾಯ.
ಪರಿಪಾಠ
ಸಮಾಜದಲ್ಲಿ ಯಾವುದೇ ವಿವಾದ ಉಂಟಾದರೆ ಸಮಾಜದ ಪ್ರಮುಖನಿಗೆ ತಿಳಿಸಬೇಕು. ನಂತರ ಪಂಚ ಕಮಿಟಿಯೆದುರು ಸಮಸ್ಯೆ ಇಟ್ಟು ಸಮಾಜದ ಸಂಘದಲ್ಲಿ ರು. 350 ಪಾವತಿಸಬೇಕು. ಈ ಮೂಲಕ ಸಮಾಜದ ಸಭೆ ಕರೆಯಲು ಕೇಳಿಕೊಳ್ಳುವ ಪರಿಪಾಠ ಇದೆ. ಸಭೆಯ ದಿನಾಂಕ ನಿಗದಿಪಡಿಸಿದ ನಂತರ ಸಂಬಂಧಪಟ್ಟವರ ಮನೆಗೆ ಸಭೆಯ ನೋಟಿಸ್ ಮುಟ್ಟಿಸಲು ಒಬ್ಬ ವ್ಯಕ್ತಿಯನ್ನೇ ನೇಮಿಸಲಾಗುತ್ತದೆ. ಪ್ರತಿಯೊಂದು ನೋಟಿಸ್‌ಗೆ ರು. 250 ನೀಡಲಾಗುತ್ತದೆ. ನಗರದ ಮಂಗಲಪೇಟ್‌ನಲ್ಲಿರುವ ಸಮಾಜದ ಮಂದಿರದಲ್ಲಿ ಸಭೆ ನಡೆದು ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಪಕ್ಷದವರನ್ನೂ ಕರೆಸಿ ವಿವಾದ ಬಗೆಹರಿಸಲಾಗುತ್ತದೆ.
ಮಾತು ಮೀರೋದಿಲ್ಲ
ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ಟೀಳೇಕರ ಪ್ರಕಾರ 60 ವರ್ಷಗಳಿಂದ ಅವರ ಸಮಾಜದ ಯಾವುದೇ ಪ್ರಕರಣಗಳು ಕೋರ್ಟಿಗೆ ಹೋಗಿಲ್ಲ. ಅನಿವಾರ್ಯವಾಗಿ ಪೊಲೀಸ್ ಠಾಣೆಗೆ ಹೋಗುವ ಸಂದರ್ಭ ಬಂದರೆ ಅಥವಾ ಸಮಾಜದ ಗಮನಕ್ಕೆ ತಾರದೆ ಯಾರಾದರೂ ಠಾಣೆಗೆ ಹೋಗಿದ್ದರೂ ಠಾಣೆಯವರು ಈ ಕುರಿತು ಸಮಾಜದ ಅಧ್ಯಕ್ಷರನ್ನು ಸಂಪರ್ಕಿಸುತ್ತಾರಂತೆ.
ಬೀದರ್ ನಗರದಲ್ಲಿಯೇ ಸಮುದಾಯಕ್ಕೆ ಸೇರಿದ 100 ಅಂಗಡಿಗಳವರು, 150 ಸರ್ಕಾರಿ ನೌಕರರು ಇದ್ದು, 100ಕ್ಕೂ ಹೆಚ್ಚು ಜನ ರಸ್ತೆ ಮೇಲೆ ಕುಳಿತು ಬೂಟ್ ಪಾಲಿಶ್ ಮಾಡುತ್ತಿದ್ದಾರೆ. ಇಷ್ಟಿದ್ದರೂ ಪಂಚ ಕಮಿಟಿಗೆ ಬೆಲೆ ನೀಡಿ ಒಗ್ಗಟ್ಟಿನ ಪ್ರದರ್ಶನ ಮಾಡುತ್ತಿರುವುದರಿಂದ ಬೇರೆ ಸಮಾಜಕ್ಕೆ ನಾವು ಮಾದರಿಯಾಗಿದ್ದೇವೆ ಎಂಬ ಅಭಿಮಾನ ಟಿಳೇಕರ್ ಅವರದ್ದು.
ನಿಜಕ್ಕೂ ಈ ಪ್ರವೃತ್ತಿ ಅನ್ಯ ಸಮಾಜಕ್ಕೆ ಹಾಗೂ ನಿತ್ಯ ಪೊಲೀಸ್ ಠಾಣೆ, ನ್ಯಾಯಾಲಯಕ್ಕೆ ತಿರುಗಾಡುವವರಿಗೆ ಮಾದರಿ. ಅಲ್ಲವೆ?
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.