ಪ್ಯಾಕ್ up
ಉಫ್... ಇದು ಟೆಟ್ರಾರೂಫ್!
ಇಂದು 'ಮರುಬಳಕೆ' ಎಂದರೆ... ಅದು ನೀವು ಪರಿಸರಕ್ಕೆ ಕೊಡುವ ಗಿಫ್ಟ್. ಇದಕ್ಕೆ ನೀವು ನಿತ್ಯ ಜ್ಯೂಸ್ ಕುಡಿದು ಬಿಸಾಕುವ ಟೆಟ್ರಾ ಪ್ಯಾಕ್ಗಳೂ ಹೊರತಾಗಿಲ್ಲ.
ಇದು ಟೆಟ್ರಾ ರೂಫ್ನ ಕಥೆ.
ರಾಜ್ಯದಲ್ಲಿ ನಿತ್ಯ ಸಾವಿರಾರು ಟನ್ಗಳಷ್ಟು ತ್ಯಾಜ್ಯ ಹೊರಬೀಳುತ್ತಿವೆ. ಇದರಲ್ಲಿ ಟೆಟ್ರಾ ಪ್ಯಾಕ್ಗಳ ಕೊಡುಗೆಯೂ ಸಾಕಷ್ಟು. ನಿತ್ಯ ಸ್ಕ್ರ್ಯಾಪ್ ಡೀಲರ್ಸ್, ತ್ಯಾಜ್ಯ ಸಂಗ್ರಹಕಾರರಿಂದ 600 ಟನ್ಗೂ ಹೆಚ್ಚಿನ ತ್ಯಾಜ್ಯ ಸಂಗ್ರಹಿಸುತ್ತದೆ. ಇವುಗಳಲ್ಲಿ ಸಾಕಷ್ಟು ಮರುಬಳಕೆ ಉತ್ಪನ್ನಗಳೂ ಸಿಗುವುದರಿಂದ ಪರಿಸರ ಮಾಲಿನ್ಯದ ಹೊರೆ ತಪ್ಪಿಸಬಹುದು.
ಟೆಟ್ರಾ ಮರು ಬಳಕೆ ಹೇಗೆ?
ರಾಜ್ಯದಲ್ಲಿ ಟೆಟ್ರಾ ಪ್ಯಾಕ್ಗಳ ಸಂಗ್ರಹಣೆ ಅದರ ಮರುಬಳಕೆ ಉತ್ಪನ್ನಗಳ ಹೊಣೆ ಹೊತ್ತಿರುವ ಸಂಸ್ಥೆಗಳಲ್ಲಿ ಸಾಹಸ್ ಆರ್ಗನೈಜೇಶನ್ ಎಂಬ ಎನ್ಜಿಓ ಸಹ ಒಂದು. ಈ ಸಂಸ್ಥೆ ಸ್ಕ್ರ್ಯಾಪ್ ಡೀಲರ್ಗಳಿಂದ ಟನ್ಗಟ್ಟಲೆ ಟೆಟ್ರಾ ಪ್ಯಾಕ್ಗಳನ್ನು ಖರೀದಿಸುತ್ತದೆ. ಪ್ರತಿ ಕೆಜಿಗೆ 5ರಿಂದ 7 ರೇಟ್ ಫಿಕ್ಸ್.
ಖರೀದಿಸಿದ ಟೆಟ್ರಾ ಪ್ಯಾಕ್ಗಳನ್ನು ಕಂಪ್ರೆಸ್ ಮೆಷಿನ್ನಲ್ಲಿ ಒತ್ತಲಾಗುತ್ತದೆ. ಇದರಿಂದ ಇದರ ಗಾತ್ರ ಮತ್ತಷ್ಟು ಚಿಕ್ಕದಾಗುತ್ತದೆ. ನಂತರ ಇದನ್ನು ಮಹಾರಾಷ್ಟ್ರದ ಥಾಣೆಯ ಕಂಪನಿಗೆ ಹಾಗೂ ನಾಗಪುರದ ಸುಂದರ್ ಪೇಪರ್ ಮಿಲ್ಗಳಿಗೆ ರವಾನಿಸಲಾಗುತ್ತದೆ. ಅಲ್ಲಿ ಇವುಗಳ ಪ್ರತ್ಯೇಕತೆ ನಡೆಯುತ್ತದೆ. ಅಂದರೆ ಒಂದು ಟೆಟ್ರಾ ಪ್ಯಾಕ್ನಲ್ಲಿ ಮರುಬಳಕೆಗೆ ಶೇ.75ರಷ್ಟು ಪೇಪರ್, ಶೇ.20ರಷ್ಟು ಪಾಲಿಎಥಿಲೇನ್ (ಪ್ಲಾಸ್ಟಿಕ್) ಹಾಗೂ ಶೇ.5 ಅಲ್ಯುಮಿನಿಯಂ ಸಿಗುತ್ತದೆ.
ಮರು ಬಳಕೆ
ಹೀಗೆ ಸಿಕ್ಕಿದ ಮರುಬಳಕೆ ಉತ್ಪನ್ನಗಳನ್ನು ವಿವಿಧ ವಿಭಾಗಗಳಿಗೆ ಕಳುಹಿಸಲಾಗುತ್ತದೆ. ಅಂದರೆ ಸಿಕ್ಕ ಶೇ. 75ರಷ್ಟು ಪೇಪರ್ ಅನ್ನು ಬುಕ್, ನೋಟ್ಪ್ಯಾಡ್, ಪೆನ್,ಟಿಷ್ಯೂ ಪೇಪರ್, ಪೇಪರ್ ಬ್ಯಾಗ್ ಮುಂತಾದ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತದೆ.
ರೂಫಿಂಗ್ ಶೀಟ್
ಶೇ.20 ಪಾಲಿಎಥಿಲೇನ್ ಹಾಗೂ ಶೇ.5 ಅಲ್ಯುಮಿನಿಯಂ ಅನ್ನು ರೂಫಿಂಗ್ ಶೀಟ್ (ಮನೆ ಅಥವಾ ಶೆಡ್ಗಳ ಮಾಳಿಗೆ ನಿರ್ಮಾಣಕ್ಕೆ ಬಳಸುವ ಶೀಟ್) ಗಳ ಉತ್ಪಾದನೆಗೆ ಬಳಸಲಾಗುತ್ತದೆ. ಸಾಮಾನ್ಯವಾಗಿ ಮನೆಗಳಲ್ಲಿ ಶೆಡ್ ಅಥವಾ ಕೊಟ್ಟಿಗೆಗಳ ನಿರ್ಮಾಣದಲ್ಲಿ ಪ್ಲಾಸ್ಟಿಕ್, ಫೈಬರ್ ಅಥವಾ ಸಿಮೆಂಟ್ ಶೀಟ್ಗಳನ್ನು ಬಳಸುತ್ತಾರೆ. ಆದರೆ ಇವುಗಳ ಬಾಳಿಕೆ ಕಡಿಮೆ. ಅತಿಯಾದ ಗಾಳಿ, ಮಳೆಗೆ ಇವು ಬೇಗನೆ ಹಾಳಾಗುತ್ತವೆ. ಜತೆಗೆ ದುಬಾರಿ ಸಹ. ಟೆಟ್ರಾ ಪ್ಯಾಕ್ಗಳಿಂದ ನಿರ್ಮಾಣವಾಗುವ ಈ ಶೀಟ್ಗಳು ಬಹಳ ಗಟ್ಟಿಮುಟ್ಟು. ಭೀಕರ ಗಾಳಿ, ಮಳೆಯನ್ನೂ ತಡೆಕೊಳ್ಳುವ ಸಾಮರ್ಥ್ಯವನ್ನು ಇದು ಹೊಂದಿರುತ್ತವೆ. ಇದು ಉಷ್ಣದ ಪ್ರಮಾಣ ಕಡಿಮೆ ಮಾಡುವುದರ ಜತೆಗೆ ವಾತಾವರಣ ತಂಪಿಡಲು ಸಹಕಾರಿ.
ಫರ್ನಿಚರ್ಗಳು
ಇದೇ ಪಾಲಿಎಥಿಲೇನ್, ಅಲ್ಯುಮಿನಿಯಂ ಬಳಸಿ ಫರ್ನಿಚರ್ಗಳಾದ ಟೇಬಲ್, ಉಯ್ಯಾಲೆ, ಖುರ್ಚಿ, ಟಿಪಾಯ್, ಡಸ್ಟ್ಬಿನ್, ಪೆನ್ ಹಾಗೂ ಮೊಬೈಲ್ ಸ್ಟ್ಯಾಂಡ್ ಇತ್ಯಾದಿ ಗೃಹೋಪಯೋಗಿ ಉಪಕರಣಗಳನ್ನು ತಯಾರಿಸಲಾಗುತ್ತದೆ.
ವಿದೇಶದಲ್ಲೂ ತಯಾರಿಕೆ
ಬ್ರೆಜಿಲ್ನಲ್ಲಿ 20 ವರ್ಷಗಳಿಂದ ಈ ರೀತಿಯ ಶೀಟ್ಗಳನ್ನು ಬಳಸಲಾಗುತ್ತಿದೆ. ಅದು ತೀರಾ ಕೆಳಮಟ್ಟದ (ಬೇಸಿಕ್) ತಂತ್ರಜ್ಞಾನದಿಂದ ರೂಪುಗೊಂಡಿದ್ದಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಕಂಪನಿಯಾದ ದಮನ್ ಗಂಗಾ ಸಂಸ್ಥೆಯು ಥಾಯ್ಲೆಂಡ್ನ ಲೇಹ್ನಲ್ಲಿ ಪ್ರವಾಹ ಉಂಟಾದಾಗ ಮಾನವೀಯ ಸಹಾಯಾರ್ಥ ಇದೇ ಟೆಟ್ರಾ ಪ್ಯಾಕ್ಗಳ ಬಳಕೆಯಿಂದ ಬೋಟ್ಗಳನ್ನು ತಯಾರಿಸಿ ಕಳುಹಿಸಿತ್ತು.
ಏನಿದರ ದರ?
ಟೆಟ್ರಾಪ್ಯಾಕ್ ರೂಫಿಂಗ್ ಶೀಟ್ ಒಂದಕ್ಕೆ ರು. 869. ಆದರೆ ಹೋಲ್ಸೇಲ್ ಮಟ್ಟದಲ್ಲಿ ಖರೀದಿ ಮಾಡಿದರೆ 700ರಿಂದ 750 ರವರೆಗೂ ತಗುಲುತ್ತದೆ. ಉಳಿದ ಶೀಟ್ಗಳಿಗೆ ಹೋಲಿಸಿದರೆ ಇದರ ಬೆಲೆ ಕಡಿಮೆ ಹಾಗೂ ಬಾಳಿಕೆ ಜಾಸ್ತಿ ಎನ್ನುತ್ತಾರೆ ಸಾಹಸ್ ಎನ್ಜಿಓದ ಪ್ರೋಗ್ರಾಮ್ ಕೋ ಆರ್ಡಿನೇಟರ್ ಅಶೋಕ್ ಶೆಟ್ಟಿ.
ಮಾಹಿತಿಗೆ: ದೂ. 080-41689889,
ಇ-ಮೇಲ್- response@saahas.ಗೆ
ಸಂಪರ್ಕಿಸಿ.
ಸಂಶೋಧನೆ ಹೇಳೋದೇನು?
ಟೆಟ್ರಾಪ್ಯಾಕ್ ಆಧಾರಿತ ರೂಫಿಂಗ್ ಶೀಟ್ಗಳು ಉಷ್ಣದ ಪ್ರಮಾಣವನ್ನು ಶೇ.25ರಷ್ಟು ತಗ್ಗಿಸುತ್ತದೆ. ಈ ಶೀಟ್ಗಳನ್ನು ಬಳಸುವ ಡೈರಿ ಉತ್ಪಾದಕರು ಹೇಳುವ ಪ್ರಕಾರ, ಬೇಸಿಗೆ ಸಂದರ್ಭದಲ್ಲಿ ಶೇ.10ರಷ್ಟು ಹಾಲು ಉತ್ಪಾದನೆ ಏರಿಕೆ ಕಂಡಿದೆ. ಅಂದರೆ ಸಿಮೆಂಟ್, ಫೈಬರ್ ಅಥವಾ ಪ್ಲಾಸ್ಟಿಕ್ ಶೀಟ್ಗಳ ಬಳಕೆ ಇದ್ದಾಗ ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಪ್ರಮಾಣದಲ್ಲಿ ಶೇ.20 ಇಳಿಕೆಯಾಗುತ್ತಿತ್ತು. ಆದರೆ ಈಗ ಆ ಪ್ರಮಾಣ ಶೇ. 10ಕ್ಕೆ ಬಂದಿದೆಯಂತೆ.
ಇದೇ ರೀತಿಯ ಫಲಿತಾಂಶ ಕೋಳಿ ಸಾಕಣೆ ಕೇಂದ್ರದಲ್ಲೂ ಬಂದಿದೆ. ಇದಲ್ಲದೆ ಕೋಳಿಗಳ ಮರಣ ಪ್ರಮಾಣ ಶೇ.50 ಇಳಿಕೆ ಕಂಡಿದೆ. ಜತೆಗೆ ಮಳೆಗಾಲದಲ್ಲಿ ಉತ್ಪತ್ತಿಯಾಗುವ ಫಂಗಸ್ ಹಾಗೂ ಬ್ಯಾಕ್ಟೀರಿಯಾ ಪ್ರಮಾಣವನ್ನೂ ಈ ಶೀಟ್ ಬಳಕೆಯಿಂದ ತಗ್ಗಿಸಬಹುದು.
- ಆದರ್ಶ ಎಸ್. ಅಂಚೆ
adianche@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.