ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಡ್ಡಿ ಖದರ್

Mainashree
Updated On : 19 Feb 2013, 12:24 pm

ನೆಲದಿಂದ ನೇಪಾಳದವರೆಗೆ...

ಸಾಲು ಸಾಲು ತೆಂಗಿನಮರಗಳಲ್ಲಿ ಗರಿಗಳು ಒಣಗಿ ಉದುರಿದರೆ ಅದನ್ನು ಏನು ಮಾಡಬಹುದು? ಅವು ಹೆಜ್ಜೆಂದರೆ ಒಲೆಯುರಿಸಲು ಬಳಕೆಯಾಗುತ್ತವೆ, ತಪ್ಪಿದರೆ ಗೆದ್ದಲಿಗೆ ಆಹಾರ. ಬಹುತೇಕ ಎಲ್ಲ ಕಡೆ ಹೀಗೇ ಇರಬಹುದು. ಕಡೂರು ತಾಲೂಕಿನ ಗರ್ಜೆ ಗ್ರಾಮದಲ್ಲೂ ಹೇರಳ ತೆಂಗಿನಮರಗಳಿವೆ. ಆದರೆ, ಇಲ್ಲಿನ ಗರಿಗಳು ಒಲೆ ಸೇರುವುದಿಲ್ಲ. ಗೆದ್ದಲು ಹತ್ತಲು ಕೊಡುವುದಿಲ್ಲ. ಬದಲಿಗೆ ಅವು ಹೆಂಗಸರು, ಮಕ್ಕಳು, ಮುದುಕರೆಂಬ ಭೇದವಿಲ್ಲದೆ ಎರಡು ಸಾವಿರ ಮಂದಿಗೆ ದುಡಿಮೆಯ ಮೂಲಕ ಬದುಕಿನ ಮಾರ್ಗ ತೋರಿಸಿದೆ. ಇದರಿಂದ ನಡೆಯುವ ವಾರ್ಷಿಕ ವ್ಯವಹಾರ ಏಳು ಕೋಟಿ ರೂಪಾಯಿ ದಾಟಿದೆ,
ಕೆಲಸ ಸುಲಭ. ಎಲ್ಲರೂ ಬೆಳಗ್ಗೆದ್ದು ತೆಂಗಿನ ತೋಟಗಳಿಗೆ ಬರುತ್ತಾರೆ. ತೆಂಗಿನ ಸೋಗೆಯಿಂದ ಕಡ್ಡಿಗಳನ್ನು ಬೇರ್ಪಡಿಸಿ 125 ಕಡ್ಡಿಗಳಿಗೆ ಒಂದರಂತೆ ಕಟ್ಟು ಹಾಕುತ್ತಾರೆ. ಸಂಜೆಯ ಹೊತ್ತಿಗೆ ಕಡೂರಿನಿಂದ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರದ ವಾಹನಗಳೊಂದಿಗೆ ವ್ಯಾಪಾರಿಗಳ ದಂಡು ಅಲ್ಲಿಗೆ ಬರುತ್ತದೆ. ಒಂದು ಕಟ್ಟಿಗೆ ಒಂದು ರೂಪಾಯಿ ಬೆಲೆ ನೀಡಿ ಖರೀದಿಸಲಾಗುತ್ತದೆ. ಮೂರು ತೆಂಗಿನಗರಿಗಳಿಂದ ಏಳುನೂರು ಕಡ್ಡಿ ಸಿಗುತ್ತದೆ. ಗಂಟೆಗೆ ಹತ್ತು ರುಪಾಯಿ ದುಡಿಮೆ. ಸಂಜೆಯ ಹೊತ್ತಿಗೆ ಪ್ರತಿಯೊಬ್ಬನ ಕೈಸೇರುವ ಹಣ ನೂರರಿಂದ ನೂರೈವತ್ತು ರು.
ಇವರಿಂದ ಖರೀದಿಸಿದ ಕಟ್ಟುಗಳನ್ನು ವ್ಯಾಪಾರಿಗಳು ರಖಂ ವ್ಯಾಪಾರಿಗಳಿಗೆ ಕಿಲೋಗೆ ಎಂಟು ರು.ಬೆಲೆಗೆ ಮಾರುತ್ತಾರೆ. ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಈ ಕಡ್ಡಿಗಳನ್ನು ಕತ್ತಿಯಿಂದ ಸವರಿ ಶುಚಿ ಮಾಡಿ ಕೊಟ್ಟುದಕ್ಕೆ ಕಿಲೋಗೆ ಐವತ್ತು ಪೈಸೆ ಪಡೆಯುತ್ತಾರೆ. ಕಡ್ಡಿಗಳನ್ನು ಮುನ್ನೂರು ಗ್ರಾಂ.ತೂಕದ ಕಟ್ಟು ಮಾಡಿ ಪಾಲಿಥಿನ್ ಹಾಳೆಯಲ್ಲಿ ಪ್ಯಾಕು ಮಡಿ ಕೊಟ್ಟಾಗ ಏಳು ರು.ಕೂಲಿ ಸಿಗುತ್ತದೆ. ಇವು ನೆಲ ಗುಡಿಸುವ ಪೊರಕೆಗಳಾಗಿ ಉತ್ತರ ಭಾರತದ ಎಲ್ಲ ಊರುಗಳನ್ನೂ ದಾಟಿ ನೇಪಾಳದ ಗಡಿಯವರೆಗೂ ತಲಪುತ್ತದೆ. ಒಂದು ಪೊರಕೆಗೆ ಇಪ್ಪತ್ತೈದು ರು.ಬೆಲೆಯಾಗುತ್ತದೆ. ಗರಿಗಳಿಂದ ಕಡ್ಡಿಗಳನ್ನು ತೆಗೆಯಲು ರೈತರು ಏನೂ ಪ್ರತಿಫಲ ಪಡೆಯುವುದಿಲ್ಲ. ಕಡ್ಡಿ ತೆಗೆದ ಬಳಿಕ ಉಳಿಯುವ ಗರಿ ಉತ್ತಮ ಗೊಬ್ಬರವಾಗುತ್ತದೆ.
ಮೂರು ದಶಕಕ್ಕೂ ಅಧಿಕ ಕಾಲದಿಂದ ಇದೇ ಉದ್ಯಮದಿಂದ ಬದುಕುತ್ತಿರುವ ಕಡೂರಿನ ದಸ್ತಗೀರ್ ಸಾಬರು ಪ್ರತಿವರ್ಷ ಹದಿನಾರು ಟನ್ ಭರ್ತಿ ಪೊರಕೆ ತುಂಬಿದ ನೂರಿಪ್ಪತ್ತು ಲಾರಿಗಳನ್ನು ಉತ್ತರ ಭಾರತದೆಡೆಗೆ ಕಳುಹಿಸುತ್ತಾರೆ. ಅವರಂತೆ ಉದ್ಯಮ ನಿರತರಾದ ಇನ್ನೂ ಐವರಿದ್ದಾರೆ. ಎಲ್ಲ ಸೇರಿದರೆ ಕಡೂರಿನಿಂದ ರವಾನೆಯಾಗುವ ಪೊರಕೆಗಳು ಐನೂರು ಲಾರಿಗಳಿಗಿಂತ ಅಧಿಕವೆನ್ನಲಾಗಿದೆ. ಈ ಸರಕಿನ ಮೇಲೆ ಉತ್ತರಪ್ರದೇಶ ಸರಕಾರ ವಿಧಿಸುತ್ತಿದ್ದ ಮಾರಾಟ ತೆರಿಗೆಯನ್ನು 1993ರಲ್ಲಿ ಅಲಹಾಬಾದ್ ನ್ಯಾಯಾಲಯ ರದ್ದುಪಡಿಸಿತು. ಆಮೇಲೆ ಕರ್ನಾಟಕ ಸರಕಾರ ಆ ವರೆಗೆ ವಿಧಿಸುತ್ತಿದ್ದ ಶೇ.4ರ ತೆರಿಗೆಯನ್ನು ನಿಲ್ಲಿಸಿತು. ತೆಂಗು ಬೆಳೆಯುತ್ತಿರುವ ನಮ್ಮ ರಾಜ್ಯದ ಇತರೆಡೆಯ ರೈತರು ವ್ಯರ್ಥವಾಗುತ್ತಿರುವ ತೆಂಗಿನ ಕಡ್ಡಿಗಳಿಂದ ಚಿನ್ನದ ಗಳಿಕೆ ಮಾಡುವತ್ತ ಯೋಚಿಸಬೇಕು. <

- ಪ. ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments