ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಗೆಲುವು ಕ್ರೇಜ್ ಆಗಬೇಕು (ರನ್ ವೇ)

Mainashree
Updated On : 19 Feb 2013, 12:25 pm

ಮತ್ತೇಕೆ ಹಿಂದೆ ಹಿಂದಕ್ಕೆ ಹೋಗುತ್ತೀರಿ? ಜೀವನದ ಪಥ ಇರುವುದು ಮುಂದಕ್ಕೆ ಓಡಲು. ಒಮ್ಮೆ ಕಣ್ಣುಬಿಟ್ಟು ನೋಡಿ. ಇಲ್ಲಿ ನಿಂತುಕೊಳ್ಳಲಿಕ್ಕಾಗಲೀ, ಹಿಂದಕ್ಕೆ ತಿರುಗಿ ಯೋಚಿಸುತ್ತಾ ಕೂರುವುದಕ್ಕಾಗಲೀ ಸಮಯವೆಲ್ಲಿದೆ? ನಿಮ್ಮ ಜತೆಯಲ್ಲೇ ಓಟಕ್ಕೆ ಆರಂಭಿಸಿದವರು ಈಗಾಗಲೇ ಅದೆಷ್ಟು ಮುಂದಕ್ಕೇ ಹೋಗಿದ್ದಾರೆಂಬುದನ್ನು ಗಮನಿಸಿ. ಅವರ್ಯಾರಿಗೂ ಜೀವನದ ಓಟದಲ್ಲಿ ಅಡ್ಡಿಗಳು ಬಂದಿಲ್ಲವೆಂತಲ್ಲ. ತೊಂದರೆಗಳು, ಕಷ್ಟಗಳು ಬಂದಿಲ್ಲವೆಂತಲ್ಲ. ಅಥವಾ ಅವರಿಗೆ ಸ್ಪರ್ಧೆಯೊಡ್ಡಲು ಯಾರೂ ಇಲ್ಲವೆಂತಲೂ ಅಲ್ಲ. ಅವರೆಲ್ಲರೂ ಅದೆಲ್ಲವನ್ನೂ ನಿವಾರಿಸಿಕೊಂಡು, ಇಲ್ಲವೇ ಅದನ್ನು ಎದುರಿಸಿಕೊಂಡು ಮುನ್ನುಗ್ಗುತ್ತಲೇ ಇದ್ದಾರೆ. ಅವರಲ್ಲಿ ಗುರಿಯೆಡೆಗೆ ಸ್ಪಷ್ಟತೆ ಇದೆ. ಅಂಥದ್ದೊಂದು ಛಲವಿದೆ. ಬದುಕಿನ ಅನಿವಾರ್ಯತೆಯನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡು ಓಡುತ್ತಿರುವವರಲ್ಲ.
ಅಥವಾ ಏನೋ ಓಡಬೇಕಲ್ಲಾ ಎಂಬ ಮನೋಭಾವದಲ್ಲಿ ಓಡುತ್ತಿರುವವರೂ ಅಲ್ಲ. ಮೊದಲೇ ಅವರಿಗೇನೂ ಜೀವನದ ತಾಲೀಮನ್ನು ಕೊಟ್ಟವರೂ ಇಲ್ಲ. ಓಟಕ್ಕಿಳಿದ ಮೇಲೆಯೇ ಅನುಭವಗಳನ್ನು ದಕ್ಕಿಸಿಕೊಂಡಿದ್ದಾರೆ. ಮುಂದಿನ ಹೆಜ್ಜೆಯನ್ನು ಹೇಗೆ ಇಡಬೇಕು, ಎಷ್ಟು ವೇಗವನ್ನು ದಕ್ಕಿಸಿಕೊಳ್ಳಬೇಕೆಂಬುದನ್ನು ಅವರ ವಿವೇಚನೆಯೇ ಅವರಿಗೆ ಕಟ್ಟಿಕೊಟ್ಟಿದೆ. ನಿಮ್ಮಂತೆ ಅವರೂ ನಿರಾಸಕ್ತಿ ತಾಳಿದ್ದರೆ ಬಹುಶಃ ನಿಮಗಿಂತಲೂ ಹಿಂದೆಯೇ ಇರುತ್ತಿದ್ದರೇನೋ. ಹಾಗೆ ನೋಡಿದರೆ ನಿಮಗಿಂತ ತಡವಾಗಿ ಓಟಕ್ಕೆ ಇಳಿದವರೂ ಸಾಕಷ್ಟು ಮುಂದೆ ಹೋಗಿಯಾಗಿದೆ. ಕೇವಲ ಅದೃಷ್ಟವಷ್ಟೇ ಗೆಲುವನ್ನು ತಂದುಕೊಡಲು ಸಾಧ್ಯವಿಲ್ಲ. ಸೀನಿಯಾರಿಟಿಯೂ ಬದುಕಿನಲ್ಲಿ ಮುಖ್ಯವಾಗುವುದಿಲ್ಲ. ಅದು ಯಶಸ್ಸಿನ ಮಾನದಂಡವೂ ಅಲ್ಲ. ಏನೇ ಅದರೂ ಮೊದಲಿಗನಾಗಿ ಗುರಿ ಮುಟ್ಟಲೇಬೇಕು. ಬದುಕಿನಲ್ಲಿ ಗೆದ್ದೇಗೆಲ್ಲಬೇಕು ಎಂಬ ಹಪಹಪಿಯೊಂದಿಗೆ ಮುನ್ನುಗ್ಗುವವನು ಮಾತ್ರವೇ ಅದಕ್ಕೆ ಅರ್ಹನಾಗಿರುತ್ತಾನೆ. ಉಳಿದೆಲ್ಲವೂ ಅಲ್ಲಿ ಗೌಣ.
ಬೀಳುವುದು, ಮುಗ್ಗರಿಸುವುದು, ಕಾಲೆಳೆಯುವವರನ್ನು ತಳ್ಳಿಕೊಂಡು ಹೋಗುವುದು ಎಲ್ಲವೂ ಇದ್ದೇ ಇರುತ್ತದೆ. ಅದ್ಯಾವುದೂ ನಿಮ್ಮ ಹಾದಿಯನ್ನು ಮುಚ್ಚುವಷ್ಟು ಶಕ್ತಿಶಾಲಿ ಆಗಿರಲು ಸಾಧ್ಯವೇ ಇಲ್ಲ, ಒಂದೊಮ್ಮೆ ನೀವು ಕ್ರೇಜಿಯಾಗಿದ್ದಾಗ. ಹೌದು, ಗೆಲುವು ನಿಮ್ಮ ಕ್ರೇಜ್ ಆಗಬೇಕು. ಅದೇ ಪ್ಯಾಷನ್ ಆಗಿರಬೇಕು. ಹಾಗೆಂದು ಗೆಲುವಷ್ಟೇ ಬದುಕಲ್ಲ. ಸೋಲಲು ಸಿದ್ಧನಿರದ ವ್ಯಕ್ತಿ ಗೆಲ್ಲಲೂ ಅರ್ಹನಲ್ಲ. ಆದರೆ ಸೋಲುಗಳು ನಿಮ್ಮ ಹಾದಿಯನ್ನು ಅಸ್ಪಷ್ಟಗೊಳಿಸಬಾರದು. ಹಿಂದಕ್ಕೆಳೆದು ಬಿಡುವ ಚಾಟಿಪಿಲ್ಲರ್‌ಂತೆ, ಸೋಲುವುದೇ ಇಮ್ಮಡಿ ಉತ್ಸಾಹದಲ್ಲಿ ಗೆಲುವಿನತ್ತ ಮುಂದಕ್ಕೆ ಜಿಗಿಯಲು ಎಂಬುದು ನೆನಪಿರಲಿ.

-ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement