ಗಾಢಾ ಅನುಭವ
ಎತ್ತೆತ್ತಲೋ ಓಡುತ್ತೆ ಎತ್ತು
ನವೆಂಬರ್ನಿಂದ ಏಪ್ರಿಲ್ವರೆಗೆ ರೈತರಿಗೆ ಹೊಲದ ಕೆಲಸಕ್ಕೆ ಬಿಡುವು. ಎತ್ತುಗಳಿಗೂ ವಿಶ್ರಾಂತಿ. ಆಗ ಎತ್ತುಗಳಿಗಾಗಿಯೇ ನಡೆಯುತ್ತವೆ ಹಲವು ಕ್ರೀಡೆಗಳು. ಒಂಥರ ಒಲಿಂಪಿಕ್ಸ್ ರೀತಿ! ಹಾನಗಲ್ ತಾಲೂಕಿನ ಕೆಲ ಹಳ್ಳಿಗಳಲ್ಲಿ ನಡೆಯುತ್ತದೆ ಈ 'ಗಾಢಾ' ಸ್ಪರ್ಧೆ.
ಹಾ.. ಓಡು.. ಓಡು.. ರಾಮ, ಲಕ್ಷ್ಮಣ, ಮದಕರಿ, ಭೀಮ...
- ಹೀಗೆ ನಾನಾ ಹೆಸರಿನಿಂದ ಕೂಗು ಕೇಕೆ ಹಾಕುತ್ತಾ ನೆರೆದ ಜನರು ಎತ್ತುಗಳಿಗೆ ಉತ್ಸಾಹ ತುಂಬುತ್ತಾರೆ. ಎತ್ತುಗಳ ರೋಮಾಂಚನಕಾರಿ ಓಟದ ಭಂಗಿ ನೆರೆದಿದ್ದ ಪ್ರೇಕ್ಷಕರ ಮೈನವಿರೇಳುವಂತೆ ಮಾಡುತ್ತವೆ. ವೀಕ್ಷಕ ವಿವರಣೆ ನಡುವೆ ಹಲಗೆ ಪಟಾಕಿಗಳ ಸದ್ದು. ಎದೆ ಸೆಟೆದು ಕೇಕೆ ಹಾಕುವ ಯುವಕರ ದಂಡು.
ನವೆಂಬರ್ನಿಂದ ಏಪ್ರಿಲ್ ವರೆಗೆ ರೈತರಿಗೆ ಹೊಲದ ಕೆಲಸಕ್ಕೆ ಬಿಡುವು. ಎತ್ತುಗಳಿಗೂ ವಿಶ್ರಾಂತಿ. ಆಗ ಎತ್ತುಗಳಿಗಾಗಿಯೇ ನಡೆಯುತ್ತವೆ ಹಲವು ಕ್ರೀಡೆಗಳು. ಒಂಥರ ಒಲಿಂಪಿಕ್ಸ್ ರೀತಿ! ಹಾನಗಲ್ ತಾಲೂಕಿನ ಕೆಲ ಹಳ್ಳಿಗಳಲ್ಲಿ ನಡೆಯುತ್ತದೆ ಈ 'ಗಾಢಾ' ಸ್ಪರ್ಧೆ. ಅರಳೇಶ್ವರ, ಉಪ್ಪುಣಸಿ, ಮಾಸನಕಟ್ಟೆ, ವಳಗೇರಿ, ಅಕ್ಕಿಆಲೂರು, ಮಾರನಬೀಡು, ನಿಟಗಿನಕೊಪ್ಪ ಮತ್ತಿತರ ಹಳ್ಳಿಗಳಲ್ಲಿ ಈ ಕ್ರೀಡೆ ಮನೆಮಾತು.
ಮಳೆಗಾಲಕ್ಕೆ ಹೊಲ ಉಳುಮೆ ಮಾಡಲು ಎತ್ತುಗಳಿಗೆ ಬಲ ಬರಲಿ ಎಂಬ ಉದ್ದೇಶ ಈ ಕ್ರೀಡೆಯದ್ದು. ಇದು ರೋಮಾಂಚನ ಭಾವ ಮೂಡಿಸಿದರೂ, ಅಷ್ಟೇ ಅಪಾಯಕಾರಿ ಅಂತಲೂ ದಿಗಿಲು ಹುಟ್ಟುತ್ತದೆ. ಆದರೆ, ಮಾಲೀಕರು ಇದಾವುದಕ್ಕೂ ಹೆದರುವುದಿಲ್ಲ. ಗಾಯ, ರಕ್ತ ಇದೆಲ್ಲಾ ಮಾಮೂಲು!
ಹಿಂದೆಲ್ಲ ಗಾಢಾ (ಗಾಡಿ) ಸ್ವರ್ಧೆಗಳಿಗೆ ಬಾಯಿ ಮಾತಿನ ಪ್ರಚಾರ. ಆದರೆ ಈಗ ಕರಪತ್ರ, ಪತ್ರಿಕಾ ಪ್ರಕಟಣೆ, ಕೇಬಲ್ಗಳ ಮೂಲಕ ಜಾಹೀರಾತು! ಇನ್ನು ಬಹುಮಾನಗಳೂ ಆಕರ್ಷಕವೇ. 500 ರು.ನಿಂದ ಸೈಕಲ್, ಹಂಡೆ, ಫ್ಯಾನ್, ಟಿ.ವಿ... ಹೀಗೆ. ಇಲ್ಲಿ ಬಹುಮಾನಕ್ಕಿಂತ ಪ್ರತಿಷ್ಠೆಯೇ ಮುಖ್ಯ. ಸ್ಪರ್ಧಿಸುವ ಎತ್ತುಗಳಿಗೆ ವಿಶೇಷ ಆತಿಥ್ಯವಿರುತ್ತದೆ. ಸ್ಪರ್ಧೆಗೆ ಒಳ್ಳೆಯ ಜಾತಿಯ, ಗಟ್ಟಿಮುಟ್ಟಾದ ಎತ್ತುಗಳನ್ನು ಆಯ್ಕೆ ಮಾಡಲಾಗುತ್ತದೆ. ಹಸಿಹುಲ್ಲು, ಹಿಂಡಿ, ಹುರಳಿ, ಬೆಲ್ಲದಚ್ಚು ಹೀಗೆ ಸ್ವಾದಿಷ್ಟ ತಿಂಡಿ ತಿನಿಸುಗಳು ಈ ಎತ್ತುಗಳ ಮೆನು. ಕೆರೆಬಯಲು, ಸಮತಟ್ಟಾದ ಹೊಲ ಇವು ಗಾಢಾ ಓಡಿಸಲು ಟ್ರ್ಯಾಕ್. ಪೂಜೆ ಸಲ್ಲಿಸಿದ ನಂತರ ಸ್ಪರ್ಧೆ ಆರಂಭ. ಶಿಕಾರಿಪುರ, ಹುಬ್ಬಳ್ಳಿ, ಕುಂದಗೋಳ, ಧಾರವಾಡ, ಹಾವೇರಿ ಮತ್ತಿತರ ಕಡೆಗಳಿಂದ ಕಟ್ಟುಮಸ್ತಾದ ಎತ್ತುಗಳು 'ಗಾಢಾ'ಕ್ಕೆ ಬರುತ್ತವೆ.
ಸ್ಥಳದಲ್ಲೇ ಅಂದರೆ ಇಷ್ಟು ಗಂಟೆಯೊಳಗೆ ಸ್ಪರ್ಧಿ ಎತ್ತುಗಳ ಹೆಸರನ್ನು ನೋಂದಾಯಿಸಬೇಕೆಂಬ ನಿಯಮವಿದೆ. ವೇಳೆ ಮೀರಿ ಬಂದವರಿಗೆ ಅವಕಾಶವಿಲ್ಲ. ಹಾಗೂ ಸ್ಪರ್ಧಿಸಲೇಬೇಕಂತಿದ್ದರೆ ಹೆಚ್ಚಿನ ಪ್ರವೇಶ ಶುಲ್ಕ ಕಟ್ಟಿ, ಪ್ರವೇಶ ಪಡೆಯಬೇಕು. ಈ ಸ್ಪರ್ಧೆಗೆ ಕಮಿಟಿಯವರೇ ವಿಶೇಷವಾಗಿ ತಯಾರಿಸಿದ ಗಾಢಾ ನೀಡುತ್ತಾರೆ. ಒಂದು ನಿಮಿಷದಲ್ಲಿ ಎಷ್ಟು ದೂರ ಎತ್ತುಗಳು ಈ ಗಾಢಾ ಕಟ್ಟಿಕೊಂಡು ಓಡುತ್ತವೆ ಎನ್ನುವುದರ ಮೇಲೆ ಆಟದ ಫಲಿತಾಂಶ ನಿರ್ಧಾರ. ಈ ಸ್ಪರ್ಧೆಗಿಳಿಯುವ ಗಾಢಾದಲ್ಲಿ ಚಾಲಕ ಮತ್ತು ನಿರ್ಣಾಯಕ ಮಾತ್ರ ಕುಳಿತಿರುತ್ತಾರೆ. ಆ ನಿರ್ಣಾಯಕನ ಕೈಯಲ್ಲಿ ಟೈಮರ್ ಮತ್ತು ಸಣ್ಣ ಉಸುಕಿನ ಚೀಲವಿರುತ್ತದೆ. ಒಂದು ನಿಮಿಷದಲ್ಲಿ ಎಲ್ಲಿಯವರೆಗೆ ಓಡುತ್ತದೋ ಅಲ್ಲಿಗೆ ಆ ಉಸುಕಿನ ಚೀಲವನ್ನು ಬಿಡುತ್ತಾನೆ. ಆಗ ಆಳತೆಯನ್ನು ಮಾಡಿ ಓಡಿದ ದೂರವನ್ನು ನೋಟ್ ಮಾಡಿಕೊಳ್ಳಲಾಗುತ್ತದೆ. ನಿರ್ಣಾಯಕರು ಹಾಕಿದ ಗೆರೆ ದಾಟಿ ಹೊರಗೆ ಹೋದರೆ ಆ ಆಟದಿಂದ ಹೊರಗೆ ಹೋದಂತೆ.
'ಹಾ ಭೀಮ ಹೊಂಟಾನ ದೂರ ಸರಿರೀ', 'ಯಾರೂ ಅಡ್ಡ ಬರಬೇಡ್ರಿ', 'ಮೈಮೇಲೆ ಬಂದಾವು ಹ್ಞಾಂ', 'ಗೆರೆ ದಾಟಿ ಹೊರಗೆ ಹೋಯಿತ್ರಲೇ' ಎಂದು ಅವರವರ ಧಾಟಿಯಲ್ಲಿ ಪ್ರೇಕ್ಷಕರು ಮಾತನಾಡಿಕೊಳ್ಳುತ್ತಾರೆ. ಈ ವೇಳೆ ಸಣ್ಣಪುಟ್ಟ ಜಗಳ ಮಾಮೂಲು. ಕೆಲವು ಪ್ರಕರಣಗಳನ್ನು ಕಮಿಟಿಯವರು ಮಧ್ಯಸ್ಥಿಕೆವಹಿಸಿಯೇ ಬಗೆಹರಿಸಬೇಕಾಗುತ್ತದೆ.
ತಮಟೆಯ ಸದ್ದು ಇಲ್ಲಿ ಹಿಮ್ಮೇಳ. ಜನರ ಮಧ್ಯೆ ಎತ್ತುಗಳು ನುಗ್ಗಿ ಅವಘಡಗಳೂ ಸಂಭವಿಸುತ್ತವೆ. ಪಟಾಕಿಗಳ ಸದ್ದಿಗೆ ಎತ್ತುಗಳು ಎರ್ರಾಬಿರ್ರಿ ಓಡುವಾಗ ಪ್ರೇಕ್ಷಕನೊಳಗೆ ಸಣ್ಣ ಭಯ ಇಣುಕುತ್ತಿರುತ್ತದೆ.
- ಚಿತ್ರ, ಲೇಖನ: ಟಿ. ಶಿವಕುಮಾರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.