ಶ್ರೇಯಸ್ಸಿನ ಮಾರ್ಗ (ವಿವೇಕ ವಿಚಾರ)
ಜಾತಿ, ಧರ್ಮ, ಕುಲ, ಪಂಥ, ಪಂಗಡಗಳ ಚೌಕಟ್ಟುಗಳು ಬೆಳೆಯುವ ಮಗುವನ್ನು ಬಂಧಿಸತೊಡಗುತ್ತವೆ. ಯಾರು ಜ್ಞಾನಬಲದಿಂದ ವಿವೇಕದ ಬೆಳಕಿನಿಂದ ಅಜ್ಞಾನದ ಕತ್ತಲನ್ನು ಕಳೆಯುತ್ತಾರೋ, ಮಾಯಾ ಬಂಧನಗಳಿಂದ ಮುಕ್ತರಾಗುತ್ತಾರೋ ಅವರು ವಿಶ್ವಮಾನತ್ವವನ್ನು ಪಡೆಯುತ್ತಾರೆ.
'ಭಾರತವು ಉಳಿದುಕೊಳ್ಳಬೇಕಾದರೆ ಅದು ತನ್ನ ಆಧ್ಯಾತ್ಮಿಕ ಸಂಪತ್ತನ್ನು ಕಾಯ್ದುಕೊಳ್ಳಲೇಬೇಕು. ನಮ್ಮ ಜನಾಂಗದ ಶ್ರೇಯಸ್ಸಿಗೆ ಇರುವುದೊಂದೇ ಮಾರ್ಗ, ನಮ್ಮ ಪೂರ್ವಿಕರು ನಮಗಿತ್ತ ಆಧ್ಯಾತ್ಮದ ಅನರ್ಘ್ಯನಿಧಿಯನ್ನು ಸಂರಕ್ಷಿಸಿಕೊಳ್ಳುವುದು. ನಿಮಗೆ ಆಧ್ಯಾತ್ಮದಲ್ಲಿ ನಂಬಿಕೆ ಇರಲಿ, ಇಲ್ಲದಿರಲಿ ರಾಷ್ಟ್ರದ ಹಿತಕ್ಕಾಗಿ ಅದನ್ನು ಉಳಿಸಿಕೊಂಡು ಅದರಂತೆ ನಡೆಯಬೇಕು.'
'ಭಗವದ್ಭಾವನೆಯು ಭಾರತದಲ್ಲಿ ಬೆಳೆದಿರುವಷ್ಟು ಸ್ಪಷ್ಟವಾಗಿ ಬೇರೆಲ್ಲೂ ಬೆಳೆದಿಲ್ಲ. ಆತ್ಮದ ಆತ್ಮನಾದ ಈಶ್ವರನ ಭಾವನೆಯನ್ನು ಭಾರತದಲ್ಲಿ ಮಾತ್ರವೇ ಕಾಣಬಲ್ಲಿರಿ. ಯಾರು ಸರ್ವವ್ಯಾಪಿಯೊ ಮತ್ತು ಯಾರ ಮಹಿಮೆಯನ್ನು ಈ ದೇಶ ಮಾತ್ರವೇ ಸಂಪೂರ್ಣವಾಗಿ ಬಲ್ಲುದೊ ಆ ಭಗವಂತನು ಗುರಿಮುಟ್ಟಲು ನಮಗೆ ಶಕ್ತಿ ನೀಡಲಿ, ಸಹಾಯ ಮಾಡಲಿ, ನಮ್ಮನ್ನು ಹರಸಲಿ.'
'ಮಾತೃಭೂಮಿಯ ಶ್ರೇಯಸ್ಸಿಗೆ ಎರಡು ಮಹಾ ತತ್ತ್ವಗಳಾದ ಹಿಂದೂ ಧರ್ಮ ಮತ್ತು ಇಸ್ಲಾಂ ಧರ್ಮ-ವೇದಾಂತದ ಬುದ್ಧಿಮತ್ತೆ ಮತ್ತು ಇಸ್ಲಾಂ ಸಹೋದರತೆ- ಇವೆರಡೂ ಕೂಡಿಕೊಳ್ಳಬೇಕು. ಇದೊಂದೇ ಶ್ರೇಯಸ್ಸಿನ ಮಾರ್ಗ.' <
-ಆನಂದ ಎಸ್.ಎನ್.